Saturday, 17th May 2025

IND vs AUS: ʻರೋಹಿತ್‌ ಶರ್ಮಾ ಮೂರನೇ ಕ್ರಮಾಂಕದಲ್ಲಿ ಆಡಬೇಕುʼ-ಆಕಾಶ್‌ ಚೋಪ್ರಾ ಸಲಹೆ!

IND vs AUS: Rohit Sharma at No. 3? Aakash Chopra Advocates Strategic Shift for Indian Lineup

ನವದೆಹಲಿ: ಆಸ್ಟ್ರೇಲಿಯಾ ವಿರುದ್ದ ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ (IND vs AUS) ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಮುಂದಿನ ಪಂದ್ಯಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬೇಕೆಂದು ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಸಲಹೆ ನೀಡಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮೂರು ಪಂದ್ಯಗಳ ಅಂತ್ಯಕ್ಕೆ ಟೆಸ್ಟ್‌ ಸರಣಿಯಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿವೆ. ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ 295 ರನ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು. ವೈಯಕ್ತಿಕ ಕಾರಣಗಳಿಂದ ರೋಹಿತ್‌ ಶರ್ಮಾ ಈ ಪಂದ್ಯದಲ್ಲಿ ಆಡಿರಲಿಲ್ಲ. ನಂತರ ಅಡಿಲೇಡೆ ಟೆಸ್ಟ್‌ ಪಂದ್ಯಕ್ಕೆ ಬಂದಿದ್ದ ಹಿಟ್‌ಮ್ಯಾನ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. ನಂತರ ಮೂರನೇ ಪಂದ್ಯದಲ್ಲಿ ಭಾರತ ತಂಡದ ನಾಯಕ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು.

ರೋಹಿತ್‌ ಶರ್ಮಾ ಮೂರನೇ ಕ್ರಮಾಂಕದಲ್ಲಿ ಆಡಬೇಕು

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆಕಾಶ್‌ ಚೋಪ್ರಾ, ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ಗೆ ಹೊಸ ಬ್ಯಾಟಿಂಗ್‌ ಕ್ರಮಾಂಕಗಳನ್ನು ಸೂಚಿಸಿದ್ದಾರೆ. “ರೋಹಿತ್‌ ಶರ್ಮಾ ಅವರು ಬಯಸಿದರೆ ತಮ್ಮ ಬ್ಯಾಟಿಂಗ್‌ ಕ್ರಮಾಂಕವನ್ನು ಬದಲಾಯಿಸಿಕೊಳ್ಳಲಿ. ಅವರು ಮೂರನೇ ಕ್ರಮಾಂಕದಲ್ಲಿ ಆಡಿ, ಶುಭಮನ್‌ ಗಿಲ್‌ ಸ್ವಲ್ಪ ಕೆಳ ಕ್ರಮಾಂಕದಲ್ಲಿ ಆಡಿಸಬೇಕು,”ಎಂದು ಸಲಹೆ ನೀಡಿದ್ದಾರೆ.

ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಅವರ ಸ್ಥಾನಗಳಿಗೆ ಧ್ರುವ್‌ ಜುರೆಲ್‌ ಮತ್ತು ಸರ್ಫರಾಝ್‌ ಖಾನ್‌ ಅವರನ್ನು ಆಡಿಸಬೇಕೆಂಬ ಕೂಗು ಕೇಳಿಬರುತ್ತಿದೆ. ಆದರೆ, ಇದನ್ನು ಆಕಾಶ್‌ ಚೋಪ್ರಾ ತಳ್ಳಿ ಹಾಕಿದ್ದಾರೆ.

ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌ಗೆ ಚೋಪ್ರಾ ಬೆಂಬಲ

“ಮುಂದಿನ ಪಂದ್ಯಗಳಲ್ಲಿ ಇದು ನಡೆಯುವುದಿಲ್ಲ ಹಾಗೂ ಇದು ನಡೆಯಬಾರದು,” ಎಂದು ರೋಹಿತ್‌ ಶರ್ಮಾ ಮತ್ತು ಶುಭಮನ್‌ ಗಿಲ್‌ ಅವರನ್ನು ಮುಂದಿನ ಪಂದ್ಯಗಳಿಗೆ ಆಡಿಸಬೇಕೆಂದು ಸಲಹೆ ನೀಡಿದ ಆಕಾಶ್‌ ಚೋಪ್ರಾ, “ಭಾರತ ತಂಡದಲ್ಲಿ ಏನಾದರೂ ಬದಲಾವಣೆಯಾಗುತ್ತಾ? ಇಲ್ಲವೇ ಇಲ್ಲ. ರೋಹಿತ್‌ ಶರ್ಮಾ ಅವರನ್ನು ಕೈ ಬಿಡಬಹುದಾ? ನಾಯಕನ ಬಗ್ಗೆ ಯಾರಾದರೂ ಈ ರೀತಿ ಮಾತನಾಡಿದ್ದಾರಾ?” ಎಂದು ಪ್ರಶ್ನೆ ಮಾಡಿದ್ದಾರೆ.

“ಏಷ್ಯಾ ಹೊರಗಡೆ ಶುಭಮನ್‌ ಗಿಲ್‌ ಆಡಿರುವ 16 ಇನಿಂಗ್ಸ್‌ಗಳಲ್ಲಿ ಶುಭಮನ್‌ ಗಿಲ್‌ ಕೇವಲ ಒಂದು ಸಾರಿ ಮಾತ್ರ 40ಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಅವರು ದೊಡ್ಡ ಇನಿಂಗ್ಸ್‌ ಆಡಿ ದೀರ್ಘಾವಧಿ ಮುಗಿದಿದೆ. ಅವರು ದೊಡ್ಡ ಮೊತ್ತವನ್ನು ಕಲೆ ಹಾಕಬೇಕೆಂದು ಎಲ್ಲರಿಗೂ ಸಾಕಷ್ಟು ನಿರೀಕ್ಷೆಗಳು ಇವೆ. ಹಾಗಾಗಿ ಅವರು ಸುಧಾರಣೆ ಕಂಡುಕೊಳ್ಳಬೇಕಾಗಿದೆ,” ಎಂದು ಆಕಾಶ್‌ ಚೋಪ್ರಾ ತಿಳಿಸಿದ್ದಾರೆ.

ಬಾಕ್ಸಿಂಗ್‌ ಡೇ ಟೆಸ್ಟ್‌ ಯಾವಾಗ?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯ ಡಿಸೆಂಬರ್‌ 26 ರಂದು ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯ ಆರಂಭವಾಗಲಿದೆ. ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆಯಲು ಇನ್ನುಳಿದ ಎರಡೂ ಪಂದ್ಯಗಳು ಉಭಯ ತಂಡಗಳಿಗೆ ಅತ್ಯಂತ ನಿರ್ಣಾಯಕವಾಗಿವೆ.

ಈ ಸುದ್ದಿಯನ್ನು ಓದಿ: IND vs AUS: ಕೊನೆಯ 2 ಟೆಸ್ಟ್‌ಗಳಲ್ಲಿ ಮೊಹಮ್ಮದ್‌ ಶಮಿ ಆಡ್ತಾರಾ?- ರೋಹಿತ್‌ ಶರ್ಮಾ ಹೇಳಿದ್ದಿದು!