Saturday, 17th May 2025

IND vs AUS:‌ ʻಕೇವಲ 5 ವಿಕೆಟ್‌ ಅಗತ್ಯʼ-ವಿಶೇಷ ದಾಖಲೆ ಬರೆಯುವ ಸನಿಹದಲ್ಲಿ ಆರ್‌ ಅಶ್ವಿನ್!

IND vs AUS: R Ashwin Needs 5 Wickets In 3rd Test To Become First Bowler In World to take 120 wickets in the BGT

ನವದೆಹಲಿ: ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ಈಗಾಗಲೇ ಹಲವು ದಾಖಲೆಗಳನ್ನು ಬರೆದಿರುವ ಭಾರತ ತಂಡದ ಹಿರಿಯ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌, ಇದೀಗ ಮತ್ತೊಂದು ಮೈಲುಗಲ್ಲು ಸ್ಥಾಪಿಸುವ ಸನಿಹದಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ದ ಮೂರನೇ ಟೆಸ್ಟ್‌ ಪಂದ್ಯದಲ್ಲಿ (IND vs AUS) ಭಾರತೀಯ ಸ್ಪಿನ್ನರ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆಯಲಿದ್ದಾರೆ.

ಡಿಸೆಂಬರ್‌ 14 ರಂದು ಬ್ರಿಸ್ಬೇನ್‌ನ ದಿ ಗಬ್ಬಾ ಸ್ಟೇಡಿಯಂನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್‌ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲಿಯೂ ಆರ್‌ ಅಶ್ವಿನ್‌ ಅವರನ್ನು ಮುಂದುವರಿಸುವ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ.ಏಕೆಂದರೆ ಅಡಿಲೇಡ್‌ ಟೆಸ್ಟ್‌ನಲ್ಲಿ ಆರ್‌ ಅಶ್ವಿನ್‌ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಪರಿಣಾಮಕಾರಿ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಅವರು ಬೌಲ್‌ ಮಾಡಿದ್ದ 18 ಓವರ್‌ಗಳಿಂದ ಕೇವಲ ಒಂದೇ ಒಂದು ವಿಕೆಟ್‌ ಪಡೆದಿದ್ದರು.

ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಆಡಲು ಆರ್‌ ಅಶ್ವಿನ್‌ಗೆ ಅವಕಾಶ ನೀಡಿದರೆ ಅವರು ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ವಿಶೇಷ ದಾಖಲೆಯನ್ನು ಬರೆಯಲಿದ್ದಾರೆ. ಮುಂದಿನ ಪಂದ್ಯದಲ್ಲಿ ಅವರು ಕೇವಲ 5 ವಿಕೆಟ್‌ಗಳನ್ನು ಪಡೆದರೆ, ಬಿಜಿಟಿ ಟೆಸ್ಟ್‌ ಸರಣಿಯಲ್ಲಿ 120 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ವಿಶ್ವದ ಮೊದಲ ಬೌಲರ್‌ ಎನಿಸಿಕೊಳ್ಳಲಿದ್ದಾರೆ.

ಆಸ್ಟ್ರೇಲಿಯಾ ಸ್ಪಿನ್ನರ್‌ ನೇಥನ್‌ ಲಯಾನ್‌ ಅವರು ಸದ್ಯ 118 ವಿಕೆಟ್‌ಗಳನ್ನು ಕಬಳಿಸಿದ್ದು, ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. 115 ವಿಕೆಟ್‌ಗಳ ಮೂಲಕ ಆರ್‌ ಅಶ್ವಿನ್‌ ಎರಡನೇ ಸ್ಥಾನದಲ್ಲಿದ್ದಾರೆ. ಆರ್‌ ಅಶ್ವಿನ್‌ಗಿಂತ ವೇಗವಾಗಿ ಬಿಜಿಟಿ ಟೆಸ್ಟ್‌ ಸರಣಿಯಲ್ಲಿ 120 ವಿಕೆಟ್‌ಗಳನ್ನು ಪೂರ್ಣಗೊಳಿಸಲು ನೇಥನ್‌ ಲಯಾನ್‌ಗೆ ಕೇವಲ ಎರಡು ವಿಕೆಟ್‌ಗಳ ಅಗತ್ಯವಿದೆ.

ಆಟಗಾರರ ವಿಕೆಟ್ ಪಂದ್ಯಗಳು

ನೇಥನ್ ಲಯಾನ್: 118 (28 ಪಂದ್ಯಗಳು)
ಆರ್ ಅಶ್ವಿನ್: 115 (23 ಪಂದ್ಯಗಳು
ಅನಿಲ್ ಕುಂಬ್ಳೆ: 111 (20 ಪಂದ್ಯಗಳು)
ಹರ್ಭಜನ್ ಸಿಂಗ್: 95 (18 ಪಂದ್ಯಗಳು)
ರವೀಂದ್ರ ಜಡೇಜಾ: 85 (16 ಪಂದ್ಯಗಳು)

ಟೆಸ್ಟ್‌ ಸರಣಿಯಲ್ಲಿ 1-1 ಸಮಬಲ ಸಾಧಿಸಿರುವ ಉಭಯ ತಂಡಗಳು

ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ ಆರ್‌ ಅಶ್ವಿನ್‌ ಹಾಗೂ ರವೀಂದ್ರ ಜಡೇಜಾಗೆ ಅವಕಾಶ ಸಿಕ್ಕಿರಿಲಿಲ್ಲ. ಇವರಿಬ್ಬರ ಬದಲು ವಾಷಿಂಗ್ಟನ್‌ ಸುಂದರ್‌ಗೆ ಅವಕಾಶ ನೀಡಲಾಗಿತ್ತು. ಅದರಂತೆ ಈ ಪಂದ್ಯದಲ್ಲಿ ಭಾರತ ತಂಡ 295 ರನ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು. ನಂತರ ಎರಡನೇ ಹಾಗೂ ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ 10 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಎರಡು ಪಂದ್ಯಗಳ ಅಂತ್ಯಕ್ಕೆ ಉಭಯ ತಂಡಗಳು ಟೆಸ್ಟ್‌ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿವೆ.

ಈ ಸುದ್ದಿಯನ್ನು ಓದಿ:IND vs AUS: ಭಾರತದ ಪಿಂಕ್‌ ಬಾಲ್‌ ಟೆಸ್ಟ್‌ ಸೋಲಿಗೆ ಪ್ರಮುಖ 4 ಕಾರಣಗಳು!