ನವದೆಹಲಿ: (IND vs AUS)ಭಾರತ ತಂಡದ ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾ ಅವರನ್ನು ಕಡೆಗಣಿಸಿದ ವೆಸ್ಟ್ ಇಂಡೀಸ್ ದಿಗ್ಗಜ ವೇಗಿ ಆಂಡಿ ರಾಬರ್ಟ್ಸ್, ಪ್ರಸ್ತುತ ಭಾರತದ ಅತ್ಯುತ್ತಮ ಫಾಸ್ಟ್ ಬೌಲರ್ ಆಗಿ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ, 2023ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಬಳಿಕ ಜಸ್‌ಪ್ರೀತ್ ಬುಮ್ರಾ ಭಯಾನಕ ಫಾರ್ಮ್‌ನಲ್ಲಿದ್ದಾರೆ. ಅದರಂತೆ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಬುಮ್ರಾ ಮಹತ್ವದ ಕೊಡುಗೆಯನ್ನು ನೀಡಿದ್ದರು ಹಾಗೂ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
ಆದರೆ, ಮೊಹಮ್ಮದ್ ಶಮಿ ಅವರು 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನವನ್ನು ತೋರಿದ್ದರು. ಅದರಲ್ಲಿಯೂ ಗಾಯದ ಹೊರತಾಗಿಯೂ ಶ್ರೇಷ್ಠ ಬೌಲಿಂಗ್ ಪ್ರದರ್ಶನವನ್ನು ತೋರಿದ್ದ ಅವರು, ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ, ಪಾದದ ಗಾಯದ ಕಾರಣ ಅವರು ಒಂದು ವರ್ಷ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಆದರೆ, ಬಂಗಾಳ ತಂಡದ ಪರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದ ಶಮಿ, ಸದ್ಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಆಡಬಹುದೆಂದು ಹೇಳಲಾಗುತ್ತಿದೆ.
ಮೊಹಮ್ಮದ್ ಶಮಿ ಭಾರತದ ಅತ್ಯುತ್ತಮ ಫಾಸ್ಟ್ ಬೌಲರ್
“ಮೊಹಮ್ಮದ್ ಶಮಿ ಪ್ರಸ್ತುತ ಭಾರತದ ಅತ್ಯುತ್ತಮ ಬೌಲರ್ ಆಗಿದ್ದಾರೆ. ಜಸ್‌ಪ್ರೀತ್ ಬುಮ್ರಾ ಪಡೆಯುವಷ್ಟು ವಿಕೆಟ್‌ಗಳನ್ನು ಅವರು ಪಡೆದಿಲ್ಲ ಆದರೆ, ಇತರೆ ಬೌಲರ್‌ಗಳಿಗಿಂತ ಅವರು ಅತ್ಯಂತ ಸ್ಥಿರ ಬೌಲಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ. ಶಮಿ ಚೆಂಡನ್ನು ಸ್ವಿಂಗ್ ಮಾಡಬಲ್ಲರು, ಸೀಮ್‌ನಲ್ಲಿ ಚೆಂಡನ್ನು ಹಾಕಬಲ್ಲರು ಹಾಗೂ ಜಸ್‌ಪ್ರೀತ್ ಬುಮ್ರಾ ಅವರ ರೀತಿಯಲ್ಲಿಯೇ ಶಮಿ ಕೂಡ ಚೆಂಡಿನ ಮೇಲೆ ನಿಯಂತ್ರಣವನ್ನು ಹೊಂದಿದ್ದಾರೆ. ಶಮಿ ಖಂಡಿತಾ ಆಡಬೇಕು. ಇದೀಗ ಮೊಹಮ್ಮದ್ ಸಿರಾಜ್ ಕೂಡ ಶಮಿ ಅವರ ಸನಿಹದಲ್ಲಿದ್ದಾರೆ,” ಎಂದು ಆಂಡಿ ರಾಬರ್ಟ್ಸ್ ಮಿಡ್ ಡೇಗೆ ತಿಳಿಸಿದ್ದಾರೆ.
ಭಾರತದ ನಿರ್ಧಾರವನ್ನು ಪ್ರಶ್ನಿಸಿದ ರಾಬರ್ಟ್ಸ್
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ ತಂಡದ ನಿರ್ಧಾರವನ್ನು ಇದೇ ವೇಳೆ ಆಂಡಿ ರಾಬರ್ಟ್ಸ್ ಅವರು ಪ್ರಶ್ನೆ ಮಾಡಿದ್ದಾರೆ. ಇನ್ನು ಅಡಿಲೇಡ್‌ನಲ್ಲಿ ರನ್ ಗಳಿಸದ ಬ್ಯಾಟ್ಸ್‌ಮನ್‌ಗಳನ್ನು ಕೂಡ ಅವರು ಟೀಕಿಸಿದ್ದಾರೆ.
“ಭಾರತ ತಂಡ ಮೊದಲು ಬ್ಯಾಟ್ ಮಾಡಿದ್ದು ಏಕೆ? ಪರ್ತ್ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್‌ಗಳನ್ನು ಭಾರತದ ಬೌಲರ್‌ಗಳು ಅತ್ಯಂತ ಹೀನಾಯವಾಗಿ ಆಲ್‌ಔಟ್ (104 ಮತ್ತು 238) ಮಾಡಿದ್ದರು. ಕಳೆದ ಟೆಸ್ಟ್‌ನಲ್ಲಿ ನನ್ನ ವೇಗದ ಬೌಲರ್‌ಗಳು ಎದುರಾಳಿ ವೇಗಿಗಳನ್ನು ಮೀರಿಸಿದರೆ, ಮುಂದಿನ ಟೆಸ್ಟ್‌ನಲ್ಲಿ ನಾನು ಪ್ರತಿಸ್ಪರ್ಧಿಗಳಿಗೆ ಮೊದಲ ಆದ್ಯತೆ ನೀಡಲು ಹೋಗುವುದಿಲ್ಲ. ಏಕೆಂದರೆ ನೀವು ಭಾರತದ ಪಿಚ್‌ಗಳಲ್ಲಿ ಆಡುತ್ತಿಲ್ಲ. ಇಲ್ಲಿನ ಪಿಚ್‌ಗಳು ಬೌನ್ಸ್ ಅನ್ನು ಹೊಂದಿವೆ ಮತ್ತು ನೀವು ಒಬ್ಬ ಸ್ಪಿನ್ನರ್ ಅನ್ನು ಮಾತ್ರ ಆಡಿಸುತ್ತಿದ್ದೀರಿ. ಇಲ್ಲಿ ಚೆಂಡು ಅಷ್ಟೊಂದು ತಿರುಗುತ್ತಿಲ್ಲ. ಜೊತೆಗೆ, ನೀವು ಬೋರ್ಡ್‌ನಲ್ಲಿ ಸಾಕಷ್ಟು ರನ್‌ಗಳನ್ನು ಕಲೆ ಹಾಕಲಿಲ್ಲ,” ಎಂದು ಆಂಡಿ ರಾಬರ್ಟ್ಸ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 295 ರನ್‌ಗಳಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತ್ತು. ಆದರೆ, ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್ ವೈಫಲ್ಯದಿಂದ 10 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಇದೀಗ ಉಭಯ ತಂಡಗಳು ಸರಣಿಯಲ್ಲಿ 1-1 ಅಂತರದಲ್ಲಿ ಸಮಬಲ ಕಾಯ್ದುಕೊಂಡಿವೆ. ಮೂರನೇ ಟೆಸ್ಟ್ ಪಂದ್ಯ ಡಿಸೆಂಬರ್ 14 ರಂದು ಬ್ರಿಸ್ಬೇನ್‌ನ ಗಬ್ಬಾದಲ್ಲಿ ಆರಂಭವಾಗಲಿದೆ.
ಈ ಸುದ್ದಿಯನ್ನು ಓದಿ”SMAT 2025: ʻ17 ಎಸೆತಗಳಲ್ಲಿ 32 ರನ್ʼ-ಬ್ಯಾಟಿಂಗ್‌ನಲ್ಲೂ ಮಿಂಚಿದ ಮೊಹಮ್ಮದ್ ಶಮಿ!