Sunday, 18th May 2025

IND vs AUS: ಆಸ್ಟ್ರೇಲಿಯಾ ನೆಲದಲ್ಲಿ ವಿಶೇಷ ದಾಖಲೆ ಬರೆದ ನಿತೀಶ್‌ ಕುಮಾರ್‌ ರೆಡ್ಡಿ!

Nitish Kumar Reddy Becomes First Indian To smash six maximums in Test cricket in Australia

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (IND vs AUS) ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದ ಯುವ ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿ ಅವರು ಗಮನ ಸೆಳೆದಿದ್ದಾರೆ. ಬೌಲಿಂಗ್‌ನಲ್ಲಿ ಅಲ್ಲದೇ ಇದ್ದರೂ ಬ್ಯಾಟಿಂಗ್‌ನಲ್ಲಿ ಅವರು ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಭಾನುವಾರ ಅಂತ್ಯವಾದ ಎರಡನೇ ಹಾಗೂ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟಿಂಗ್‌ ಮೂಲಕ ನಿತೀಶ್‌ ಕುಮಾರ್‌ ರೆಡ್ಡಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಆಡಿದ ಎರಡು ಪಂದ್ಯಗಳ ನಾಲ್ಕು ಇನಿಂಗ್ಸ್‌ಗಳ ಪೈಕಿ ಕೇವಲ ಒಂದು ಇನಿಂಗ್ಸ್‌ನಲ್ಲಿ ಮಾತ್ರ ದೊಡ್ಡ ಮೊತ್ತವನ್ನು ಕಲೆ ಹಾಕಿತ್ತು. ಇದನ್ನು ಹೊರತುಪಡಿಸಿ ಪರ್ತ್‌ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ 151 ರನ್‌ಗಳು, ಎರಡನೇ ಹಾಗೂ ಅಡಿಲೇಡ್‌ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಿಂದ ಕ್ರಮವಾಗಿ 180 ರನ್‌ ಹಾಗೂ 175 ರನ್‌ಗಳಿಗೆ ಸೀಮಿತವಾಗಿತ್ತು. ಈ ಮೂರೂ ಇನಿಂಗ್ಸ್‌ಗಳಲ್ಲಿ ನಿತೀಶ್‌ ರೆಡ್ಡಿ ಅವರು 41(59), 42(54), and 42(47) ರನ್‌ಗಳನ್ನು ಕಲೆ ಹಾಕಿದ್ದರು.

ಪರ್ತ್‌ ಟೆಸ್ಟ್‌ನಲ್ಲಿ ಭಾರತ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 487 ರನ್‌ಗಳನ್ನು ಕಲೆ ಹಾಕಿದ ಬಳಿಕ 295 ರನ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು. ಈ ವೇಳೆ ನಿತೀಶ್‌ ರೆಡ್ಡಿ 27 ಎಸೆತಗಳಲ್ಲಿ 38 ರನ್‌ಗಳನ್ನು ಕಲೆ ಹಾಕಿ ಅಜೇಯರಾಗಿ ಉಳಿದಿದ್ದರು. ಆಡಿದ ನಾಲ್ಕು ಇನಿಂಗ್ಸ್‌ಗಳಿಂದ ನಿತೀಶ್‌ ರೆಡ್ಡಿ 54.33ರ ಸರಾಸರಿಯಲ್ಲಿ 163 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು 18 ಬೌಂಡರಿಗಳು ಹಾಗೂ ಏಳು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಆಸ್ಟ್ರೇಲಿಯಾ ನೆಲದಲ್ಲಿ ವಿಶೇಷ ದಾಖಲೆ ಬರೆದ ನಿತೀಶ್‌ ರೆಡ್ಡಿ

ಈ ಸರಣಿಯ ಆರಂಭಿಕ ಎರಡು ಪಂದ್ಯಗಳಿಂದ ನಿತೀಶ್‌ ರೆಡ್ಡಿ ಸಿಡಿಸಿದ ಏಳು ಸಿಕ್ಸರ್‌ಗಳ ಪೈಕಿ ಆರು ಸಿಕ್ಸರ್‌ಗಳು ವೇಗದ ಬೌಲರ್‌ಗಳಿಂದ ಮೂಡಿ ಬಂದಿವೆ. ಪ್ಯಾಟ್‌ ಕಮಿನ್ಸ್‌ ಹಾಗೂ ಸ್ಕಾಟ್‌ ಬೋಲೆಂಡ್‌ಗೆ ತಲಾ ಎರಡೆರಡು ಸಿಕ್ಸರ್‌ಗಳನ್ನು ಸಿಡಿಸಿದ ನಿತೀಶ್‌, ಮಿಚೆಲ್‌ ಮಾರ್ಷ್‌ ಮತ್ತು ಮಿಚೆಲ್‌ ಸ್ಟಾರ್ಕ್‌ಗೆ ತಲಾ ಒಂದೊಂದಿ ಸಿಕ್ಸರ್‌ ಬಾರಿಸಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ವೇಗದ ಬೌಲರ್‌ಗಳ ಎದುರು ಅತಿ ಹೆಚ್ಚು ಟೆಸ್ಟ್‌ ಸಿಕ್ಸರ್‌ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ನೂತನ ದಾಖಲೆಯನ್ನು ನಿತೀಶ್‌ ರೆಡ್ಡಿ ಬರೆದಿದ್ದಾರೆ. ಆಸ್ಟ್ರೇಲಿಯಾದಲ್ಲಿ ವೇಗದ ಬೌಲರ್‌ಗಳ ಎದುರು ಮೂರಕ್ಕಿಂತ ಹೆಚ್ಚು ಟೆಸ್ಟ್‌ ಸಿಕ್ಸರ್‌ಗಳನ್ನು ಬೇರೆ ಯಾವುದೇ ಬ್ಯಾಟ್ಸ್‌ಮನ್‌ ಸಿಡಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ವೇಗದ ಬೌಲರ್‌ಗಳ ಎದುರು ಅತಿ ಹೆಚ್ಚು ಟೆಸ್ಟ್‌ ಸಿಕ್ಸರ್‌ ಸಿಡಿಸಿದ ಭಾರತೀಯ ಆಟಗಾರರು

ನಿತೀಶ್ ಕುಮಾರ್ ರೆಡ್ಡಿ: 6
ಜಹೀರ್ ಖಾನ್: 3
ರಿಷಬ್ ಪಂತ್: 3
ಅಜಿಂಕ್ಯ ರಹಾನೆ: 3
ರೋಹಿತ್ ಶರ್ಮಾ: 3

ಅಗ್ರ ಸ್ಥಾನದ ಮೇಲೆ ನಿತೀಶ್‌ ರೆಡ್ಡಿ

ವೇಗದ ಬೌಲರ್‌ಗಳ ಜೊತೆಗೆ ಸ್ಪಿನ್ನರ್‌ಗೂ ಕೂಡ ನಿತೀಶ್‌ ರೆಡ್ಡಿ ಒಂದು ಸಿಕ್ಸರ್‌ ಬಾರಿಸಿದ್ದಾರೆ. ಮಾರ್ನಸ್‌ ಲಾಬುಶೇನ್‌ಗೆ ಅವರು ಒಂದು ಸಿಕ್ಸ್‌ ಬಾರಿಸಿದ್ದರು. ಇದೀಗ ಆಸ್ಟ್ರೇಲಿಯಾ ನೆಲದಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ ಏಳು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಆ ಮೂಲಕ ಕಾಂಗರೂ ನಾಡಿನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ದಾಖಲೆಯ ಸನಿಹದಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ ಇದ್ದಾರೆ. ರಿಷಭ್‌ ಪಂತ್‌ (10), ರೋಹಿತ್‌ ಶರ್ಮಾ (10) ಹಾಗೂ ವೀರೇಂದ್ರ ಸೆಹ್ವಾಗ್‌ (8) ಅವರು ಈ ಪಟ್ಟಿಯಲ್ಲಿ ಕ್ರಮವಾಗಿ ಮೂರು ಸ್ಥಾನಗಳನ್ನು ಅಲಂಕರಿಸಿದ್ದಾರೆ. ಮುಂದಿನ ಮೂರು ಟೆಸ್ಟ್‌ ಪಂದ್ಯಗಳಲ್ಲಿ 22ರ ಪ್ರಾಯದ ಆಲ್‌ರೌಂಡರ್‌ ಐದು ಸಿಕ್ಸರ್‌ ಸಿಡಿಸಿದರೆ, ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟ್ಸ್‌ಮನ್‌ ಪಟ್ಟಿಯನ್ನು ಸೇರಲಿದ್ದಾರೆ. ಕ್ರಿಸ್‌ ಗೇಲ್‌ ಮತ್ತು ವಿವಿಯನ್‌ ರಿಚರ್ಡ್ಸ್‌ ಅವರು ಆಸ್ಟ್ರೇಲಿಯಾದಲ್ಲಿ 12 ಸಿಕ್ಸರ್‌ ಬಾರಿಸಿದ್ದಾರೆ.

ಈ ಸುದ್ದಿಯನ್ನು ಓದಿ:IND vs AUS: ʻಅಪ್ಪನ ಕಣ್ಣೀರು ನೋಡಿದ್ದೇನೆʼ- ತಂದೆಯ ತ್ಯಾಗವನ್ನು ನೆನೆದ ನಿತೀಶ್‌ ರೆಡ್ಡಿ!