ಅಡಿಲೇಡ್: ಇಲ್ಲಿನ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಎರಡನೇ ಹಾಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯದ (IND vs AUS) ಪ್ರಥಮ ಇನಿಂಗ್ಸ್ನಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಲು ತಾವು ರೂಪಿಸಿದ್ದ ಬೌಲಿಂಗ್ ಗೇಮ್ ಪ್ಲ್ಯಾನ್ ಏನೆಂಬುದನ್ನು ಆಸ್ಟ್ರೇಲಿಯಾ ಹಿರಿಯ ವೇಗಿ ಮಿಚೆಲ್ ಸ್ಟಾರ್ಕ್ ಬಹಿರಂಗಪಡಿಸಿದ್ದಾರೆ.
ಶುಕ್ರವಾರ ಆರಂಭವಾದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್, ಪಂದ್ಯದ ಮೊಟ್ಟ ಮೊದಲ ಎಸೆತದಲ್ಲಿಯೇ ಚೆಂಡನ್ನು ಪ್ಯಾಡ್ ಮೇಲೆ ಹಾಕಿಕೊಂಡರು. ಆ ಮೂಲಕ ಮಿಚೆಲ್ ಸ್ಟಾರ್ಕ್ ಅವರಿಗೆ ಎಲ್ಬಿಡಬ್ಲ್ಯು ಬಲೆಗೆ ಬೀಳುವ ಮೂಲಕ ಯಶಸ್ವಿ ಜೈಸ್ವಾಲ್ ಪೆವಿಲಿಯನ್ಗೆ ಮರಳಿದರು.
ಮೊದಲನೇ ದಿನ ಮಾರಕ ದಾಳಿ ನಡೆಸಿದ ಮಿಚೆಲ್ ಸ್ಟಾರ್ಕ್ ಅವರು 48 ರನ್ಗಳನ್ನು ನೀಡುವ ಮೂಲಕ 6 ವಿಕೆಟ್ಗಳ ಸಾಧನೆಯನ್ನು ಮಾಡಿದರು. ಸ್ಟಾರ್ಕ್ ಅವರ ಪಾಲಿಗೆ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅತ್ಯುತ್ತಮ ಬೌಲಿಂಗ್ ಸ್ಪೆಲ್ ಇದಾಯಿತು. ಮೊದಲನೇ ದಿನದಾಟದ ಅಂತ್ಯದಲ್ಲಿ ಮಾತನಾಡಿದ ಅವರು, ಜೈಸ್ವಾಲ್ ವಿಕೆಟ್ ಪಡೆಯಲು ರೂಪಿಸಿದ ಬೌಲಿಂಗ್ ಗೇಮ್ ಪ್ಲ್ಯಾನ್ ಏನೆಂದು ಬಹಿರಂಗಪಡಿಸಿದ್ದಾರೆ.
“ಸ್ಟಂಪ್ ಹಾಗೂ ಪ್ಯಾಡ್ಸ್ಗೆ ಚೆಂಡನ್ನು ಹೊಡೆಯುವುದು ನನ್ನ ಗುರಿಯಾಗಿತ್ತು. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ಸ್ಟಂಪ್ಗಳ ಮೇಲೆ ಆರಂಭದಲ್ಲಿ ದಾಳಿ ಮಾಡುವುದು ಹಾಗೂ ಆದಷ್ಟು ವಿಕೆಟ್ ಪಡೆಯುವುದು ನನ್ನ ಕೆಲಸವಾಗಿದೆ. ಅದರಂತೆ ಮೊದಲನೇ ವಿಕೆಟ್ ಕಿತ್ತಿದ್ದು ತುಂಬಾ ಖುಷಿಯನ್ನು ನೀಡಿತು. ಭಾರತದ ಬ್ಯಾಟ್ಸ್ಮನ್ಗಳನ್ನು ಬಹುಬೇಗ ಔಟ್ ಮಾಡುವುದು ಎಷ್ಟು ಮುಖ್ಯ ಎಂಬುದು ನನಗೆ ಗೊತ್ತಿದೆ,” ಎಂದು ಮಿಚೆಲ್ ಸ್ಟಾರ್ಕ್ ತಿಳಿಸಿದ್ದಾರೆ.
“ನಾವು ಆರಂಭಿಸಿದ ಹಾದಿ ತುಂಬಾ ಚೆನ್ನಾಗಿದೆ. ಇದು ನಮ್ಮ ಪಾಲಿಗೆ ದೊಡ್ಡ ಟೆಸ್ಟ್ ಹಾಗೂ ದೊಡ್ಡ ಸರಣಿಯಾಗಿದೆ,” ಎಂದು ಆಸ್ಟ್ರೇಲಿಯಾ ವೇಗಿ ತಿಳಿಸಿದ್ದಾರೆ.
ಮೆಕ್ಸ್ವೀನಿ-ಲಾಬುಶೇನ್ಗೆ ಸ್ಟಾರ್ಕ್ ಮೆಚ್ಚುಗೆ
ಆಸ್ಟ್ರೇಲಿಯಾ ತಂಡದ ಪರ ಮೊದಲನೇ ದಿನ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ನೇಥನ್ ಮೆಕ್ಸ್ವೀನಿ ಮತ್ತು ಮಾರ್ನಸ್ ಲಾಬುಶೇನ್ ಅವರನ್ನು ಇದೇ ವೇಳೆ ಮಿಚೆಲ್ ಸ್ಟಾರ್ಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಮೊದಲನೇ ದಿನವನ್ನು ಮುಗಿಸಿದ ಹಾದಿ ಚೆನ್ನಾಗಿತ್ತು. ಭಾರತ ತಂಡವನ್ನು ಆಲ್ಔಟ್ ಮಾಡಿದ್ದು ನಮ್ಮ ಪಾಲಿನ ಒಳ್ಳೆಯ ದಿನ. ಆದರೆ, ಮೊದಲನೇ ದಿನ ಮೂರನೇ ಸೆಷನ್ನಲ್ಲಿ ಪಿಂಕ್ ಬಾಲ್ನಲ್ಲಿ ಬ್ಯಾಟ್ ಮಾಡುವುದು ಅತ್ಯಂತ ಕಠಿಣವಾಗಿದೆ. ಒಂದು ವಿಕೆಟ್ ಕಳೆದುಕೊಳ್ಳುವ ಮೂಲಕ ಮೊದಲನೇ ದಿನವನ್ನು ಮುಗಿಸಿರುವುದು ಉತ್ತಮವಾಗಿದೆ. ಅದರಲ್ಲಿಯೂ ನೇಥನ್ ಮೆಕ್ಸ್ವೀನಿ ಮತ್ತು ಮಾರ್ನಸ್ ಲಾಬುಶೇನ್ ಒತ್ತಡದ ಸಮಯದಲ್ಲಿ ಭಾರತ ತಂಡದ ಗುಣಮಟ್ಟದ ಬೌಲಿಂಗ್ ಎದುರಿಸಿದ್ದಾರೆ,” ಎಂದು ಶ್ಲಾಘಿಸಿದ್ದಾರೆ.
“ನಾಳೆಯೂ ಉತ್ತಮ ಪ್ರದರ್ಶನ ತೋರಲು ನಮಗೆ ಅತ್ಯುತ್ತಮ ಅವಕಾಶವಿದೆ. ಹೊರಗಿನ ಶಬ್ದದಿಂದ ಅವರು ತುಂಬಾ ಸಂತೋಷವಾಗಿದ್ದಾರೆ,” ಎಂದು ಆಸೀಸ್ ವೇಗಿ ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: AUS vs IND: ಕ್ಯಾಲೆಂಡರ್ ವರ್ಷದಲ್ಲಿ 50 ಟೆಸ್ಟ್ ವಿಕೆಟ್ ಕಿತ್ತ ಬುಮ್ರಾ