Sunday, 18th May 2025

IND vs AUS: ಅಡಿಲೇಡ್‌ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ಇರ್ಫಾನ್‌ ಪಠಾಣ್‌!

'KL Rahul-Yashasvi Jaiswal to open'-Irfan Pathan suggests his proposed India playing XI for pink-ball Test

ಅಡಿಲೇಡ್‌: ಶುಕ್ರವಾರ ಅಡಿಲೇಡ್‌ ಓವಲ್‌ ಕ್ರೀಡಾಂಗಣದಲ್ಲಿ ಆರಂಭವಾಗುವ ಎರಡನೇ ಹಾಗೂ ಗುಲಾಬಿ ಚೆಂಡಿನ ಪಂದ್ಯಕ್ಕೆ ಭಾರತ ಹಾಗೂ ಆಸ್ಟ್ರೇಲಿಯಾ (IND vs AUS) ತಂಡಗಳು ಸಜ್ಜಾಗುತ್ತಿವೆ. ಅಂದ ಹಾಗೆ ಪರ್ತ್‌ ಟೆಸ್ಟ್‌ಗೆ ಅಲಭ್ಯರಾಗಿದ್ದ ನಾಯಕ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಎರಡನೇ ಟೆಸ್ಟ್‌ ಪಂದ್ಯಕ್ಕೆ ಮರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಂಕ್‌ ಬಾಲ್‌ ಟೆಸ್ಟ್‌ಗೆ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ. ಅದರಂತೆ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಅವರು, ಟೀಮ್‌ ಇಂಡಿಯಾಗೆ ಪ್ಲೇಯಿಂಗ್‌ XI ಅನ್ನು ಆರಿಸಿದ್ದಾರೆ.

ನಾಯಕ ರೋಹಿತ್‌ ಶರ್ಮಾ ಅವರು ತಮ್ಮ ಎರಡನೇ ಮಗುವಿನ ಕಾರಣ ಹಾಗೂ ಗಾಯದ ಕಾರಣ ಶುಭಮನ್‌ ಗಿಲ್‌ ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಬ್ಯಾಟ್ಸ್‌ಮನ್‌ ಆಗಿ ಧ್ರುವ್‌ ಜುರೆಲ್‌ ಹಾಗೂ ಮೂರನೇ ಕ್ರಮಾಂಕದಲ್ಲಿ ದೇವದತ್‌ ಪಡಿಕ್ಕಲ್‌ ಆಡಿದ್ದರು. ಕೆಎಲ್‌ ರಾಹುಲ್‌, ಯಶಸ್ವಿ ಜೈಸ್ವಾಲ್‌ ಜೊತೆ ಇನಿಂಗ್ಸ್‌ ಆರಂಭಿಸಿದ್ದರು. ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಇರ್ಫಾನ್‌ ಪಠಾಣ್‌, ದೇವದತ್‌ ಪಡಿಕ್ಕಲ್‌ ಮತ್ತು ಧ್ರುವ್‌ ಜುರೆಲ್‌ ಅವರನ್ನು ಕೈ ಬಿಟ್ಟಿದ್ದಾರೆ.

“ಮುಂದಿನ ಟೆಸ್ಟ್‌ ಪಂದ್ಯಕ್ಕೆ ರೋಹಿತ್‌ ಶರ್ಮಾ ಲಭ್ಯರಾಗಿದ್ದಾರೆ. ಅವರೇ ನಾಯಕ ಆಗಿರುವ ಕಾರಣ, ನೇರವಾಗಿ ದೇವದತ್‌ ಪಡಿಕ್ಕಲ್‌ ಸ್ಥಾನದಲ್ಲಿ ಪ್ಲೇಯಿಂಗ್‌ XIಗೆ ಬರಲಿದ್ದಾರೆ. ಇನ್ನು ಧ್ರುವ್‌ ಜುರೆಲ್‌ ಅವರ ಸ್ಥಾನಕ್ಕೆ ಶುಭಮನ್‌ ಗಿಲ್‌ ಆಡುವ ಬಳಗವನ್ನು ಸೇರಲಿದ್ದಾರೆ. ಕೆಎಲ್‌ ರಾಹುಲ್‌ ಅವರ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಅಂದ ಹಾಗೆ ಯಶಸ್ವಿ ಜೈಸ್ವಾಲ್‌ ಜೊತೆ ಕೆಎಲ್‌ ರಾಹುಲ್‌ ಅವರೇ ಇನಿಂಗ್ಸ್‌ ಆರಂಭಿಸಬೇಕು,” ಎಂದು ಇರ್ಫಾನ್‌ ಪಠಾಣ್‌ ಸಲಹೆ ನೀಡಿದ್ದಾರೆ.

“ರೋಹಿತ್‌ ಶರ್ಮಾ ಅವರು ವಿಭಿನ್ನ ಕ್ರಮಾಂಕಗಳಲ್ಲಿ ಬ್ಯಾಟ್‌ ಮಾಡಿದ್ದಾರೆ. ಹಾಗಾಗಿ ಅವರು ಯಾವುದೇ ಕ್ರಮಾಂಕಕ್ಕೆ ಅಗತ್ಯವಿದ್ದರೆ ಹೊಂದಿಕೊಳ್ಳುತ್ತಾರೆ. ಆದರೆ, ಅವರು ಓಪನಿಂಗ್‌ ಬ್ಯಾಟ್ಸ್‌ಮನ್‌ ಆದ ಬಳಿಕ ಕೂಡ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಪರ್ತ್‌ ಟೆಸ್ಟ್‌ ಗೆಲುವಿನ ಬಳಿಕ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಬೇಡ. ರೋಹಿತ್‌ ಶರ್ಮಾ ಮತ್ತು ಶುಭಮನ್‌ ಗಿಲ್‌ ಮಧ್ಯಮ ಕ್ರಮಾಂಕದಲ್ಲಿ ಆಡಲಿ ಹಾಗೂ ಯಶಸ್ವಿ ಜೈಸ್ವಾಲ್‌ ಅವರ ಜೊತೆಗೆ ಕೆಎಲ್‌ ರಾಹುಲ್‌ ಇನಿಂಗ್ಸ್‌ ಆರಂಭಿಸಲಿ,” ಎಂದು ಇರ್ಫಾನ್‌ ಪಠಾಣ್‌ ಆಗ್ರಹಿಸಿದ್ದಾರೆ.

ಪರ್ತ್‌ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಕೆಎಲ್‌ ರಾಹುಲ್‌ ಮತ್ತು ಯಶಸ್ವಿ ಜೈಸ್ವಾಲ್‌ ಅವರು ದ್ವಿತೀಯ ಇನಿಂಗ್ಸ್‌ನಲ್ಲಿ ಕ್ರಮವಾಗಿ 77 ರನ್‌ಗಳು ಮತ್ತು 161 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಪ್ರೀ ಮ್ಯಾಚ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಾಯಕ ರೋಹಿತ್‌ ಶರ್ಮಾ ಅವರು ಕೂಡ, ಕೆಎಲ್‌ ರಾಹುಲ್‌ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಮುಂದುವರಿಯಲಿ ಹಾಗೂ ತಾನು ಮಧ್ಯಮ ಕ್ರಮಾಂಕದಲ್ಲಿ ಆಡುತ್ತೇನೆಂದು ತಿಳಿಸಿದ್ದರು.

ಭಾರತಕ್ಕೆ ಎದುರಾಗಿರುವ ಸವಾಲು ತಿಳಿಸಿದ ಪಠಾಣ್‌

“ಈ ಪಂದ್ಯಕ್ಕೂ ಮುನ್ನ ಒಂದು ಪ್ರಮುಖ ಸಂಗತಿಯ ಬಗ್ಗೆ ನಾವು ಮಾತನಾಡುವುದು ತುಂಬಾ ಮುಖ್ಯವಾಗಿದೆ. ರಾತ್ರಿ ಲೈಟ್‌ಗಳ ಬೆಳಕಿನಲ್ಲಿ ಪಿಂಕ್‌ ಬಾಲ್‌ ಅನ್ನು ಎದುರಿಸುವುದು ಬ್ಯಾಟ್ಸ್‌ಮನ್‌ಗಳಿಗೆ ನಿಜವಾದ ಸವಾಲಾಗಿದೆ. ಪಂದ್ಯದ ಬಹುತೇಕ ವಿಕೆಟ್‌ಗಳು ಈ ಸಮಯದಲ್ಲಿಯೇ ಕಳೆದುಕೊಂಡಿರುವುದನ್ನು ನೀವು ನೋಡಿರಬಹುದು. ಇದನ್ನು ನೀವು ಕೌಂಟರ್‌ ಮಾಡಿದರೆ, ಪಂದ್ಯ ನಮ್ಮದಾಗಲಿದೆ,” ಎಂದು ಇರ್ಫಾನ್‌ ಪಠಾಣ್‌ ತಿಳಿಸಿದ್ದಾರೆ.

ಇರ್ಫಾನ್‌ ಪಠಾಣ್‌ ಆಯ್ಕೆಯ ಭಾರತದ ಪ್ಲೇಯಿಂಗ್‌ XI

ಯಶಸ್ವಿ ಜೈಸ್ವಾಲ್‌, ಕೆಎಲ್‌ ರಾಹುಲ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ರಿಷಭ್‌ ಪಂತ್‌, ನಿತೀಶ್‌ ರೆಡ್ಡಿ, ವಾಷಿಂಗ್ಟನ್‌ ಸುಂದರ್‌, ಮೊಹಮ್ಮದ್‌ ಸಿರಾಜ್‌, ಜಸ್‌ಪ್ರೀತ್‌ ಬುಮ್ರಾ, ಹರ್ಷಿತ್‌ ರಾಣಾ

ಈ ಸುದ್ದಿಯನ್ನು ಓದಿ: IND vs AUS: ಅಡಿಲೇಡ್‌ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XIನಲ್ಲಿ 3 ಬದಲಾವಣೆ ಸಾಧ್ಯತೆ!