Thursday, 15th May 2025

IND vs AUS: ರೋಹಿತ್‌ ಶರ್ಮಾ ಔಟ್‌, 5ನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XIನಲ್ಲಿ 2 ಬದಲಾವಣೆ!

IND vs AUS: India vs Australia 5th Test Day 1, Toss, Playing XI updates from Sydney Cricket Ground

ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಐದನೇ ಹಾಗೂ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ಕೊನೆಯ ಪಂದ್ಯ (IND vs AUS) ಶುಕ್ರವಾರ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ನಿರೀಕ್ಷೆಯಂತೆ ಎರಡು ಬದಲಾವಣೆಯನ್ನು ತರಲಾಗಿದೆ. ನಾಯಕ ರೋಹಿತ್‌ ಶರ್ಮಾ ಹಾಗೂ ವೇಗಿ ಆಕಾಶ್‌ ದೀಪ್‌ ಅವರನ್ನು ಕೈ ಬಿಡಲಾಗಿದ್ದು, ಇವರ ಸ್ಥಾನಕ್ಕೆ ಕ್ರಮವಾಗಿ ಶುಭಮನ್‌ ಗಿಲ್‌ ಮತ್ತು ಕನ್ನಡಿಗ ಪ್ರಸಿಧ್‌ ಕೃಷ್ಣಗೆ ಅವಕಾಶವನ್ನು ನೀಡಲಾಗಿದೆ.

ಕಳಪೆ ಫಾರ್ಮ್‌ ಕಾರಣ ರೋಹಿತ್‌ ಶರ್ಮಾ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಐದನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವನ್ನು ಜಸ್‌ಪ್ರೀತ್‌ ಬುಮ್ರಾ ಮುನ್ನಡೆಸುತ್ತಿದ್ದಾರೆ. ಗಾಯದಿಂದ ಗುಣಮುಖರಾಗಿರುವ ಶುಭಮನ್‌ ಗಿಲ್‌ ಮೂರನೇ ಕ್ರಮಾಂಕಕ್ಕೆ ಮರಳಿದ್ದಾರೆ. ಕೆಎಲ್‌ ರಾಹುಲ್‌ ಆರಂಭಿಕ ಬ್ಯಾಟ್ಸ್‌ಮನ್‌ ಸ್ಥಾನಕ್ಕೆ ಹಿಂತಿರುಗಿದ್ದಾರೆ. ಅಂದ ಹಾಗೆ ಇನ್ನುಳಿದಂತೆ ಅದೇ ಆಟಗಾರರು ಪ್ಲೇಯಿಂಗ್‌ XIನಲ್ಲಿ ಆಡುತ್ತಿದ್ದಾರೆ.

IND vs AUS: ಸಿಡ್ನಿ ಟೆಸ್ಟ್‌ ಪಂದ್ಯದಿಂದ ನಾಯಕ ರೋಹಿತ್‌ ಶರ್ಮಾ ಔಟ್‌!

ಕನ್ನಡಿಗ ಪ್ರಸಿಧ್‌ ಕೃಷ್ಣಗೆ ಅವಕಾಶ

ಕಳೆದ ನಾಲ್ಕೂ ಪಂದ್ಯಗಳಲ್ಲಿ ಬೆಂಚ್‌ ಕಾದಿದ್ದ ಕನ್ನಡಿಗ ಪ್ರಸಿಧ್‌ ಕೃಷ್ಣ ಅವರಿಗೆ ಐದನೇ ಟೆಸ್ಟ್‌ ಪಂದ್ಯದ ಭಾರತ ತಂಡದಲ್ಲಿ ಆಡುವ ಅವಕಾಶ ಲಭಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ಪಂದ್ಯವನ್ನು ಆಡಿದ್ದ ವೇಗಿ ಆಕಾಶ್‌ ದೀಪ್‌ ಅವರನ್ನು ಕೈ ಬಿಡಲಾಗಿದೆ. ತಂಡದ ಎಲ್ಲಾ ಆಟಗಾರರಿಗೆ ಅವಕಾಶ ಸಿಗಬೇಕೆಂಬ ಉದ್ದೇಶದಿಂದ ಪ್ರಸಿಧ್‌ ಕೃಷ್ಣಗೆ ಮಣೆ ಹಾಕಲಾಗಿದೆ.

ಆಸ್ಟ್ರೇಲಿಯಾ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆ

ಐದನೇ ಟೆಸ್ಟ್‌ಗೆ ಆಸ್ಟ್ರೇಲಿಯಾ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆಯನ್ನು ತರಲಾಗಿದೆ. ಕಳಪೆ ಫಾರ್ಮ್‌ನಲ್ಲಿದ್ದ ಮಿಚೆಲ್‌ ಮಾರ್ಷ್‌ ಅವರ ಬದಲು ಯುವ ಆಟಗಾರ ಬೇ ವೆಬ್‌ಸ್ಟರ್‌ಗೆ ಚೊಚ್ಚಲ ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಮೆಲ್ಬರ್ನ್‌ ಟೆಸ್ಟ್‌ ಆಡಿದ್ದ ಅದೇ ಆಟಗಾರರನ್ನು ಅಂತಿಮ ಟೆಸ್ಟ್‌ ಪಂದ್ಯಕ್ಕೆ ಉಳಿಸಿಕೊಳ್ಳಲಾಗಿದೆ.

ಐದನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XI

ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿ.ಕೀ), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್‌ ಬುಮ್ರಾ (ನಾಯಕ), ಪ್ರಸಿಧ್‌ ಕೃಷ್ಣ, ಮೊಹಮ್ಮದ್ ಸಿರಾಜ್

ಆಸ್ಟ್ರೇಲಿಯಾ ಪ್ಲೇಯಿಂಗ್‌ XI

ಸ್ಯಾಮ್ ಕೊನ್‌ಸ್ಟಸ್‌, ಉಸ್ಮಾನ್ ಖವಾಜಾ, ಮಾರ್ನಸ್ ಲಾಬುಶೇನ್‌, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಬೇ ವೆಬ್‌ಸ್ಟರ್‌, ಅಲೆಕ್ಸ್ ಕೇರಿ (ವಿ.ಕೀ), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನೇಥನ್ ಲಯಾನ್, ಸ್ಕಾಟ್ ಬೋಲೆಂಡ್‌

ಐದನೇ ಟೆಸ್ಟ್‌ ಗೆಲುವಿನ ಮೇಲೆ ಭಾರತ ಕಣ್ಣು

ಕಳೆದ ಪಂದ್ಯಗಳ ಅಂತ್ಯಕ್ಕೆ ಭಾರತ ತಂಡ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಪಡೆದಿದೆ. ಈ ಹಿನ್ನೆಲೆಯಲ್ಲಿ ಸದ್ಯ ಟೆಸ್ಟ್‌ ಸರಣಿಯಲ್ಲಿ ಟೀಮ್‌ ಇಂಡಿಯಾ 1-2 ಹಿನ್ನಡೆಯನ್ನು ಅನುಭವಿಸಿದೆ. ಇದೀಗ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯನ್ನು ತನ್ನಲ್ಲಿ ಉಳಿಸಿಕೊಳ್ಳಬೇಕೆಂದರೆ ಭಾರತ ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕಾಗಿದೆ. ಅಲ್ಲದೆ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಹಾದಿಯನ್ನು ಜೀವಂತವಾಗಿರಿಸಿಕೊಳ್ಳಬೇಕೆಂದರೆ ಸಿಡ್ನಿ ಟೆಸ್ಟ್‌ ಅನ್ನು ಕಡ್ಡಾಯವಾಗಿ ಗೆಲ್ಲಬೇಕು.

ಈ ಸುದ್ದಿಯನ್ನು ಓದಿ: AUS vs IND: ಬುಮ್ರಾ ವಿರುದ್ಧ ವಿಶೇಷ ಕಾನೂನು ಜಾರಿಗೆ ಮುಂದಾದ ಆಸೀಸ್‌ ಪ್ರಧಾನಿ