ಬ್ರಿಸ್ಬೇನ್: ಕಳೆದ ಎರಡು ವರ್ಷಗಳಿಂದ ಭಾರತ ತಂಡಕ್ಕೆ ಟ್ರಾವಿಸ್ ಹೆಡ್ ತಲೆ ನೋವಾಗಿದ್ದಾರೆ. ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ 2023ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್, 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡದ ಎರಡು ಐಸಿಸಿ ಟ್ರೋಫಿಗಳನ್ನು ಕಸಿದುಕೊಂಡಿದ್ದರು. ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ (IND vs AUS) ಟೆಸ್ಟ್ ಸರಣಿಯಲ್ಲಿಯೂ ಟೀಮ್ ಇಂಡಿಯಾಗೆ ಟ್ರಾವಿಸ್ ಹೆಡ್ ತಲೆ ನೋವಾಗಿದ್ದಾರೆ. ಅದರಂತೆ ಅವರು ಪಿಂಕ್ ಬಾಲ್ ಟೆಸ್ಟ್ ಪ್ರಥಮ ಇನಿಂಗ್ಸ್ನಲ್ಲಿ ಶತಕ ಸಿಡಿಸುವ ಮೂಲಕ ಆಸ್ಟ್ರೇಲಿಯಾ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್ನ ದಿ ಗಬ್ಬಾ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾಗಲಿದೆ. ಈ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಅವರನ್ನು ಕಟ್ಟಿ ಹಾಕಲು ಭಾರತ ತಂಡದ ಬೌಲರ್ಗಳು ಯೋಜನೆ ರೂಪಿಸುತ್ತಿದ್ದಾರೆ. ಇದರ ನಡುವೆ ಆಸ್ಟ್ರೇಲಿಯಾ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಆಡಮ್ ಗಿಲ್ ಕ್ರಿಸ್ಟ್ ಅವರು, ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡಲು ಭಾರತ ತಂಡದ ಬೌಲರ್ಗಳಿಗೆ ಸೂಕ್ತ ರಣ ತಂತ್ರವನ್ನು ಹೇಳಿಕೊಟ್ಟಿದ್ದಾರೆ.
ದಿ ಗಬ್ಬಾದಲ್ಲಿ ಭಾರತ ತಂಡದ ಬೌಲರ್ಗಳಿಗೆ ಅತ್ಯಂತ ಕಠಿಣ ಸವಾಲು ಎದುರಾಗಲಿದೆ. ಅಲ್ಲದೆ ಬ್ರಿಸ್ಬೇನ್ನಲ್ಲಿ ಟ್ರಾವಿಸ್ ಹೆಡ್ ಅವರು ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. 2021-22ರ ಸಾಲಿನ ಆಶಸ್ ಟೆಸ್ಟ್ ಸರಣಿಯ ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ 152 ರನ್ಗಳನ್ನು ಸಿಡಿಸಿದ್ದರು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 9 ವಿಕೆಟ್ಗಳಿಂದ ಗೆಲುವು ಪಡೆದಿತ್ತು.
ಟ್ರಾವಿಸ್ ಹೆಡ್ ವಿಕೆಟ್ ಪಡೆಯಲು ಭಾರತಕೆಕ ರಣತಂತ್ರ ಹೇಳಿಕೊಟ್ಟ ಗಿಲ್ಕ್ರಿಸ್ಟ್
“ಟ್ರಾವಿಸ್ ಹೆಡ್ ಹಾಗೂ ಭಾರತ ತಂಡದ ಬೌಲರ್ಗಳ ನಡುವಣ ಪೈಪೋಟಿ ಅತ್ಯಂತ ಆಸಕ್ತದಾಯಕವಾಗಿರುತ್ತದೆ. ಅವರ ಎದುರು ಶಾರ್ಟ್ ಬಾಲ್ ರಣತಂತ್ರವನ್ನು ಭಾರತ ತಂಡದ ಬೌಲರ್ಗಳು ಏಕೆ ಮಾಡಿಲ್ಲ ಎಂಬುದು ನನಗೆ ಅಚ್ಚರಿಯನ್ನು ಉಂಟು ಮಾಡಿದೆ. ಅವರು ಮುಂದಿನ ಪಂದ್ಯದಲ್ಲಿ ರನ್ಗಳನ್ನು ಕಲೆ ಹಾಕಬಹುದು. ಆದರೆ, ನ್ಯೂಜಿಲೆಂಡ್ ಈ ಹಿಂದೆ ಟ್ರಾವಿಸ್ ಹೆಡ್ ಎದುರು ಪರಿಣಾಮಕಾರಿಯಾಗಿ ಶಾರ್ಟ್ ಬಾಲ್ ಎಸೆತಗಳನ್ನು ಪ್ರಯೋಗ ನಡೆಸಿದ್ದರು. ಅದೇ ರೀತಿ ಅವರಿಗೆ ನಿಯಮಿತವಾಗಿ ಬೌನ್ಸರ್ ಹಾಕುವ ಮೂಲಕ ಒತ್ತಡ ಹಾಕಬೇಕು ಹಾಗೂ ಅವರು ಅಪಾಯವನ್ನು ತೆಗೆದುಕೊಳ್ಳುವಂತೆ ಮಾಡಬೇಕು,” ಎಂದು ಆಡಮ್ ಗಿಲ್ಕ್ರಿಸ್ಟ್ ಸಲಹೆ ನೀಡಿದ್ದಾರೆ.
“ಭಾರತ ತಂಡ ರಣತಂತ್ರವನ್ನು ಅಳವಡಿಸಿಕೊಳ್ಳಬೇಕಾಗಿದೆ. ಸದ್ಯ ಹೆಡ್ ಅತ್ಯುತ್ತಮ ಪಾರ್ಮ್ನಲ್ಲಿದ್ದಾರೆ. ಆಸ್ಟ್ರೇಲಿಯಾ ಬ್ಯಾಟ್ಸ್ಮನ್ನ ಆಟ ಅದರಲ್ಲಿಯೂ ಆರ್ ಅಶ್ವಿನ್ ಎದುರು ಅವರು ತೋರಿದ್ದ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು. ಈ ಕಾರಣದಲ್ಲಿ ಬ್ರಿಸ್ಬೇನ್ ಟೆಸ್ಟ್ನಲ್ಲಿ ಭಾರತ ತಂಡದಲ್ಲಿ ಆರ್ ಅಶ್ವಿನ್ ಬದಲು ರವೀಂದ್ರ ಜಡೇಜಾಗೆ ಅವಕಾಶ ನೀಡುವ ಸಾಧ್ಯತೆ ಇದೆ,” ಎಂದು ಆಡಮ್ ಗಿಲ್ಕ್ರಿಸ್ಟ್ ತಿಳಿಸಿದ್ದಾರೆ.
ಅದ್ಬುತ ಲಯದಲ್ಲಿರುವ ಟ್ರಾವಿಸ್ ಹೆಡ್
ಟ್ರಾವಿಸ್ ಹೆಡ್ ಸದ್ಯ ಅತ್ಯುತ್ತಮ ಲಯದಲ್ಲಿದ್ದಾರೆ. ಅವರು ಕಳೆದ 32 ಟೆಸ್ಟ್ ಪಂದ್ಯಗಳ 53 ಇನಿಂಗ್ಸ್ಗಳಿಂದ 2260 ರನ್ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು 45.20ರ ಸರಾಸರಿ ಮತ್ತು 79.68ರ ಸ್ಟ್ರೈಕ್ ರೇಟ್ ಅನ್ನು ಹೊಂದಿದ್ದಾರೆ. ತಮ್ಮ ಈ ಅಂಕಿಅಂಶಗಳನ್ನು ಅವರು ಆರು ಶತಕಗಳು ಹಾಗೂ 10 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇನ್ನು ದಿ ಗಬ್ಬಾ ಸ್ಟೇಡಿಯಂನಲ್ಲಿ ಆಡಿದ್ದ ಐದು ಪಂದ್ಯಗಳಿಂದ 352 ರನ್ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ.
ಈ ಸುದ್ದಿಯನ್ನು ಓದಿ: IND vs AUS: ಮೂರನೇ ಟೆಸ್ಟ್ಗೆ ಭಾರತದ ಪ್ಲೇಯಿಂಗ್ XIನಲ್ಲಿ 2 ಬದಲಾವಣೆ ಸಾಧ್ಯತೆ!