Thursday, 15th May 2025

IND vs AUS: ʻನಿಮಗಿಂತ ಯುವ ಆಟಗಾರರು ಚೆನ್ನಾಗಿ ಆಡುತ್ತಿದ್ದರುʼ-ವಿರಾಟ್‌ ಕೊಹ್ಲಿ ವಿರುದ್ದ ಇರ್ಫಾನ್‌ ಪಠಾಣ್‌ ಕಿಡಿ!

IND vs AUS: 'Does Indian Cricket Deserve This'-Irfan Pathan Hits Out At Virat Kohli Over Declining Test Average

ಹೊಸದಿಲ್ಲಿ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (IND vs AUS) ಟೆಸ್ಟ್‌ ಸರಣಿಯಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿಯನ್ನು ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಟೀಕಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಕಳೆದ ಐದು ವರ್ಷಗಳಿಂದ ಇವರ ಸರಾಸರಿ ಕುಸಿಯುತ್ತಿದೆ. ಇವರಿಗೆ ನೀಡುವ ಅವಕಾಶಗಳನ್ನು ಯುವ ಆಟಗಾರರಿಗೆ ನೀಡಿದ್ದರೆ ಅವರೇ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

ವಿರಾಟ್‌ ಕೊಹ್ಲಿ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಸಿಡಿಸಿದ ಬಳಿಕ ಅವರು ಇನ್ನುಳಿದ ಐದೂ ಇನಿಂಗ್ಸ್‌ಗಳಲ್ಲಿ ಸತತ ವೈಫಲ್ಯವನ್ನು ಅನುಭವಿಸಿದ್ದಾರೆ. ಅವರು ಈ ಟೆಸ್ಟ್‌ ಸರಣಿಯಲ್ಲಿ ಕ್ರಮವಾಗಿ 5, 100*, 7, 11, 3, 36 ಹಾಗೂ 5 ರನ್‌ಗಳಿಗೆ ಸೀಮಿತರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಕೊಹ್ಲಿಯ ಟೆಸ್ಟ್‌ ರನ್‌ ಸರಾಸರಿ 28ಕ್ಕೆ ಕುಸಿದಿದೆ. ಇದು ಭಾರತೀಯ ಕ್ರಿಕೆಟ್‌ಗೆ ಅರ್ಹವಾಗಿಲ್ಲ. ಮೆಲ್ಬರ್ನ್‌ ಟೆಸ್ಟ್‌ ಸೋಲಿನ ಬಳಿಕ ಮಾತನಾಡಿದ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಹಿರಿಯ ಬ್ಯಾಟ್ಸ್‌ಮನ್‌ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ವಿರಾಟ್‌ ಕೊಹ್ಲಿ ಮಾತ್ರವಲ್ಲ ರೋಹಿತ್‌ ಶರ್ಮಾ ಕೂಡ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಈ ಸರಣಿಯಲ್ಲಿ ರೋಹಿತ್‌ ಶರ್ಮಾ ಫುಟ್‌ವರ್ಕ್‌ ಸಮಸ್ಯೆಯಿಂದ ಆಸೀಸ್‌ ವೇಗಿಗಳ ಎದುರು ತಿಣುಕಾಡುತ್ತಿದ್ದಾರೆ. ಆದರೆ, ವಿರಾಟ್‌ ಕೊಹ್ಲಿ ಆಫ್‌ ಸ್ಟಂಪ್‌ ಹೊರಗಡೆಯ ಎಸೆತಗಳಲ್ಲಿ ಪದೇ-ಪದೆ ವಿಕೆಟ್‌ ಒಪ್ಪಿಸಿದ್ದಾರೆ. ಇದರಿಂದ ಅವರು ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ.

IND vs AUS: ʻಅದೇ ರಾಗ ಅದೇ ತಾಳʼ-ವಿರಾಟ್‌ ಕೊಹ್ಲಿ ವೈಫಲ್ಯದ ಬಗ್ಗೆ ಸಂಜಯ್‌ ಮಾಂಜ್ರೇಕರ್‌ ಕಿಡಿ!

ಭಾರತೀಯ ಕ್ರಿಕೆಟ್‌ಗೆ ಕೊಹ್ಲಿಯ ಸರಾಸರಿ ಅರ್ಹವಾಗಿಲ್ಲ

ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಇರ್ಫಾನ್‌ ಪಠಾಣ್‌, “ಇಲ್ಲಿಗೆ ಐದು ವರ್ಷಗಳು ಮುಗಿದಿವೆ. ನೀವು ದೊಡ್ಡ ಆಟಗಾರ ಹಾಗೂ ಕಳೆದ ಐದು ವರ್ಷಗಳಿಂದ ನಿಮ್ಮ ಟೆಸ್ಟ್‌ ರನ್‌ ಸರಾಸರಿ 28ರ ಸನಿಹಕ್ಕೆ ಬಂದು ನಿಂತಿದೆ. ಇದು ಭಾರತೀಯ ಕ್ರಿಕೆಟ್‌ಗೆ ಅರ್ಹವಿದೆಯಾ? ತಮ್ಮ ಅತ್ಯುತ್ತಮ ಆಟಗಾರನಿಂದ ಭಾರತೀಯ ಕ್ರಿಕೆಟ್‌ಗೆ 28ರ ಸರಾಸರಿಗೆ ಅರ್ಹವಾಗಿದೆಯೇ? ಇಲ್ಲವೇ ಇಲ್ಲ, ಇದಕ್ಕಿಂತ ಉತ್ತಮವಾಗಿರುವುದು ಅರ್ಹವಾಗಿದೆ,” ಎಂದು ಹೇಳಿದ್ದಾರೆ.

“2024ರ ಅಕ್ಟೋಬರ್‌ 21 ರಿಂದ ಇಲ್ಲಿಯವರೆಗೂ ವಿರಾಟ್‌ ಕೊಹ್ಲಿಯ ಸರಾಸರಿ 21ಕ್ಕೆ ಇಳಿದಿದೆ. ಭಾರತ ಕ್ರಿಕೆಟ್‌ ತಂಡಕ್ಕೆ ಇದು ಅರ್ಹವಾಗಿಲ್ಲ. ಇವರಿಗೆ ನೀಡಿದ ಅವಕಾಶಗಳನ್ನು ಯುವ ಆಟಗಾರರಿಗೆ ನೀಡಿದರೆ, ಇವರಿಗಿಂತ ಉತ್ತಮ ಸರಾಸರಿಯಲ್ಲಿ ರನ್‌ ಗಳಿಸುತ್ತಿದ್ದರು. ವಿರಾಟ್‌ ಕೊಹ್ಲಿಯಿಂದ ನೀವು ಇದಕ್ಕಿಂತ ಜಾಸ್ತಿ ನಿರೀಕ್ಷೆ ಮಾಡಬೇಕಾಗಿದೆ. ನಿಮ್ಮ ವೃತ್ತಿ ಜೀವನದ ಸರಾಸರಿಯ ಸಂಖ್ಯೆ 50ರ ಸನಿಹದಲ್ಲಿದೆ, ಆದರೆ ಈ ಸಂಖ್ಯೆಗಳ ಸರಾಸರಿ ನಿಜಕ್ಕೂ ನಾಚಿಕಗೇಡಿನ ಸಂಗತಿ,” ಎಂದು ವಿರಾಟ್‌ ಕೊಹ್ಲಿ ವಿರುದ್ದ ಇರ್ಫಾನ್‌ ಪಠಾಣ್‌ ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಓದಿ: Clown kohli: ವಿರಾಟ್‌ ಕೊಹ್ಲಿಯನ್ನು ಅವಮಾನಿಸಿದ ಆಸ್ಟ್ರೇಲಿಯಾ ಪತ್ರಿಕೆ!