Sunday, 18th May 2025

IND vs AUS: ರೋಹಿತ್‌ ಶರ್ಮಾ ವೈಫಲ್ಯಕ್ಕೆ ಕಾರಣ ತಿಳಿಸಿದ ಸುನೀಲ್‌ ಗವಾಸ್ಕರ್‌!

IND vs AUS: Batting Legend Sunil Gavaskar suggests exercises to Rohit Sharma to overcome footwork issues

ಅಡಿಲೇಡ್‌: ಆಸ್ಟ್ರೇಲಿಯಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (IND vs AUS) ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ವೈಫಲ್ಯ ಅನುಭವಿಸಲು ಕಾರಣವೇನೆಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಬಹಿರಂಗಪಡಿಸಿದ್ದಾರೆ ಹಾಗೂ ಇದಕ್ಕೆ ಪರಿಹಾರ ಏನೆಂಬುದನ್ನು ಕೂಡ ಸೂಚಿಸಿದ್ದಾರೆ.

ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಸ್ಕಾಟ್‌ ಬೋಲೆಂಡ್‌ಗೆ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದಿದ್ದ ರೋಹಿತ್‌ ಶರ್ಮಾ, ಶನಿವಾರ ದ್ವಿತೀಯ ಇನಿಂಗ್ಸ್‌ನಲ್ಲಿ ಪ್ಯಾಟ್‌ ಕಮಿನ್ಸ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆಗಿದ್ದರು. ಆ ಮೂಲಕ ಎರಡೂ ಇನಿಂಗ್ಸ್‌ಗಳಲ್ಲಿ ಟೀಮ್‌ ಇಂಡಿಯಾ ಕೇವಲ 9 ರನ್‌ಗಳಿಗೆ ಸೀಮಿತರಾಗಿದ್ದಾರೆ.

ಇಂಡಿಯಾ ಟುಡೇ ಜೊತೆ ಮಾತನಾಡಿದ ಸುನೀಲ್‌ ಗವಾಸ್ಕರ್‌, ಬ್ಯಾಟಿಂಗ್‌ ವೇಳೆ ರೋಹಿತ್‌ ಶರ್ಮಾ ಅವರ ಫುಟ್‌ವರ್ಕ್‌ ಸರಿಯಾಗಿ ಇಲ್ಲ. ಅವರು ಪಾದಗಳು ಚಲನೆ ಉತ್ತಮವಾಗಿಲ್ಲ. ಅದಕ್ಕಾಗಿ ಅವರು ಬ್ಯಾಟಿಂಗ್‌ಗೂ ಬರುವ ಮುನ್ನ ಅವರು ತಮ್ಮ ಕಾಲುಗಳಿಗೆ ಸ್ವಲ್ಪ ವಾರ್ಮ್‌ ಅಪ್‌ ಮಾಡಿಕೊಂಡು ಬರಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.

ರೋಹಿತ್‌ ಶರ್ಮಾಗೆ ಗವಾಸ್ಕರ್‌ ಸಲಹೆ

“ಬ್ಯಾಟಿಂಗ್‌ ವೇಳೆ ರೋಹಿತ್‌ ಶರ್ಮಾ ಅವರ ಪಾದಗಳು ಸರಿಯಾಗಿ ಚಲಿಸುತ್ತಿಲ್ಲ. ಅವರು ಕ್ರೀಸ್‌ಗೆ ಬರುವುದಕ್ಕೂ ಮುನ್ನ ಸ್ವಲ್ಪ ವ್ಯಾಯಾಮ ಮಾಡಿಕೊಂಡು ಬಂದರೆ, ಆಗ ಅವರ ಕಾಲುಗಳು ಹಾಗೂ ಪಾದಗಳು ಚಲನೆಯ ಸ್ಥಿತಿಯಲ್ಲಿರುತ್ತವೆ. ಅವರು ಪಾದದ ಚಲನೆ ವಿಷಯದಲ್ಲಿ ರೋಹಿತ್‌ ಶರ್ಮಾ ಅವರು ಅತ್ಯಂತ ನಿಧಾನವಾಗಿದ್ದಾರೆ. ಇದು ಅವರ ಇತ್ತೀಚಿನ ಸಮಸ್ಯೆಯಲ್ಲ. ಆದರೆ, ನೀವು ವಯಸ್ಸಾದಂತೆ ಇದು ನಿಮ್ಮಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ನೀವು ಇದರ ಮೇಲೆ ಸ್ವಲ್ಪ ಕೆಲಸ ಮಾಡಬೇಕಾದ ಅಗತ್ಯವಿದೆ. ನೀವು ಬ್ಯಾಟಿಂಗ್‌ಗೆ ಬರುವುದಕ್ಕೂ ಮುನ್ನ ಸ್ವಲ್ಪ ದೂರ ಓಡಬೇಕು, ಆ ಮೂಲಕ ದೇಹವನ್ನು ಬಿಸಿ ಮಾಡಿಕೊಳ್ಳಬೇಕು. ಹಾಗಾಗಿ ಮೊದಲನೇ ಎಸೆತವನ್ನು ಎದುರಿಸುವುದಕ್ಕೂ ಮುನ್ನ ನೀವು ಸ್ವಲ್ಪ ಓಡಬೇಕು,” ಎಂದು ಸುನೀಲ್‌ ಗವಾಸ್ಕರ್‌ ತಿಳಿ ಹೇಳಿದ್ದಾರೆ.

ಐದು ವಿಕೆಟ್‌ ಕಳೆದುಕೊಂಡಿರುವ ಭಾರತ

ಆಸ್ಟ್ರೇಲಿಯಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 337 ರನ್‌ಗಳನ್ನು ಕಲೆ ಹಾಕಿ ಆಲ್‌ಔಟ್‌ ಆಯಿತು. ಆ ಮೂಲಕ ಭಾರತ ತಂಡ 157 ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗಳ ನಷ್ಟಕ್ಕೆ 128 ರನ್‌ಗಳನ್ನು ಕಲೆ ಹಾಕಿದೆ ಹಾಗೂ ಇನ್ನೂ 29 ರನ್‌ಗಳ ಹಿನ್ನಡೆಯಲ್ಲಿದೆ. ಅಂದ ಹಾಗೆ ರಿಷಭ್‌ ಪಂತ್‌ (28) ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ (15) ಕ್ರೀಸ್‌ನಲ್ಲಿದ್ದಾರೆ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಕೆಎಲ್‌ ರಾಹುಲ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS 2nd Test: ಟ್ರಾವಿಸ್‌ ಹೆಡ್‌ ಶತಕ, ಎರಡನೇ ದಿನವೂ ಭಾರತಕ್ಕೆ ಹಿನ್ನಡೆ!