ಬ್ರಿಸ್ಬೇನ್: ಭಾರತದ ವಿರುದ್ದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ (IND vs AUS) ಇನ್ನುಳಿದ ಭಾಗದಿಂದ ಆಸ್ಟ್ರೇಲಿಯಾ ತಂಡದ ಹಿರಿಯ ವೇಗಿ ಜಾಶ್ ಹೇಝಲ್‌ವುಡ್ ಹೊರ ನಡೆಯಲಿದ್ದಾರೆಂದು ವರದಿಯಾಗಿದೆ. ಅವರು ಇಲ್ಲಿನ ದಿ ಗಬ್ಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಕಾಫ್ ಸ್ಟ್ರೈನ್‌ಗೆ ತುತ್ತಾಗಿದ್ದಾರೆ ಹಾಗೂ ಅವರ ಗಾಯ ಗಂಭೀರವಾಗಿರುವುದು ಸ್ಕ್ಯಾನ್ ವರದಿಗಳಿಂದ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಟೆಸ್ಟ್ ಸರಣಿಯನ್ನು ಮುಂದುವರಿಯುವುದು ಅನುಮಾನವಾಗಿದೆ.
ಪಂದ್ಯದ ಮೂರನೇ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದ ಜಾಶ್ ಹೇಝಲ್‌ವುಡ್ ಅವರು ವಿರಾಟ್ ಕೊಹ್ಲಿ ವಿಕೆಟ್ ಪಡೆದಿದ್ದರು. ಅಂದ ಹಾಗೆ ಪರ್ತ್ ಟೆಸ್ಟ್ ಬಳಿಕ ಜಾಶ್ ಹೇಝಲ್‌ವುಟ್ ಗಾಯಕ್ಕೆ ತುತ್ತಾಗಿದ್ದರು ಹಾಗೂ ಅಡಿಲೇಡ್ ಹಾಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಆದರೆ, ಮೂರನೇ ಟೆಸ್ಟ್ ಬಳಿಕ ಸಂಪೂರ್ಣ ಫಿಟ್ ಆಗಿದ್ದ ಅವರು ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಮರಳಿದ್ದರು. ಆ ಮೂಲಕ ಹಿರಿಯ ವೇಗಿಯ ಮೇಲೆ ಆಸ್ಟ್ರೇಲಿಯಾ ಟೀಮ್ ಮ್ಯಾನೇಜ್‌ಮೆಂಟ್ ಒತ್ತಡವನ್ನು ಹೇರಿತ್ತು. ಆದರೆ ಇದೀಗ ಅವರು ಸರಣಿಯಲ್ಲಿ ಎರಡನೇ ಬಾರಿ ಗಾಯಕ್ಕೆ ತುತ್ತಾಗಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೆ
“ಜಾಶ್ ಹೇಝಲ್‌ವುಡ್ ಅವರು ತಮ್ಮ ಬಲಬದಿಯ ಕಾಫ್ ಸ್ಟ್ರೈನ್‌ಗೆ ತುತ್ತಾಗಿದ್ದಾರೆ ಹಾಗೂ ಭಾರತದ ವಿರುದ್ದ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಆಸ್ಟ್ರೇಲಿಯಾದ ಪ್ಲೇಯಿಂಗ್ XIನಲ್ಲಿ ಆಡದಂತೆ ತಗಡೆ ಹಿಡಿಯಲಾಗುವುದು. ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ ಬೆಳಿಗ್ಗೆ ಅಭ್ಯಾಸ ನಡೆಸುತ್ತಿರುವ ಸಮಯದಲ್ಲಿ ಅವರು ಗಾಯಕ್ಕೆ ತುತ್ತಾಗಿದ್ದರು ಹಾಗೂ ಅವರು ಪಂದ್ಯದಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಅಲ್ಲದೆ ಟೆಸ್ಟ್ ಸರಣಿಯ ಇನ್ನುಳಿದ ಭಾಗದಿಂದ ಅವರು ಹೊರ ನಡೆಯುವ ಸಾಧ್ಯತೆ ಇದೆ,” ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
Australia have prioritised experience in team selections.
— cricket.com.au (@cricketcomau) December 17, 2024
Does Hazlewood's latest injury blow signal towards the inevitability of some hard decisions?#AUSvINDhttps://t.co/8ToDrO6lox
ಜಾಶ್ ಹೇಝಲ್‌ವುಡ್ ಅಲಭ್ಯತೆಯಿಂದ ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ಪ್ಲಯಿಂಗ್ XIನಲ್ಲಿ ಸ್ಕಾಟ್ ಬೋಲೆಂಡ್‌ಗೆ ಅವಕಾಶ ಸಿಗಲಿದೆ. ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಹೇಝಲ್‌ವುಟ್ ಅನುಪಸ್ಥಿತಿಯಲ್ಲಿ ಬೋಲೆಂಡ್ ಆಡಿ ಎಲ್ಲರ ಗಮನವನ್ನು ಸೆಳೆದಿದ್ದರು. 2021-22ರ ಸಾಲಿನ ಇಂಗ್ಲೆಂಡ್ ವಿರುದ್ದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಸ್ಕಾಟ್ ಬೋಲೆಂಡ್ 6 ವಿಕೆಟ್‌ಗಳನ್ನು ಕಬಳಿಸಿದ್ದರು. ಅಂದ ಹಾಗೆ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಬೋಲೆಂಡ್ ಆಗಮನದ ಬಗ್ಗೆ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಸುಳಿವು ನೀಡಿದ್ದಾರೆ.
ಸ್ಕಾಟ್ ಬೋಲೆಂಡ್ ಆಗಮನ ಸಾಧ್ಯತೆ
“ಎಂಸಿಜೆ ಟೆಸ್ಟ್‌ನಲ್ಲಿ ನಿಮ್ಮ ಅಗತ್ಯ ನಮಗೆ ಬೇಕಾಗಬಹುದು ಹಾಗೂ ತಯಾರಿಯಾಗುವಂತೆ ನಾವು ಅವರಿಗೆ (ಸ್ಕಾಟ್ ಬೋಲೆಂಡ್) ತಿಳಿಸಿದ್ದೇವೆ. ಈ ಸರಣಿಯುದ್ದಕ್ಕೂ ಕೆಲ ಆಟಗಾರರ ಸ್ವಾಭವಿಕ ಫಾರ್ಮ್ ಅನ್ನು ಮುಂದುವರಿಸಿದ್ದಾರೆ. ಈ ಸರಣಿಯ ಆರಂಭದಲ್ಲಿ ಅವರು ಆಡಿರುವುದು ನಿಜಕ್ಕೂ ಪ್ಲಸ್ ಪಾಯಿಂಟ್ ಆಗಿದೆ. ಅವರು ತಮ್ಮ ಬೌಲಿಂಗ್ ಗುಣಮಟ್ಟವನ್ನು ತೋರಿದ್ದಾರೆ. ಅವರನ್ನು ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಸೆಟ್ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ,” ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.
2021-22ರ ಸಾಲಿನಿಂದ ಇಲ್ಲಿಯವರೆಗೂ ಆಸ್ಟ್ರೇಲಿಯಾ ಆಡಿದ 35 ಟೆಸ್ಟ್ ಪಂದ್ಯಗಳ ಪೈಕಿ ಜಾಶ್ ಹೇಝಲ್‌ವುಡ್ ವಿವಿಧ ಗಾಯದ ಕಾರಣ 18 ಪಂದ್ಯಗಳನ್ನು ಕಳೆದುಕೊಂಡಿದ್ದಾರೆ. ಕಾಫ್ ಸ್ಟ್ರೈನ್ ಗಾಯದ ಕಾರಣ ಈ ವರ್ಷದ ಆರಂಭದಲ್ಲಿ ಜಾಶ ಹೇಝಲ್‌ವುಡ್ ಅವರು ಸ್ಕಾಟ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ದದ ಟಿ20 ಸರಣಿಗಳಿಗೆ ಅಲಭ್ಯರಾಗಿದ್ದರು.
ಈ ಸುದ್ದಿಯನ್ನು ಓದಿ: IND vs AUS: ರೋಹಿತ್ ಶರ್ಮಾ ವೈಫಲ್ಯಕ್ಕೆ ಕಾರಣ ತಿಳಿಸಿದ ಸುನೀಲ್ ಗವಾಸ್ಕರ್!