Saturday, 17th May 2025

Prithvi Shaw: ʻಅರ್ಧಂಬರ್ಧ ತಿಳಿದು ಮಾತನಾಡಬೇಡಿʼ-ಮುಂಬೈ ಕ್ರಿಕೆಟ್‌ ಸಂಸ್ಥೆಗೆ ಪೃಥ್ವಿ ಶಾ ತಿರುಗೇಟು!

If you don't understand it fully, Don't speak on it: Prithvi Shaw's cryptic post amid immense criticism

ಮುಂಬೈ: ತನಗೆ ಫಿಟ್ನೆಸ್‌ ಸಮಸ್ಯೆ ಹಾಗೂ ಶಿಸ್ತಿನ ಕೊರತೆ ಇದೆ ಎಂದು ಆರೋಪ ಮಾಡಿದ್ದ ಮುಂಬೈ ಕ್ರಿಕೆಟ್‌ ಅಸೋಸಿಯೇಷನ್‌ನ ಅಧಿಕಾರಿಯೊಬ್ಬರಿಗೆ ಭಾರತದ ಯುವ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ (Prithvi Shaw) ತಿರುಗೇಟು ನೀಡಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯಲ್ಲಿ ಪೃಥ್ವಿ ಶಾ ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ರಣಜಿ ಟ್ರೋಫಿ ಮುಂಬೈ ತಂಡದಿಂದ ಸ್ಥಾನ ಕಳೆದುಕೊಂಡಿದ್ದ ಪೃಥ್ವಿ ಶಾ, ನಂತರ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯ ಮುಂಬೈ ತಂಡದಲ್ಲಿ ಆಡಿದ್ದರು. ಆದರೆ, ಈ ಟೂರ್ನಿಯಲ್ಲಿ ಅವರಿಂದ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿರಲಿಲ್ಲ. ಇದರ ಫಲವಾಗಿ ಅವರನ್ನು ವಿಜಯ್‌ ಹಝಾರೆ ಟ್ರೋಫಿ ತಂಡದಿಂದ ಬಲಗೈ ಬ್ಯಾಟ್ಸ್‌ಮನ್‌ ಅನ್ನು ಕೈ ಬಿಡಲಾಗಿತ್ತು. ಇದಾದ ಬಳಿಕ ಪೃಥ್ವಿ ಶಾ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ತಮ್ಮ ಪ್ರಥಮ ದರ್ಜೆ ಅಂಕಿಅಂಶಗಳನ್ನು ಹಂಚಿಕೊಳ್ಳುವ ಮೂಲಕ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ಶುಕ್ರವಾರ ಮುಂಬೈ ಕ್ರಿಕೆಟ್‌ ಅಸೋಸಿಯೇಷನ್‌ನ ಅಧಿಕಾರಿಯೊಬ್ಬರು ಮಾತನಾಡಿ ಪೃಥ್ವಿ ಶಾ ಅವರನ್ನು ಮುಂಬೈ ತಂಡದಿಂದ ಕೈ ಬಿಡಲು ಕಾರಣವನೆಂದು ತಿಳಿಸಿದ್ದರು. “ಸೈಯದ್‌ ಮುಷ್ತಾಕ್‌ ಟಲಿ ಟ್ರೋಫಿ ಟೂರ್ನಿಯಲ್ಲಿ ಪೃಥ್ವಿ ಶಾ ಕಳಪೆ ಫೀಲ್ಡಿಂಗ್‌ ಪ್ರದರ್ಶನ ತೋರಿದ್ದರು ಹಾಗೂ ಅವರನ್ನು ಮರೆ ಮಾಚಲು ನಾವು 10 ಮಂದಿ ಆಟಗಾರರಿಂದ ಫೀಲ್ಡಿಂಗ್‌ ಮಾಡಿಸಿದ್ದೆವು,” ಎಂದು ಆರೋಪ ಮಾಡಿದ್ದರು.

“ಬ್ಯಾಟಿಂಗ್‌ ವೇಳೆಯೂ ಅವರು ಚೆಂಡಿನ ಬಳಿ ಹೋಗಲು ಹೇಗೆ ಕಷ್ಟಪಡುತ್ತಿದ್ದರು ಎಂಬುದನ್ನು ನೀವು ನೋಡಬಹುದು. ಅವರ ಫಿಟ್ನೆಸ್‌, ಶಿಸ್ತು ಹಾಗೂ ನಡತೆ ಅತ್ಯಂತ ಕಳಪೆಯಿಂದ ಕೂಡಿದೆ. ಪ್ರತಿಯೊಬ್ಬರಿಗೂ ಒಂದೊಂದು ನಿಯಮವನ್ನು ರೂಪಿಸಲು ಸಾಧ್ಯವಿಲ್ಲ. ನಿಯಮ ಎಂದ ಮೇಲೆ ಎಲ್ಲರಿಗೂ ಒಂದೇ ರೀತಿ ಇರುತ್ತದೆ,” ಎಂದು ಎಂಸಿಎ ಅಧಿಕಾರಿ ತಿಳಿಸಿದ್ದರು.

“ತಂಡದಲ್ಲಿನ ಹಿರಿಯ ಆಟಗಾರರು ಕೂಡ ಅವರ ವರ್ತನೆ ಬಗ್ಗೆ ನಮಗೆ ದೂರು ನೀಡಲು ಆರಂಭಿಸಿದ್ದಾರೆ. ಪೃಥ್ವಿ ಶಾರ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳಿಂದ ಎಂಸಿಎ ಮತ್ತು ಸೆಲೆಕ್ಟರ್‌ಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ,” ಎಂದು ಅವರು ದೂರಿದ್ದರು.

Prithvi Shaw: ವಿಜಯ್‌ ಹಝಾರೆ ಟ್ರೋಫಿ ಮುಂಬೈ ತಂಡದಿಂದಲೂ ಪೃಥ್ವಿ ಶಾ ಔಟ್‌!

ಎಂಸಿಎ ಅಧಿಕಾರಿಗೆ ಪೃಥ್ವಿ ಶಾ ತಿರುಗೇಟು

ಮುಂಬೈ ಕ್ರಿಕೆಟ್‌ ಅಸೋಸಿಯೇಷನ್‌ ಅಧಿಕಾರಿ ಪೃಥ್ವಿ ಶಾ ಬಗ್ಗೆ ಹೇಳಿಕೆ ನೀಡಿದ ಬೆನ್ನಲ್ಲೆ, ಬಲಗೈ ಬ್ಯಾಟ್ಸ್‌ಮನ್‌ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ತಿರುಗೇಟು ನೀಡಿದ್ದಾರೆ ಹಾಗೂ ತನ್ನನ್ನು ಬೆಂಬಲಿಸಿಕೊಂಡಿದ್ದಾರೆ. ಸಂಪೂರ್ಣವಾಗಿ ವಿಷಯ ಗೊತ್ತಿಲ್ಲವಾದರೆ, ಏನನ್ನೂ ಮಾತನಾಡಬೇಡಿ. ಕೆಲವರು ಅರ್ಧಂಬರ್ಧ ಸತ್ಯಗಳೊಂದಿಗೆ ಪೂರ್ಣ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಎಂದು ಪೃಥ್ವಿ ಶಾ ತಿರುಗೇಟು ನೀಡಿದ್ದಾರೆ.

“ನಿಮಗೆ ಸಂಪೂರ್ಣವಾಗಿ ಅರ್ಥವಾಗದಿದ್ದರೆ, ಅದರ ಬಗ್ಗೆ ಮಾತನಾಡಬೇಡಿ. ಸಾಕಷ್ಟುಜನರು ಅರ್ಧ ಸತ್ಯಗಳೊಂದಿಗೆ ಪೂರ್ಣ ಅಭಿಪ್ರಾಯಗಳನ್ನು ಹೊಂದಿದ್ದಾರೆ,” ಎಂದು ಪೃಥ್ವಿ ಶಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಓದಿ: Prithvi Shaw: ‘ನಾನೇನು ತಪ್ಪು ಮಾಡಿದೆ?’; ಟ್ರೋಲ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ ಪೃಥ್ವಿ ಶಾ