ನವದೆಹಲಿ: ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆಂದು ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ರಾಜಕೀಯ ಕಾರಣಗಳಿಂದ ಭಾರತ ಹಾಗೂ ಪಾಕಿಸ್ತಾನ ತಂಡಗಳು ದ್ವಿಕ್ಷೀಯ ಸರಣಿಗಳನ್ನು ಆಡುತ್ತಿಲ್ಲ ಹಾಗೂ ಪಾಕಿಸ್ತಾನಕ್ಕೆ ಭಾರತ ತಂಡ ತೆರಳುತ್ತಿಲ್ಲ.
ಪ್ರಸ್ತುತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕುರಿತು ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವಣ ವಿವಾದವು ಗಾಢವಾಗುತ್ತಿದೆ. ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಆದರೆ, ಭದ್ರತಾ ಕಾರಣಗಳಿಂದಾಗಿ ಬಿಸಿಸಿಐ, ತನ್ನ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿದೆ ಹಾಗೂ ತನ್ನ ತಂಡದ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಬೇಕೆಂದು ಆಗ್ರಹಿಸಿದೆ.
ಮೊದಲಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇದನ್ನು ನಿರಾಕರಿಸುತ್ತಲೇ ಇತ್ತು. ಆದಾಗ್ಯೂ, ನಂತರ ಐಸಿಸಿ ಮತ್ತು ಬಿಸಿಸಿಐ ಮುಂದೆ ಪಿಸಿಬಿ ತಲೆಬಾಗಬೇಕಾಯಿತು. ಆದರೆ ಐಸಿಸಿಗೆ ಮೂರು ಷರತ್ತುಗಳನ್ನು ಪಿಸಿಬಿ ವಿಧಿಸಿದೆ. ಹೈಬ್ರಿಡ್ ಪಂದ್ಯಗಳು ಯುಎಇನಲ್ಲಿ ನಡೆಯಬೇಕು, ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ಗೆ ಭಾರತ ತಂಡ ಅರ್ಹತೆ ಪಡೆದಿಲ್ಲವಾದರೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಪಾಕಿಸ್ತಾನದಲ್ಲಿಯೇ ನಡೆಯಬೇಕು ಹಾಗೂ ಭಾರತದಲ್ಲಿ ಭವಿಷ್ಯದಲ್ಲಿ ನಡೆಯುವ ಐಸಿಸಿ ಟೂರ್ನಿಗಳು ಕೂಡ ಹೈಬ್ರಿಡ್ ಮಾದರಿಯಲ್ಲಿ ನಡೆಯಬೇಕೆಂಬ ಮೂರು ಷರತ್ತುಗಳನ್ನು ಐಸಿಸಿಗೆ ಪಿಸಿಬಿ ಹಾಕಿದೆ.
ವಿರಾಟ್ ಕೊಹ್ಲಿ ಬಗ್ಗೆ ಶೋಯೆಬ್ ಅಖ್ತರ್ ಅಚ್ಚರಿ ಹೇಳಿಕೆ
ಇದರ ನಡುವೆ ಪಾಕಿಸ್ತಾನ ವೇಗದ ಬೌಲಿಂಗ್ ದಿಗ್ಗಜ ಶೋಯೆಬ್ ಅಖ್ತರ್, ಭಾರತ ಮತ್ತು ವಿರಾಟ್ ಕೊಹ್ಲಿ ಪಾಕಿಸ್ತಾನದಲ್ಲಿ ಆಡಬೇಕೆಂದು ಆಗ್ರಹಿಸುತ್ತಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಪಾಕಿಸ್ತಾನದಲ್ಲಿ ಆಡಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆಂದು ಹೇಳುವ ಮೂಲಕ ಶೋಯೆಬ್ ಅಖ್ತರ್ ವಿವಾದ ಸೃಷ್ಟಿಸಿದ್ದಾರೆ.
ಮೊಹಮ್ಮದ್ ಹಫೀಜ್ ಅವರೊಂದಿಗಿನ ಸಂಭಾಷಣೆಯಲ್ಲಿ ಮಾತನಾಡಿದ ಶೋಯೆಬ್ ಅಖ್ತರ್, “ಪಾಕಿಸ್ತಾನಕ್ಕಿಂತ ಭಾರತ ತಂಡ ಪಾಕ್ ನೆಲದಲ್ಲಿ ಆಡಲು ಬಯಸುತ್ತಿದೆ. ಅಲ್ಲದೆ ವಿರಾಟ್ ಕೊಹ್ಲಿ ಕೂಡ ಪಾಕಿಸ್ತಾನದಲ್ಲಿ ಆಡಲು ಎದುರು ನೋಡುತ್ತಿದ್ದಾರೆ. ಭಾರತದಲ್ಲಿ ನಾನು ಬಿಸಿಸಿಐ ಜೊತೆ ಕೆಲಸ ಮಾಡಿದ್ದೇನೆ. ಕ್ರಿಕೆಟ್ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಬಂದಿಳಿದರೆ, ಟಿವಿ ಹಕ್ಕುಗಳು ಹಾಗೂ ಪ್ರಾಯೋಜಕತ್ವದ ಮೌಲ್ಯ ಗಗನಕ್ಕೇರಲಿದೆ,” ಎಂದು ತಿಳಿಸಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ ವಿಳಂಬ
ಭಾರತ ಮತ್ತು ಪಾಕಿಸ್ತಾನ ನಡುವಣ ಹೈಬ್ರಿಡ್ ಮಾಡೆಲ್ ಸಂಬಂಧ ಹಗ್ಗ-ಜಗ್ಗಾಟ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಐಸಿಸಿ ಇನ್ನೂ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಭಾರತ ಮತ್ತು ಪಾಕಿಸ್ತಾನವಲ್ಲದೆ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅಫಫಾನಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ ಎಂಟು ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿವೆ.
ಈ ಸುದ್ದಿಯನ್ನು ಓದಿ: IND vs AUS: ವಿರಾಟ್ ಕೊಹ್ಲಿ ಕೊಟ್ಟಿದ್ದ ಸಲಹೆಯನ್ನು ರಿವೀಲ್ ಮಾಡಿದ ಯಶಸ್ವಿ ಜೈಸ್ವಾಲ್!