ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್ ಧವನ್(Shikhar Dhawan) ಅವರು ಬಾಲಿವುಡ್ ನಟಿ ಹುಮಾ ಖುರೇಷಿ(Huma Qureshi) ಅವರೊಂದಿಗೆ ರಹಸ್ಯವಾಗಿ ಎರಡನೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಲ್ಲದೆ ಈ ಜೋಡಿ ಮದುವೆ ಉಡುಪಿನಲ್ಲಿ ಕಾಣಿಸಿಕೊಂಡಿರುವ ಫೋಟೊಗಳು ಕೂಡ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ. ಅಸಲಿಗೆ ಈ ಜೋಡಿ ಮದುವೆಯಾಗಿಲ್ಲ. ಕೆಲ ಕಿಡಿಗೇಡಿಗಳು ಎಐ(AI) ತಂತ್ರಜ್ಞಾನವನ್ನು(Fact Check) ಬಳಿಸಿ ಈ ನಕಲಿ ಫೋಟೊವನ್ನು ರಚಿಸಿದ್ದಾರೆ.
ಕೆಲ ದಿನಗಳ ಹಿಂದೆ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಮತ್ತು ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ದುಬೈನಲ್ಲಿ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ನಕಲಿ ಫೋಟೊ ವೈರಲ್ ಆಗಿತ್ತು. ಎಐ ತಂತ್ರಜ್ಞಾನವನ್ನು ಬಳಿಸಿ ಈ ರೀತಿ ನೆಟ್ಟಿಗರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವುದು ಇತ್ತೀಚೆಗೆ ಹೆಚ್ಚಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಇದು ಅಪಾಯಕಾರಿಯಾಗುವ ಸಾಧ್ಯತೆ ಇದೆ.

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿದೆ. ನಟಿ ಹುಮಾ ಖುರೇಷಿ ಕೂಡ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ. ಧವನ್ ಅವರ ವಿಚ್ಛೇದಿತ ಪತ್ನಿ ಆಯೇಶಾ ಮುಖರ್ಜಿ ಧವನ್ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಮಾನಹಾನಿ ಮಾಡಿದ್ದರು. ಕಳೆದ ವರ್ಷ ಅಕ್ಟೋಬರ್ 4 ರಂದು ದೆಹಲಿಯ ಕೌಟುಂಬಿಕ ನ್ಯಾಯಾಲಯವು ಧವನ್ಗೆ ಆಯೇಷಾ ಮುಖರ್ಜಿಯಿಂದ ಅಧಿಕೃತವಾಗಿ ವಿಚ್ಛೇದನವನ್ನು ನೀಡಿತ್ತು.
ಶಿಖರ್ ಧವನ್ ಅವರು ಕಳೆದ ವರ್ಷ ಆಗಸ್ಟ್ನಲ್ಲಿ ಎಲ್ಲ ಮಾದರಿಯ ಅಂತಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿದ್ದರು. ಭಾರತ ಪರ ಧವನ್ ಒಟ್ಟು 167 ಏಕದಿನ ಪಂದ್ಯಗಳನ್ನು ಆಡಿದ್ದು, 6793 ರನ್ ಬಾರಿಸಿದ್ದಾರೆ. ಇದರಲ್ಲಿ 39 ಅಧರ್ಶತಕ ಮತ್ತು 17 ಶತಕ ಒಳಗೊಂಡಿದೆ. 143 ರನ್ ಅವರ ಗರಿಷ್ಠ ಮೊತ್ತವಾಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿ 34 ಪಂದ್ಯ ಆಡಿ 2315 ಗಳಿಸಿದ್ದಾರೆ. 7 ಶತಕ ಮತ್ತು 5 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ ಉತ್ತಮ ದಾಖಲೆ ಹೊಂದಿರುವ ಧವನ್ 68 ಪಂದ್ಯ ಆಡಿ 1759 ರನ್ ಕಲೆಹಾಕಿದ್ದಾರೆ. 11 ಅರ್ಧಶತಕ ಬಾರಿಸಿದ್ದಾರೆ.