ದುಬೈ: ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್ ಟ್ರೋಫಿ(Champions Trophy) ಆತಿಥ್ಯ ವಿಚಾರದಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಲು ಐಸಿಸಿ ನ.26ರಂದು ತುರ್ತು ಸಭೆ ಕರೆದಿದೆ. ವರ್ಚುವಲ್ ಸಭೆಯಲ್ಲಿ ಬಿಸಿಸಿಐ(BCCI) ಹಾಗೂ ಪಾಕಿಸ್ತಾನ ಕ್ರಿಕೆಟ್(PCB) ಮಂಡಳಿಗಳೂ ಪಾಲ್ಗೊಳ್ಳಲಿವೆ. ಈ ಸಭೆಯಲ್ಲಿ ಟೂರ್ನಿಯ ವಿಚಾರದಲ್ಲಿ ಅಂತಿಮ ಭವಿಷ್ಯ ನಿರ್ಧಾರವಾಗುವ ಸಾಧ್ಯತೆಯಿದೆ.
ಒಂದು ವೇಳೆ ಪಾಕಿಸ್ತಾನದಲ್ಲಿ ಆಯೋಜನೆ ನಡೆಯದಿದ್ದರೆ ಕೂಟದಲ್ಲಿ ಪಾಕಿಸ್ತಾನ ತಂಡವು ಆಡದೆ ಇರುವ ಸಾಧ್ಯೆತೆಯಿದೆ. ಪಿಸಿಬಿ ಗೆ ಪಾಕಿಸ್ತಾನ ಸರ್ಕಾರ ಈ ಬಗ್ಗೆ ಸೂಚನೆ ನೀಡಬಹುದು ಎಂದು ವರದಿ ಹೇಳಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಹೈಬ್ರಿಡ್ ಮಾದರಿಯನ್ನು ಒಪ್ಪಲು ನಿರಾಕರಿಸಿದ್ದಾರೆ. ಈ ಬಾರಿ ಏಕದಿನ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಚಾಂಪಿಯನ್ಸ್ ಟ್ರೋಪಿಯು ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ನಡೆಯಲಿದೆ.
ಒಂದೊಮ್ಮೆ ಭಾರತ ತಂಡ ಟೂರ್ನಿಯಿಂದ ಹಿಂದೆ ಸರಿದರೆ ಪಾಕ್ ಕ್ರಿಕೆಟ್ ಮಂಡಳಿಗೆ ಉಂಟಾಗುವ ನಷ್ಟದ ಬಗ್ಗೆಯೂ ಐಸಿಸಿ ಮನವರಿಕೆ ಮಾಡಿದೆ. ಆದರೆ ಪಿಸಿಬಿ ಮಾತ್ರ ಪಟ್ಟು ಬಿಡದೆ ಟೂರ್ನಿ ನಡೆಸುವುದಾದರೆ ಪಾಕ್‌ನಲ್ಲಿಯೇ ನಡೆಯಬೇಕು ಎಂದು ಹೇಳುತ್ತಿದೆ.
ಈಗಾಗಲೇ ಟ್ರೋಫಿ ಆಯೋಜಿಸುವ ಸಲುವಾಗಿ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳನ್ನು ನವೀಕರಿಸಲು ಪಾಕಿಸ್ತಾನವು 17 ಶತಕೋಟಿ ರೂ.ಗಳನ್ನ ವಿನಿಯೋಗಿಸಿದೆ. ಅಲ್ಲದೇ ಇದು ಪಾಕಿಸ್ತಾನದ ಪ್ರತಿಷ್ಠೆಯಾಗಿದ್ದು, ಭಾರತ ತಂಡಕ್ಕಾಗಿ ಎದುರು ನೋಡುತ್ತಿದ್ದೇವೆ. ಕ್ರೀಡೆ ಮತ್ತು ರಾಜಕೀಯ ಪ್ರತ್ಯೇಕ ವಿಷಯಗಳು, ನಾವು ಎರಡನ್ನು ಒಟ್ಟಿಗೆ ಸೇರಿಸುವುದಿಲ್ಲ. ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿರುವ ಎಲ್ಲಾ ತಂಡಗಳು ಬರಲು ಸಿದ್ಧವಾಗಿವೆ. ಭಾರತಕ್ಕೆ ಕಾಳಜಿ ಇದ್ದರೆ ಬರಲಿ. ನಾವು ಕಾಳಜಿಯಿಂದ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ Champions Trophy: ಪಿಒಕೆ ಚಾಂಪಿಯನ್ಸ್ ಟ್ರೋಫಿ ಪ್ರವಾಸ ಕೈ ಬಿಟ್ಟ ಪಾಕ್
ಚಾಂಪಿಯನ್ಸ್ ಟ್ರೋಫಿ ಕೂಟವು ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದ್ದು, ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿಯಲ್ಲಿ ಪಂದ್ಯಗಳನ್ನು ನಿಗದಿಪಡಿಸಲಾಗಿದೆ. ಭಾರತದ ಗಡಿಯ ಸಾಮೀಪ್ಯದ ಕಾರಣದಿಂದ ಲಾಹೋರ್ ನಲ್ಲಿ ಭಾರತದ ಪಂದ್ಯಗಳನ್ನು ಯೋಜಿಸಿದೆ. ಪಂದ್ಯಾವಳಿಯಲ್ಲಿ ಭಾರತದ ಮೂರು ಗುಂಪು-ಹಂತದ ಪಂದ್ಯಗಳನ್ನು ಫೆಬ್ರವರಿ 20 (ಬಾಂಗ್ಲಾದೇಶ ವಿರುದ್ಧ), ಫೆಬ್ರವರಿ 23 (ಪಾಕಿಸ್ತಾನ ವಿರುದ್ಧ), ಮತ್ತು ಮಾರ್ಚ್ 2 (ನ್ಯೂಜಿಲೆಂಡ್ ವಿರುದ್ಧ) ರಂದು ನಿಗದಿಪಡಿಸಲಾಗಿದೆ.
ಕಳೆದ ವರ್ಷ ಪಾಕ್ ಆತಿಥ್ಯದಲ್ಲಿಯೇ ನಡೆದಿದ್ದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಪಾಕ್ಗೆ ಪ್ರಯಾಣಿಸಲು ನಿರಾಕರಿಸಿದ ಕಾರಣ, ಟೂರ್ನಿಯನ್ನು ಹೈಬ್ರಿಡ್(champions trophy hybrid model) ಮಾದರಿಯಲ್ಲಿ ಆಯೋಜಿಸಲಾಯಿತ್ತು. ಕೇವಲ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು. ಭಾರತ ಎಲ್ಲ ಪಂದ್ಯಗಳನ್ನು ಲಂಕಾದಲ್ಲಿ ಆಡಿತ್ತು.