ಅಡಿಲೇಡ್: ಈಗಾಗಲೇ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್(Sachin Tendulkar) ಅವರ ಹಲವು ಟೆಸ್ಟ್ ದಾಖಲೆಯನ್ನು ಹಿಂದಿಕ್ಕಿರುವ ಟೀಮ್ ಇಂಡಿಯಾದ ಯುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್(Yashasvi Jaiswal) ಮತ್ತೊಂದು ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ಜೈಸ್ವಾಲ್ ಆಸೀಸ್(AUS vs IND) ವಿರುದ್ಧ ಮುಂದಿನ 6 ಇನಿಂಗ್ಸ್ನಲ್ಲಿ 263 ರನ್ ಕಲೆಹಾಕಿದರೆ, ಭಾರತದ ಪರ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ಸದ್ಯ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 2010ರಲ್ಲಿ 23 ಇನಿಂಗ್ಸ್ಗಳಲ್ಲಿ ಬ್ಯಾಟ್ ಮಾಡಿ 1,562 ರನ್ ಸಿಡಿಸಿದ್ದರು. ಜೈಸ್ವಾಲ್ 2024ರಲ್ಲಿ ಇದುವರೆಗೆ 23 ಟೆಸ್ಟ್ ಇನ್ನಿಂಗ್ಸ್ ಆಡಿ 1,280* ರನ್ ಗಳಿಸಿದ್ದಾರೆ. ಈ ವೇಳೆ 7 ಅರ್ಧ ಶತಕ ಮತ್ತು 3 ಶತಕ ಸೇರಿವೆ. ಈ ವರ್ಷ ಜೈಸ್ವಾಲ್ಗೆ ಇನ್ನೂ 3 ಟೆಸ್ಟ್ ಪಂದ್ಯ ಆಡಬಹುದು. ಹೀಗಾಗಿ ಸಚಿನ್ ದಾಖಲೆ ಮುರಿಯಲು ಅವರಿಗೆ ಅವಕಾಶವಿದೆ.
ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿರುವ ಜೈಸ್ವಾಲ್ ಪರ್ತ್ ಟೆಸ್ಟ್ನ ದ್ವಿತೀಯ ಇನಿಂಗ್ಸ್ನಲ್ಲಿ ಭರ್ಜರಿ ಶತಕ ಬಾರಿಸಿ ಮಿಂಚಿದ್ದರು. ಇದೀಗ ಡಿ.6 ರಿಂದ ಅಡಿಲೇಡ್ನಲ್ಲಿ ಆರಂಭವಾಗುವ ಅಹರ್ಶಿನಿ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಪಿಎಂ ಇಲೆವೆನ್ ವಿರುದ್ಧದ ಈ ಅಭ್ಯಾಸ ಪಂದ್ಯದಲ್ಲಿಯೂ ಜೈಸ್ವಾಲ್ 45 ರನ್ ಬಾರಿಸಿದ್ದರು.
ಇದನ್ನೂ ಓದಿ ಚಿನ್ನಸ್ವಾಮಿಯ ಸ್ಟಾಂಡ್ಗೆ ಇಡಲಾಗುವ 10 ದಿಗ್ಗಜ ಕ್ರಿಕೆಟಿಗರ ಪಟ್ಟಿ ಅಂತಿಮ!
ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 102 ರನ್ ಬಾರಿಸಿದರೆ, ಅಡಿಲೇಡ್ ಓವಲ್ ಮೈದಾನದಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿದೇಶಿ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಸದ್ಯ ಈ ದಾಖಲೆ ವೆಸ್ಟ್ ಇಂಡೀಸ್ನ ದಂತಕಥೆ ಬ್ರಿಯಾನ್ ಲಾರಾ ಹೆಸರಿನಲ್ಲಿದೆ. 1993-2005 ರ ನಡುವೆ ಅಡಿಲೇಡ್ನಲ್ಲಿ 8 ಟೆಸ್ಟ್ ಇನಿಂಗ್ಸ್ ಆಡಿರುವ ಲಾರಾ 610 ರನ್ ಕಲೆಹಾಕಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಅಡಿಲೇಡ್ ಮೈದಾನದಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿದೇಶಿ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಅಡಿಲೇಡ್ನಲ್ಲಿ ಈಗಾಗಲೇ 3 ಟೆಸ್ಟ್ ಸೆಂಚುರಿ ಸಿಡಿಸಿರುವ ವಿರಾಟ್ ಕೊಹ್ಲಿ, ಪಿಂಕ್ ಬಾಲ್ ಟೆಸ್ಟ್ನಲ್ಲಿ ಸೆಂಚುರಿ ಸಿಡಿಸಿದರೆ ಓವಲ್ ಮೈದಾನದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ವಿದೇಶಿ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ.
ಬುಮ್ರಾ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಒಂದು ವಿಕೆಟ್ ಕಿತ್ತರೆ ಈ ವರ್ಷ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ 50 ವಿಕೆಟ್ ಕಿತ್ತ ಮೊದಲ ಬೌಲರ್ ಎನಿಸಿಕೊಳ್ಳಲಿದ್ದಾರೆ. ಬುಮ್ರಾ 2024ರಲ್ಲಿ 10 ಪಂದ್ಯಗಳನ್ನು ಆಡಿ 49 ವಿಕೆಟ್ ಕಿತ್ತಿದ್ದಾರೆ.