ಸಿಡ್ನಿ: ಭಾರತ ತಂಡದ ವೇಗಿ ಜಸ್‌ಪ್ರೀತ್ ಬುಮ್ರಾ(Jasprit Bumrah) ಅವರು ಈ ಬಾರಿಯ ಆಸೀಸ್(AUS vs IND) ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಹಲವು ದಾಖಲೆಗಳನ್ನು ನಿರ್ಮಿಸಿ ಮಿಂಚಿದ್ದಾರೆ. ಇದೀಗ ಮತ್ತೊಂದು ದಾಖಲೆಯ ಗರಿ ಅವರ ಹೆಸರಿಗೆ ಸೇರ್ಪಡೆಯಾಗಿದೆ.
ಶನಿವಾರದ ದ್ವಿತೀಯ ದಿನದಾಟದಲ್ಲಿ ಬುಮ್ರಾ ಅವರು ದಿನದ ಎರಡನೇ ಓವರ್‌ನಲ್ಲಿ ಮಾರ್ನಸ್ ಲಬುಶೇನ್ ವಿಕೆಟ್ ಕೀಳುವ ಮೂಲಕ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಭಾರತದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವೇಳೆ ಅವರು ಭಾರತ ತಂಡದ ಮಾಜಿ ನಾಯಕ, ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಅವರ ದಾಖಲೆ ಹಿಂದಿಕ್ಕಿದರು. ಬಿಷನ್ ಸಿಂಗ್ ಬೇಡಿ ಅವರು 1977/78 ರ ಸರಣಿಯ ವೇಳೆ 31 ವಿಕೆಟ್ ಕಿತ್ತಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಇದೀಗ ಬುಮ್ರಾ 32 ವಿಕೆಟ್ ಕಿತ್ತು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಆಸೀಸ್ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಸಾಧನೆ(ಭಾರತೀಯ ದಾಖಲೆ)
ಜಸ್‌ಪ್ರೀತ್ ಬುಮ್ರಾ-32* ವಿಕೆಟ್
ಬಿಷನ್ ಸಿಂಗ್ ಬೇಡಿ-31 ವಿಕೆಟ್
ಬಿ ಎಸ್ ಚಂದ್ರಶೇಖರ್-28 ವಿಕೆಟ್
ಎರಪಳ್ಳಿ ಪ್ರಸನ್ನ-25 ವಿಕೆಟ್
ಕಪಿಲ್ ದೇವ್-25 ವಿಕೆಟ್
ಶುಕ್ರವಾರ ಮೊದಲ ಇನಿಂಗ್ಸ್‌ನಲ್ಲಿ 185 ರನ್‌ಗೆ ಆಲೌಟ್ ಆದ ಭಾರತ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಆಸೀಸ್‌ಗೆ ಆಘಾತವಿಕ್ಕಿದೆ. ಗುರಿ ಬೆನ್ನಟ್ಟುತ್ತಿರುವ ಆಸೀಸ್ 150 ರನ್ ದಾಟುವ ಮುನ್ನವೇ 6 ವಿಕೆಟ್ ಕಳೆದುಕೊಂಡಿದೆ. ಸದ್ಯ ಬುಮ್ರಾ, ಸಿರಾಜ್ ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ ತಲಾ 2 ವಿಕೆಟ್ ಕಿತ್ತಿದ್ದಾರೆ.