Sunday, 11th May 2025

ಏಕದಿನ ಕ್ರಿಕೆಟ್‌ಗೆ ಆಸೀಸ್‌ ನಾಯಕ ಆರನ್‌ ಫಿಂಚ್‌ ನಿವೃತ್ತಿ

ಮೆಲ್ಬರ್ನ್: ಆಸ್ಟ್ರೇಲಿಯಾಗೆ ಚೊಚ್ಚಲ ಟಿ20 ವಿಶ್ವಕಪ್‌(2021) ಗೆದ್ದುಕೊಟ್ಟ ನಾಯಕ ಆರನ್‌ ಫಿಂಚ್‌ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

ಮುಂದಿನ ವರ್ಷ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯು ಭಾರತದಲ್ಲಿ ಆಯೋಜನೆಗೊಳ್ಳಲಿದೆ.

ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಮ್ಮ ತಂಡವನ್ನು ಮುನ್ನಡೆಸಲಿದ್ದಾರೆ.

ಫಿಂಚ್‌ ನಾಯಕತ್ವದ ಆಸ್ಟ್ರೇಲಿಯಾ ತಂಡ ಸದ್ಯ ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟ ನಡೆಸುತ್ತಿದ್ದು, ಮೊದಲೆ ರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಅಂತಿಮ ಪಂದ್ಯವು ಕ್ಯಾನ್ಸ್‌ನಲ್ಲಿ ಭಾನುವಾರ ನಡೆಯಲಿದೆ.

35 ವರ್ಷದ ಫಿಂಚ್‌ ಆಸ್ಟ್ರೇಲಿಯಾ ಪರ 145 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 39.14ರ ಸರಾಸರಿಯಲ್ಲಿ 5,401ರನ್ ಕಲೆಹಾಕಿದ್ದಾರೆ. ಈ ಪೈಕಿ 54 ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದು 30 ಗೆಲುವು ತಂದುಕೊಟ್ಟಿದ್ದಾರೆ.

ಅತ್ಯುತ್ತಮ ಏಕದಿನ ತಂಡದ ಭಾಗವಾಗಿದ್ದ ನಾನು ಅದೃಷ್ಠಶಾಲಿ. ನನ್ನೊಂದಿಗೆ ಆಡಿದ ಎಲ್ಲರೂ ಹಾಗೂ ತೆರೆಮರೆಯಲ್ಲಿ ಸಾಕಷ್ಟು ಮಂದಿ ನನಗೆ ಶುಭ ಹಾರೈಸಿದ್ದಾರೆ. ನನ್ನ ಈವರೆಗಿನ ಪ್ರಯಾಣವನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.