Sunday, 18th May 2025

Prithvi Shaw: ʻಅದ್ಭುತ ಪ್ರತಿಭಾವಂತʼ-ಪೃಥ್ವಿ ಶಾ ಕಮ್‌ಬ್ಯಾಕ್‌ ಮಾಡಬೇಕೆಂದ ಶೇನ್‌ ವಾಟ್ಸನ್‌!

'A precocious talent': Ex Australia All-Rounder Shane Watson wants Prithvi Shaw to make a comeback

ನವದೆಹಲಿ: ಭಾರತದ ಯುವ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ (Prithvi Shaw) ಅವರು ಅಪರೂಪದ ಪ್ರತಿಭೆಯಾಗಿದ್ದು, ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶಕ್ತಿಯುತವಾಗಿ ಕಮ್‌ಬ್ಯಾಕ್‌ ಮಾಡಬೇಕೆಂದು ಆಸ್ಟ್ರೇಲಿಯಾ ಮಾಜಿ ಆಲ್‌ರೌಂಡರ್‌ ಶೇನ್‌ ವಾಟ್ಸನ್‌ ಹಾಗೂ ಇಂಗ್ಲೆಂಡ್‌ ಮಾಜಿ ನಾಯಕ ಕೆವಿನ್‌ ಪೀಟರ್ಸನ್‌ ಆಗ್ರಹಿಸಿದ್ದಾರೆ.

ಪೃಥ್ವಿ ಶಾ ಅವರು ಸ್ವಾಭಾವಿಕ ಸಾಮರ್ಥ್ಯವನ್ನು ಹೊಂದಿದ್ದು, ಅವರು ತಮ್ಮ ಫಾರ್ಮ್‌ ಮರಳಲು ಕಠಿಣ ಪರಿಶ್ರಮವನ್ನು ಪಡಬೇಕಾಗಿದೆ ಎಂದು ಕೆವಿನ್‌ ಪೀಟರ್ಸನ್‌ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಸಲಹೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶೇನ್‌ ವಾಟ್ಸನ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡುವ ಅದ್ಭುತ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಪೃಥ್ವಿ ಶಾ ಹೊಂದಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ಹಲವು ವಾರಗಳಿಂದ ಪೃಥ್ವಿ ಶಾ ತಮ್ಮ ವೃತ್ತಿ ಜೀವನದಲ್ಲಿ ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ. ಅವರು ಫಿಟ್‌ನೆಸ್‌ ಹಾಗೂ ಸ್ಥಿರ ಪ್ರದರ್ಶನದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಅವರು 2025ರ ಐಪಿಎಲ್‌ ಟೂರ್ನಿಯ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್‌ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಮಾಜಿ ಕ್ರಿಕೆಟಿಗರು, ಪೃಥ್ವಿ ಶಾ ಅವರ ಬಗ್ಗೆ ಸಾಕಷ್ಟು ಚರ್ಚೆಗಳನ್ನು ನಡೆಸುತ್ತಿದ್ದಾರೆ.

ಪೃಥ್ವಿ ಶಾ ಬಗ್ಗೆ ಕೆವಿನ್‌ ಪೀಟರ್ಸನ್‌ ಹೇಳಿದ್ದೇನು?

“ಕೆಲ ಶ್ರೇಷ್ಠ ಕ್ರೀಡಾ ಕಥೆಗಳು ಕಮ್‌ಬ್ಯಾಕ್‌ ಸ್ಟೋರಿಗಳೇ ಆಗಿವೆ. ಪೃಥ್ವಿ ಶಾ ಅವರ ದೀರ್ಘಾವಧಿ ವೃತ್ತಿ ಜೀವನವನ್ನು ಬಯಸುವ ಒಳ್ಳೆಯ ವ್ಯಕ್ತಿಗಳು, ಬಲಗೈ ಬ್ಯಾಟ್ಸ್‌ಮನ್‌ ಜೊತೆ ಇರಬೇಕು ಹಾಗೂ ಸೋಶಿಯಲ್‌ ಮೀಡಿಯಾವನ್ನು ಆಫ್‌ ಮಾಡಿ ಸಂಪೂರ್ಣ ಫಿಟ್‌ನೆಸ್‌ಗೆ ಕಮ್‌ಬ್ಯಾಕ್‌ ಮಾಡುವ ಕಡೆಗೆ ಗಮನ ಕೊಡಬೇಕು. ಇದನ್ನು ಅವರು ಫಾಲೋ ಮಾಡಿದರೆ, ಈ ಹಿಂದೆ ಹೇಗೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದರೋ ಆ ಜಾಗಕ್ಕೆ ಅವರು ಮರಳಲಿದ್ದಾರೆ. ಈ ಎಲ್ಲಾ ಕಠಿಣ ಸನ್ನಿವೇಶಗಳಿಂದ ಬರುವಷ್ಟು ಪ್ರತಿಭೆ ಪೃಥ್ವಿ ಶಾಗೆ ಇದೆ,” ಎಂದು ಕೆವಿನ್‌ ಪೀಟರ್ಸನ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದಿದ್ದಾರೆ.

ಕೆವಿನ್‌ ಪೀಡರ್ಸನ್‌ ಪರ ಬ್ಯಾಟ್‌ ಬೀಸಿದ ಪೃಥ್ವಿ ಶಾ

ಕೆವಿನ್‌ ಪೀಟರ್ಸನ್‌ ಟ್ವೀಟ್‌ಗೆ ಆಸ್ಟ್ರೇಲಿಯಾ ಮಾಜಿ ಆಲ್‌ರೌಂಡರ್‌ ಶೇನ್‌ ವಾಟ್ಸನ್‌ ಪ್ರತಿಕ್ರಿಯೆ ನೀಡಿದ್ದಾರೆ ಹಾಗೂ ಅವರ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ. “ಕೆವಿನ್‌ ಪೀಟರ್ಸನ್‌ ಅವರ ಹೇಳಿಕೆಯನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಪೃಥ್ವಿ ಶಾ ಅವರು ಅಸಾಧಾರಣ ಪ್ರತಿಭೆ ಹಾಗೂ ಅವರು ಕಮ್‌ಬ್ಯಾಕ್‌ ಮಾಡಲು ನೀವು ಹೇಳಿದ ಸಂಗತಿಗಳು ಅಗತ್ಯವಿದೆ. ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ಹೀರೋಗಳಲ್ಲಿ ಒಬ್ಬರಾಗಲು ಅವರಿಗೆ ಈ ಅಂಶಗಳನ್ನು ಪಾಲಿಸಬೇಕು,” ಎಂದು ಶೇನ್‌ ವಾಟ್ಸನ್‌ ಎಕ್ಸ್‌ ಖಾತೆಯಲ್ಲಿ ಬರೆದಿದ್ದಾರೆ.

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ವೈಫಲ್ಯ

ಪ್ರಸ್ತುತ ನಡೆಯುತ್ತಿರುವ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಪೃಥ್ವಿ ಶಾ ಅವರು ಮುಂಬೈ ತಂಡದ ಪರ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿದ್ದಾರೆ. ಸರ್ವೀಸಸ್‌ ವಿರುದ್ಧದ ಗ್ರೂಪ್‌ ಇ ಪಂದ್ಯದಲ್ಲಿ ಪೃಥ್ವಿ ಶಾ ಮೂರು ಎಸೆತಗಳಲ್ಲಿ ಡಕ್‌ಔಟ್‌ ಆಗಿದ್ದರು. ಈ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ಪೃಥ್ವಿ ಶಾ ಅವರು ಕೇವಲ 96 ರನ್‌ಗಳನ್ನು ಕಲೆ ಹಾಕಿದ್ದಾರೆ. ನಾಗ್‌ಲ್ಯಾಂಡ್‌ ವಿರುದ್ದ ಗಳಿಸಿದ 40 ರನ್‌ ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ಈ ಸುದ್ದಿಯನ್ನು ಓದಿ: Prithvi Shaw: ‘ನಾನೇನು ತಪ್ಪು ಮಾಡಿದೆ?’; ಟ್ರೋಲ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ ಪೃಥ್ವಿ ಶಾ