Saturday, 17th May 2025

ಗಣೇಶ ಚತುರ್ಥಿಗೆ ಲಂಕೆ ಮಾಸ್ ಲುಕ್‌ನಲ್ಲಿ ಯೋಗಿ

ಲೂಸ್ ಮಾದ ಯೋಗಿ ಅಭಿನಯದ ಲಂಕೆ ಬಿಡುಗಡೆಗೆ ಸಿದ್ಧವಾಗಿದ್ದು, ಗಣೇಶ ಚತುರ್ಥಿಗೆ ಅದ್ಧೂರಿಯಾಗಿ ತೆರೆಗೆ ಬರಲಿದೆ. ಲಂಕೆ, ಟೈಟಲ್‌ನಲ್ಲೇ ಪಂಚಿಂಗ್ ಇದೆ.

ಚಿತ್ರದ ಶೀರ್ಷಿಕೆ ಕೇಳಿದರೆ ಇದು ಪೌರಾಣಿಕ ಕಥೆಯ ಚಿತ್ರವೇ ಇರಬಹುದು ಎಂದು ಅನ್ನಿಸುತ್ತದೆ. ಅದೇ, ಲಂಕೆಯ ಟ್ರೇಲರ್ ನೋಡಿದ ಮೇಲೆ ಇಲ್ಲ… ಇದು ಇಂದಿನ ಕಾಲಘಟ್ಟದ ಕಥೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಂತ ಲಂಕೆ ಯಲ್ಲಿ ರಾಮ-ರಾವಣರ ಕಥೆಯಿಲ್ಲ. ಬದಲಾಗಿ ಪ್ರಸ್ತುತತೆಯ ಕಥೆ ಸಿನಿಮಾದಲ್ಲಿದೆ. ಇಂದಿನ ಶಿಕ್ಷಣ ವ್ಯವಸ್ಥೆ, ಮಹಿಳೆಯರ ವ್ಯಥೆ ಇವೆಲ್ಲವೂ ಚಿತ್ರದಲ್ಲಿ ಹಾಸುಹೊಕ್ಕಾಗಿದೆ.

ಮಹಾಕಾವ್ಯಗಳಾದ ಮಹಾಭಾರತ ಹಾಗೂ ರಾಮಾಯಣ ಇಂದಿಗು, ಎಂದೆಂದಿಗೂ ಪ್ರಸ್ತುತ. ಅಲ್ಲಿ ಬರುವ ಪಾತ್ರ ಗಳು ಇಂದಿನ ದಿನಗಳಿಗೂ ಅನ್ವಯಿಸುತ್ತವೆ. ವು ರಾಮ-ರಾವಣನ ಕಥೆ ಹೇಳುತ್ತವೆ. ಅದಕ್ಕಾಗಿಯೇ ಚಿತ್ರದಲ್ಲಿ ರಾಮನ ತೇಜಸ್ಸು, ರಾವಣನ ವರ್ಚಸ್ಸು ಎಂಬ ಅಡಿಬರಹವಿದೆ. ಟೈಟಲ್‌ನಲ್ಲಿ ಪಂಚಿಂಗ್ ಇರಲಿ ಎಂದು ಈ ಶೀರ್ಷಿಕೆ ಇಟ್ಟಿದ್ದೇವೆ ಎನ್ನುತ್ತಾರೆ ನಿರ್ದೇಶಕ ರಾಮ್ ಪ್ರಸಾದ್.

ರಾಮ-ರಾವಣರ ಯುದ್ಧ

ಇಂದಿನ ಆಧುನಿಕ ಯುಗದಲ್ಲೂ ಅದೆಷ್ಟೋ ಮಂದಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅದು ಯಾಕೆ, ಅವರ ಬದುಕೇನು, ಮುಂದೆ ಅವರ ಪಾಡೇನು. ಇದರ ಜತೆಗೆ ಶಿಕ್ಷಣದಿಂದ ವಂಚಿತರಾದ ಮಹಿಳೆಯರ ಸ್ಥಿತಿ-ಗತಿ ಏನು, ಹೀಗೆ ಎಲ್ಲಾ ವಿಚಾರವನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಈ ವಿಚಾರವನ್ನು ನೇರವಾಗಿ ಹೇಳಿದರೆ ಯಾರಿಗೂ ರುಚಿಸುವುದಿಲ್ಲ. ಅದೇ ಸಮಾಜದಲ್ಲಿ ಕಂಡ ಸತ್ಯವನ್ನು ಮನರಂಜನೆಯ ಮೂಲಕ ಹೇಳಿದರೆ, ನೋಡುಗರಿಗೆ ಮನದಟ್ಟಾಗುತ್ತದೆ. ಚಿತ್ರ ದಲ್ಲಿ ಮಾಸ್ ಎಲಿಮೆಂಟ್ಸ್ ಕೂಡ ಇದ್ದು, ಪ್ರೇಕ್ಷಕರನ್ನು ಸೆಳೆಯುತ್ತದೆ. ಲಂಕೆ ನೈಜ ಘಟನೆಯಾಧಾರಿತ ಸಿನಿಮಾವಾಗಿದೆ. ಆ ಘಟನೆ ಯಾವುದು ಎಂದು ಸಿನಿಮಾ ನೋಡಿದ ಮೇಲೆ ತಿಳಿಯುತ್ತದೆ.

ಆಕ್ಷನ್‌ನಲ್ಲಿ ಲೂಸ್ ಮಾದ
ನಮ್ಮಲ್ಲಿಯೇ ರಾಮ-ರಾಣವನ ಗುಣಗಳು ಅಡಕವಾಗಿರುತ್ತವೆ. ಸಂದರ್ಭ ಬಂದಾಗ ಆ ಗುಣಗಳು ವ್ಯಕ್ತವಾ ಗುತ್ತವೆ. ಇದನ್ನು ಚಿತ್ರದಲ್ಲಿ ಸೂಚ್ಯವಾಗಿ ಹೇಳಲಾಗಿದೆ. ಲಂಕೆಯಲ್ಲಿ ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿದ್ದಾರೆ. ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕಥೆಗೆ ಯೋಗಿ ಜೀವ ವಾದರೆ, ಸಂಚಾರಿ ವಿಜಯ್ ಜೀವಾಳವಾಗಿದ್ದಾರೆ. ಯೋಗಿ ಮಾಸ್ ಲುಕ್‌ನಲ್ಲಿ ಮಿಂಚಿದರೆ, ವಿಜಯ್ ಸಿಂಪಲ್ ಆಗಿ ಕಂಗೊಳಿಸುತ್ತಾರೆ. ನಾಯಕಿ ಯಾಗಿ ಕೃಷಿ ತಾಪಂಡ ಬಣ್ಣಹಚ್ಚಿದ್ದಾರೆ. ಸಂಗಮ ಅರಣ್ಯ ಪ್ರದೇಶ, ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆದಿದೆ.

***

ವೇಶ್ಯಾವಾಟಿಕೆ ದೊಡ್ಡ ದಂಧೆಯಾಗಿದೆ. ಅದು ಯಾಕೆ ಅದರ ಹಿಂದಿನ ಮರ್ಮವೇನು ಎಂಬುದನ್ನು ಅರಿಯಲು ತಡಕಾಡಿದೆ. ಅದಕ್ಕೆ ಪೂರಕವಾದ ಕೆಲವು
ಸಿನಿಮಾಗಳನ್ನು ನೋಡಿದೆ. ಅದೇ ರೀತಿಯ ಕಥೆಯನ್ನು ಹೆಣೆದು ತೆರೆಗೆ ತರಬೇಕು ಎಂದುಕೊಂಡೆ. ಕಥೆ ಬರೆಯುತ್ತಾ ಈ ಎಲ್ಲಾ ಸಮಸ್ಯೆಗಳಿಗೂ ಶಿಕ್ಷಣದ ಕೊರತೆಯೇ ಕಾರಣ ಎಂದು ತಿಳಿಯಿತು. ಶಿಕ್ಷಣದ ಮಹತ್ವ ಸಾರುವ ನಿಟ್ಟಿನಲ್ಲಿ ಲಂಕೆಯ ಕಥೆ ಸಿದ್ಧವಾಯಿತು. ಲಂಕೆ ಬಗ್ಗೆ ಚಿತ್ರತಂಡಕ್ಕೆ ಅಪಾರ ನಿರೀಕ್ಷೆಯಿದೆ. ಚಿತ್ರದ ಮೂಲಕ ಬದಲಾವಣೆ ತರಬೇಕು ಎಂಬ ಉದ್ದೇಶ ನಮ್ಮದು. ಅದೇ ದಾಟಿಯಲ್ಲಿ ಚಿತ್ರ ಮೂಡಿಬಂದಿದೆ.
– ರಾಮ್ ಪ್ರಸಾದ್ ನಿರ್ದೇಶಕ

Leave a Reply

Your email address will not be published. Required fields are marked *