Tuesday, 13th May 2025

ಹಾವುಗಳಿಗೂ ಸ್ನೇಹಿತರೆ !

ತಮ್ಮ ನೋಟದಿಂದಲೇ ನಮ್ಮಲ್ಲಿ ಸಣ್ಣಗೆ ನಡುಕ ಹುಟ್ಟಿಸುವ ಹಾವುಗಳ ಪ್ರಪಂಚದಲ್ಲಿ ಸ್ನೇಹಕ್ಕೆ ಜಾಗವಿದೆಯೆ? ಸಾಮಾನ್ಯ ವಾಗಿ ಏಕಾಂಗಿಯಾಗಿ ಸಂಚರಿಸುತ್ತವೆ ಎಂದು ನಾವು ತಿಳಿದಿರುವ ಹಾವುಗಳು, ತಮ್ಮಲ್ಲೇ ಪರಸ್ಪರ ಸ್ನೇಹಿತರನ್ನು ಹುಡುಕಿ ಕೊಳ್ಳುತ್ತವೆಯೆ? ಇಂತಹದೊಂದು ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಕೆನಡಾದ ವಿಲ್ಫ್ರೆಡ್ ಲೂರಿಯರ್ ವಿಶ್ವವಿದ್ಯಾಲಯದ ಮಾರ್ಗನ್ ಸ್ಕಿನ್ನರ್ ಎಂಬಾತ ಒಂದು ಅಧ್ಯಯನ ಕೈಗೊಂಡರು.

ನಮ್ಮ ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಮಾನ್ಯವಾಗಿ ಕಾಣಸಿಗುವ ‘ಒಳ್ಳೆ’ ಹಾವನ್ನು ಹೋಲುವ, ಅಮೆರಿಕದ ಗ್ರೇಟರ್ ಸ್ನೇಕ್ ಪ್ರಭೇದದ ಹಾವುಗಳ ಮೇಲೆ ಆತ ಕೈಗೊಂಡ ಅಧ್ಯಯನ ಬಹಳ ಕುತೂಹಲಕಾರಿ. ನಲವತ್ತು ಹಾವುಗಳ ತಲೆಯ ಮೇಲೆ ಬಣ್ಣದ ಗುರುತುಗಳನ್ನು ಮಾಡಿ ಅವುಗಳ ಓಡಾಟವನ್ನು ನಿರಂತರವಾಗಿ ಕ್ಯಾಮೆರಾದ ಮೂಲಕ ಗಮನಿಸಲಾಯಿತು. ಈ ನಲವತ್ತು ಹಾವುಗಳನ್ನು ಅವುಗಳ ವಾಸಸ್ಥಳದಲ್ಲಿ ಹಿಡಿದು, ಪ್ಲಾಸ್ಟಿಕ್‌ನ ನಾಲ್ಕು ಆವರಣಗಳಲ್ಲಿ ಬಿಡಲಾಯಿತು.

ಒಂದು ಆವರಣದಿಂದ ಇನ್ನೊಂದು ಆವರಣಕ್ಕೆ ಸಂಚರಿಸುವ ಅವಕಾಶ ಆ ಹಾವುಗಳಿಗಿತ್ತು. ಆ ಜಾಗವನ್ನು ಆಗಾಗ ಚೊಕ್ಕಟ ಗೊಳಿಸಿ, ಹಾವುಗಳನ್ನು ಉದ್ದೇಶಪೂರ್ವಕವಾಗಿ ಬೇರೆ ಬೇರೆ ಆವರಣದಲ್ಲಿ ಬಿಡಲಾಗುತ್ತಿತ್ತು. ಆದರೆ, ಆ ಹಾವುಗಳು ನಿಧಾನವಾಗಿ
ತಮ್ಮಲ್ಲೇ ಗೆಳೆಯರ ಗುಂಪುಗಳನ್ನು ಮಾಡಿಕೊಂಡಿದ್ದವು. ಬೇರೆ ಬೇರೆ ಆವರಣದಲ್ಲಿ ಬಿಟ್ಟರೂ, ಪುನಃ ತಮ್ಮ ಗೆಳೆಯರನ್ನು ಹುಡುಕಿಕೊಂಡು, ಏಳರಿಂದ ಹತ್ತು ಹಾವುಗಳ ಗುಂಪು ಮಾಡಿಕೊಂಡು ಅತ್ತಿತ್ತ ಓಡಾಡುತ್ತಿದ್ದವು!

ಹಾಗೆಂದು ಅವು ಸಂತಾನೋತ್ಪತ್ತಿಗಾಗಿ ಇಂತಹ ಗೆಳೆಯರನ್ನು ಅರಸುತ್ತಿದ್ದವು ಎನ್ನುವಂತಿಲ್ಲ. ಈ ಗೆಳೆಯರ ಗುಂಪು ಗಂಡು ಮತ್ತು ಹೆಣ್ಣುಗಳ ಮಿಶ್ರ ಗುಂಪಾಗಿದ್ದು, ಪರಸ್ಪರ ಸ್ನೇಹಿತರಂತೆ ವರ್ತಿಸುತ್ತಿದ್ದವು. ಹಾವುಗಳಲ್ಲಿ ಕಂಡುಬಂದ ಇಂತಹ ಸ್ನೇಹಿತರ ಗುಂಪನ್ನು ಮನುಷ್ಯರ ಗೆಳೆಯರ ಗುಂಪಿಗೆ ಹೋಲಿಸಲಾಗದು, ಆದರೂ, ಅವುಗಳ ಈ ವರ್ತನೆಯು ಸಾಕಷ್ಟು ಕುತೂಹಲಕಾರಿ ಎನಿಸಿದ್ದು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ಕೆನಡಾ ಜೀವ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *