Tuesday, 13th May 2025

ನಮ್ಮ ನಮ್ಮ ಕ್ಲಾಸ್‌ನಲ್ಲಿ ಬಿಸಿ ಬಿಸಿ ಚರ್ಚೆ

ರಾಮ ಕಿಶನ್ ಕೆ.ವಿ. ಉಜಿರೆ

ತರಗತಿಯೊಂದರಲ್ಲಿ ನಡೆದ ಪ್ರಾಯೋಗಿಕ ಚರ್ಚೆಯು ಹೇಗೆ ವೃತ್ತಿ ಜೀವನಕ್ಕೆ ಬುನಾದಿ ಹಾಡಬಲ್ಲದು ಎಂಬುದಕ್ಕೆ ಇಲ್ಲೊಂದು ಪ್ರಖರ ಉದಾಹರಣೆಯಿದೆ, ಓದಿ ನೋಡಿ.

ನಾಳಿನ ಪ್ರಾಯೋಗಿಕ ಕ್ಲಾಸಲ್ಲಿ ಪ್ರಚಲಿತ ವಿಷಯದ ಕುರಿತು ಚರ್ಚೆ ಮಾಡ್ಬೇಕು’ ಅಂತ ಶೃತಿ ಮೇಡಂ ಖಡಕ್ ಆಗಿ ಹೇಳಿದ್ರು. ‘ಟಿವಿ ಪ್ಯಾನಲ್ ನಲ್ಲಿ ಹೇಗೆ ಚರ್ಚೆಗಳು ಆಗುತ್ತವೋ ಆದೇ ಚೌಕಟ್ಟಿನಲ್ಲಿರಬೇಕು. ಎಂಟು ಜನ ಸೇರಿಕೊಂಡು ಪರ ವಿರೋಧ ಮಾತಾಡಬೇಕು. ನಿಮ್ಮನ್ನ ನಿಯಂತ್ರಣ ಮಾಡೋದಕ್ಕೆ ಒಬ್ರು ಆಂಕರ್ ಇರ್ತಾರೆ’ ಅಂದ್ರು.

ಪ್ಯಾನಲ್ ಡಿಸ್ಕಶನ್‌ನಲ್ಲಿ ಯಾವೆಲ್ಲಾ ತಂತ್ರ ಪ್ರತಿತಂತ್ರಗಳನ್ನು ಉಪಯೋಗಿಸ್ತಾರೋ, ಅದನ್ನೂ ಇಲ್ಲೇ ಉಪಯೋಗಿಸಬಹುದು, ನಿಮ್ಮ ವಾದ ಸರಣಿಯ ಚಾಕಚಕ್ಯತೆಯನ್ನು ತೋರಿಸ್ಬೋದು ಎಂದು ಅವರು ಹೇಳಿದಾಗ ನಮಗೆಲ್ಲಾ ಹುರುಪು. ಮೇಡಂ ಹೇಳಿದ್ದೇ ತಡ. ಖುಷಿಯಿಂದ ಚರ್ಚೆಯಲ್ಲಿ ಪಾಲ್ಗೊಳ್ಳಲು ಮುಂದೆ ಬಂದೆವು. ಆಂಕರ್ ರೆಡಿಯಾದ್ರು. ಈ ವಾರ ಸದಾ ಸುದ್ದಿ ಯಲ್ಲಿದ್ದ ಸ್ಟಾರ್ ವಾರ್ ಬಗ್ಗೆ ಚರ್ಚೆ ಮಾಡೋದಕ್ಕೆ ಸಮ್ಮತಿಯೂ ಸಿಕ್ಕಿತು.

ಚರ್ಚೆ ಮಾಡೋದಕ್ಕೆ ಆ ದಿನ ತಯಾರಾಗಿಯೇ ಬಂದಿದ್ದವು. ತರಗತಿಯಲ್ಲಿ ವೇದಿಕೆಯೂ ಸಿದ್ಧವಾಗಿತ್ತು. ಮೊದಲ ಬಾರಿ ತರಗತಿಯೊಳಗಿನ ಚರ್ಚೆಯಲ್ಲಿ ಪಾಲ್ಗೊಳ್ಳುವ ಖುಷಿ. ಎದುರಿನ ತಂಡದ ಪ್ರತಿವಾದ ಹೇಗಿರಬಹುದು ಎಂಬ ಕುತೂಹಲ.

ಆಂಕರ್ ಮತ್ತು ಸದಸ್ಯರು
ಪೀಠಿಕೆ ಮಾತು ಮುಗಿಸಿ ಆಂಕರ್ ಚರ್ಚೆ ಆರಂಭಿಸಿದರು. ಎರಡೂ ತಂಡಗಳಿಂದ ವಾದ ಮಂಡನೆಯೂ ನಡೆಯಿತು. ನಿಧಾನ ವಾಗಿ ಚರ್ಚೆಯ ಕಾವು ಹೆಚ್ಚಾಗುತ್ತಾ ಹೋಯಿತು. ಪರವಿರೋಧಗಳು ಬಿಸಿಬಿಸಿಯಾಗಿ ಚರ್ಚೆಯಾದವು. ನಾವೇನೂ ಕಮ್ಮಿಯಿಲ್ಲ ಎಂದು ಹೇಳುವ ರೀತಿಯಲ್ಲಿ ವಾದಿಸುತ್ತಾ ಹೋದೆವು. ನಾವೆ ಮೊದಲ ಬಾರಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರಿಂದ ಅನುಭವದ ಕೊರತೆಯೂ ಕಾಡಿತು. ಮಾತಿನ ಮಧ್ಯೆ ವಿಷಯಾಂತರವೂ ಆದವು.

ವಿಷಯಾಂತರಗೊಂಡಾಗ, ಆಂಕರ್ ಸಣ್ಣಗೆ ಎಚ್ಚರಿಸಿ, ಮಾತಿನ ಸರಣಿಯನ್ನು ಮತ್ತೆ ಸರಿದಾರಿಗೆ ತರುವ ಪ್ರಯತ್ನ ಮಾಡು ತ್ತಿದ್ದರು. ಆಂಕರ್ ನಿರ್ದೇಶನದಲ್ಲಿ ನಾವೆಲ್ಲಾ ಸದಸ್ಯರು ಎಂಬ ಆವಾಹಿಸಿಕೊಂಡು, ನಮ್ಮ ಚರ್ಚೆಯನ್ನು ಮುಂದು ವರಿಸಿದೆವು. ನಾವಂತೂ ರಾಷ್ಟ್ರೀಯ ಮಟ್ಟದ ಪ್ಯಾನೆಲ್‌ಗಳ ಚರ್ಚೆಯನ್ನು ನೆನಪಿಸಿಕೊಂಡು, ಅದೇ ರೀತಿಯ ಮಾತನಾಡಲು ಯತ್ನಿಸಿದೆವು! ಅದರಲ್ಲಿ ಸಣ್ಣ ಮಟ್ಟದ ಯಶಸ್ಸನ್ನೂ ಪಡೆದೆವು.

ಚರ್ಚೆಯು ಕಾವೇರುತ್ತಾ ಹೋದಂತೆ ಹಲವು ವಿಚಾರಗಳು ವಿನಿಮಯ ಆದವು. ಸಿಕ್ಕಿದ ಅವಕಾಶವನ್ನು ಕಡಿಮೆ ಸಮಯ ದಲ್ಲಿ ಧ್ವನಿಗೂಡಿಸುವುದರ ಮೂಲಕ ಸದುಪಯೋಗ ಪಡಿಸಿಕೊಂಡೆವು. ಈ ರೀತಿ ಬಿಸಿಬಿಸಿ ಚರ್ಚೆಯಾದ್ದು ಉಜಿರೆಯ ಎಸ್ ಡಿ ಎಂ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ತರಗತಿಯಲ್ಲಿ. ಅಂದು ತರಗತಿ ಚರ್ಚಾ ವೇದಿಕೆಯಾಗಿ ಬದಲಾಗಿದ್ದವು. ಟಿವಿಯಲ್ಲಿ ಪ್ಯಾನಲ್ ಡಿಸ್ಕಶನ್ ಹೇಗೆ ನಡೆಯುತ್ತದೆ, ಅದು ರೂಪುಗೊಳ್ಳುವ ಮುಂಚೆ ಏನೆಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತದೆ,
ಚರ್ಚೆ ಬೆಳೆಯುವ ಪ್ರಕ್ರಿಯೆಯ ಸ್ವರೂಪ ಇವೆಲ್ಲವನ್ನೂ ಆ ದಿನ ನಮ್ಮ ಕ್ಲಾಸ್ ರೂಮ್‌ನಲ್ಲೇ ಪ್ರಾಯೋಗಿಕವಾಗಿ ನೋಡುವ, ಅನುಭವಿಸುವ ಅವಕಾಶ ನಮಗೆಲ್ಲಾ.

ನೋಡುಗರಿಗೂ ಪಾಠ
ಇತ್ತ ನಾವೆಲ್ಲಾ ಚರ್ಚೆ ನಡೆಸುತ್ತಿರಬೇಕಾದರೆ, ಇದನ್ನು ನೋಡಲು ಸೇರಿದ್ದವರದ್ದು ಇನ್ನೊಂದೇ ಅನುಭವ. ನಮ್ಮ ಬಿರುಸಿನ ಚರ್ಚೆಯನ್ನು ಆಲಿಸುತ್ತಿದ್ದ ಮಂದಿ ಭರಪೂರ ಮನರಂಜನೆಯನ್ನೇ ಪಡೆದರು. ಜತೆಗೆ, ಪ್ಯಾನಲ್ ಡಿಸ್ಕಶನ್ ನಡೆಯುವಾಗ ಸಂಭವಿಸುವ ಏರುಪೇರುಗಳನ್ನು ಅವರೆಲ್ಲಾ ಗುರುತಿಸಲು ತೊಡಗಿದರು.

ಚರ್ಚೆಯೊಂದರ ಯಶಸ್ಸು ಯಾವುದರ ಮೇಲೆ ಅವಲಂಬಿಸಿದೆ ಎಂಬುದನ್ನು ಪ್ರೇಕ್ಷಕರು ಗಮನಿಸಿದರು. ನಮ್ಮ ಸಹಪಾಠಿಗಳಾಗಿ ಪ್ರೇಕ್ಷಕರ ಸ್ಥಾನದಲ್ಲಿದ್ದ ಅವರಿಗೂ ಇದೊಂದು ಕಲಿಯುವ ಅವಕಾಶ. ಪ್ಯಾನಲ್ ಡಿಸ್ಕಷನ್ ಯಶಸ್ಸು ಪಡೆಯಿತು ಎನಿಸ ಬೇಕಾದರೆ, ವಿಷಯ ಮುಖ್ಯವೆ, ವಿಷಯ ಮಂಡನೆ ಮುಖ್ಯವೆ, ಬಿರುಸಿನ ವಾದ ಮುಖ್ಯವೆ, ಧ್ವನಿ ಮತ್ತು ಹಾವ ಭಾವ ಮುಖ್ಯವೆ ಅಥವಾ ಎಲ್ಲವನ್ನೂ ನಿಯಂತ್ರಿಸುವ ಆಂಕರ್ ಮುಖ್ಯವೆ ಎಂದೆಲ್ಲಾ ಪ್ರೇಕ್ಷಕರು ಮನದಲ್ಲೇ ನೋಟ್ ಮಾಡಿಕೊಂಡರು. ತಮ್ಮತಮ್ಮಲ್ಲೇ ಆ ಕುರಿತು ಸಣ್ಣದಾಗಿ ಚರ್ಚಿಸಿದ್ದೂ ಉಂಟು. ಅಷ್ಟರಗಲೇ ಚರ್ಚೆ ಮುಕ್ತಾಯದ ಹಂತಕ್ಕೆ ತಲುಪಿತ್ತು. ಚರ್ಚೆ ಮಾಡಿ ಸುಸ್ತಾಗಿದ್ದ ನಮಗೆ ಹಸಿವೆಯೂ ಆರಂಭವಾಗಿತ್ತು.

ಈ ವೇಳೆಗೆ ಆಂಕರ್ ಚರ್ಚೆಯನ್ನು ಕೊನೆಗೊಳಿಸಲು ಮುಂದಾದರು. ಚರ್ಚೆ ಯಾವ ರೀತಿ ನಡೆಯಬೇಕಿತ್ತು, ಇನ್ನಷ್ಟು ಅರ್ಥ ಪೂರ್ಣ ಎನಿಸಲು ಯಾರು ಯಾವ ಪ್ರಯತ್ನವನ್ನು ಮಾಡಬೇಕಾಗಿತ್ತು ಎಂಬ ಚರ್ಚೆಯೂ ನಡೆದು, ನಮ್ಮ ಮೇಡಂ ಸೂಕ್ತ ಮಾರ್ಗದರ್ಶನ ನೀಡಿದರು. ಪತ್ರಿಕೋದ್ಯಮ ಓದುತ್ತಿದ್ದ ನಮಗೆ, ಮುಂದಿನ ದಿನಗಳಲ್ಲಿ ಟಿವಿ ಪ್ಯಾನಲ್ ಡಿಸ್ಕಶನ್ ಮಾಡುವ ಅವಕಾಶ ಬಂದರೆ, ಈ ದಿನ ನಡೆಸಿದ ಚರ್ಚೆಯು ಹೇಗೆ ಸಹಕಾರಿಯಾಗಬಲ್ಲದು ಎಂದು ಸಹ ನಮ್ಮ ಗುರುಗಳು ನಮಗೆ ವಿವರಿಸಿ ದರು.

ಒಂದಂತೂ ನಿಜ, ಈ ದಿನ ಮಾತ್ರ ನಮ್ಮ ತರಗತಿ ಟಿವಿ ಪ್ಯಾನಲ್‌ನಂತೆ ಬದಲಾಗಿ ಹೋಗಿತ್ತು. ನಮಗಿದು ಹೊಸ ಅನುಭವ. ತರಗತಿಗಂತೂ ಮಾತಿನ ಸೊಬಗನ್ನು ಉಣಬಡಿಸಿದ ಖುಷಿ. ಪತ್ರಿಕೋದ್ಯಮ ಆರಿಸಿಕೊಂಡ ವಿದ್ಯಾರ್ಥಿಗಳು ಮಾತಿನಲ್ಲಿ ಪ್ರಖರತೆ ಹೊಂದಬೇಕು ಎಂಬ ಆಶಯಕ್ಕೆ ತರಗತಿಯೊಳಗಿನ ಚರ್ಚೆ ಈ ಒಂದು ಸಹಕಾರಿಯಾಯಿತು. ಜತೆಗೆ ನಮ್ಮ ಮುಂದಿನ ಜೀವನಕ್ಕೆ ಪ್ರಾಯೋಗಿಕ ಮಾರ್ಗದರ್ಶನವನ್ನೂ ಈ ಚರ್ಚೆ ನೀಡಿತು ಎಂದರೆ ತಪ್ಪಿಲ್ಲ.

Leave a Reply

Your email address will not be published. Required fields are marked *