Saturday, 10th May 2025

ಸವಾಲು ಎದುರಿಸುವ ಜೀವನ

ಸುರೇಶ ಗುದಗನವರ

ಹಲವು ವಿಶೇಷಚೇತನರು ಎಲ್ಲಾ ಅಡೆತಡೆಗಳ ನಡುವೆಯೂ ತಮ್ಮ ಸಾಮರ್ಥ್ಯಗಳಿಗೆ ಸವಾಲು ಹಾಕಿಕೊಂಡು, ಆತ್ಮವಿಶ್ವಾಸದಿಂದ ಜೀವನ ಪಯಣವನ್ನು
ಮುಂದುವರಿಸುತ್ತಾರೆ.

ಅಂಗವೈಕಲ್ಯ ಎಂದಿಗೂ ದೈಹಿಕ ಸಮಸ್ಯೆಯಲ್ಲ. ಅದು ಮನಸ್ಸಿಗೆ ಸಂಬಂಧಪಟ್ಟದ್ದು. ವಿಶೇಷ ಚೇತನರು ದೃಢವಾದ ಮನಸ್ಸಿನಿಂದ ಪ್ರಯತ್ನಪಟ್ಟರೇ ಯಶಸ್ಸನ್ನು ನಿಶ್ಚಿತವಾಗಿಯೂ ಪಡೆಯಬಹುದು. ವಿಶೇಷಚೇತನರಿಗೆ ಉತ್ತಮ ಉದಾಹರಣೆಯಾದವರು ಹರಿಯಾಣದ ಟಿಂಕೇಶ ಕೌಶಿಕ್‌ರವರು.

ವಿದ್ಯುತ್ ಆಘಾತ
ಹರಿಯಣಾದ ಜಜ್ಜರ್‌ನ ಟಿಂಕೇಶ್ ಕೌಶಿಕ 9 ವರ್ಷದವರಿದ್ದಾಗ, ಗಾಳಿಪಟ ಹಾರಿಸುವಾಗ ಗಾಳಿಪಟವು ವಿದ್ಯುತ್ ತಂತಿಗೆ ಸಿಲುಕಿತು. ಅದನ್ನು ಬಿಡಿಸಿ ಕೊಳ್ಳುವಾಗ 1100 ವೋಲ್ಟ್ ವಿದ್ಯುತ್ ತಂತಿಯ ಆಘಾತ ದಿಂದ ಎರಡೂ ಕಾಲುಗಳನ್ನು ಮೊಣಕಾಲಿನ ಕೆಳಗೆ ಮತ್ತು ಎಡಗೈಯನ್ನು ಕಳೆದುಕೊಂಡರು. ಮೊದಲ ಎರಡು ವರ್ಷಗಳ ಕಾಲ ಸಂಪೂರ್ಣವಾಗಿ ನಿಶ್ಚಲರಾಗಿದ್ದರು. ಹನ್ನೊಂದನೆಯ ವಯಸ್ಸಿನಲ್ಲಿ ಅವರಿಗೆ ಜೈಪುರ ಕಾಲು ಗಳನ್ನು ಅಳವಡಿಸಲಾಯಿತು. ಅದು ಅವರಿಗೆ ಸ್ವಂತವಾಗಿ ನಡೆದಾಡಲು ಅನುಕೂಲ ಮಾಡಿತು.

ಟಿಂಕೇಶರವರು ಮನೆಯವರ ಬೆಂಬಲದೊಂದಿಗೆ 2016ರಲ್ಲಿ ದಸ್ತಗೀರ್ ಅವರ ಮಾರ್ಗದರ್ಶನದಲ್ಲಿ ದಿ ಚಾಲೆಂಜಿಂಗ್ ಒನ್ಸ್ ಎಂಬ ಗುಂಪಿನಲ್ಲಿ ಸೇರಿಕೊಂಡರು. ಟಿಂಕೇಶರವರ ಸಾಮರ್ಥ್ಯಗಳನ್ನು ಅನ್ವೇಷಿಸಲು ಅದು ವೇದಿಕೆಯನ್ನು ಒದಗಿಸಿತು. ಅವರು ಎರಡು ವರ್ಷಗಳ ಅವಧಿಯಲ್ಲಿ ವ್ಯಾಯಾಮ ಮತ್ತು ಕ್ರೀಡೆಗಳಲ್ಲಿ ತರಬೇತಿ ಪಡೆದರು. ಹೀಗಾಗಿ ಟಿಂಕೇಶರವರು 10-15 ಕಿ.ಗ್ರಾಂ. ತೂಕ ಕಡಿಮೆ ಮಾಡಿಕೊಂಡು ಫಿಟ್ನೆಸ್ ಹೊಂದಿದರು.

ನಂತರ 2018ರಲ್ಲಿ ಪುಣೆಗೆ ತೆರಳಿ ಸ್ಮಿತಾ ಗೌತಮ್ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಮತ್ತು ಫಿಟ್‌ನೆಸ್ ಸೈನ್ಸ್‌ನ್‌ದಿಂದ ಫಿಟ್‌ನೆಸ್ ಮತ್ತು ನ್ಯೂಟ್ರಿಷನ್ ಕನ್ ಲ್ಟೆಂಟ್ ಆಗಿ ಪ್ರಮಾಣಪತ್ರವನ್ನು ಪಡೆದರು. ಅವರು ಯೋಗ ಶಿಕ್ಷಕರು, ಶಾರೀರಿಕ ಮತ್ತು ವಿಕಲಚೇತನರಿಗೆ ಫಿಟ್‌ನೆಸ್ ಮತ್ತು ಪೌಷ್ಟಿಕಾಂಶದ ಗುರಿಗಳನ್ನು ಸಾಧಿಸಲು ಮಾರ್ಗದರ್ಶನ ನೀಡಲು ಪ್ರಾರಂಭಿಸಿದರು. ಇದಲ್ಲದೇ ಅವರು ಜನರ ಬೇಡಿಕೆಗೆ ಅನುಗುಣವಾಗಿ ಆನ್‌ಲೈನ್ ತರಬೇತಿಯನ್ನು ನೀಡುತ್ತಾರೆ.

ದಾಖಲೆ
ಅವರು ಜೈಪುರ ಪಾದಗಳನ್ನು ಅಳವಡಿಸಿಕೊಂಡೇ 3 ಕಿ.ಮೀ. ಮತ್ತು 5 ಕಿ.ಮೀ. ಮ್ಯಾರಾಥಾನ ಪೂರ್ಣಗೊಳಿಸಿರುವದು ವಿಶೇಷವಾಗಿದೆ. ಟಿಂಕೇಶ್ ಕೌಶಿಕ್ ಅವರ ವಿಶೇಷ ಶಕ್ತಿಯನ್ನು ಪರಿಗಣಿಸಿ ಹೈದರಾಬಾದಿನ ಆದಿತ್ಯ ಮೆಹ್ತಾ ಫೌಂಡೇಶನ್‌ವು ಎಂಡೋಲೈಟ್ ಪ್ರಾಸ್ತೆಟಿಕ್ಸ್ ಕಾಲುಗಳನ್ನು ಒದಗಿಸಿತು. ನಂತರ
ಅವರು 2018ರ ನವೆಂಬರ್ 25ರಂದು ನೇಪಾಳದ ಕಠ್ಮಂಡುವಿನಲ್ಲಿ ಸ್ಪಿಂಗ್ ಬಂಗೀ 160 ಮೀಟರ್ ಎತ್ತರದಿಂದ ವಿಶ್ವದ ಅತೀ ಎತ್ತರದ ಕಣಿವೆಯ ಸ್ಪಿಂಗ್ ದಿ ಲಾಸ್ಟ್ ರೆಸಾರ್ಟನಲ್ಲಿ ಹಾರಿ ಹೊಸ ದಾಖಲೆಯನ್ನು ನಿರ್ಮಿಸಿದರು.

ಈ ವಿಶೇಷ ಸಾಧನೆಗಾಗಿ ಅವರು 2020ರ ಲಿಮ್ಕಾ ಬುಕ್ ಆಫ್ ರೆಕಾಡ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷಚೇತನ ಟಿಂಕೇಶ್ ಪುಣೆಯಲ್ಲಿ 2500 ಚದರ
ಅಡಿಯಲ್ಲಿ ಸುಸಜ್ಜಿತ ಜಿಮ್ಮ್‌ನ್ನು ಪ್ರಾರಂಭಿಸಿದ್ದಾರೆ. ಇದು ಕ್ರೀಡಾ ತರಬೇತಿ ಕಾರ್ಯಾಗಾರಗಳನ್ನು ಹೊರತುಪಡಿಸಿ ತನ್ನ ಗ್ರಾಹಕರಿಗೆ ಕ್ರಿಯಾತ್ಮಕ ತರಬೇತಿ, ಯೋಗ ಮತ್ತು ಜುಂಬಾ ತರಬೇತಿಗಳನ್ನು ಆಯೋಜಿಸುತ್ತಿದೆ. ಗ್ರಾಹಕರಿಗೆ ಅವರ ದೈಹಿಕ ಸಾಮರ್ಥ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಮತ್ತು ಪೌಷ್ಟಿಕಾಂಶದ ಮಹತ್ವವನ್ನು ಟಿಂಕೇಶ್ ಅರ್ಥಪೂರ್ಣವಾಗಿ ವಿವರಿಸುತ್ತಾರೆ.

ಟಿಂಕೇಶ್ ಕೌಶಿಕ್‌ರವರು ಕೈಕಾಲುಗಳನ್ನು ಕಳೆದುಕೊಂಡ ನಂತರ ಕ್ರೀಡಾಪಟು, ಈಜುಗಾರ, ಪ್ಯಾರಾ ಸೈಕ್ಲಿಸ್ಟ್, ಮ್ಯಾರಾಥಾನರ್ ಆಗಿ ಹೊರಹೊಮ್ಮಿದ್ದಾರೆ.
ಮಾನಸಿಕವಾಗಿ ಸದೃಢವಾಗಿರಿ ಅದುವೇ ನಿಮ್ಮ ದೊಡ್ಡ ಶಕ್ತಿ. ಅಂಗವೈಕಲ್ಯವು ಅಡಚಣೆಯಾಗಿದೆ ಎಂದು ಎಂದಿಗೂ ನಾನು ಯೋಚಿಸುವದಿಲ್ಲ ಹೀಗಾಗಿ ನಾನು ಕಷ್ಟಗಳನ್ನು ಪರಿಣಾಮಕಾರಿಯಾಗಿ ಎದುರಿಸಿ ಜಯಶಾಲಿಯಾಗಿದ್ದೇನೆ ಎಂದು ಟಿಂಕೇಶ್ ವ್ಯಕ್ತಪಡಿಸುತ್ತಾರೆ.

ಟಿಂಕೇಶ್ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ಭಾರತ ಪ್ರೇರಣಾ ಪ್ರಶಸ್ತಿ, ಡಿಎನ್‌ಎ ದಿಂದ ಜೀವಮಾನ ಸಾಧನೆ ಪ್ರಶಸ್ತಿ, ಹೆಲ್ಡ್ ಆಂಡ್ ಫಿಟೆನೆಸ್‌ದಿಂದ ಅತ್ಯುತ್ತಮ ಪ್ರಶಸ್ತಿ, ಕೇವಿನ್‌ಕೇರ್ ಎಬಿಲಿಟಿಯಿಂದ ಮಾಸ್ಟರ್ ಪ್ರಶಸ್ತಿ, ಲಿಮ್ಕಾ ಪುಸ್ತಕದ ದಾಖಲೆಯ ಪ್ರಶಸ್ತಿ ಮುಂತಾದ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನ ರಾಗಿದ್ದಾರೆ. ಸಮಾಜದಲ್ಲಿ ಜನರು ಅವರನ್ನು ವಿಲ್ ಎಂದು ಪ್ರೀತಿಯಿಂದ ಕರೆಯುತ್ತಾರೆ. ಪ್ರತಿಶತಃ 90ರಷ್ಟು ಅಂಗವೈಕಲ್ಯವನ್ನು ಹೊಂದಿದ ಟಿಂಕೇಶ್
ಸುಸಜ್ಜಿತವಾದ ಜಿಮ್ ನಡೆಸುವ ಮೂಲಕ ಅನೇಕರಿಗೆ ಆದರ್ಶ ಮತ್ತು ಸ್ಪೂರ್ತಿಯಾಗಿದ್ದಾರೆ. ಅವರು ಶಾರೀರಿಕ ಮತ್ತು ಅಂಗವೈಕಲ್ಯ ಹೊಂದಿರುವ ಜನರಿಗೆ ಉತ್ತಮ ಉದಾಹರಣೆಯಾಗಿದ್ದಾರೆ.

Leave a Reply

Your email address will not be published. Required fields are marked *