ಕುಬೇರ ಮಜ್ಜಿಗಿ
ಇದೊಂದು ವಿಶಿಷ್ಟ ಜಲಜಾತ್ರೆ. ಕೋವಿಡ್‌ನಿಂದಾಗಿ ಎಲ್ಲೆಡೆ ಜಾತ್ರೆ ನಡೆಯಲು ನಿರ್ಬಂಧವಿದೆ. ಆದ್ದರಿಂದ, ಜಾತ್ರೆಯ ಬದಲು ಜಲಜಾತ್ರೆ ನಡೆಯಲಿ ಎಂದು ಮಠದ ಸ್ವಾಮಿಗಳು ನಿರ್ಧರಿಸಿದರು. ಸುತ್ತಲಿನ ಹಳ್ಳಿಗಳ ಅಂತರ್ಜಲ ಹೆಚ್ಚಿ ಸಲು ಸಹಕಾರ ನೀಡುವ ಈ ಜಲಜಾತ್ರೆಯ ಅಂಗವಾಗಿ, ವಿಶಾಲ ಕೆರೆಯೊಂದನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಜಾತ್ರೆಯಷ್ಟೇ ಪವಿತ್ರ ಸ್ಥಾನ ಪಡೆದ ಈ ಜಲಜಾತ್ರೆಯು ಮಾದರಿ ಕೆರೆಯನ್ನು ರೂಪಿಸಲು ಕೈಹಾಕಿದೆ.
ಕೆರೆಯಂಗಳದಲ್ಲಿ ಬೆಳ್ಳಂಬೆಳಿಗ್ಗೆ ಬೃಹತ್ ಗಾತ್ರದ ಹಿಟಾಚಿಗಳು, ಜೆಸಿಬಿಗಳು, ಬುಲ್ಡೋಜರ್‌ಗಳ ಘರ್ಜನೆ. ಹತ್ತಾರು ಟಿಪ್ಪರ್‌ಗಳ ಓಡಾಟ. ಬೇರೆ ಬೇರೆ ಕಾಯಕ ದಲ್ಲಿ ನಿರತರಾಗಿರುವ ನೂರಾರು ಯುವಕರು. ಅವರಿಗೆಲ್ಲಾ ನಿರ್ದೇಶನ ನೀಡು ತ್ತಿರುವ ಕಾವಿ, ಖಾಕಿಧಾರಿಗಳು.
ಈ ದೃಶ್ಯ ಕಂಡುಬಂದಿದ್ದು ಕೊಪ್ಪಳ ಜಿಲ್ಲೆಯ ಗಿಣಿಗೇರಾ ಗ್ರಾಮದ ಕೆರೆ ಯಂಗಳದಲ್ಲಿ. ಕೆರೆಯಲ್ಲಿ ಯಾವುದೋ ಸರಕಾರಿ ಕೆಲಸ ನಡೆದಿದೆ ಎಂದು ಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಬದಲಾಗಿ ಇಲ್ಲಿ ನಡೆದಿರುವುದು ಜಲ ರಕ್ಷಣೆ ಕಾರ್ಯ. ಪಕ್ಕಾ ಸಮಾಜ ಸೇವೆ. ಯುವಕರ ಶ್ರಮದಾನ. ಇದನ್ನು ಜಲಜಾತ್ರೆ ಎಂದು ಕರೆಯಬಹುದು.
ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಒಂದಲ್ಲೊಂದು ವಿಶಿಷ್ಟ ಕಾಯಕದಲ್ಲಿ ತೊಡಗಿರುತ್ತಾರೆ. ಈಗಾಗಲೇ ಕೊಪ್ಪಳದ ಹಿರೇಹಳ್ಳ ಸ್ವಚ್ಛತಾ ಕಾರ್ಯ, ನಿಡಶೇಸಿ ಕೆರೆ ಪುನಶ್ಚೇತನ ಕಾರ್ಯ ಮಾಡಿದ್ದಾರೆ. ಅಡವಿಹಳ್ಳಿ ಗ್ರಾಮವನ್ನು ದತ್ತು ಪಡೆದು ಮೂಲಭೂತ ಸೌಕರ್ಯ ಒದಗಿಸುವ ಕಾರ್ಯ ಮಾಡುತ್ತಿದ್ದಾರೆ. ಜತೆಗೆ ಮಠದ ವತಿಯಿಂದ ರಕ್ತದಾನ ಶಿಬಿರ, ನೇತ್ರದಾನ ಶಿಬಿರ, ದೇಹದಾನ ಶಿಬಿರಗಳಂತಹ ಸಾಮಾಜಿಕ ಸಾಮಾಜಿಕ ಕಳಕಳಿಯ ಕಾರ್ಯ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ಕಳೆದ ಜನವರಿಯಲ್ಲಿ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಅದು ಸಾಧ್ಯವಾಗದಿದ್ದಾಗ ಶ್ರೀಗಳು ಒಂದು ವಾಗ್ದಾನ ಮಾಡಿದರು. ‘ಕೊಪ್ಪಳ ಮಠದಲ್ಲಿ ತೇರು ಎಳೆಯಲಿ, ಗಿಣಿಗೇರಿ ಕೆರೆಯಲ್ಲಿ ಜಾತ್ರೆ ನಡೆಯಲಿ’ ಎಂದಿದ್ದರು. ಆ ಮಾತಿನಂತೆ ಭಕ್ತರ ಹಾಗೂ ದಾನಿಗಳ ಸಹಕಾರ ಪಡೆದು ಗಿಣಿಗೇರಿ ಕೆರೆ ಪುನಶ್ಚೇತನ ಕಾರ್ಯ ಕೈಗೊಂಡಿದ್ದಾರೆ.
ಮಾದರಿ ಕೆರೆ ಸಂಕಲ್ಪ
ಗಿಣಿಗೇರಿ ಕೆರೆ 248 ಎಕರೆ ವಿಸ್ತೀರ್ಣವಿರುವ ಬೃಹತ್ ಕೆರೆಯಾಗಿದ್ದು, ಈ ಕೆರೆ ಅಭಿವೃದ್ಧಿಪಡಿಸಿ ನೀರು ತುಂಬಿಸಿದರೆ ಸುತ್ತ ಮುತ್ತಲ ಹತ್ತಾರು ಗ್ರಾಮಗಳ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರ ಬದುಕು ಹಸನಾಗುತ್ತದೆ. ಜತೆಗೆ ಈ ಕೆರೆಗೆ ಬೇಸಿಗೆ ಸಮಯದಲ್ಲಿ ಹತ್ತಾರು ಜಾತಿಯ ಪಕ್ಷಿಗಳು ಸಂತಾನಾಭಿವೃದ್ಧಿಗೆ ವಲಸೆ ಬಂದು ತಂಗುತ್ತವೆ. ಕೆರೆ ಅಭಿವೃದ್ಧಿಯಾದರೆ ಇಲ್ಲಿ ಮಿನಿ ರಂಗನತಿಟ್ಟು ನಿರ್ಮಾಣವಾಗಲಿದೆ ಎಂಬುದು ಶ್ರೀಗಳ ಆಶಯ. ಈ ಕರೆಯನ್ನು ಮಾದರಿ ಕೆರೆಯನ್ನಾಗಿ ಅಭಿವೃದ್ಧಿ ಮಾಡಬೇಕೆನ್ನುವುದು ಅವರ ಸಂಕಲ್ಪ.
ಈ ಕಾರ್ಯಕ್ಕೆ ಅಭೂತಪೂರ್ವ ಸ್ಪಂದನೆ ದೊರೆತಿದೆ. ಕೇವಲ ದಾನಿಗಳು ಹಾಗೂ ಸಾರ್ವಜನಿಕರ ಸಹಾಕಾರದಿಂದ ಈ ಕಾರ್ಯ ಮಾಡಬೇಕೆನ್ನುವ ಅವರ ಉದ್ದೇಶ ಸಫಲವಾಗುತ್ತಿದೆ. ಹಿಟಾಚಿ, ಜೆಸಿಬಿ, ಬುಲ್ಡೋಜರ್, ರೂಲರ್, ಟಿಪ್ಪರ್ ಗಳನ್ನು ಸೇವಾ ರೂಪದಲ್ಲಿ ಕಳಿಸಿದ್ದಾರೆ. ಗಿಣಿಗೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ಸಂಘ ಸಂಸ್ಥೆಗಳು, ಕಾರ್ಖಾನೆಗಳು, ಕೋಳಿ ಫಾರ್ಮ್‌ಗಳು, ಇಟ್ಟಂಗಿ ಬಟ್ಟಿಗಳ ಮಾಲೀಕರು ದೇಣಿಗೆ ನೀಡುತ್ತಿದ್ದಾರೆ.
ಈ ಮಹತ್ಕಾರ್ಯಕ್ಕೆ ಕೊಪ್ಪಳದ ಹಲವು ಸರಕಾರಿ ನೌಕರರು ತಮ್ಮ ಒಂದು ತಿಂಗಳ ಸಂಬಳ ನೀಡಿ ಸಾಮಾಜಿಕ ಕಳಕಳಿ ಮೆರೆ ದಿದ್ದಾರೆ. ಕೊಪ್ಪಳ ಗ್ರಾಮೀಣ ವೃತ್ತದ ಸಿಪಿಐ ವಿಶ್ವನಾಥ ಹಿರೇಗೌಡರ್ ಅವರು ಶ್ರೀಗಳಿಗೆ ಸಹಕರಿಸಿದ್ದಾರೆ. ತಮ್ಮ ಪೊಲೀಸ್ ಕಾಯಕದ ಒತ್ತಡದ ನಡುವೆ ಈ ಸಾಮಾಜಿಕ ಕಾರ್ಯಕ್ಕೆ ಒತ್ತು ನೀಡಿದ್ದಾರೆ.
ಸ್ಥಳೀಯವಾಗಿ ಕೆರೆ ಅಭಿವೃದ್ಧಿ ಸಮಿತಿ ರಚಿಸುವ ಮೂಲಕ ಗ್ರಾಮದ ಮುಖಂಡರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಮಠದ ದಾಸೋಹ ವಾಹನಗಳ ಚಾಲಕರು, ಕ್ಲೀನರ್‌ಗಳು ಹಾಗೂ ಸ್ವಯಂಸೇವಕರಿಗೆ ಪ್ರತಿ ದಿನ ಊಟದ ವ್ಯವಸ್ಥೆ ಮಾಡಲಾಗು ತ್ತಿದ್ದು, ಬೆಳಿಗ್ಗೆ ಟಿಫಿನ್ ಹಾಗೂ ಟೀ, ಮಧ್ಯಾಾಹ್ನ ಊಟ ಹಾಗೂ ಸಂಜೆ ಅಲ್ಪ ಉಪಹಾರ ಜೊತೆಗೆ ಟೀ ನೀಡಲಾಗುತ್ತಿದೆ. ಇದನ್ನು ಗವಿಮಠದ ಪ್ರಸಾದ ಹಾಗೂ ದಾಸೋಹ ಎಂದೇ ಕರೆಯಲಾಗುತ್ತದೆ.
ಫೆ.21 ರಂದು ಕೆರೆ ಪುನಶ್ಚೇತನ ಕಾರ್ಯ ಶುರುವಾಗಿದ್ದು ಕೆರೆ ಅಭೂತಪೂರ್ವ ಬದಲಾವಣೆ ಕಂಡಿದೆ. ಕೆರೆಯ ಸುತ್ತ 50 ಅಡಿ
ಅಗಲ ಬಂಡ್ ನಿರ್ಮಿಸಿ ಎರಡೂ ಬದಿ ಸಸಿ ನೆಡುವುದು, ಉದ್ಯಾನವನ ನಿರ್ಮಿಸುವುದು, ವಾಯು ವಿಹಾರಕ್ಕೆ ವ್ಯವಸ್ಥೆ ಕಲ್ಪಿಸು ವುದು, ಪಕ್ಷಿಗಳ ವಾಸಕ್ಕೆ ನಡುಗಡ್ಡೆ ನಿರ್ಮಿಸಿ, ಗಿಡ ನೆಡುವುದು ಸೇರಿದಂತೆ ಈ ಕೆರೆಯನ್ನು ಆಕರ್ಷಣೆ ಹಾಗೂ ಸೌಂದರ್ಯೀ ಕರಣಗೊಳಿಸುವುದು ಸ್ವಾಮೀಜಿಗಳ ಆಶಯ.
ಈ ಸಾಮಾಜಿಕ ಕಾರ್ಯಕ್ಕೆ ಇನ್ನೂ ಹೆಚ್ಚಿನ ಸಹಾಯ ಸಹಕಾರದ ಅಗತ್ಯವಿದ್ದು ದಾನಿಗಳು ಮುಂದೆ ಬಂದು ದೇಣಿಗೆ ನೀಡಿದಲ್ಲಿ ಇದೊಂದು ಮಾದರಿ ಕೆರೆಯಾಗಿ ನಿರ್ಮಾಣವಾದೀತು. ಸಹಾಯ ಹಸ್ತ ನೀಡಲು ಸಂಪರ್ಕ: 9886643714