Tuesday, 13th May 2025

ಹಕ್ಕಿ ಛಾಯಾಗ್ರಹಣದಲ್ಲಿ ಕಾವ್ಯಾನುಭವ !

ಸುರೇಶ ಗುದಗನವರ

ಮನದಾಳದಲ್ಲಿ ಹುದುಗಿದ್ದ ಪ್ರವೃತ್ತಿಯ ಸೆಲೆಯೊಂದು ನಿವೃತ್ತಿಯ ನಂತರ ಪ್ರಕಟಗೊಂಡರೆ ಹೇಗಿದ್ದೀತು! ವೃತ್ತಿ ಜೀವನಕ್ಕೆ ನಿವೃತ್ತಿ ಹೇಳಿದ ನಂತರ ಅಪಾರ ತಾಳ್ಮೆಯಿಂದ ಹಕ್ಕಿಗಳ ಛಾಯಾಗ್ರಹಣ ಮಾಡುತ್ತಿರುವ ಲೀಲಾ ಅಪ್ಪಾಜಿ ಯವರನ್ನೇ ಕೇಳಬೇಕು. ಅವರು ಚಿತ್ರಿಸಿದ ಹಕ್ಕಿಗಳ ಫೋಟೋ ನೋಡುತ್ತಾ ಹೋದರೆ, ಕಾವ್ಯವನ್ನು ಓದಿದಂತಾ ಗುತ್ತದೆ, ಕವನದ ತರಂಗಗಳು ಮನತಟ್ಟುತ್ತವೆ. 

ನಿವೃತ್ತಿ ಎಂಬುದು ಜೀವನದಲ್ಲಿ ಅಂತ್ಯವಲ್ಲ. ಹೆಚ್ಚಿನವರು ತಮ್ಮ ಅರವತ್ತು ವರ್ಷಗಳ ನಂತರ ಕೈಗೊಂಡ ವೃತ್ತಿಯಿಂದ ನಿವೃತ್ತಿ ಹೊಂದುತ್ತಾರೆ. ಬಹಳಷ್ಟು ಮಂದಿ ನಿವೃತ್ತಿ ವಯಸ್ಸು ದಾಟಿದ ಬಳಿಕ ಅಧ್ಯಾತ್ಮವನ್ನು ಬದುಕಾಗಿ ಕಂಡುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ನಿವೃತ್ತಿ ನಂತರ ಬರ್ಡ್ ಫೋಟೊಗ್ರಾಫಿಯನ್ನೇ ಪ್ರವೃತ್ತಿಯಾಗಿ ಮಾಡಿಕೊಂಡು ಇಡೀ ಜಗತ್ತೇ ತನ್ನತ್ತ ತಿರುಗಿ ನೋಡುವ ಹಾಗೆ ಮಾಡಿದ್ದಾರೆ. ಅವರೇ ಮಂಡ್ಯದ ಲೀಲಾವತಿ ಅಪ್ಪಾಜಿಯವರು.

ಓದಿನಲ್ಲಿ ಆಸಕ್ತಿಯಿದ್ದುದರಿಂದ ಮನೆಯವರ ವಿರೋಧದ ನಡುವೆಯೂ ಬಿ.ಎ. ಪದವಿ ಕಲಿಕೆಯನ್ನು ಮುಂದುವರೆಸಿದರು. ಪದವಿ ಅಭ್ಯಾಸದ ಹಂತದಲ್ಲಿಯೇ ಮಗಳಿಗೆ ಜನ್ಮ ನೀಡಿದರು. ಅಧ್ಯಯನದಲ್ಲಿ ತೊಂದರೆಯಾದರೂ ಅವ್ವನ ಸಹಕಾರದಿಂದ ಪದವಿಯನ್ನು ಪೂರ್ಣಗೊಳಿಸಿದರು. ಎಂ.ಎ. ಕನ್ನಡವನ್ನು ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯಿಂದ ತೇರ್ಗಡೆ ಯಾದರು. ನಂತರ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕಿಯಾಗಿ ವೃತ್ತಿಯನ್ನು ಪ್ರಾರಂಭಿಸಿ ದರು. ಕೆಲವು ವರ್ಷಗಳ ನಂತರ ಸರಕಾರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ನೇಮಕ ಗೊಂಡರು.

ಲೀಲಾ ಅಪ್ಪಾಜಿಯವರು ಹಲವಾರು ವರ್ಷಗಳ ಕಾಲ ವಿವಿಧೆಡೆ ಸರಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕಿ ಯಾಗಿ ಸೇವೆ ಸಲ್ಲಿಸಿ, ಕೊನೆಗೆ ಮಂಡ್ಯದ ಸರಕಾರಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ 2015ರಲ್ಲಿ ನಿವೃತ್ತಿಯಾದ ಬಳಿಕ ಬರ್ಡ್ ಫೋಟೋಗ್ರಾಫಿಯನ್ನು ಹವ್ಯಾಸ ಮಾಡಿಕೊಂಡಿದ್ದಾರೆ.

ಮೊದಲಿನಿಂದಲೂ ಲೀಲಾ ಅಪ್ಪಾಜಿಯವರಿಗೆ ಫೋಟೋಗ್ರಾಫಿ ಎಂದರೆ ಇಷ್ಟ. ಪಿ.ಎಚ್.ಡಿ ಅಧ್ಯಯನ ಮಾಡುವ ಸಂದರ್ಭ ದಲ್ಲಿ ಕ್ಯಾಮೆರಾದ ನಂಟನ್ನು ಬೆಳೆಸಿಕೊಂಡಿದ್ದರು. ಕವಿತೆ ರಚನೆ, ಅಧ್ಯಯನ, ಸಾಹಿತ್ಯದ ಓದಿನಲ್ಲಿ ಗಂಭೀರವಾಗಿ ತೊಡಗಿಸಿ ಕೊಂಡಿರುವ ಅವರು ‘ಬಿಳಿಗಿರಿ ರಂಗನ ಬೆಟ್ಟ: ಒಂದು ಸಾಂಸ್ಕೃತಿಕ ಅಧ್ಯಯನ’ವಿಷಯವನ್ನು ಪಿಎಚ್.ಡಿ.ಗೆ ಆಯ್ಕೆ ಮಾಡಿ ಕೊಂಡಿದ್ದರು. ಆ ಸಮಯದಲ್ಲಿ ಲೀಲಾರವರು ಕ್ಯಾಮೆರಾ ಹೆಗಲಿಗೇರಿಸಿ ಬಿಳಿಗಿರಿರಂಗ ಬೆಟ್ಟದಲ್ಲಿ ಅಲೆದಾಡಿದ್ದರು. ಅಲ್ಲಿ ಅವರು ಸಾಕಷ್ಟು ಚಿತ್ರಗಳನ್ನು ಸೆರೆ ಹಿಡಿದಿದ್ದರು. ನಂತರ ಪಿ.ಎಚ್.ಡಿ ಪ್ರಬಂಧವನ್ನು ಸಲ್ಲಿಸಿ ಡಾಕ್ಟರೇಟ್ ಪದವಿಗೆ ಭಾಜನರಾದರು.

ತಾಳ್ಮೆ ಬೇಡುವ ಹವ್ಯಾಸ
ನಿವೃತ್ತಿ ಆದ ಬಳಿಕ ಮುಂದೇನು? ಎಂದು ಯೋಚಿಸುವಾಗ ಅವರಿಗೆ ಥಟ್ಟನೇ ಹೊಳೆದದ್ದು ಫೋಟೋಗ್ರಾಫಿ. ಈ ಫೋಟೋ ಗ್ರಾಫಿಗೆ ದುಬಾರಿ ಕ್ಯಾಮೆರಾ, ಸ್ಟ್ಯಾಂಡ್, ಲೆನ್ಸ್ನಂತಹ ಸಲಕರಣೆಗಳು ಇದ್ದರೆ ಮಾತ್ರ ಸಾಲದು. ತಾಳ್ಮೆ, ಪರಿಶ್ರಮ, ದಿನಗಟ್ಟಲೆ ಕಾಯುವ ಮನಸ್ಥಿತಿಯನ್ನು ಬಯಸುತ್ತದೆ.

ಫೊಟೋಗ್ರಾಫಿಯ ವೈಶಿಷ್ಟತೆ ಎಂದರೆ ಭಾಷೆ ಇರದಿದ್ದರೂ ಭಾವ ಅರ್ಥವಾಗುತ್ತದೆ. ನಿವೃತ್ತಿ ನಂತರ ಫೋಟೋಗ್ರಫಿಯನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡು ಹಕ್ಕಿಗಳ ಕತೆ ಕೇಳಿಸುತ್ತಿದ್ದಾರೆ, ಹೇಳುತ್ತಿದ್ದಾರೆ. ಅವುಗಳ ಭಾವಕ್ಕೆ ಕಥೆ ಹೆಣೆಯುತ್ತಾ ದೇಶ
ವಿದೇಶದುದ್ದಕ್ಕೂ ಸಂಚರಿಸಿದ್ದಾರೆ. ಉತ್ತರಾಖಂಡ, ಮಣಿಪುರ, ಪಶ್ಚಿಮ ಬಂಗಾಳ, ಒರಿಸ್ಸಾ, ಕೇರಳ, ಅಂಡಮಾನನಂತಹ ದೂರದ ಹಾದಿಯಲ್ಲಿ ಎಡತಾಕಿದ್ದಾರೆ. ನೆರೆಯ ಭೂತಾನ್ ದಲ್ಲೂ ಹಕ್ಕಿಗಳಿಗಾಗಿ ಕ್ಯಾಮೆರಾ ಹೆಗಲೇರಿಸಿ ಹೊರಟಿದ್ದಾರೆ.

ಲೀಲಾ ಅಪ್ಪಾಜಿಯವರು ಹದಿನಾರು ರಾಜ್ಯಗಳನ್ನು ಸುತ್ತಾಡಿದ್ದಾರೆ. ಕಿಂಗ್ ಫಿಶರ್, ಬುಲ್‌ಬುಲ್, ಸನ್‌ಬರ್ಡ, ವುಡ್‌ಪೆಕ್ಕರ್ಸ್‌, ವಾರ್ಡ ಟ್ನ್, ಲಾಫಿಂಗಸ್‌ ಥ್ರಶಸ್, ರೋಸ್ ಫೀಂಚ್, ಪುಲ್ವೇಟ್ಬಾಸ್, ಕೆನ್ನೀಲಿ ಬಕ್ ಸೇರಿದಂತೆ ಏಳನೂ ರಕ್ಕೂ ಹೆಚ್ಚು ವಿವಿಧ ತಳಿಯ, ವೈವಿಧ್ಯಮಯ ಪಕ್ಷಿಗಳ ನೋಟವನ್ನು ಸೆರೆ ಹಿಡಿದಿದ್ದಾರೆ. ಅವರ ಈ ಛಾಯಾಗ್ರಹಣದಲ್ಲಿ ಪಕ್ಷಿಗಳು ಬಂದು ಫೋಸ್ ನೀಡುತ್ತಿವೆಯೇನೋ, ನರ್ತಿಸುತ್ತಿವೆಯೆನೋ ಎನ್ನುವಷ್ಟರ ಮಟ್ಟಿಗೆ ಅವುಗಳ ಭಾವ-ಭಂಗಿಗಳನ್ನು ಸೆರೆಹಿಡಿದಿದ್ದಾರೆ.

ಪಕ್ಷಿಗಳ ಜೀವನ, ವಂಶಾಭಿವೃದ್ಧಿ, ಗಂಡು-ಹೆಣ್ಣು ನಡುವಣ ವ್ಯತ್ಯಾಸ, ಅವುಗಳ ಆಹಾರ ಸಂಸ್ಕೃತಿ, ವಲಸೆಯ ದಾರಿಯನ್ನು ಹೇಳಬಲ್ಲಷ್ಟು ಪಾಂಡಿತ್ಯ ವನ್ನು ಸಾಧಿಸಿದ್ದಾರೆ. ಫೋಟೋಗ್ರಾಫಿಯನ್ನು ಸಾಹಿತ್ಯಕ್ಕೂ ಅನ್ವಯಿಸಿ, ವಿಶಿಷ್ಟ ಪ್ರಯೋಗಗಳನ್ನು ಮಾಡಿ ಸೈ ಎನಿಸಿ ಕೊಂಡಿದ್ದಾರೆ. ದಸರಾ ಹಬ್ಬದ ಸಂದರ್ಭದಲ್ಲಿ ಕವಿ-ಕಾವ್ಯ ಪ್ರದರ್ಶನದಲ್ಲಿ ಕುವೆಂಪು, ಗಾಂಧೀಜಿ ಅವರ ಫೋಟೋಗಳನ್ನು ಕಲೆ ಹಾಕಿ ಪ್ರದರ್ಶಿಸಿದ್ದಾರೆ.

ಕರ್ನಾಟಕ ಒಂದು ದರ್ಶನ, ಕವಿಗಳು ಕಂಡನಾಡು, ಸಾಹಿತ್ಯ ಚಿತ್ರದರ್ಶನ ಮುಂತಾದ ಭಾವಚಿತ್ರ ಮಾಲಿಕೆಯ ಮೂಲಕ
ಸಾಹಿತ್ಯ-ಫೋಟೋಗ್ರಾಫಿಯ ಪರಿಚಾರಿಕೆಯ ಕೆಲಸವನ್ನು ಮಾಡುತ್ತಿದ್ದಾರೆ. ನಿವೃತ್ತಿ ಎಂದರೆ ವಿರಾಮ ಎಂದು ಪರಿಭಾವಿಸುವ ಫಟ್ಟದಲ್ಲಿ ಹತ್ತು ಕೆ.ಜಿ.ಯಷ್ಟು ತೂಕದ ಕ್ಯಾಮೆರಾ ಸ್ಟಾಂಡ್-ಲೆನ್ಸ್‌ ಇವುಗಳ ಭಾರ ಹೊತ್ತು ಪಕ್ಷಿ ಜಗತ್ತಿನ ವಿಸ್ಮಯಗಳನ್ನು ಕಾಣಲು ಹೊರಟ ಡಾ.ಲೀಲಾ ಅಪ್ಪಾಜಿಯವರ ಉತ್ಸಾಹ ನಿಜಕ್ಕೂ ಮೆಚ್ಚುವಂತಹದ್ದು.

ಹಕ್ಕಿಗಳ ಹಿಂದೆ ಅಲೆದಲೆದು, ದಿನಗಟ್ಟಲೆ ಕಾಯುತ್ತಾ ಫೋಟೋ ತೆಗೆಯುತ್ತಾ ದೇಶ ದೇಶ ದಾಚೆಗೂ ಸುತ್ತುವ ನಿತ್ಯೋತ್ಸಾಹಿ ಲೀಲಾ ಅಪ್ಪಾಜಿಯವರು ತಾಳ್ಮೆ, ಪರಿಶ್ರಮಕ್ಕೆ ಮಾದರಿ. ಅವರ ಅಪಾರ ಜೀವನ ಪ್ರೀತಿ, ಉತ್ಸಾಹ ಎಲ್ಲರಿಗೂ ಮಾರ್ಗದರ್ಶಿಯಾಗಲಿ.

ಮಾತನಾಡುವ ಚಿತ್ರಗಳು
ಲೀಲಾ ಅಪ್ಪಾಜಿಯವರು ಚಿತ್ರಿಸಿದ ನೂರಾರು ಹಕ್ಕಿಗಳ ಫೋಟೋಗಳನ್ನು ತಮ್ಮ ಫೇಸ್ ಬುಕ್‌ನಲ್ಲಿ ಹಾಕಿದ್ದಾರೆ. ಬರಿದೆ ಹಾಕಿಲ್ಲ, ಆ ಫೋಟೋ ತೆಗೆದ ಹಿನ್ನೆಲೆ, ಅಂತಹ ದಿನದಲ್ಲಿ ತಾವು ಅನುಭವಿಸಿದ ನಲಿವು, ನೋವು ಎಲ್ಲವನ್ನೂ ಬರೆದಿದ್ದಾರೆ. ಜತೆಗೆ ಅವರ ಚಿತ್ರಗಳೇ ಮಾತನಾಡುತ್ತವೆ! ಕೆಲವು ಫೋಟೋಗಳಿಗೆ ಅವರೇ ಬರೆದಿರುವ ಕವನಗಳು ಬಿಡಿಸಿಡುವ ಭಾವಕೋಶ ಅನನ್ಯ.

ಒಂದು ಸ್ಯಾಂಪಲ್ : ನಿನ್ನೆ ಅವ ಮೇಲಿಂದ ಇವಳತ್ತ ನೋಡುತ್ತಿದ್ದ ಚಿತ್ರ ನೋಡಿದಿರಿ ಈಕೆ ನೋಡಿ ಎಂತಹ ಓರೆ ನೋಟದ
ಸುಂದರಿ ವಾರೆಗಣ್ಣಿನಲ್ಲೇ ಅತ್ತ ನೋಡುತ್ತಿರುವ ಪರಿ!

ಕೋಟ್‌

ಒಂದೊಂದು ಫೋಟೋ ಸೆರೆಹಿಡಿಯಲು ದಿನ, ವಾರ, ತಿಂಗಳುಗಟ್ಟಲೆ ಅಲೆದಾಡುತ್ತೇನೆ. ಇಲ್ಲಿ ತಾಳ್ಮೆ ಬೇಕು. ಇದು ಒಂದು
ರೀತಿಯ ತಪಸ್ಸಿದ್ದಂತೆ, ಕೊನೆಗೆ ನಮಗೆ ಬೇಕಿದ್ದು ಸಿಕ್ಕಿದಾಗ ಅದರ ಖುಷಿ, ಅನನ್ಯವಾದ ಅನುಭೂತಿ ಇದೆಯಲ್ಲಾ ವರ್ಣಿಸಲು ಅಸಾಧ್ಯ.
– ಡಾ.ಲೀಲಾ ಅಪ್ಪಾಜಿ

Leave a Reply

Your email address will not be published. Required fields are marked *