Monday, 12th May 2025

ಮಧುರ ಕಂಠ ಮೂಡಿಸಿದ ಪ್ರೀತಿ

ಹಾಡು ಹೇಳಿದ ಆ ಮಧುರ ಕಂಠವು ಸದಾ ಕಾಡತೊಡಗಿತು. ಆ ನೆಪದಲ್ಲೇ ಸ್ನೇಹ ಮೂಡಿತು. ಪ್ರೀತಿ ಹುಟ್ಟಿತು.

ರಮೇಶ ಇಟಗೋಣಿ

ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ ತನ್ನ ಚಾಪು ಮೂಡಿಸಿದರೂ ಅದರ ರೀತಿ ಮಾತ್ರ ಬೇರೆ ಬೇರೆ ಆಗಿರುತ್ತದೆ. ಅದೇನೋ ಯಾಕೋ ಗೊತ್ತಿಲ್ಲಾ ನಾನಾಯಿತು, ನನ್ನ ಕೆಲಸ ಆಯಿತು ಅಂತ ನನ್ನ ಪಾಡಿಗೆ ನಾನಿದ್ದೆ. ಬ್ಯೂಸಿಯಲ್ಲೂ ನನ್ನ ಜೀವನದಲ್ಲಿ ಇದ್ದಕ್ಕಿದ್ದಂತೆ ಕಾಲಿಟ್ಟು ಇರುಳಲ್ಲಿ ದೀಪವಿಡಿದು ನಿಂತು ದಾರಿತೋರಿದವಳು ಆ ಹುಡುಗಿ.

ಅಂದು ಕಾಲೇಜಿನಲ್ಲಿ ಕಾರ್ಯಕ್ರಮ ಒಂದು ನಡೆದಿತ್ತು. ನಾನು ಹಾಗೂ ನನ್ನ ಗೆಳೆಯರು ಬಹಳ ಕಾರ್ಯಕ್ರಮದಲ್ಲಿ ಪುಲ್ ಬ್ಯೂಸಿ, ಯಾಕೆಂದರೆ ಕಾರ್ಯಕ್ರಮದ ಎಲ್ಲಾ ಉಸ್ತುವಾರಿ ನಾವೇ. ಅದರಲ್ಲಿ ನಾನು ಫೋಟೋಗ್ರಾಫರ್ ಆಗಿದ್ದು ಎಲ್ಲಾ ಪೋಟೋ ನಾನೇ ತೆಗೆಯುತ್ತಿದ್ದೆ. ಕಾರ್ಯಕ್ರಮ ಪ್ರಾರ್ಥನೆಯೊಂದಿಗೆ ಪ್ರಾರಂಭ. ‘ತೊರೆದು ಜೀವಿಸಬಹುದೆ ಹರಿ ನಿನ್ನ ಚರಣ ಗಳ’ ಎಂಬ ಕನಕದಾಸರ ಹಾಡು, ಮಧುರ ಕಂಠದಲ್ಲಿ ಕೇಳಿಸಿತು. ನೋಡಿದರೆ ಸುಂಧರವಾದ ಹುಡುಗಿ ಮೈಮರೆತು ಹಾಡು ಹಾಡುತ್ತಿದ್ದರೆ ನಾನು ಅವಳನ್ನೇ ನೋಡುತ್ತಾ ಮೈ ಮರೆತು ನಿಂತೆ.

ಸುಮಾರು ಪೋಟೋಗಳನ್ನು ಕ್ಲಿಕ್ಕಿಸಿದೆ. ಕಾರ್ಯಕ್ರಮ ಮುಗಿದರೂ ಆ ಹುಡುಗಿ ಗುಂಗಿನಿಂದ ನಾ ಹೊರ ಬರಲೇ ಇಲ್ಲಾ. ಆ ಹುಡುಗಿ ನಮ್ಮ ಕಾಲೇಜಿನವಳೇ ಎಂದು ಗೊತ್ತಾಯಿತು. ಅವಳದೇ ಗುಂಗಿನಲ್ಲಿ ಕಾರ್ಯಕ್ರಮ ಮುಗಿಸಿ ರೂಮ್ ಗೆ ಹೋಗಿ ನಾನೇ ತೆಗೆದ ಪೋಟೋ ನೋಡುತ್ತಾ ಕುಳಿತೆ ಅಷ್ಟರಲ್ಲಿ ಮೊಬೈಲ್ ಸ್ಕ್ರೀನ್ ಮೇಲೆ ಪೇಸ್ಬುಕ್ ನೋಟಿಫಿಕೇಷನ್! ನೋಡಿದರೆ ಅದೇ ಸುಂದರ ಹುಡುಗಿಯ ಪ್ರೇಂಡ್ ರಿಕ್ವೆೆಸ್ಟ್‌ ಬಂದಿತ್ತು! ಅದನ್ನು ನೋಡಿ ಆಶ್ಚರ್ಯವಾದರೂ ಮನಸ್ಸಲ್ಲಿ ಖುಷಿಯ ಚಿಗುರು ಮೂಡಿತು. ಅಷ್ಟರಲ್ಲಿ ಆಕಡೆಯಿಂದ ಹಾಯ್… ಅಂತ ಮೆಸೇಜ್ ಬಂತು ನಾನು ಹೆಲೋ.. ಅಂತ ಉತ್ತರಿಸಿದೆ. ಹಾಗೇ ನಮ್ಮಿಬ್ಬರ ಮಧ್ಯ ಟೀ, ಊಟ, ಅಂತ ಚಾಟ್  ಮುಂದುವರೆಯಿತು.

ನನ್ನ ಮನಸ್ಸಲ್ಲಿ ಮೊಬೈಲ್ ನಂಬರ ಕೇಳಬೇಕು ಅಂತ ಅನಿಸಿದರೂ ಭಯವಾಗಿ ಸುಮ್ಮನಾದೆ. ಅಷ್ಟರಲ್ಲಿ ಆ ಹುಡುಗಿ ಕಾರ್ಯ ಕ್ರಮದ ನನ್ನ ಪೋಟೋ ಕಳುಹಿಸಿ ಎಂದು ಕೇಳಿದಳು… ಇದೇ ಒಳ್ಳೆಯ ಸಮಯ ಎಂದು ನಿಮ್ಮ ನಂಬರ್ ಕೊಡಿ, ವಾಟ್ಸಪ್‌ಗೆ ಪೋಟೋ ಕಳಿಸ್ತಿನಿ ಅಂತ ಹೇಳಿದೆ. ಅವರೂ ತಮ್ಮ ನಂಬರ್ ಕಳುಹಿಸಿದರು. ಪೇಸ್ಬುಕ್ ನಲ್ಲಿ ಇದ್ದ ನಮ್ಮ ಪರಿಚಯ ಈಗ ವಾಟ್ಸಪ್‌ಗೆ ಕಾಲಿಟ್ಟಿತು. ಎಲ್ಲಾ ಪೋಟೋ ಕಳುಹಿಸಿದೆ. ಥ್ಯಾಂಕ್ಸ್‌ ಎಂದು ಉತ್ತರ ಬಂತು.

ಮಾರನೆಯ ದಿನ ಕಾಲೇಜಿಗೆ ಹೋದೆ. ಮೊದಮೊದಲು ಅವಳು ಓರೆಗಣ್ಣಿನಲ್ಲಿ ನೋಡಿದ ನೆನಪು. ಅವಳ ನೋಟಕ್ಕೆೆ ನನ್ನನ್ನು ನಾ ಮರೆತಿದ್ದೆ. ಅವಳೆಂದರೆ ಅದೆನೋ ಸೆಳೆತ ನನ್ನೊಳಗೆ… ಅವಳ ಹೆಸರು ಹೇಳಿದರೆ ಸಾಕು ಹೃದಯ ಅರಳಿದಂತಾಗುತ್ತದೆ… ಗುರುತು ಪರಿಚಯ ಇಲ್ಲದ ನಮ್ಮ ನಡುವೆ ಅದ್ಯಾವಾಗ ಪ್ರೀತಿಯ ಬೇರು ಭದ್ರವಾಗಿ ಬೇರೂರಿತು ಅಂತ ನನಗೆ ತಿಳಿಯಲೇ ಇಲ್ಲಾ. ನನ್ನ ಖಾಲಿ ಹೃದಯ ಮತ್ತೆ ಮಳೆಗೆ ನೆನೆದಂತಾಯಿತು ಇದಕ್ಕೆ ಕಾರಣ ಅವಳ ನಿಷ್ಕಲ್ಮಶವಾದ ನಗು.

ಕ್ರಷ್ ಎಂದರೆ ಇದೇನಾ!
ಮನದ ಮೂಲೆಯಲ್ಲಿ ಸಣ್ಣದಾಗಿ ಪ್ರೀತಿಯ ಕಿಡಿ ಹೊತ್ತಿದೆ ಅನಿಸುತ್ತುದೆ. ಅವತ್ತು ಓರೆಗಣ್ಣಿನಲ್ಲಿ ನೋಡಿ ನಕ್ಕಿದ್ದು ನನ್ನ ಕಣ್ಣಿಗೆ ಈಗಲೂ ಹಸಿರಾಗಿದೆ ನೀನು ಅವತ್ತು ಬೀರಿದ ನೋಟದಿಂದ ನಿನ್ನ ಮೇಲೆ ಕ್ರಷ್ ಆಗಿದೆ. ಅದೇಕೆ ನನ್ನ ಮೇಲೆ ರೆಗಾಡ್ತಿಯಾ…? ಸಂಜೆ ಮೆಸೇಜ್ ಮಾಡಿ ಮೃದುವಾಗಿ ಮಾತಾಡ್ತಿಯ, ನಾನು ಏನಾದರೂ ಹೇಳಿದ್ರೆ ಕೋಪಿಸಿಕೊಳ್ತಿಯ, ನಿನ್ನ ಸಮಾಧಾನ ಮಾಡೊದೇ ನನ್ನ ಕೆಲಸವಾಗಿಬಿಟ್ಟಿರೂ ಕೂಡಾ ನೀನು ಕೋಪಿಸಿಕೊಂಡಾಗ ಬಹಳ ಚಂದ ಕಾಣ್ತಿಯ.

ಇತ್ತಿಚೆಗಂತೂ ಸುಮ್ಮನೆ ಕುಳಿತಾಗಲೆಲ್ಲಾ ನೀನೇ ನೆನಪಾಗ್ತಿಯ, ಕನಸಲ್ಲಿ ಬಂದು ನಿದ್ರೆ ಹಾಳು ಮಾಡುವೆ, ಇದನ್ನ ನಿನ್ನ ಬಳಿ ಹೇಳಲು ನನಗೆ ಹಿಂಜರಿಕೆ ಯಾಕೆಂದರೆ ಬೈದು ಮಾತು ನಿಲ್ಲಿಸಿ ಬಿಡ್ತಿಯೋ ಎಂಬ ಭಯ. ನಾವು ಯಾರಲ್ಲೂ ಯಾರ ಬಗ್ಗೆಯೂ ದೂರು ಹೇಳುವಹಾಗಿಲ್ಲಾ. ಎಲ್ಲಾ ಭಾವಗಳು ನಮ್ಮ ಹೃದಯದಲ್ಲೇ ಇವೆ ನಮ್ಮ ಹೃದಯದಲ್ಲೇ ಬಂದಿಯಾಗುತ್ತವೆ. ನನಗಂತೂ ಪ್ರತಿ ಕ್ಷಣದಲ್ಲೂ ನಿನ್ನದೆ ನೆನಪು, ಪ್ರತಿ ಭಾವದಲ್ಲೂ ನಿನ್ನದ್ದೇ ಹಂಬಲ. ಏನೇ ಇರಲಿ ನಮ್ಮಿಬ್ಬರ ಈ ಮಧುರ ಬಾಂಧವ್ಯಕ್ಕೆ ಕೊನೆಯೇ ಇಲ್ಲಾ. ಇಂತಿ ನಿನ್ನ ಬಾಂಧವ್ಯಕ್ಕಾಗಿ ಕಾಯುತ್ತಿರುವ ಹುಡುಗ.

Leave a Reply

Your email address will not be published. Required fields are marked *