Saturday, 10th May 2025

ಮದುವೆ ಮಾರುಕಟ್ಟೆಯ ತಿಪ್ಪರಲಾಗ

ಬೈಂದೂರು ಚಂದ್ರಶೇಖರ ನಾವಡ

ಅಯ್ಯೋ ಕಳೆದ ನಾಲ್ಕು ವರ್ಷದಿಂದ ಒಂದೇ ಕಂಪೆನಿಯಲ್ಲಿ ಇದ್ದೀಯ.. ನಿನಗೆ ಯಾರು ಹೆಣ್ಣು ಕೊಡುತ್ತಾರೆ..? ಎನ್ನುವ ಪ್ರಶ್ನೆಯನ್ನು ಇಂದಿನ ಕೆಲವು ಯುವಕರು ಎದುರಿಸಬೇಕಾಗಿದೆ.

ಸುಮಾರು ನಾಲ್ಕು ದಶಕಗಳ ಹಿಂದೆ ನಾವು ಚಿಕ್ಕದವರಿದ್ದಾಗ ನಮ್ಮ ಅಪ್ಪಯ್ಯ ‘ನೀನೇನ್ ಮೈಸೂರ್ ಮಹಾರಾಜರ ಮಗ ಅಲ್ಲ . ಸರಿಯಾಗಿ ಓದಿದ್ರೆ ಬ್ಯಾಂಕೋ ಅತ್ವಾ ಏನಾರೂ ಗೌರ್ಮೆಂಟ್ ಚಾಕರಿ ಸಿಕ್ಕುಗ್, ಇಲ್ಲ ಅಂದ್ರೆ ಹೋಟ್ಲ್ ಗ್ಲಾಸ್ ತೋಳ್ಯುಕ್ ಹೋಯ್ಕಾ … ನಂಗೇನ್ ತೊಂದ್ರೆ ಇಲ್ಲ. ಯಾವುದ್ ಅಕ್ಕ್ ನೀನೇ ಕಾಣ್ ಅಕಾ..’ ಅನ್ನುತ್ತಿದ್ದರು.

ಸ್ವತಹ ಹಲವು ವರ್ಷ ಬೆಂಗಳೂರಲ್ಲಿ ಹೋಟೇಲಲ್ಲಿ ದುಡಿದು ಊರಿಗೆ ಮರಳಿದವ ರಾದ್ದರಿಂದ ಅದು ಅವರ ಅನುಭವವೂ ಆಗಿತ್ತು. (ಸರಿಯಾಗಿ ಓದದ ತಪ್ಪಿಗೆ ತನಗೆ ಹೋಟೇಲು ಮಾಣಿಯ ಕಷ್ಟ ಎದುರಿಸಬೇಕಾಯಿತು ಎನ್ನುವ ಭಾವ ಇರಬಹುದು!)
ನಮ್ಮ ಕರಾವಳಿ ಭಾಗದಲ್ಲಿ ಆಗ ಮಂಡೆ ಇದ್ದವರಿಗೆ ಬ್ಯಾಂಕ್ (ಓದಿನಲ್ಲಿ ಚುರುಕು), ಇಲ್ಲದವರಿಗೆ (ಹಿಂದೆ) ಹೋಟೇಲ್ ಉದ್ಯೋಗ ಎನ್ನುವ ಧಾರಣೆ ಇತ್ತು. ಹೋಟೇಲು ಡಿಪಾರ್ಟಮೆಂಟಲ್ಲೂ ಅದೃಷ್ಟ ಇದ್ದವನಿಗೆ ಸಾಹುಕಾರಿಕೆ ಇಲ್ಲದವರಿಗೆ ಗ್ಲಾಸ್
ತೊಳೆ ಯುವ ಪದವಿ ಎನ್ನುವ ಸ್ಥಿತಿ ಇತ್ತು !

ಹಾಗಾಗಿ ಬ್ಯಾಂಕೋ ಅಥವಾ ಯಾವುದೋ ಸರ್ಕಾರಿ ಉದ್ಯೋಗದಲ್ಲೋ ಇದ್ದವರನ್ನು ವರಿಸಲು ಹುಡುಗಿಯರು ಸುಲಭವಾಗಿ ಒಲಿಯುತ್ತಿದ್ದರು. ಯಾವುದಾದರೂ ಮೋಟು ನೌಕರಿ ಇದ್ದವನಿದ್ದರೆ ಹೇಳಿ ಎನ್ನುತ್ತಿದ್ದರು ಕನ್ಯಾ ಪಿತೃಗಳು. ಹಾಗಾಗಿ ಆಗ ಕನ್ಯೆ ಯರಿಗೆ ವರನ ಆಯ್ಕೆಯಲ್ಲಿ ಸೀಮಿತ ಸ್ವಾತಂತ್ರ್ಯ ಇತ್ತು. ಹುಡುಗನ ಸ್ವಭಾವ, ವ್ಯಕ್ತಿತ್ವ ಎಲ್ಲಕ್ಕಿಂತ ಆತನ ನೌಕರಿ ಏನು ಎನ್ನುವುದು ಹೆವ್ವಿ ವೈಟ್ ಪ್ರಶ್ನೆ ಆಗಿತ್ತು.

ಮದುವೆ ಹುಡುಗನ ಜತೆಯಲ್ಲಿ ಅಲ್ಲ, ಆತನ ಬ್ಯಾಂಕ್ ಉದ್ಯೋಗದ ಜತೆಯಲ್ಲೋ ಎನ್ನುವಷ್ಟು ‘ಬ್ಯಾಂಕ್ ಜಾಬ್’ ತನ್ನ ಅಧಿ ಪತ್ಯ ಸ್ಥಾಪಿಸಿಕೊಂಡು ಬಿಟ್ಟಿತ್ತು! ಹುಡುಗ ಬ್ಯಾಂಕಿನಲ್ಲಿದ್ದಾನೆ ಎನ್ನುವಾಗ ಹೆತ್ತವರ ಬಾಯಿ ಮೊರದಷ್ಟು ಅಗಲ ವಾಗುತ್ತಿತ್ತು! (ಈಗ ಹೇಗೆ ಅಮೆರಿಕದಲ್ಲಿದ್ದಾನೆ ಎನ್ನುವಾಗ ಆಗುತ್ತದೋ ಅಷ್ಟು ಅಗಲ) ವರನ ಕಡೆಯವರೋ ವಾರವಿಡೀ ದಿನ ಒಂದಕ್ಕೆ ಒಂದೊಂದು ಕಡೆ ಖಾರಾಬಾತ್ -ಕೇಸರಿಬಾತ್ ತಿಂದು ವಧುವಿನ ಇಂಟರ್‌ವ್ಯೂ ಮಾಡಿ ಕನ್ಯಾ ಪಿತೃಗಳನ್ನು ತುದಿ ಗಾಲಲ್ಲಿ ನಿಲ್ಲಿಸಿ ಮುಂದಿನ ಮನೆಗೆ ಹೋಗುತ್ತಿದ್ದರು.

ಇದೀಗ ಮದುವೆಯ ಮಾರುಕಟ್ಟೆ ಹೇಗೆ ತಿಪ್ಪರಲಾಗ ಹಾಕಿದೆ ನೋಡಿ. ಅಂದು ಕಿರೀಟ ಕಟ್ಟಿಕೊಂಡ ಬ್ಯಾಂಕ್ ಇಂದು  ಬಡ ಪಾಯಿ’ ಯಾಗಿದೆ. ‘ಬ್ಯಾಂಕಾ… ಬ್ಯಾಡ ಬಿಡಿ’ ಎನ್ನುವಷ್ಟು ಬ್ಯಾಂಕ್ ಉದ್ಯೋಗ ತನ್ನ ಚಾರ್ಮ್ ಕಳೆದುಕೊಂಡಿದೆ. ಐಟಿ-ಬಿಟಿ ವಲಯದ ಕ್ರಾಂತಿ ಗಂಡು-ಹೆಣ್ಣಿನ ನಡುವಿನ ಅಂತರವನ್ನೂ ಬಹಳಷ್ಟು ತೊಡೆದು ಹಾಕಿದೆ. ಹೆಚ್ಚು ಉದ್ಯೋಗ ಬದಲಾಯಿಸಿ ದವ ಬುದ್ಧಿವಂತ ಎನ್ನುವ ಹೊಸ ಕಾನ್ಸೆಪ್ಟ್ ಮುನ್ನೆಲೆಗೆ ಬಂದಿದೆ. ‘ಅಯ್ಯೋ ಕಳೆದ ನಾಲ್ಕು ವರ್ಷ ದಿಂದ ಒಂದೇ ಕಂಪೆನಿಯಲ್ಲಿ ಇದ್ದೀಯ.. ನಿನಗೆ ಯಾರು ಹೆಣ್ಣು ಕೊಡುತ್ತಾರೆ..?’ ಎನ್ನುವ ಪ್ರಶ್ನೆ ಯುವಕರಿಗೆ ಕಾಡುವಂತಾಗಿದೆ.

ನಾಲ್ಕು ದಶಕದ ಹಿಂದಿನ ಘಟನೆ. ಹಿರಿಯರೊಬ್ಬರು ತನ್ನ ಮಗನಿಗೆ ಹೆಣ್ಣು ಕೊಟ್ಟ ಕನ್ಯೆಯ ಮನೆಯವರಿಗೆ ಮತ್ತು ಆಕೆಯ ಸಹೋದರನಿಗೆ ವಿನೀತರಾಗಿ ಕೈ ಮುಗಿದು ‘ನೀವು ನಿಮ್ಮ ತಂಗಿಯನ್ನು ಕೊಟ್ಟು ನಮ್ಮನ್ನು ಉಪಕರಿಸಿದಿರಿ’ ಎಂದು ಅಂದಿನ ಕಾಲಕ್ಕೆ ಹೊರತಾದ ಮಾತನ್ನು ಆಡಿದ್ದು ಕಂಡು ಬೆರಗಾಗಿದ್ದೆ. ಅಂದು ಅದು ಅವರ ಒಳ್ಳೆಯತನ ಎಂದು ಮನಸಾರೆ ಅವರ ಅನುಕರಣೀಯ ಗುಣವನ್ನು ಮೆಚ್ಚಿಕೊಂಡಿದ್ದೆ. ವರ್ತಮಾನದತ್ತ ದೃಷ್ಟಿ ನೆಟ್ಟಾಗ ಒಮ್ಮೊಮ್ಮೆ ಯಾಕೋ ಅನಿಸುತಿದೆ.. ಆ ಹಿರಿಯರು ಅಂದೇ ಹಲವು ವರ್ಷಗಳ ಮುಂದಿನ ಭವಿಷ್ಯವನ್ನು ಕಂಡಿದ್ದರೇ…? ನೆನಪಿಡಿ ಮೇಲೆ ಹಾರಿದ್ದು ಕೆಳಗೆ ಬೀಳಲೇ ಬೇಕಲ್ಲವೇ?