Saturday, 10th May 2025

ಇಳಿಜಾರುಗಳ ವಾಗಮಣ್

ಮೋದೂರು ಮಹೇಶಾರಾಧ್ಯ

ಕಣ್ಣು ಕಾಣಿಸುವಷ್ಟು ದೂರವೂ ಹಸಿರು ಹೊದ್ದು ಮಲಗಿರುವ ಹುಲ್ಲುಗಾವಲು, ಆಳವಾದ ಕಣಿವೆಗಳು, ಸಮೃದ್ಧ ಚಹಾ ತೋಟಗಳು, ಪೈನ್ ಮರಗಳು, ಸದಾ
ಮೋಡಗಳರಾಶಿ ಎಂತಹ ಅರಸಿಕರನ್ನೂ ಕ್ಷಣಕಾಲ ಲೌಕಿಕದಾಚೆಯ ರಮ್ಯಲೋಕಕ್ಕೆ ಸೆಳೆದೊಯ್ಯಬಲ್ಲ ಜಲಪಾತಗಳು, ಆಗಾಗ್ಗೆ ಮೂಡಿ ಮರೆಯಾಗುವ ಕಾಮನಬಿಲ್ಲು, ಪ್ರವಾಸಿಗರಿಗೆ ಆಹ್ಲಾದಕರ ತಂಗಾಳಿ ಬೀಸುತ್ತಾ ಮುದಗೊಳಿಸುವ ಈ ತಾಣ ವಾಗಮಣ ಗಿರಿಧಾಮ.

ಸೌಂದರ್ಯದ ನೆಲೆವೀಡಾದ ಇದನ್ನು ಭಾರತದ ಸ್ಕಾಟ್ಲೆಂಡ್ ಎಂದೂ ಕರೆಯಲಾಗುತ್ತದೆ. ಇದನ್ನು ಜಗತ್ತಿನ ಅತ್ಯಂತ ಆಕರ್ಷಕ 50 ಗಿರಿಧಾಮಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. 1926 ರಲ್ಲಿ ವಾರ್ಲ್ಟರ್ ಡಂಕನ್ ಎಂಬಾತ ಇಲ್ಲಿ ಟೀ ತೋಟದ ಕೃಷಿ ಪ್ರಾರಂಭಿಸುವುದರೊಂದಿಗೆ ಇದು ಹೊರ ಜಗತ್ತಿಗೆ ತೆರೆದುಕೊಂಡಿತು. ಕೇರಳ ರಾಜ್ಯದ ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳ ಗಡಿಭಾಗಕ್ಕೆ ಹೊಂದಿಕೊಂಡಂತಿರುವ ಈ ಸ್ಥಳ 1100 ಮೀಟರ್ ಎತ್ತರದಲ್ಲಿದೆ.

ನವ ದಂಪತಿಗಳ ಮಧು ಚಂದ್ರಕ್ಕೆ ಸೂಕ್ತವಾದ ಜಾಗ ಇದಾಗಿದೆ. ಈ ಗಿರಿಧಾಮದ ಸನಿಹದ ಚಾರಣ, ಪ್ಯಾರಾಗ್ಲೈಡಿಂಗ್‌ದಂತಹ ಸಾಹಸ ಕ್ರೀಡೆ ಗಳನ್ನು ಏರ್ಪಡಿಸಿರುವುದರಿಂದ ಇದು ಯುವಕ ಯುವತಿಯರ ಆಕರ್ಷಣೆಯ ಕೇಂದ್ರವಾಗಿದೆ. ಕೇರಳ ರಾಜ್ಯದ ಪ್ರವಾಸೋದ್ಯಮ ಇಲಾಖೆ ಪ್ರತೀವರ್ಷ ಇಲ್ಲಿ ಅಂ.ರಾ. ಪ್ಯಾರಾಗ್ಲೈಡಿಂಗ್ ಉತ್ಸವವನ್ನು ಹಮ್ಮಿಕೊಳ್ಳುತ್ತದೆ. ಇಲ್ಲಿನ ಇಡೀ ಗಿರಿ ಪಂಕ್ತಿಯನ್ನು ಆವರಿಸಿಕೊಂಡಿರುವ ಹುಲ್ಲು ಒಂದು ವಿಶೇಷ ಆಕರ್ಷಣೆ. ವಾಗಮಣ್ ಸುತ್ತ ಮುತ್ತ ಹಲವು ಪ್ರವಾಸಿ ಕೇಂದ್ರಗಳಿವೆ.

ತಂಗಲ್ ಪ್ಯಾರಾ, ನಾಗಮಣ್ ಸರೋವರ, ಮುರುಗನ್ ಮಾಲಾ, ಮುಂಡಕ್ಕಯಂ ಘಾಟ, ಮಾರ್ಮಾಲ ಜಲಪಾತ, ಪೈನ್ ಅರಣ್ಯ ಧಾಮ, ಪಟ್ಟುಮಲೈ ಚರ್ಚ್, ಬಾರ್ರ‍ೆನ್ ಹಿಲ್ ಹುಲ್ಲುಗಾವಲು, ಇಡುಕ್ಕಿ ಜಲಾಶಯ,ಉಲುಪೂನಿ ಅಭಯಾರಣ್ಯ, ಕುರಿಸುಮಾಲಾ ಆಶ್ರಮ ಮುಂತಾದ ಸ್ಥಳಗಳಿವೆ. ವಾಗಮಣ್ ಕೊಚ್ಚಿಯಿಂದ 75 ಕಿಮೀ ಮತ್ತು ಕೊಟ್ಟಾಯಂ ನಿಂದ 65 ಕಿಮೀ ದೂರದಲ್ಲಿದೆ. ತಂಗಲು ಲಾಜ್ ಮತ್ತು ಹೋಂ ಸ್ಟೇ ಸೌಲಭ್ಯವಿದೆ.

Leave a Reply

Your email address will not be published. Required fields are marked *