Saturday, 10th May 2025

ನದೀಂ ಮತ್ತು ನೀರಜ್‌: ಯುರೋಪಿಯನ್ನರ ಪಾರಮ್ಯ ಮುರಿದವರು !

ಶಶಿಧರ ಹಾಲಾಡಿ

ಜಾವೆಲಿನ್ ಎಸೆತ ಕ್ರೀಡೆಯಲ್ಲಿ, ಒಮ್ಮೆಗೇ ಸಂಚಲನ ಸೃಷ್ಟಿಯಾಗಿದೆ. ಇದೇ ಮೊದಲ ಬಾರಿಗೆ, ಭಾರತ ಮತ್ತು ಪಾಕಿಸ್ತಾನ ದೇಶಗಳು ಈ ಕ್ರೀಡೆಯಲ್ಲಿ ಒಟ್ಟಿಗೇ ಒಲಿಂಪಿಕ್ಸ್ ಪದಕ ಪಡೆದುಕೊಂಡಿವೆ. ಆರಂಭದಿಂದಲೂ ಯುರೋಪಿಯನ್ ದೇಶಗಳೇ ಪ್ರಾಬಲ್ಯ ಸಾಧಿಸಿದ, ಪದಕಗಳನ್ನು ಬಾಚಿಕೊಳ್ಳುತ್ತಿದ್ದ ಈ ಕ್ರೀಡೆಯಲ್ಲಿ, ಭಾರತ ಉಪಖಂಡದ ಎರಡು ದೇಶಗಳು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು  ಗೆದ್ದಿರು ವುದು ನಿಜಕ್ಕೂ ವಿಶೇಷ ಬೆಳವಣಿಗೆ, ಸಾಧನೆ. ಈ ನಡುವೆ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ನಮ್ಮ ದೇಶದ ನೀರಜ್ ಚೋಪ್ರಾ ಈ ಸಲ ಬೆಳ್ಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾದ ವಿದ್ಯಮಾನವೂ ನಡೆದಿದೆ. ಈ ಸಲದ ಒಲಿಂಪಿಕ್ಸ್‌ನಲ್ಲಿನ ದೊರಕಿದ ಈ ಫಲಿತಾಂಶಗಳು, ಜಾವಿಲಿನ್ ಎಸೆತ ಕ್ರೀಡೆಯ ಕುರಿತು ನಮ್ಮ ದೇಶದ ಯುವಕ್ರೀಡಾಪಟುಗಳ ಗಮನ ಸೆಳೆದಿದ್ದಂತೂ ಸತ್ಯ.

ಒಲಿಂಪಿಕ್ಸ್ ಕ್ರೀಡಾಕೂಟ ಪ್ರಾರಂಭವಾದ ನಂತರ, ಇದುವರೆಗೆ ಜಾವೆಲಿನ್ ಎಸೆತ ಕ್ರೀಡೆಯಲ್ಲಿ ೬೯ ಪದಕಗಳನ್ನು ನೀಡಲಾಗಿದೆ; ಇವುಗಳ ಪೈಕಿ ೩೩ ಪದಕಗಳು ಯುರೋಪಿನ ಫಿನ್ಲೆಂಡ್, ನಾರ್ವೆ ಮತ್ತು ಸ್ವೀಡನ್ (ನಾರ್ಡಿಕ್ ದೇಶಗಳು) ಪಾಲಾಗಿವೆ. ಉಳಿದಂತೆ ಜರ್ಮನಿ, ಹಂಗೆರಿ, ಜೆಕ್, ರಷ್ಯಾ ಮೊದಲಾದ ಯುರೋಪಿಯನ್ ದೇಶಗಳು ಹೆಚ್ಚಿನ ಪದಕಗಳನ್ನು ಗೆದ್ದಿವೆ.

೨೦೨೦ರಲ್ಲಿ, ಮೊದಲ ಬಾರಿಗೆ ಈ ಚಿತ್ರಣ ಸ್ವಲ್ಪ ಬದಲಾಯಿತು. ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ, ನಮ್ಮ ದೇಶದ ಹೊಸ ತಾರೆಯ ಉದಯವಾಯಿತು. ಅವರೇ ನೀರಜ್ ಚೋಪ್ರಾ. ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಪಡೆದರು. ಬೆಳ್ಳಿ ಮತ್ತು ಕಂಚಿನ ಪದಕಗಳು ಜೆಕ್ ರಿಪಬ್ಲಿಕ್ (ಯುರೋಪ್) ಪಾಲಾಯಿತು. ಒಲಿಂಪಿಕ್ಸ್ ಕ್ರೀಡಾಕೂಟಗಳು ಆರಂಭಗೊಂಡು ಶತಮಾನವೇ ಕಳೆದಿದ್ದರು, ಇದೊಂದು ಕ್ರೀಡೆಯಲ್ಲಿ ತನಕ ನಮ್ಮಲ್ಲಿ ಸಾಕಷ್ಟು ಅಜ್ಞಾನ! ಈಗಲೂ, ನಮ್ಮಲ್ಲಿನ ಕೆಲವರಿಗೆ ಜಾವೆಲಿನ್ ಎಸೆತಕ್ಕೂ ಶಾಟ್‌ಪುಟ್ ಎಸೆತಕ್ಕೂ ಸ್ಪಷ್ಟ ವ್ಯತ್ಯಾಸ ಗೊತ್ತಿಲ್ಲ! ಮಾಹಿತಿ ಕೊರತೆಯೇ ಕಾರಣ. ಇಂತಹ ಸ್ಥಿತಿಯಲ್ಲಿ, ೨೦೨೦ರಲ್ಲಿ ನೀರಜ್ ಚೋಪ್ರಾ ಅವರು, ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಜಾವೆಲಿನ್ ಎಸೆತದಲ್ಲಿ ಚಿನ್ನ ತಂದುಕೊಟ್ಟದ್ದು ಅತ್ಯಪರೂಪದ ಸಾಧನೆ ಎಂದರೆ ಅತಿಶಯೋಕ್ತಿ ಎನಿಸದು. ಅದರಲ್ಲೂ ಮುಖ್ಯವಾಗಿ, ಯುರೋಪಿ ಯನ್ ಕ್ರೀಡಾಪಟುಗಳ ಪಾರಮ್ಯ ಇದ್ದ ಈ ಕ್ರೀಡೆಯಲ್ಲಿ, ಅವರನ್ನು ಎದುರಿಸಿ, ನಮ್ಮ ದೇಶದವರು ಚಿನ್ನದ ಪದಕ ಗೆಲ್ಲುವುದಿದೆಯಲ್ಲಾ, ಅದೊಂದೊ ಮಹಾನ್ ಸಾಧನೆಯೇ ಸರಿ.

೨೦೨೪ರ ಪ್ಯಾರಿಸ್ ಒಲಿಂಪಿಕ್ಸ್ ಆರಂಭವಾಗುವ ಮುಂಚೆಯೇ, ನೀರಜ್ ಚೋಪ್ರಾ ಮೇಲೆ ಎಲ್ಲರ ನಿರೀಕ್ಷೆ ಇತ್ತು; ಈ ಸಲವೂ ಅವರು ಚಿನ್ನದ ಪದಕ ಗೆಲ್ಲುತ್ತಾರೆ ಎಂಬ ಭರವಸೆ, ಆಸೆ, ಕಾತುರ, ಅತಿಯಾದ ನಿರೀಕ್ಷೆ! ನೀರಜ್ ಅವರು ನಮ್ಮೆಲ್ಲರ ನಿರೀಕ್ಷೆಯಿಂದಾಗಿ ಅತಿಯಾದ ಒತ್ತಡಕ್ಕೆ ಎದುರಾದರೋ ಏನೊ! ಚಿನ್ನದ ನಿರೀಕ್ಷೆಯಲ್ಲಿರುವ ಭಾರತದ ಪಾಲಿನ ಚಿನ್ನದ ಹುಡುಗ, ಪ್ಯಾರಿಸ್ ಒಲಿಂಪಿಕ್ ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕೊನೆಯ ಪಕ್ಷ ಇದೊಂದು ವಿಭಾಗದಲ್ಲಾದರೂ ಚಿನ್ನ ಲಭಿಸಿ, ದೇಶದ ಮಾನ ಉಳಿದೀತು, ಕನಿಷ್ಟ ಒಂದು ಚಿನ್ನದ ಪದಕ ಗೆದ್ದು, ಪದಕ ಪಟ್ಟಿಯಲ್ಲಿ ತುಸು ಮೇಲಿನ ಸ್ಥಾನಕ್ಕೆ ಏರಬಹುದು ಎಂಬ ಭಾರತೀಯರ ಆಸೆ ಭಗ್ನವಾಯಿತು.

ಹಾಗೆ ನೋಡಿದರೆ, ಇದರ ಜತೆಯಲ್ಲೇ, ನೀರಜ್ ಚೋಪ್ರಾ ಅವರ ಮೇಲೆ ಹೆಚ್ಚು ಒತ್ತಡ ಹೇರಿದ್ದು ಇನ್ನೊಂದೇ ಘಟನೆ! ೨೦೧೬ರಿಂದ ಜತೆ ಜತೆಯಾಗಿ ಅಲ್ಲಲ್ಲಿ ಸ್ಪರ್ಧಿಸುತ್ತಿದ್ದ, ಯಾವಾಗಲೂ ನೀರಜ್‌ಗಿಂತ ಕೆಳಗಿನ ಸ್ಥಾನದಲ್ಲಿದ್ದ ಪಾಕಿಸ್ತಾನದ ಅರ್ಷದ್ ನದೀಂ ಅವರು, ಮೊನ್ನೆ ನಡೆದ ಒಲಿಂಪಿಕ್ಸ್ ಫೈನಲ್ಸ್‌ನಲ್ಲಿ ೯೨.೯೭ ಮೀಟರ್ ದೂರ ಎಸೆದರು! ಪಕ್ಕದಲ್ಲೇ ನಿಂತಿದ್ದ ನೀರಜ್ ಚೋಪ್ರಾ ಅವರ ಏಕಾಗ್ರತೆಗೆ, ಇದರಿಂದಾಗಿ, ಏಕಾಏಕಿ ಭಂಗವಾಯಿತು!

ತನ್ನ ಎದುರೇ ಬೆಳೆದು ಬಂದಿದ್ದ ಹುಡುಗ ಅಷ್ರ- ನದೀಂ, ಸುಲಲಿತವಾಗಿ ೯೨.೯೭ ಮೀಟರ್ ದೂರ ಎಸೆದ ತಕ್ಷಣ, ನೀರಜ್ ಅಪಾರ ಒತ್ತಡಕ್ಕೆ ಒಳಗಾದರು. ನೀರಜ್ ಚೋಪ್ರಾ ೮೯.೫ ಮೀಟರ್ ಎಸೆದಿದ್ದರು ನಿಜ, ಆದರೆ, ತನ್ನ ಕಣ್ಣೆದುರೇ ತನ್ನ ಚಿನ್ನದ ಪದಕದ ಸ್ಥಾನವು ೩.೫ ಮೀಟರ್‌ಗಿಂತಲೂ ಹೆಚ್ಚು
ಅಂತರದಿಂದ ತಪ್ಪುತ್ತಿದೆ ಎಂಬ ವಾಸ್ತವವು ಅವರ ಮೇಲೆ ಒತ್ತಡ ಹೇರಿತು.

ಫೈನಲ್‌ನ ಒಟ್ಟು ಆರು ಅವಕಾಶಗಳಲ್ಲಿ, ನಾಲ್ಕು ಬಾರಿ ಎಸೆಯುವಾಗ, ಗೆರೆ ದಾಟಿ ಫೂಲ್ ಆದರು. ಸದ್ಯ ಭಾರತೀಯರ ಭಾಗ್ಯ, ಆ ಒಂದು ಪ್ರಯತ್ನದಲ್ಲಿ ೮೯.೫ ಮೀಟರ್ ಎಸೆದು, ಬೆಳ್ಳಿಯನ್ನಾದರೂ ದೊರಕಿಸಿಕೊಟ್ಟರು. ಬಹುಷಃ ಮುಂದಿನ ಒಲಿಂಪಿಕ್ಸ್ ಕ್ರೀಡಾಕೂಟದ ವೇಳೆಗೆ ನೀರಜ್ ಚೋಪ್ರಾ, ನಿವೃತ್ತಿಯ ಹಂತಕ್ಕೆ ಬರುತ್ತಾರೋ ಏನೋ. ನೀರಜ್‌ಗಿಂತ ಸುಮಾರು ಮೂರು ಇಂಚು ಹೆಚ್ಚು ಎತ್ತರವಿರುವ (ಇದೂ ಸಹ ಜಾವೆಲಿನ್ ಎಸೆತದಲ್ಲಿ ಬಹು
ನಿರ್ಣಾಯಕ ಅಂಶ) ನದೀಂ ಈಗ ಬರೆದ ದಾಖಲೆಯನ್ನು ನೀರಜ್ ಮುರಿಯುವುದು ಕಷ್ಟವೇ ಸರಿ.

ನೀರಜ್ ಚೋಪ್ರಾ ಅವರನ್ನು ಎರಡನೆಯ ಸ್ಥಾನಕ್ಕೆ ತಳ್ಳಿದ ಅರ್ಷ- ನದೀಂ ಅವರ ಕ್ರೀಡಾ ಚರಿತ್ರೆ ಸ್ವಾರಸ್ಯಕರವಾಗಿದೆ. ೬ ಅಡಿ ೪ ಇಂಚು ಎತ್ತರವಿರುವ
ನದೀಂ, ಇದೊಂದು ಚಿನ್ನದ ಪದಕ ಗೆಲ್ಲುವ ಮೂಲಕ ಅವರ ದೇಶದವರಿಗೆ ಅಪಾರ ಸಂತಸ ತಂದುಕೊಟ್ಟಿದ್ದಾರೆ. ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಯಲ್ಲಿ ಆ ದೇಶಕ್ಕೆ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಚಿನ್ನದ ಪದಕ ಬಂದಿದೆ. ಪಾಕಿಸ್ತಾನದ ಪಂಜಾಬ್‌ನ ಪಟ್ಟಣವೊಂದರಲ್ಲಿ ಜನಿಸಿದ ಅಷ್ರಫ್ ಅವರಿಗೆ ಅವರ ತಂದೆ ಕ್ರೀಡಾಪಟುವಾಗಲು ಪ್ರೋತ್ಸಾಹ ನೀಡಿದರು. ಕೋಚ್ ಒಬ್ಬರ ಸಹಾಯದಿಂದ ಜಾವೆಲಿನ್ ಎಸೆತದಲ್ಲಿ ಪರಿಣತಿ ಪಡೆದರು.

೨೦೨೦ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಪಡೆದರೆ, ನದೀಮ ೫ನೆಯ ಸ್ಥಾನಕ್ಕೆ ತೃಪ್ತಿ ಪಡೆದರು. ಪಾಕಿಸ್ತಾನದಲ್ಲಿ ಕ್ರೀಡಾ ತರಬೇತಿಗೆ ಹೆಚ್ಚು ಸೌಲಭ್ಯಗಳಿಲ್ಲ; ನೀರಜ್ ಚೋಪ್ರಾ ಅವರಿಗೆ ಪಾಟಿಯಾಲಾ (ಪಂಜಾಬ್)ನ ನೇತಾಜಿ ಸುಭಾಷ್ ಕ್ರೀಡಾ ಅಕಾಡೆಮಿಯಲ್ಲಿ ತರಬೇತಿ
ಪಡೆಯುವ ಅವಕಾಶ ದೊರಕಿತ್ತು. ಅಷ್ರಫ್ ನದೀಂ ಅವರು ತಮ್ಮ ಊರಿನ ಸಾಮಾನ್ಯ ಆಟದ ಮೈದಾನಗಳಲ್ಲಿ ಜಾವೆಲಿನ್ ಎಸೆದು ಪ್ರಾಕ್ಟೀಸ್ ಮಾಡು ತ್ತಿದ್ದರು ಎಂದು ಅಲ್ಲಿನ ಮಾಧ್ಯಮಗಳು ಬರೆದಿವೆ. ಕ್ರಿಕೆಟ್ ಆಟಗಾರನಾಗಬೇಕೆಂಬ ಕನಸು ಹೊಂದಿದ್ದ ನದೀಮ್, ಜಾವೆಲಿನ್ ಎಸೆತಕ್ಕೆ ಹೊರಳಿ ಕೊಂಡಿದ್ದೇ, ಅವರನ್ನು ಪಾಕಿಸ್ತಾನದ ಬಂಗಾರದ ಮನುಷ್ಯನನ್ನಾಗಿಸಿತು!

ಚಿನ್ನದ ಪದಕದಿಂದ ವಂಚಿತರಾದ ನೀರಜ್ ಚೋಪ್ರಾ ಅವರು ‘ದೈಹಿಕ ನೋವಿನಿಂದ ಬಳಲುತ್ತಿದ್ದೆ, ಅದಕ್ಕೆ ಚಿಕಿತ್ಸೆ ಪಡೆದರೆ ಇನ್ನಷ್ಟು ಸಾಧಿಸಬಲ್ಲೆ; ಪ್ಯಾರಿಸ್‌ನಲ್ಲಿ ಜಾವೆಲಿನ್ ಎಸೆಯುವಾಗ ಸ್ನಾಯುನೋವಿನತ್ತ ಗಮನ ಹೋಗುತ್ತಿತ್ತು’ ಎಂಬರ್ಥದ ಮಾಗುತಳನ್ನಾಡಿದ್ದಾರೆ. ಆದರೆ, ಅವರ ಏಕಾಗ್ರತೆಗೆ ನಿಜವಾದ ಭಂಗ ಬಂದದ್ದೇ, ನದೀಂ ಅವರು ೯೨.೯೭ ಮೀಟರ್ ಎಸೆದಾಗ. ನೇರ ಪ್ರಸಾರದಲ್ಲಿ ಗಮನಿಸಿದಂತೆ, ನದೀಂ ಆ ಎಸೆತವನ್ನು ಎಸೆದ ತಕ್ಷಣ ನೀರಜ್ ಅವರು ವಿಚಲಿತರಾಗಿದ್ದು ಸ್ಪಷ್ಟವಾಗಿ ಕಾಣಿಸಿತು; ನಂತರದ ಅವರ ಎಲ್ಲಾ ಎಸೆತಗಳೂ ಫೂಲ್ ಆದವು! ಪಾಪ, ಅದರಲ್ಲಿ ನೀರಜ್ ಅವರ ತಪ್ಪಿಲ್ಲ, ೯೨.೯೭ಗಿಂತ ಹೆಚ್ಚು ದೂರ ಎಸೆಯಬೇಕು ಎಂಬ ಒತ್ತಡ ಹಾಗೆ ಮಾಡಿತ್ತು.

ಜಾವೆಲಿನ್ ಎಸೆತ ಎಂಬ ಕ್ರೀಡೆಗೆ ಒಲಿಂಪಿಕ್ಸ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಲಗ್ಗೆ ಇಟ್ಟಿವೆ; ಅದರ ಮೇಲಿದ್ದ ಯುರೋಪಿಯನರ ಹಿಡಿತಕ್ಕೆ ಇದೇ ಮೊದಲ ಬಾರಿ ಸವಾಲು ಎಸೆದಿವೆ. ಒಮ್ಮೆಗೇ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ತರುವ ಮೂಲಕ ಹೊಸ ದಾಖಲೆ ಬರೆದಿವೆ. ನಮ್ಮ ದೇಶದ ಯುವ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ಈ ಕ್ರೀಡೆಯತ್ತ ಹೆಚ್ಚಿನ ಗಮನ ಹರಿಸಲು ಈ ಅಪರೂಪದ ಸಾಧನೆಯು ಸ್ಪೂರ್ತಿ ತುಂಬುವುದರಲ್ಲಿ
ಸಂದೇಹ ವಿಲ್ಲ.

ದಾಖಲೆ ಹೇಗೆ ಬರೆದರು?
ಅಷ್ರಫ್ ನದೀಂ ಅವರು, ಈ ಒಲಿಂಪಿಕ್ಸ್‌ನಲ್ಲಿ ವಿಶ್ವದಾಖಲೆಯನ್ನು ಬರೆಯಲು ಹೇಗೆ ಸಾಧ್ಯವಾಯಿತು ಎಂಬುದರ ಬಗ್ಗೆ ಸಾಕಷ್ಟು ವಿಶ್ಲೇಷಣೆ
ನಡೆದಿದೆ. ನದೀಂ ಅವರು ೬ ಅಡಿ ೪ ಇಂಚು ಎತ್ತರವಿದ್ದಾರೆ; ಅವರ ತೂಕ ೯೫ ಕಿಲೊ; ಜಾವೆಲಿನ್ ಎಸೆತದಲ್ಲಿ ಇವೆರಡೂ ಪ್ರಮುಖ ಅಂಶಗಳು. ದೇಹದ
ಎತ್ತರ ಮತ್ತು ತೂಕದ ಸಹಾಯದಿಂದ, ಜಾವೆಲಿನ್ ಎಸೆಯುವಾಗ ಹೆಚ್ಚಿನ ಎತ್ತರದಲ್ಲಿ ಎಸೆದು, ದೂರಕ್ಕೆ ಕಳಿಸಲು ಸಾಧ್ಯ. ಎತ್ತರ ಜಾಸ್ತಿ ಇದ್ದವರು ಹೆಚ್ಚು ದೂರ ಓಡದೇ, ತಮ್ಮ ಜಾವೆಲಿನ್ ಎಸೆಯಬಹುದು. ಇದೂ ಸಹ ನದೀಂ ಅವರಿಗೆ ಸಹಕಾರಿ. ಕುತೂಹಲಕಾರಿ ವಿಚಾರವೆಂದರೆ, ಈ ಮುಂಚಿನ ಸುಮಾರು ೧೦ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ, ನೀರಜ್ ಚೋಪ್ರಾ ಅವರನ್ನು ಸೋಲಿಸಲು ನದೀಂರಿಂದ ಸಾಧ್ಯವಾಗಿರಲಿಲ್ಲ.

ಈಟಿ ಎಸೆತ
ಪುರಾತನ ಒಲಿಂಪಿಕ್ಸ್‌ನಲ್ಲಿ, ಸುಮಾರು ಕ್ರಿ.ಪೂ.೭೦೮ ರಿಂದಲೇ ಜಾವೆಲಿನ್ ಎಸೆತ ಸ್ಪರ್ಧೆ ಇತ್ತು. ಆಧುನಿಕ ಕಾಲದಲ್ಲಿ, ೧೮೮೦ರ ಸಮಯದಲ್ಲಿ ಫಿನ್ಲೆಂಡ್‌ನಲ್ಲಿ ಜಾವೆಲಿನ್ ಎಸೆತವು ಕ್ರೀಡೆಯಾಗಿ ಜನಪ್ರಿಯವಾಗಿತ್ತು. ಆದ್ದರಿಂದಲೇ, ೧೯೯೬ರ ತನಕ, ಒಲಿಂಪಿಕ್ಸ್ ನಲ್ಲಿ ಫಿನ್ಲೆಂಡ್ ಮತ್ತು ಅದರ ನೆರೆಯ
ದೇಶಗಳೇ ಅತಿ ಹೆಚ್ಚು ಪದಕಗಳನ್ನು ಗೆಲ್ಲುತ್ತಿದ್ದವು. ಜಾವೆಲಿನ್‌ನ್ನು ಕನ್ನಡದಲ್ಲಿ ಈಟಿ ಎನ್ನಬಹುದು. ಇದು ಈಟಿ ಎಸೆತದ ಸ್ಪರ್ಧೆ ಎಂದರೂ ಸರಿಯೇ.

Leave a Reply

Your email address will not be published. Required fields are marked *