Wednesday, 14th May 2025

ಇಜಯಾ ಓದಿನ ಅನುಭವ

ಚೈತ್ರಾ ಶಿವಯೋಗಿಮಠ

‘ನಮ್ಮನ್ನು ಪ್ರೀತಿಸುವವರ ಜೀವನದಲ್ಲಿ ನಾವು ಅತ್ಯಂತ ಅನಿವಾರ್ಯವಾದವರು ಎಂದು ನಮ್ಮನ್ನು ನಾವೇ ಮೂರ್ಖ ರನ್ನಾಗಿಸಿಕೊಳ್ಳುತ್ತಾ, ಕನಸುಗಳ ಬಲಿ ಕೊಡುವುದಕ್ಕಿಂತ ದೊಡ್ಡ ಕ್ರೌರ್ಯ ಬೇರೆ ಇಲ್ಲ’

ಒಂದು ಕ್ಷಣವೂ ಆಚೀಚೆ ನೋಡದಂತೆ ಓದಿಸಿಕೊಳ್ಳುವ ಕಾದಂಬರಿ ‘ಇಜಯಾ’. ಬಹಳ ದಿನಗಳ ಮೇಲೆ ಒಂದೇ ಗುಕ್ಕಿಗೆ ಓದಿ ಮುಗಿಸಿದ ಕಾದಂಬರಿ ಇದು. ಕಾದಂಬರಿಯ ಕಥಾ ನಾಯಕಿ ಇಜಯಾ ಪಾತ್ರ ನನಗೆ ಬಹಳಷ್ಟು ಕನೆಕ್ಟ್‌ ಆಯಿತು.

ಎಲ್ಲರಿಗೂ ಕನಸುಗಳಿರುತ್ತವೆ. ಆದರೆ ಪರಿಸ್ಥಿತಿಗಳು ಅಥವಾ ತಮ್ಮದೇ ಮಿತಿಗಳಿಂದಾಗಿ ಆ ಕನಸುಗಳು ಚಿಗುರುವುದಕ್ಕೂ
ಮುನ್ನವೇ ಕಮರಿ ಹೋಗುತ್ತವೆ. ಕೆಲವರಿಗೆ ಸುಶ್ರಾವ್ಯವಾಗಿ ಹಾಡುವುದು, ಮತ್ಯಾರಿಗೊ ನೃತ್ಯ ಕಲಿಯುವುದು, ಲೇಖಕ/ ಲೇಖಕಿ ಯಾಗುವುದು, ಕ್ರೀಡಾಪಟುವಾಗುವುದು ಹೀಗೇ ನಾನಾ ರೀತಿಯದು. ಆದರೆ ಯಾವುದೋ ಕಾರಣಗಳಿಂದ ಅಂತಹ ಕನಸುಗಳನ್ನು ನನಸು ಮಾಡಿಕೊಳ್ಳುವ ಯಾವ ಪ್ರಯತ್ನವನ್ನೂ ಕೆಲವರು ಮಾಡುವುದಿಲ್ಲ.

ಇಡೀ ಕಾದಂಬರಿಯ ಆಶಯ – ಕನಸುಗಳ ಬೆನ್ನಟ್ಟಿ ಮತ್ತು ವ್ಯರ್ಥವಾಗಿ, ಅದು ಇದು ಕಾರಣಗಳನ್ನು ಕೊಡುತ್ತ, ಇರುವ ಒಂದೇ ಜೀವನದಲ್ಲಿ ನಾವು ಯಾರಿಗೂ ಅನಿವಾರ್ಯ ಅಲ್ಲ ಅನ್ನುವುದನ್ನು ಮನಗಾಣಿರಿ ಎನ್ನುವುದು. ಜೀವನ ಕನಸುಗಳ ಬೆಂಬತ್ತಿದ ನಡಿಗೆಯಾದಾಗ ಸಿಗುವ ತೃಪ್ತಿ, ಆನಂದ ಹೇಳಲಾಗದು. ಕಾದಂಬರಿ ಓದುವಾಗ ಈ ಇಜಯಾ ನಾನೇ ಅನ್ನಿಸುವಷ್ಟರ ಮಟ್ಟಿಗೆ ನನ್ನನ್ನ ತಲ್ಲೀನಳಾಗಿಸಿ ಓದಿಸಿಕೊಂಡಿತು.

ಇದು ಕಥೆಯನ್ನು ಕಟ್ಟಿದ ಪರಿಗೆ ಸಲ್ಲಬೇಕಾದ ಶ್ರೇಯಸ್ಸು. ಕಾದಂಬರಿಯ ಮೊದಲರ್ಧ ಇಜಯಾ ತನ್ನ ಕೆಲಸ, ಮನೆ, ಸಂಸಾರದ ಜೊತೆ ತಾನು ಲೇಖಕಿಯಾಗುವ ಕನಸನ್ನು ನನಸಾಗಿಸಲು ಪಡುವ ಪರಿಪಾಟಲು ಮತ್ತು ನಂತರ ರಿವರ್ ರಾಫ್ಟಿಂಗ್‌ನಲ್ಲಾಗುವ ಅವಘಡದಿಂದಾಗಿ ಜೀವನವೇ ಬದಲಾಗಿ ಹೋಗುವ ದುರಂತ. ಓದುತ್ತಾ ಓದುತ್ತಾ ಇದೊಂದು ಸೈಕೊ ಥ್ರಿಲ್ಲರ್ ಕಾದಂಬರಿ ಎನ್ನಿಸಿ ಬಿಡುತ್ತದೆ. ಇಲ್ಲಿನ ಮಂಜನ ಪಾತ್ರಕ್ಕೆ ಮನಸ್ಸಿನಲ್ಲೇ ನಮಿಸಬೇಕೆನಿಸುತ್ತದೆ.

ಕಾದಂಬರಿಯ ತುಂಬಾ ಹಲವು ಚಂದದ ರೂಪಕಗಳು : ಹರುಕು ಮುರುಕು ಕ್ಯಾನ್ವಸ್ ಮೇಲೆ ಉಳಿದ ಬಳಿದ ಬಣ್ಣಗಳನ್ನು ಸ್ವಲ್ಪವೂ ಶ್ರದ್ಧೆಯಿಲ್ಲದ ಕಲಾವಿದ ಎರಚಿದಂತಿತ್ತು. ಒಟ್ಟಿನಲ್ಲಿ ಒಂದು ಒಳ್ಳೆಯ ಓದಿನ ಅನುಭವ ನೀಡುವ ಹೊಸತನದ ಕಾದಂಬರಿ ‘ಇಜಯಾ’. ಕಡೆಯದಾಗಿ ನನಗೆ ಬಹಳ ಹಿಡಿಸಿದ ಸಾಲು ‘ನಮ್ಮನ್ನು ಪ್ರೀತಿಸುವವರ ಜೀವನದಲ್ಲಿ ನಾವು ಅತ್ಯಂತ ಅನಿವಾರ್ಯವಾದವರು ಎಂದು ನಮ್ಮನ್ನು ನಾವೇ ಮೂರ್ಖರನ್ನಾಗಿಸಿಕೊಳ್ಳುತ್ತಾ, ಕನಸುಗಳ ಬಲಿ ಕೊಡುವುದಕ್ಕಿಂತ ದೊಡ್ಡ
ಕ್ರೌರ್ಯ ಬೇರೆ ಇಲ್ಲ.

Leave a Reply

Your email address will not be published. Required fields are marked *