ರವಿ ದುಡ್ಡಿನಜಡ್ಡು
ಲಂಡನ್‌ನಲ್ಲಿ ಉಬರ್ ಸಂಸ್ಥೆಯ ಸುಮಾರು 45,000 ಬಾಡಿಗೆ ಕಾರುಗಳಿವೆ. ಅವುಗಳಲ್ಲಿ ವಿದ್ಯುತ್ ಚಾಲಿತ ಕಾರುಗಳು ಸುಮಾರು 1,600. ಈ ಕಾರುಗಳಲ್ಲಿ ಪಯಣಿಸಿ, ಸುತ್ತಲಿನ ವಾತಾವರಣಕ್ಕೆ ಸಣ್ಣ ಕೊಡುಗೆ ನೀಡಬೇಕೆಂದು ಬಯಸುವ ಗ್ರಾಹಕರು, ತಮ್ಮ ಪಯಣಕ್ಕೆ ವಿದ್ಯುತ್ ಚಾಲಿತ ಕಾರು ಮಾತ್ರಬೇಕೆಂದು ಬೇಡಿಕೆ ಸಲ್ಲಿಸಬಹುದು.
ಒಂದು ನಿರ್ದಿಷ್ಟ ವಲಯ ದಲ್ಲಿ ಮಾತ್ರ ಲಭ್ಯವಿರುವ ಈ ವಿದ್ಯುತ್ ಚಾಲಿತ ಕಾರುಗಳು, ಗ್ರಾಹಕರನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ದು ಬಿಡುತ್ತವೆ. ವಿದ್ಯುತ್ ಚಾಲಿತ ಕಾರುಗಳಲ್ಲಿ ಪಯಣಿಸುವ ಗ್ರಾಹಕರಿಗೆ, ಉಬರ್ ಸಂಸ್ಥೆಯು ಆರಂಭಿಕ ಕೊಡುಗೆಯಾಗಿ ಶೇ.15 ರಿಯಾಯತಿಯನ್ನು ಸಹ ಘೋಷಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಬಳಕೆಯಿಂದ ಹೊರ ಬರುವ ಹೊಗೆಯು ಸುತ್ತಲಿನ ವಾತಾವರಣವನ್ನು ಮಲಿನಗೊಳಿಸುತ್ತಾ, ಆ ಮೂಲಕ ಭೂತಾಪಮಾನವನ್ನು ಹೆಚ್ಚಿಸುತ್ತಿದೆ ಎಂದು ಕಳಕಳಿ ಹೊಂದಿರುವ ಗ್ರಾಹಕರು, ಉಬರ್‌ನ ವಿದ್ಯುತ್ ಚಾಲಿತ ಕಾರುಗಳಲ್ಲಿ ಪಯಣಿಸಿ, ತುಸು ಸಮಾಧಾನ ಹೊಂದಬಹುದು.
ಇದು ಒಂದು ಪುಟ್ಟ ಪಯಣವೇ ಇರಬಹುದು, ಆ ಒಂದು ಪಯಣದಿಂದ ಸಣ್ಣ ಪ್ರಮಾಣದ ಹೊಗೆಯನ್ನು ನಿಯಂತ್ರಿಸಿರ ಬಹುದು, ಆದರೆ ಅದೊಂದು ಆಶಯದ ಮೂಲಕ ತಾನು ಭೂ ತಾಪಮಾನವನ್ನು ಕಡಿಮೆ ಮಾಡಲು ಕೊಡುಗೆಯನ್ನು ನೀಡಿ ದ್ದೇನೆ ಎಂದು ಗ್ರಾಹಕನು ನೆಮ್ಮದಿ ಪಡುವ ಅವಕಾಶವನ್ನು ಉಬರ್, ಲಂಡನ್ ಗ್ರಾಹಕರಿಗೆ ನೀಡಿದೆ.
ಇನ್ನು ನಾಲ್ಕು ವರ್ಷಗಳಲ್ಲಿ ಲಂಡನ್‌ನಲ್ಲಿರುವ ಎಲ್ಲಾ ಕಾರುಗಳನ್ನು ವಿದ್ಯುತ್ ಚಾಲಿತ ಕಾರುಗಳನ್ನಾಗಿಸುವುದು ಉಬರ್‌ನ
ಗುರಿ. ಜಗತ್ತಿನಾದ್ಯಂತ ಇರುವ ತನ್ನೆಲ್ಲಾ ಕಾರುಗಳನ್ನು 2040ರ ಹೊತ್ತಿಗೆ ವಿದ್ಯುತ್ ಚಾಲಿತ ವಾಹನಗಳನ್ನಾಗಿ ಪರಿವರ್ತಿಸುವ
ಗುರಿಯನ್ನು ಉಬರ್ ಹಾಕಿಕೊಂಡಿದೆ. ಈಗ ಉಬರ್ ಸಂಸ್ಥೆಯು ಲಂಡನ್‌ನಲ್ಲಿ ಮಾಮೂಲಿ ಕಾರು ಮತ್ತು ಹೈಬ್ರಿಡ್ ಕಾರು ಗಳನ್ನು ಓಡಿಸುತ್ತಿದೆ.
ವಿದ್ಯುತ್ ಕಾರುಗಳ ಆಯ್ಕೆಯ ಸಣ್ಣ ಸೇವೆ ಒದಗಿಸುವ ಮೂಲಕ, ಉಬರ್ ತನ್ನ ಆಶಯವನ್ನು ಬಿಂಬಿಸಿಕೊಂಡ ಪರಿ, ಆ ಮೂಲಕ ಗಳಿಸಿದ ಪ್ರಚಾರ ಮಾತ್ರ ಉತ್ತಮ. ಬೆಂಗಳೂರು ಸೇರಿದಂತೆ, ಭಾರತದಲ್ಲೂ ಪರಿಸರ ಸ್ನೇಹಿ ವಾಹನಗಳನ್ನು ಉಬರ್ ಒದಗಿಸಿದರೆ, ಅಷ್ಟರ ಮಟ್ಟಿಗೆ ಪರಿಸರ ಸಂರಕ್ಷಣೆ ಮಾಡಿದಂತಾದೀತು.