ರವಿ ದುಡ್ಡಿನಜಡ್ಡು
ಕೆಲವೇ ವರ್ಷಗಳ ಹಿಂದೆ ವಿದ್ಯುತ್ ಕಾರ್ ಎಂದರೆ ಜನ ಮೂಗು ಮುರಿಯುತ್ತಿದ್ದರು. ಒಮ್ಮೆ ಚಾರ್ಜ್ ಮಾಡಿದರೆ ಎಷ್ಟು ದೂರ ಹೋಗುತ್ತೆ? ಚಾರ್ಜ್ ಮಾಡಲು ಎಷ್ಟು ಸಮಯ ಬೇಕು? ಚಾರ್ಜ್ ತೀರಿ ಹೋದರೆ, ಕಾರ್‌ನ್ನು ವಾಪಸ್ ತರುವುದು ಹೇಗೆ? ಇಂತಹ ಹಲವು ಪ್ರಶ್ನೆಗಳನ್ನು ಮೊನ್ನೆ ಮೊನ್ನೆ ತನಕ ಕೇಳುತ್ತಿದ್ದರು.
ಇಂದು ವಿದ್ಯುತ್ ಕಾರುಗಳು ತಮ್ಮ ಸ್ಥಾನ ಭದ್ರ ಪಡಿಸಿಕೊಂಡಿವೆ. ಅಮೆರಿಕದಲ್ಲಿ ಹೊಸದಾಗಿ ಕಾರು ಕೊಳ್ಳುವವರು ಒಂದೋ ವಿದ್ಯುತ್ ಕಾರು ಅಥವಾ ಹೈಬ್ರಿಡ್ ಕಾರನ್ನು ಇಷ್ಟಪಡುತ್ತಿದ್ದಾರೆ. ಅಮೆರಿಕದ ಮನಸ್ಥಿತಿಯನ್ನು ಅಲ್ಲಿನ ಕಾರುಗಳ ಮಾರಾಟವೇ ಬಿಂಬಿಸುತ್ತದೆ. ಟೆಸ್ಲಾ ವಿದ್ಯುತ್ ಕಾರುಗಳು 2021ರಲ್ಲಿ ಮಾಡಿದ ಸಾಧನೆ ಅಪರೂಪದ್ದು. 2021ರಲ್ಲಿ ೯,೩೬,೧೭೨ ಟೆಸ್ಲಾ ಕಾರುಗಳು ಮಾರಾಟವಾಗಿವೆ. ಇದು ಸಾರ್ವಕಾಲಿಕ ದಾಖಲೆಯಾಗಿದ್ದು, ಒಂದು ಮಿಲಿಯಕ್ಕೆ ಹತ್ತಿರ ಹತ್ತಿರ ಇದುವುದು ವಿಶೇಷ.
2020ರಲ್ಲಿ ಟೆಸ್ಲಾ ಮಾರಾಟ ಮಾಡಿದ್ದು ೪,೯೯,೫೫೦. ಒಂದೇ ವರ್ಷದಲ್ಲಿ ಇದು ಹೆಚ್ಚು ಕಡಿಮೆ ಎರಡರಷ್ಟಾ ಗಿದೆ. ಈ ಒಟ್ಟು ಅಂಕಿ ಸಂಕಿಯು ಕೇವಲ ಅಮೆರಿಕದಲ್ಲಿ ಮಾರಾಟಗೊಂಡ ಕಾರುಗಳ ಸಂಖ್ಯೆ ಅಲ್ಲದೇ ಇದ್ದರೂ, ಬಹುಮಟ್ಟಿಗಿನ ಮಾರಾಟ ಅಲ್ಲೇ ನಡೆದಿರುವುದು. ಯುರೋಪ್‌ನಲ್ಲೂ ಸಾಕಷ್ಟು ವಿದ್ಯುತ್ ಕಾರುಗಳ ಮಾರಾಟ ನಡೆದಿದೆ.
2021ರಲ್ಲಿ ಟೆಸ್ಲಾ ಕಂಪೆನಿಯು ಮಾಡಿರುವ ಈ ಸಾಧನೆಗೆ ಮತ್ತೊಂದು ಆಯಾಮವಿದೆ. ಕಳೆದ ವರ್ಷ ವಿಶ್ವ ದಾದ್ಯಂತ ಎಲ್ಲಾ ಕಾರು ತಯಾರಿಕಾ ಕಂಪೆನಿಗಳಿಗೆ ಚಿಪ್ ಸಮಸ್ಯೆ ಕಾಡಿತ್ತು; ಕಂಪ್ಯೂಟರ್ ಚಿಪ್ ಕೊರತೆ ಯಿಂದಾಗ ಒಟ್ಟು ಉತ್ಪಾದನೆಯೇ ಕುಂಠಿತಗೊಂಡಿತ್ತು. ಅದಕ್ಕೆ ಟೆಸ್ಲಾ ಕಂಡು ಕೊಂಡ ಒಂದು ಪರಿಹಾರ ವೆಂದರೆ ತೀರಾ ಸರಳ! ಅವೆಷ್ಟೋ ಟೆಸ್ಲಾ ಕಾರುಗಳು, ಯುಎಸ್‌ಬಿ ಪೋರ್ಟ್ ಇಲ್ಲದೇ ಗ್ರಾಹರಕ ಕೈ ತಲುಪಿದ್ದವು!
ಮುಂದಿನ ದಿನಗಳಲ್ಲಿ ಟೆಸ್ಲಾ ವಿದ್ಯುತ್ ಕಾರುಗಳಿಗೆ ಇತರ ಕಂಪೆನಿಗಳು ಪೈಪೋಟಿ ನೀಡುವ ನಿರೀಕ್ಷೆ ಇದೆ. ಫೋರ್ಡ್, ಕ್ಯಾಡಿಲಾಕ್, ಮರ್ಸಿಡೆಸ್ ಕಂಪೆನಿ ಗಳ ವಿದ್ಯುತ್ ಕಾರುಗಳು ಅದಾಗಲೇ ಜನಪ್ರಿಯತೆ ಗಳಿಸಿವೆ. ಆದರೂ, ತನ್ನ ಪ್ರತಿಸ್ಪರ್ಧಿಗಳಿಗಿಂತ ಮುಂಚಿತವಾಗಿ ಮಾರುಕಟ್ಟೆಯನ್ನು ಆಕ್ರಮಿ ಸಿರುವ ಟೆಸ್ಲಾ, ಮುಂದಿನ ದಿನಗಳಲ್ಲೂ ಹೆಚ್ಚಿನ ಸಾಧನೆ ಮಾಡುವ ನಿರೀಕ್ಷೆಯಲ್ಲಿದೆ. ಈ ವಿದ್ಯಮಾನ ನಮ್ಮ ದೇಶದ ಮೇಲೆ ಪರಿಣಾಮ ಬೀರಬಹುದೆ? ಎಂಬ ಪ್ರಶ್ನೆಗೆ ಉತ್ತರ ಖಂಡಿತಾ ಹೌದು. ಪಾಶ್ಚಾತ್ಯ ಮಾರುಕಟ್ಟೆ ಯಲ್ಲಾದ ಈ ವಾಹನ ಕ್ರಾಂತಿಯು ನಮ್ಮ ರಸ್ತೆಗೂ ಇಳಿಯುವುದು ಖಂಡಿತಾ. ನಮ್ಮ ದೇಶದಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳು ಹೆಚ್ಚು ಲಭ್ಯ ವಾದಂತೆಲ್ಲಾ, ಹೆಚ್ಚು ಹೆಚ್ಚು ವಿದ್ಯುತ್ ಕಾರುಗಳು ರಸ್ತೆಗಿಳಿಯುವುದು ಖಂಡಿತಾ.
ಕ್ರಿಪ್ಟೋ ಹೂಡಿಕೆಯಲ್ಲಿ ವಂಚನೆ
ಕಾನೂನಿನ ಮಾನ್ಯತೆ ಇರಲಿ, ಬಿಡಲಿ, ಕ್ರಿಪ್ಟೊ ಕರೆನ್ಸಿಯ ವ್ಯವಹಾರವು ನಮ್ಮ ದೇಶದಲ್ಲಿ ಕಳೆದೊಂದು ವರ್ಷದಿಂದ ಜನಪ್ರಿಯತೆ ಪಡೆದಿದ್ದಂತೂ ನಿಜ. ಹಲವು ತಂತ್ರಜ್ಞಾನ ತಜ್ಞರು, ಯುವ ಜನರು ಬಿಟ್ ಕಾಯಿನ್, ಇಥರನೆಟ್ ಮೊದಲಾದ ಕ್ರಿಪ್ಟೊಗಳಲ್ಲಿ ಸಾಕಷ್ಟು ಹಣ ತೊಡಗಿಸಿದ್ದಾರೆ.
ಹೆಚ್ಚು ಹಣ ತೊಡಗಿಸುವ ಶಕ್ತಿ ಇಲ್ಲದಿರುವವರು ಕೇವಲ ರೂ.೧೦೦/- ರಿಂದಾರಂಭಿಸಿ ಕ್ರಿಪ್ಟೊದಲ್ಲಿ ಹೂಡಿಕೆ ಮಾಡಲು ಕೆಲವು ಆಪ್‌ಗಳು ಅವಕಾಶ ಮಾಡಿಕೊಟ್ಟಿದ್ದವು. ಆದರೆ, ಗಾದೆಯೇ ಇದೆಯಲ್ಲ, ‘ಸಂತೆ ಇದ್ದಲ್ಲಿ ಕಳ್ಳರೂ ಇರುತ್ತಾರೆ’ ಎಂದು. ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆಯ ಬಗ್ಗೆ ಯುವಜನತೆಯ
ಅಪಾರ ಕುತೂಹಲವನ್ನು ದುರುಪಯೋಗಪಡಿಸಿಕೊಳ್ಳುವ ಕ್ರಿಮಿನಲ್‌ಗಳು ಅಂತರ್ಜಾಲದಲ್ಲಿ ಅದಾಗಲೇ ಹುಟ್ಟಿಕೊಂಡಿದ್ದಾರೆ. ‘ನಿಮ್ಮ ಕ್ರಿಪ್ಟೋ ಹೂಡಿಕೆಗೆ ಸಹಾಯ ಮಾಡುತ್ತೇವೆ, ಇದರಲ್ಲಿ ಸಾಕಷ್ಟು ಹಣ ಗಳಿಸಬಹುದು’ ಎಂಬೆಲ್ಲಾ ಆಮಿಷ ತೋರಿಸಿ, ಹಣ ಕಟ್ಟಿಸಿಕೊಂಡು, ಕೆಲವೇ ಸಮಯ ದಲ್ಲಿ ಅಂತರ್ಧಾನವಾದ ಸಂಸ್ಥೆಗಳೂ ಇವೆ!
2021ರಲ್ಲಿ ಕ್ರಿಪ್ಟೊ ಹೂಡಿಕೆಯ ವಂಚನೆಗಳಲ್ಲಿ ಮೊದಲ ಸ್ಥಾನದಲ್ಲಿರುವುದು ಮಹಾರಾಷ್ಟ್ರ, ಎರಡನೆಯ ಸ್ಥಾನದಲ್ಲಿರುವುದು ದೆಹಲಿ. ಸೈಬರ್ ಖದೀಮರು, ಕ್ರಿಪ್ಟೊ ಹೂಡಿಕೆಯ ಮೋಸದ ವೆಬ್‌ಸೈಟ್ ರೂಪಿಸಿ, ಜನರನ್ನು ಮೋಸಗೊಳಿಸುವುದರ ಜತೆ, ಖೋಟಾ ವಿರ್ಚುವಲ್ ಕರೆನ್ಸಿ, ಖೋಟಾ ಆಪ್‌ಗಳ ಮೂಲಕವೂ ವಂಚಿಸಿದ್ದಾರೆ.
ರಿಮೋಟ್‌ನಲ್ಲಿ ಹೊಸ ತಂತ್ರಜ್ಞಾನ
ಸ್ಯಾಮ್ಸಂಗ್ ಸಂಸ್ಥೆಯು ತನ್ನ ಸೋಲಾರ್ ಚಾರ್ಜಿಂಗ್ ರಿಮೋಟ್‌ಗೆ ಹೊಸ ರೂಪ ನೀಡಲಿದೆ. ಅದು ಹೊರತಂದಿರುವ ಇತ್ತೀಚೆಗಿನ ಇಕೋ ರಿಮೋಟ್, ಬೆಳಕಿನಿಂದ ಚಾರ್ಜ್ ಆಗುವ ಜತೆಗೆ ರೇಡಿಯೋ ತರಂಗಗಳನ್ನೂ ಬಳಸಿಕೊಂಡು ಚಾರ್ಜ್ ಆಗಬಲ್ಲದು. ಆ ರೀತಿ ಚಾರ್ಜ್ ಆಗಲು ಅಗತ್ಯ ಇರುವ
ರೇಡಿಯೋ ತರಂಗ ಹೆಚ್ಚಿನ ಮನೆಗಳಲ್ಲಿದೆ. ಅವೇ ರೂಟರ್ ಹೊರಸೂಸುವ ರೇಡಿಯೋ ತರಂಗಗಳು. ಸುಮ್ಮನೆ ಇದ್ದರೆ ತನ್ನ ಪಾಡಿಗೆ ತಾನು ಸೋರಿ ಹೋಗುತ್ತಿದ್ದ ರೂಟರ್ ರೇಡಿಯೋ ತರಂಗಗಳನ್ನು ಬಳಸಿ, ರಿಮೋಟ್ ಬ್ಯಾಟರಿ ಚಾರ್ಜ್ ಆಗಬಲ್ಲದು.
ರಿಮೋಟ್‌ನ ಹಿಂಭಾಗದಲ್ಲಿರುವ ಪ್ಯಾನೆಲ್ ಮೂಲಕ ರೇಡಿಯೋ ತರಂಗಗಳು ಗ್ರಹಿಸಲ್ಪಟ್ಟು, ಬ್ಯಾಟರಿಯನ್ನು ಚಾರ್ಜ್ ಮಾಡುತ್ತವೆ. ಈ ಮೂಲಕ,
ರಿಮೋಟ್ ಸದಾ ಕಾಲ ಪೂರ್ಣ ಚಾರ್ಜ್ ಆಗಿರಬಲ್ಲದು ಮತ್ತು ಆ ಮೂಲಕ ಹೆಚ್ಚಿನ ಸೇವೆ ನೀಡಬಲ್ಲದು.