Wednesday, 14th May 2025

ಕ್ರಿಕೆಟ್‌ನಲ್ಲಿ ತಂತ್ರಜ್ಞಾನ

ಇಂದುಧರ ಹಳೆಯಂಗಡಿ

ಕ್ರಿಕೆಟ್‌ನಲ್ಲಿ ಮೊಟ್ಟಮೊದಲ ಬಾರಿಗೆ ರೇಡಿಯೋ ವೀಕ್ಷಕ ವಿವರಣೆಯು 1922ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದ್ದ ದೇಶೀ ಕ್ರಿಕೆಟ್‌ನಲ್ಲಿ ನಡೆಯಿತು. 1938ರಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಪಂದ್ಯವು ಟಿವಿಯಲ್ಲಿ ಪ್ರಸಾರಗೊಂಡಿತು.

ಅಂದು ಇಂಗ್ಲೆಂಡ್ – ಆಸ್ಟ್ರೇಲಿಯಾ ನಡುವಿನ ಅಭ್ಯಾಸ ಪಂದ್ಯವು ಟಿವಿಯಲ್ಲಿ ಪ್ರಸಾರವಾಗಿತ್ತು. ಅಂದು ಕೇವಲ 20 ಕಿ.ಮೀ ವ್ಯಾಪ್ತಿಯ ಸಿಗ್ನಲ್ ಬಳಕೆಯಲ್ಲಿದ್ದವು. ಆದರೆ, 2019ರ ಪುರುಷರ ಕ್ರಿಕೆಟ್ ವಿಶ್ವಕಪ್ ಅನ್ನು 1.6 ಶತಕೋಟಿ ಜನರು ನೇರಪ್ರಸಾರದಲ್ಲಿ ವೀಕ್ಷಿಸಿದ್ದಾರೆ ಎಂದು ವರದಿಯಾಗಿದೆ.

1) ಸ್ನಿಕ್ಕೊ ಅಥವಾ ಎಡ್ಜ್ ಡಿಟೆಕ್ಷನ್: ರಿಯಲ್ ಟೈಮ್ ಸ್ನಿಕ್ಕೊ ಅಥವಾ ಅಲ್ಟ್ರಾ ಎಡ್ಜ್ ತಂತ್ರಜ್ಞಾನವು ಚೆಂಡು ಫೀಲ್ಡರ್ ಕೈ ಸೇರುವ ಮೊದಲು ಬ್ಯಾಟಿಗೆ ತಗುಲಿದೆ ಯೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸುತ್ತದೆ. ಪ್ರಮುಖ ವಾಗಿ ವಿಕೆಟ್ ಕೀಪರ್ ಅಥವಾ ಸ್ಲಿಪ್‌ನಲ್ಲಿ ನಿಂತಿರುವ ಫೀಲ್ಡರ್‌ಗಳು ಹಿಡಿಯುವ ಕ್ಯಾಚ್ ಸಂದರ್ಭ ಬರುವ ಸಂಶಯಕ್ಕೆ ಇದು ಉತ್ತರ ನೀಡುತ್ತದೆ. ವೀಡಿಯೋವನ್ನು ಸ್ಲೋ-ಮೋಷನ್ನಲ್ಲಿ ಪ್ಲೇ ಮಾಡುವಾಗ, ಬಾಲ್ ಮೊದಲು ಎಲ್ಲಿ ತಾಗಿದೆ ಎಂದೂ ತಿಳಿಯುತ್ತದೆ. ಸ್ವಿಂಗ್, ಸ್ಪಿನ್ ಆಗಿ ಬಾಲ್ ತಿರುಗಿದ್ದೇ ಅಥವಾ ಬ್ಯಾಟ್ ತಗುಲಿ ಆಚೆಗೆ ಹೋಗಿದ್ದೇ ಎಂಬುದು ನಿಖರವಾಗಿ ತಿಳಿಯುತ್ತದೆ.

2) ಹಾಟ್ ಸ್ಪಾಟ್: 2006 ರ ಆಶಸ್ ಸರಣಿಯಲ್ಲಿ ಬಿಬಿಜಿ ಸ್ಪೋಟ್ಸ ಕ್ರಿಕೆಟ್‌ಗೆ ಹಾಟ್ಸ್ಪಾಟ್ ತಂತ್ರಜ್ಞಾನವನ್ನು ಪರಿಚಯಿಸಿತು. ಬ್ಯಾಟಿನ ಎರಡು ಬದಿಯಲ್ಲಿ ಇನ್ರಾರೆಡ್ ಕ್ಯಾಮೆರಾಗಳನ್ನು ಇರಿಸಲಾಗುತ್ತದೆ. ಇದರಿಂದ ಯಾವುದೇ ವಸ್ತು (ಇಲ್ಲಿ ಪ್ರಮುಖವಾಗಿ ಚೆಂಡು) ಬ್ಯಾಟಿಗೆ ಅಥವಾ ಆಟಗಾರನಿಗೆ ಹೊಡೆದಾಗ, ಅದು ಸ್ಪಷ್ಟವಾಗಿ ಎಲ್ಲಿ ತಗುಲಿರುವುದು ಎಂಬುವುದನ್ನು ಕಪ್ಪು-ಬಿಳುಪಿನ ಬಣ್ಣದಲ್ಲಿ ಸ್ಪಷ್ಟವಾಗಿ ತೋರಿಸುತ್ತದೆ. ಇದರ ಆಧಾರದಲ್ಲಿ ಅಂಪೈರ್ ಔಟ್/ನಾಟ್ಔಟ್ ತೀರ್ಪನ್ನು ನೀಡುತ್ತಾರೆ.

3) ಬಾಲ್ ಟ್ರ್ಯಾಕಿಂಗ್: ಬೌಲರ್ ಎಸೆದ ಚೆಂಡು ಹೇಗೆ ಸಾಗಿದೆ ಮತ್ತು ಬ್ಯಾಟ್ ಅಥವಾ ಬ್ಯಾಟ್ಸ್‌ಮನ್‌ಗೆ ತಗುಲಿದ ಬಳಿಕ ಅದರ ಹಿಂದೆಯೂ ಹೇಗೆ ಬಾಲ್ ಓಡುತ್ತದೆ ಎಂಬುದನ್ನು ಟ್ರ್ಯಾಕ್ ಮಾಡುತ್ತದೆ. ಇದಕ್ಕಾಗಿ ಹಾಕ್-ಐ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಬೌಲರ್ ಕೈಯಿಂದ ಬಾಲ್ ರಿಲೀಸ್ ಆಗುವಲ್ಲಿಂದ, ಆ ಚೆಂಡು ವಿಕೆಟ್ ಹಿಂದೆ ತಲುಪುವವರೆಗಿನ ಪಥವನ್ನು ಟ್ರ್ಯಾಕ್ ಮಾಡುತ್ತದೆ. ಇದು 3ಡಿ ದೃಶ್ಯೀಕರಣವನ್ನೂ ರಚಿಸುತ್ತದೆ. ಅದಲ್ಲದೆ ಸ್ಪಷ್ಟ ಎಲ್ಬಿಡಬ್ಲ್ಯೂ ನಿರ್ಧಾರ ವನ್ನು ತೆಗೆದುಕೊಳ್ಳಲು ಇದನ್ನು ಬಳಸಲಾಗುತ್ತದೆ.

4) ಸ್ಮಾರ್ಟ್ ಬೇಲ್ಸ್: ಝಿಂಗ್ ಬೇಲ್ಸ ಅನ್ನೋ ಕಂಪನಿಯು 2013ರಲ್ಲಿ ಕ್ರಿಕೆಟ್ ಆಟಕ್ಕಾಗಿ ಎಲ್ಇಡಿ ಬೇಲ್‌ಗಳನ್ನು ತಯಾರಿಸಿತು. ಬೇಲ್‌ಗಳಿಗೆ ಚೆಂಡು ತಾಗಿ ದಾಗ ಅಥವಾ ಅವುಗಳು ಸ್ಟಂಪ್‌ಗಳಿಂದ ಬೀಳುವಾಗ, ಅದರಿಂದ ಬೆಳಕು ಹೊಳೆಯುತ್ತದೆ. ಬೇಲ್ಸ್‌ನಲ್ಲಿ ಮೈಕ್ರೊಪ್ರೊಸೆಸರ್ ಇರಲಿದ್ದು, ಅದು ಸ್ಟಂಪಿನಿಂದ ಬೇಲ್ಸ್ ದೂರವಾಗುವುದನ್ನು ಪತ್ತೆ ಮಾಡುತ್ತದೆ. ಬೌಲ್ಡ್, ಸ್ಟಂಪ್ ಔಟ್, ರನೌಟ್ ಸಂದರ್ಭ ಇದರ ಅಗತ್ಯತೆ ತಿಳಿಯುತ್ತದೆ.

ತಂತ್ರಜ್ಞಾನ ಅಭಿವೃದ್ಧಿ ಕಂಡಂತೆ, ಆಟದಲ್ಲೂ ಯಾವುದೇ ಲೋಪ ಬಾರದಂತೆ ನಿರ್ಧಾರಗಳು ಪ್ರಕಟಗೊಂಡಾಗ, ಕ್ರಿಕೆಟ್ ಆಟದ ಬಗ್ಗೆ ಇನ್ನಷ್ಟು ಅಭಿಮಾನ ಮೂಡುವುದರಲ್ಲಿ ಯಾವುದೇ ಸಂಶಯವಿಲ್ಲ.

Leave a Reply

Your email address will not be published. Required fields are marked *