ಡಾ. ಕಾರ್ತಿಕ ಜೆ.ಎಸ್
ನಿಮಗೆ ನೆನಪಿರಬಹುದು. 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ, ಒಬ್ಬ ಕುಸ್ತಿಪಟು ತನ್ನ ಕಾಲಿಗೆ ಆದ ಗಾಯ, ಕಣ್ಣಿನಲ್ಲಿ ಉಂಟಾದ ಊತವನ್ನೂ ಲೆಕ್ಕಿಸದೆ ಎದುರಾಳಿ ಉತ್ತರ ಕೊರಿಯಾ ದೇಶದ ಕುಸ್ತಿಪಟುವಿನೊಡನೆ ಫ್ರೀಸ್ಟೈಲ್ ವಿಭಾಗದ ‘ರೆಪೆಚೇಜ’ ಬೌಟ್ ಮಾದರಿಯ ಪಂದ್ಯದಲ್ಲಿ ಕಂಚಿನ ಪದಕಕ್ಕಾಗಿ ಸೆಣೆಸಾಟ ನಡೆಸುತ್ತಾನೆ.
ಸಿಕ್ಕ ಅವಕಾಶ ಬಳಸಿ, ಎದುರಾಳಿಯ ಕಾಲುಗಳನ್ನು ಬಳ್ಳಿಯಂತೆ ಸುತ್ತಿ, ಹಲವಾರು ಬಾರಿ ಉರುಳಿಸಿ, ಅವನ ಎರಡು ಭುಜಗಳು
ನೆಲಕ್ಕೆ ತಾಗುವಂತೆ ಮಾಡಿ, ಅಂಕಗಳಿಸಿ, ಪದಕಕ್ಕೆ ಭಾಜನನಾಗುತ್ತಾನೆ. ತನ್ನ ಈ ಸಾಧನೆಯಿಂದ ಮನೆಮಾತಾದ ಶ್ರೇಷ್ಠ ಕುಸ್ತಿ ಪಟುವೇ ನಮ್ಮ ದೇಶದ ಹೆಮ್ಮೆಯ ಯೋಗಿಶ್ವರ ದತ್’.
ಹಳ್ಳಿಯ ಹುಡುಗ
ಯೋಗೇಶ್ವರ್ ದತ್ ಮೂಲತಃ ಹರಿಯಾಣ ರಾಜ್ಯದ ಸೋನಿಪತ್ ಜಿಯ ಬೈಂಸ್ವಾಲ್ ಕಲನ್ ಎಂಬ ಹಳ್ಳಿಯವನು. ಆ ಹಳ್ಳಿ, ಕುಸ್ತಿ ಆಡುವ ಸಂಪ್ರದಾಯಕ್ಕೆ ಹೆಸರುವಾಸಿಯಾಗಿತು ತನ್ನ 8ನೇ ವಯಸ್ಸಿಗೆ ‘ಮಣ್ಣಿನ ಕಣ’ದಲ್ಲಿ ಕುಸ್ತಿ ಆಡಲು ಆರಂಭಿಸುತ್ತಾನೆ. ಆ ಹಳ್ಳಿಯ ಬಲರಾಜ್ ಪೈಲ್ವಾನ್ ರ ಸಾಧನೆಯಿಂದ ಸ್ಫೂರ್ತಿಗೊಳ್ಳುತ್ತಾನೆ.
ದೂರದರ್ಶನದಲ್ಲಿ, 1996ರ ಅಟ್ಲಾಂಟಾ ಒಲಿಂಪಿಕ್ಸ್ ನಲ್ಲಿ ಲಿಯಾಂಡರ್ ಪೇಸ್ ಪದಕ ಗೆದ್ದ ಕ್ಷಣ ನೋಡಿ ರೋಮಾಂಚನ ಗೊಳ್ಳುತ್ತಾನೆ. ಒಲಿಂಪಿಕ್ಸ್ ಪದಕ ಗೆದ್ದವರನ್ನು, ಜನರು ಭಾವೋದ್ರೇಕ ದಿಂದ ಆರಾಧಿಸುವ ಪರಿ ನೋಡಿ, ತಾನು ಒಂದಲ್ಲ ಒಂದು ದಿನ ಆ ಎತ್ತರಕ್ಕೆ ಏರಬೇಕೆಂಬ ಕನಸನ್ನು ಕಾಣುತ್ತಾನೆ. ಹಲವಾರು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಗಳಲ್ಲಿ ಭಾಗವಹಿಸಿ ಪದಕ ಗೆದ್ದು ತನ್ನ ಕಸುವನ್ನು ಹೆಚ್ಚಿಸಿಕೊಳ್ಳುತ್ತಾನೆ.
2003ರ ಕಾಮನ್ವೆಲ್ತ ಗೇಮ್ಸ್ ನಲ್ಲಿ ಚಿನ್ನದ ಪದಕ ಗಳಿಸಿ ಆತ್ಮವಿಶ್ವಾಸ ವೃದ್ಧಿಸಿ ಕೊಳ್ಳುತ್ತಾನೆ. ಅವನ ಈ ಸಾಧನೆ, 2004ರ ಅಥೆನ್ಸ್ ಒಲಂಪಿಕ್ಸ್‌ಗೆ ರಹದಾರಿ ಪಡೆಯಲು ನೆರವಾಗುತ್ತದೆ. ಆದರೆ ಅಲ್ಲಿ ಲೀಗ್ ಹಂತದ ಸೋತು, 18ನೇ ಸ್ಥಾನಕ್ಕೆ ಕುಸಿಯು ತ್ತಾನೆ. ಈ ಸೋಲು, ಆತನ ಪದಕ ಗೆಲ್ಲುವ ಕನಸಿಗೆ ಅಡ್ಡಿಯಾಗುವುದಿಲ್ಲ. ಗ್ರಾಮಕ್ಕೆ ತೆರಳಿ ಮಣ್ಣಿನ ಅಖಾಡ ದಲ್ಲಿ ಮರಳಿ ಅಭ್ಯಾಸ ಮಾಡುತ್ತಾನೆ. 2006ನೇ ಇಸವಿ- ದೋಹಾದಲ್ಲಿ ಜರುಗಿದ ಏಷ್ಯನ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ, ಸ್ಪರ್ಧಿಸಲು ತೆರಳುವ ಕೇವಲ 9 ದಿನಗಳ ಮೊದಲು ತನ್ನ ತಂದೆಯನ್ನು ಕಳೆದುಕೊಳ್ಳುತ್ತಾನೆ.
ಆದರೂ ಮನೋಸ್ಥೈರ್ಯ ಕಳೆದುಕೊಳ್ಳದೆ, ಕಣಕ್ಕಿಳಿದು ಕಂಚಿನ ಪದಕ ಗಳಿಸುತ್ತಾನೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಕಾರ್ಟರ್ ಫೈನಲ್ ತಲುಪುತ್ತಾನೆ. 2009 ನೇ ಇಸವಿಯಲ್ಲಿ ಉಂಟಾದ ಮೊಣಕಾಲು ಗಾಯ, ಆತನ ವೃತ್ತಿ ಜೀವನ ವನ್ನೇ ಕೊನೆಗೊಳಿಸುವ ಪರಿಸ್ಥಿತಿಗೆ ತಂದಿಡುತ್ತದೆ. 2010 ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆಯುತ್ತಾನೆ.
2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ, 2014ರ ಏಷ್ಯನ್ ಗೇಮ್ಸ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ
ಪದಕ ಪಡೆದು, ದೇಶದ ನಾಲ್ಕನೇ ಪ್ರತಿಷ್ಠಿತ ಪ್ರಶಸ್ತಿಯಾದ ಪದ್ಮಶ್ರೀಗೆ ಭಾಜನನಾಗುತ್ತಾನೆ. ಹಳ್ಳಿಯಲ್ಲಿ ಜನಿಸಿದ ಆತ, ಒಲಿಂಪಿಕ್ಸ್ ಪದಕ ಗೆದ್ದ ಕಥೆ ಭಾರತೀಯ ಕ್ರೀಡಾ ಇತಿಹಾಸದಲ್ಲಿ ಅಜರಾಮರ. ಪ್ರಸ್ತುತ ಕಣದಿಂದ ನಿವೃತ್ತರಾಗಿರುವ ದತ್, ತನ್ನ ಶಿಷ್ಯ ಬಜರಂಗ ಪೂನಿಯಾ ನಿಗೆ ಅನುಭವವನ್ನು ಧಾರೆ ಎರೆಯುತ್ತಿದ್ದಾನೆ. ಆ ಮೂಲಕ ಮುಂದಿನ ಟೋಕಿಯೋ ಒಲಿಂಪಿಕ್ಸ್ ನಲ್ಲಿ ನಮ್ಮ ದೇಶಕ್ಕೆ ಪದಕ ತರುವ ಆಶಾಭಾವನೆ ಆತನದ್ದು. ಆ ಮೂಲಕ ನಮ್ಮ ನಾಡಿನ ಕುಸ್ತಿ ಪರಂಪರೆಯನ್ನು ಮುಂದುವರಿಸುವ, ಅದರ ಮೂಲಕ ದೇಶಕ್ಕೆ ಪದಕಗಳನ್ನು ಗಳಿಸುವ ಸದಾಶಯ ದತ್ ಅವರದು.