ಅರ್ಜುನ್ ಶೆಣೈ ಗಾವಳಿ
ವಿವಿಧ ಪಾತ್ರಗಳ ಧ್ವನಿಯನ್ನು ಅರ್ಥಪೂರ್ಣವಾಗಿ ನಿರ್ವಹಿಸುವ ಸೋನಲ್, ಆ ಕ್ಷೇತ್ರದ ಮಾಂತ್ರಿಕೆ ಎಂದರೆ ಅತಿ ಶಯೋಕ್ತಿಯಲ್ಲ.
ಕಾರ್ಟೂನ್ ಜಗತ್ತು ಇಂದು ಮಕ್ಕಳನ್ನು ಮತ್ತು ದೊಡ್ಡವರನ್ನು ಸಹ ಮೋಡಿ ಮಾಡುತ್ತಿದೆ. ಮೊದಮೊದಲು ಧ್ವನಿ ರಹಿತ ಕಾರ್ಟೂನುಗಳೇ ನಮ್ಮಲ್ಲಿ ಹೆಚ್ಚಾಗಿದ್ದವು. ಚಾರ್ಲಿಚಾಪ್ಲಿನ್ ಚಿತ್ರಗಳಂತೆ ಕೆಲವೊಂದು ಹಾಸ್ಯಮಯ ಪಾತ್ರಗಳು ಏಳುವುದು, ಬೀಳುವುದರಲ್ಲಿಯೇ ವಿಶೇಷ ಮಜವಿತ್ತು.
ಬರುಬರುತ್ತ ವಿವಿಧ ಟಿವಿ ಚಾನೆಲ್ಲುಗಳ ಸ್ಪರ್ಧೆಯಿಂದಾಗಿ, ಈ ಕ್ಷೇತ್ರ ಸಾಕಷ್ಟು ಬೆಳವಣಿಗೆ ಮತ್ತು ಬದಲಾವಣೆಯನ್ನು ಕಂಡಿದೆ. ಈಗ ಕಾರ್ಟೂನಿನಲ್ಲಿ ಧ್ವನಿಸಹಿತ ಕಾರ್ಯಕ್ರಮಗಳಿಗೇ ಹೆಚ್ಚಿನ ಬೇಡಿಕೆ. ಪಾತ್ರಗಳು, ಆನಿಮೇಶನ್, ಹಿನ್ನೆಲೆ ಧ್ವನಿ, ಡೈಲಾಗುಗಳು ಕೂಡ ಬಲುಬೇಗನೆ ಪುಟ್ಟಮಕ್ಕಳ ಮನಸ್ಸನ್ನು ಸೆಳೆದುಕೊಳ್ಳುತ್ತಿವೆ.
ಕಾರ್ಟೂನುಗಳು ನೋಡಲು ಎಷ್ಟೊಂದು ಖುಷಿಕೊಡುತ್ತವೋ, ಅವುಗಳ ಹಿನ್ನೆಲೆ ಧ್ವನಿಯೂ ಅಷ್ಟೇ ನಗೆಯುಕ್ಕಿಸುತ್ತವೆ. ಕಾರ್ಟೂನಿನ ಜೀವರಹಿತ ಪಾತ್ರಗಳಿಗೆ ಧ್ವನಿ ನೀಡಿ ಉಸಿರು ಕೊಡುವ ಕಾಯಕವನ್ನು ವಾಯ್ಸ್ ಆರ್ಟಿಸ್ಟ್ ಗಳು ಮಾಡುತ್ತಾರೆ. ಈ ವಿಚಾರಕ್ಕೆ ಬಂದರೆ ವಿಶೇಷವಾಗಿ ಕಾಣಿಸುವುದು ಮುಂಬಯಿಯ ಸೋನಲ್ ಕೌಶಲ್!
30 ವರ್ಷದ ಸೋನಲ್ ತಮ್ಮ ಹವ್ಯಾಸವನ್ನೇ ವೃತ್ತಿ ಬದುಕನ್ನಾಗಿ ಆಯ್ಕೆ ಮಾಡಿ ಕೊಂಡಿವರು. ಸೋನಲ್‌ರ ತಾಯಿ ಆಲ್ ಇಂಡಿಯಾ ರೇಡಿಯೋದಲ್ಲಿ ಧ್ವನಿ ಸಂಯೋಜನೆಯನ್ನು ಮಾಡುತ್ತಿದ್ದರು. ಆಗಾಗ ತಾಯಿಯೊಂದಿಗೆ ತೆರಳುತ್ತಿದ್ದ ಸೋನಲ್ ತಾಯಿಯ ವೃತ್ತಿಯನ್ನು ಸೂಕ್ಷ್ಮ ವಾಗಿ ಗಮನಿಸುತ್ತಿದ್ದರು. ಅದಾಗಲೇ ಸೋನಲ್‌ಗೆ ಈ ಪ್ರತಿಭೆ ತುಸು ರಕ್ತಗತವಾಗಿಯೂ ಒಲಿದಿತ್ತು.
ಈಕೆ ತನ್ನ 13ನೇ ವಯಸ್ಸಿನಲ್ಲಿ ಜಪಾನೀ ಮೂಲದ ಒಂದು ಕಾರ್ಟೂನಿಗೆ ವಾಯ್ಸ್ ಡಬ್ ಮಾಡುವ ಆಡಿಷನ್‌ನಲ್ಲಿ ಭಾಗಿ ಯಾದಳು. ಅಲ್ಲಿನ ಸಂದರ್ಶನದಲ್ಲಿ ಆಯ್ಕೆ ಆದ ಈಕೆ ತನ್ನ ಈ ವೃತ್ತಿಯನ್ನು ಶುರುಮಾಡಿದಳು. ಆ ಕಾರ್ಟೂನಿನ ಹೆಸರು ಡೋರೆಮೊನ್. ಸುಮಾರು 12 ವರ್ಷಗಳ ಕಾಲ ಡೋರೆಮೊನ್‌ನ ಮುಖ್ಯಪಾತ್ರಕ್ಕೆ ಈಕೆ ಧ್ವನಿ ಕೊಟ್ಟಳು.
ಛೋಟಾ ಭೀಮ್‌ನ ಖಡಕ್ ದನಿ
ಅಲ್ಲಿಂದಲೇ ಶುರುವಾದ ಈಕೆಯ ಈ ಪಯಣ ಹಿನ್ನೆಲೆ ಧ್ವನಿ ಬಳಕೆಯಾಗುವ ತರಹೇವಾರಿ ಕಾರ್ಯಕ್ರಮಗಳಲ್ಲಿ ಕೇಳಿಸಿಕೊಳ್ಳ ತೊಡಗಿತು. ಪುಟ್ಟಮಕ್ಕಳ ಕಾರ್ಟೂನಿನಲ್ಲಂತೂ ಈಕೆಯ ಧ್ವನಿಯದ್ದೇ ಕಾರುಬಾರು.
2014ರಿಂದ ಪ್ರಸಿದ್ಧ ಕಾರ್ಟೂನ್ ‘ಛೋಟಾ ಭೀಮ್’ನಲ್ಲಿನ ಭೀಮನ ಖಡಕ್ ದನಿಯನ್ನು ಈಕೆಯೇ ನಿರ್ವಹಿಸುತ್ತಿದ್ದಾಳೆ. ‘ಪವರ್‌ಪ- ಗರ್ಲ್ಸ್’ ಕಾರ್ಟೂನಿನಲ್ಲಿ ಕೇಳಿಬರುವ ಸುಂದರ ಸುಕೋಮಲ ದನಿ ಕೂಡ ಈಕೆಯದ್ದೇ. ಜನಪ್ರಿಯ ಚಲನ ಚಿತ್ರ ಸಿಂಗಂ ಆಧಾರದಲ್ಲಿ ರಚಿತವಾದ ‘ಲಿಟಲ್‌ಸಿಂಗಂ’ ಕಾರ್ಟೂನಿನಲ್ಲಿನ ಪಟ ಪಟನೆ ಮಾತಾಡುವ ಬಬ್ಲಿ ಪಾತ್ರಕ್ಕೂ ಕೂಡ ಈಕೆಯೇ ಧ್ವನಿ ಕೊಟ್ಟಿರುವುದು. ಬದ್‌ಬುದ್ ಮತ್ತು ಬುಡ್‌ಬಕ್ ಎಂಬ ಎರಡು ತುಂಟ ಶಾಲಾವಿದ್ಯಾರ್ಥಿಗಳ ಬಗೆಗಿನ ಕಾರ್ಟೂನಿನಲ್ಲಿಯೂ ಈಕೆಯೇ ಕ್ವೀನ್.
‘ಬಿಲ್ಲೂಭಾಯಿ’ ಕಾರ್ಟೂನಿನಲ್ಲಿ ಚಿಟ್ಟಿ ಎಂಬ ಮೊಲವೊಂದರ ಧ್ವನಿಯನ್ನೂ ಈಕೆಯೇ ಡಬ್ ಮಾಡುತ್ತಾಳೆ. ‘ಹಡ್ಡೀ ಮೇರಾ ಬಡ್ಡಿ’ ಕಾರ್ಟೂನಿನ ಪ್ರೀತಿ ಎಂಬ ಮುಖ್ಯಪಾತ್ರದಲ್ಲಿ ಕೇಳುವ ಧ್ವನಿ ಸೋನಲ್‌ಳದ್ದೇ. ಕೆಲವಾರು ಸಿನಿಮಾಗಳ ಡಬ್ಬಿಂಗ್ ನಲ್ಲಿಯೂ ಈಕೆಯ ಧ್ವನಿ ಯಿದೆ. ಇನ್‌ಕ್ರೆಡಿಬಲ್2ನ ವಯೋಲೆಟ್‌ನ ಪಾತ್ರ, ಟಾಯ್ ಸ್ಟೋರಿ೪ನ ಗ್ಯಾಬೀಗ್ಯಾಬೀ ಪಾತ್ರಕ್ಕೂ ಈಕೆಯ ಧ್ವನಿಯಿದೆ.
ಸಾಕಷ್ಟು ಜಾಹೀರಾತುಗಳಲ್ಲಿಯೂ ಸೋನಲ್‌ರ ಧ್ವನಿಯನ್ನು ಕೇಳಬಹುದು. ಅಷ್ಟೇ ಅಲ್ಲ, ಯೂಟ್ಯೂಬಿನಲ್ಲಿ ಹುಡುಕಿದರೆ ಸಿಗುವ ಮಕ್ಕಳ ರೈಮಿಂಗ್‌ಗಳಲ್ಲಿಯೂ ಸೋನಲ್ ಹಲವು ಬಾರಿ ಕಂಠದಾನ ಮಾಡಿದ್ದಾರೆ. ನ್ಯಾಶನಲ್ ಜಿಯೋಗ್ರಾಫಿಕ್, ಗುಡ್ ಟೈಮ್ಸ್, ಫಾಕ್ಸ್ ಟ್ರಾವೆಲರ್ ಚಾನೆಲ್‌ಗಳಲ್ಲಿ ಈಕೆಯ ಧ್ವನಿ ಆಗಾಗ ಕೇಳಿಸುತ್ತಲಿರುತ್ತದೆ. ‘ಮೋಟರ್‌ಮೌತ್’ ಎನ್ನುವುದು ಸೋನಲ್‌ರ ಸ್ವಂತ ಅಧಿಕೃತ ಯೂಟ್ಯೂಬ್ ಚಾನೆಲ್.
ಸೋನಲ್‌ರ ವಿಶೇಷತೆಯೆಂದರೆ ಈಕೆ ಒಂದು ಸೆಕೆಂಡಿನ ಅಂತರದಲ್ಲಿ, ತನ್ನ ಧ್ವನಿಯನ್ನು, ಧ್ವನಿಯ ಏರಿಳಿತವನ್ನು ಬದಲಿಸಿ ಇನ್ನೊಂದು ಧ್ವನಿಯಲ್ಲಿ ಮಾತನಾಡಬಲ್ಲರು! ಹೀಗಾಗಿ ಕಾರ್ಟೂನಿನ ತರಹೇವಾರಿ ಪಾತ್ರಗಳಲ್ಲಿ ಸೋನಲ್‌ರ ಧ್ವನಿಯನ್ನು ಕರಾರುವಕ್ಕಾಗಿ ಗುರುತಿಸುವುದು ಒಗಟಿನಂತಾಗಿ ಬಿಡುತ್ತದೆ. ಸುಕೋಮಲ ದನಿಯಿಂದ ಹಿಡಿದು ಉಗ್ರಪ್ರತಾಪಿ ದನಿಯವರೆಗೂ ಎಲ್ಲವನ್ನೂ ಕೌಶಲದಿಂದ ನಿರ್ವಹಿಸಿ, ಮನರಂಜನೆ ನೀಡುವ ಸೋನಲ್, ತೆರೆ ಹಿಂದಿನ ಮಾಂತ್ರಿಕೆ ಎನ್ನಬಹುದು.
ತನ್ನ ಧ್ವನಿ ಶ್ರೀಮಂತಿಕೆಯಿಂದ ವೈವಿಧ್ಯಮಯ ಕಾರ್ಟೂನ್ ಪಾತ್ರಗಳಿಗೆ ಜೀವ ತುಂಬಿ, ನಮ್ಮ ದೇಶದ ಮಕ್ಕಳ ಮನಸೆಳೆದಿದ್ದಾರೆ ಸೋನಲ್.