ಭರತನಾಟ್ಯದಲ್ಲಿ ತರಬೇತಿ ಪಡೆದು, ರಂಗಪ್ರವೇಶ ನಡೆಸಿದ ಈ ಅವಳಿ ಸಹೋದರಿಯರ ನೃತ್ಯ ಬಹು ಜನರ ಮೆಚ್ಚುಗೆ ಗಳಿಸಿದ್ದು ವಿಶೇಷ.
ವೈ.ಕೆ.ಸಂಧ್ಯಾ ಶರ್ಮ
ನೃತ್ಯ ವೀಕ್ಷಣೆ ಒಂದು ದೈವಿಕ ಸೌಂದರ್ಯಾನುಭವ, ರಸಭಾವ ಸ್ರೋತ. ಹೃದಯ ಸ್ಪರ್ಶಿಸುವ ಭರತ ನಾಟ್ಯದ ಸೊಗಡಿನಲ್ಲಿ ಅಂಥ ಆಕರ್ಷಣೆ. ಲಯ-ತಾಳಗಳಿಂದೊಡಗೂಡಿದ ಪ್ರತಿ ಕಲಾವಿದರ ನೃತ್ಯಾ ಭಿನಯವೂ ಹೊಸದೇ.
ವೈವಿಧ್ಯಪೂರ್ಣವಾಗಿರುವ ವಿವಿಧ ನೃತ್ಯ ಪರಂಪರೆಗಳೆಲ್ಲವೂ ತಮ್ಮದೇ ಆದ ರೀತಿಯಿಂದ ವಿಶಿಷ್ಟ. ಜತಿಗಳ ನಿರ್ವಹಣೆ, ನೃತ್ಯಗಳ ವಿನ್ಯಾಸ ರಚನೆಯ ಕೌಶಲ, ನೃತ್ಯ ಸಂಯೋಜನೆಯ ಹೊಸ ವೈಖರಿಗಳಿಂದ ಪ್ರತಿ ಕೃತಿಯ ನಿರೂಪಣೆಯೂ ತಮ್ಮದೇ ಆದ ‘ಬಾನಿ’ಗಳ ಅಸ್ಮಿತೆಯನ್ನು ಹೊರಸೂಸುತ್ತವೆ.
ಇಂಥ ಒಂದು ಅಪೂರ್ವ ಅನುಭವಕ್ಕೆ ಸೇರ್ಪಡೆ ಇತ್ತೀಚಿಗೆ ನಡೆದ ಅವಳೀ ಸಹೋದರಿಯರ ರಂಗಪ್ರವೇಶ. ಭರತನಾಟ್ಯ ಗುರು-ಕಲಾವಿದೆ ಜಯಲಕ್ಷ್ಮೀ
ಜಿತೇಂದ್ರ ಭಾಗವತ ಅವರ ಶಿಷ್ಯೆಯರಾದ ಶ್ರೀಜನಿ ಸತೀಶ್ ಕುಮಾರ್ ಮತ್ತು ಸುಹಾನಿ ಸತೀಶ್ ಕುಮಾರ್ ಅವಳಿ ಸೋದರಿಯರು, ಭರತನಾಟ್ಯದಲ್ಲಿ ತರಬೇತಿ ಪಡೆದು ’ನೃತ್ಯ ಪಂಕಜ’ ಶೀರ್ಷಿಕೆ ಯಲ್ಲಿ ನೃತ್ಯ ಪ್ರದರ್ಶನ ನೀಡುವ ಮೂಲಕ ವಿಧ್ಯುಕ್ತವಾಗಿ ರಂಗಪ್ರವೇಶ ಮಾಡಿದರು. ಈ ‘ನೃತ್ಯ ಪಂಕಜ’ ಪ್ರಸ್ತುತಿ ಸಂಪೂರ್ಣ ‘ಕೃಷ್ಣ ಕೇಂದ್ರಿತ’ವಾಗಿತ್ತು.
ಡಾ. ಅಶ್ವಿನಿ ಬಾಲಕೃಷ್ಣ ಮತ್ತು ಎನ್. ಸತೀಶ್ ಕುಮಾರ್ ಅವರ ಪುತ್ರಿಯರಾದ ಇವರು ಶುಭಾರಂಭ ದಲ್ಲಿ ವಲಚಿ ರಾಗದ ಆದಿತಾಳದ ‘ಪುಷ್ಪಾಂಜಲಿ’ ಯಿಂದ ನೃತ್ಯಾರ್ಪಣೆಗೆ ತೊಡಗಿಕೊಂಡರು.
ಸಂಪ್ರದಾಯದಂತೆ ಮೊದಲಿಗೆ ಗುರು-ಹಿರಿಯರಿಗೆ, ದೇವಾನುದೇವತೆಗಳಿಗೆ, ನೃತ್ಯ ಪ್ರಸ್ತುತಿಯನ್ನು ಪ್ರೀತಿಯಿಂದ ವೀಕ್ಷಿಸುವ ಸಭಾಸದ ನರಿಗೆ ತಮ್ಮ ಸುಮನೋಹರ ನೃತ್ತಾಂಜಲಿಯ ಮೂಲಕ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು.
ಅಂತ್ಯದಲ್ಲಿ- ರಂಗಾಕ್ರಮಣ, ಪಾದಭೇದ, ಭ್ರಮರಿ, ವಿವಿಧ ವಿಶಿಷ್ಟ ಅಡವುಗಳಿಂದ ಕಲಾವಿದೆಯರು ಪರಾಸ್ ರಾಗ-ಆದಿತಾಳದ ತಿನದೊಂದಿಗೆ ಪ್ರಸ್ತುತಿ ಯನ್ನು ಸಂಪನ್ನಗೊಳಿಸಿದರು. ಪುರಂದರದಾಸರ ‘ಕೃಷ್ಣ ಸ್ತುತಿಯ ಮಂಗಳ’, ಕಾರ್ಯಕ್ರಮದ ಶೋಭೆಯನ್ನು ಎತ್ತಿ ಹಿಡಿಯಿತು.