Wednesday, 14th May 2025

ವಜ್ರ ಎಂಬ ಜಲಮೂಲ

ಪುರುಷೋತ್ತಮ್ ವೆಂಕಿ

ಮಳೆ ಬಂದಾಗ ಚಿತ್ರದುರ್ಗದ ಸುತ್ತಲಿನ ಬೆಟ್ಟಗಳೆಲ್ಲವೂ ಹುಲ್ಲು ಹಾಸನ್ನು ಹೊದ್ದು, ಪ್ರಕೃತಿ ಮಾತೆಯು ಹಸಿರು ಸೀರೆಯನ್ನು ಹೊದ್ದಂತೆ ಕಾಣುವ ದೃಶ್ಯ ಮನಮೋಹಕ. ಅಲ್ಲಲ್ಲಿ ಏರಿಳಿಯುವ ಬೆಟ್ಟದ ಸೆರಗುಗಳಲ್ಲಿ ಇಣುಕುವ ಹುಲ್ಲಿನ ಹಸಿರು ನೋಟವು, ಪ್ರಕೃತಿಯ ಸೀರೆಯ ಸೆರಗಿನಂತೆ ಕಂಡರೆ ಅಚ್ಚರಿಯಿಲ್ಲ. ಹದವಾದ ಬಿಸಿಲು, ತುಂತುರು ಮಳೆ, ತಂಗಾಳಿಯ ವಾತಾವರಣವಿದ್ದರೆ, ಚಿತ್ರದುರ್ಗ ಸೀಮೆಯ ಬಯಲು ಬೆಟ್ಟಗಳು ಚಿತ್ರ ಬರೆದಿಟ್ಟಂತಹ ಸೌಂದರ್ಯವನ್ನು ಆವಾಹಿಸಿಕೊಳ್ಳುತ್ತವೆ.

ಈ ಬೆಟ್ಟಗಳ ನಡುವೆ ಅಲ್ಲಲ್ಲಿ ಕಾಣಿಸುವ ಪ್ರಾಕೃತಿಕ ವಿಸ್ಮಯಗಳು ಅಚ್ಚರಿಗೆ ನೂಕುತ್ತವೆ, ಬೆರಗನ್ನು ಮೂಡಿಸುತ್ತವೆ. ಈ ಪ್ರಕೃತಿಯ ರಮಣೀಯ ತಾಣಗಳಲ್ಲಿ ‘‘ಸಿದ್ದಪ್ಪನ ವಜ್ರ’’ ಎಂಬ ತಾಣವೂ ಒಂದು. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಉಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ಸ್ಥಳವು ಸುಂದರ ಬೆಟ್ಟಗುಡ್ಡಗಳನ್ನು ಹೊಂದಿರುವ, ನಿಸರ್ಗ ನಿರ್ಮಿತ ಝರಿ, ಹಳ್ಳ-ಕೊಳ್ಳಗಳಿಂದ ಕೂಡಿದ ಪ್ರೇಕ್ಷಣಿಯ ಸ್ಥಳ. ಅಲ್ಲಲ್ಲಿ ಬೆಟ್ಟದ ತುದಿಯಲ್ಲಿ ಕಾಣಿಸುವ ಪವನ ಯಂತ್ರಗಳ ನೋಟವು ಈ ಬೆಟ್ಟಸಾಲಿನ ಅದ್ಭುತ ನೋಟಕ್ಕೆ ಹೊಸದೊಂದು ಆಯಾಮವನ್ನು ಕಟ್ಟಿಕೊಟ್ಟಿವೆ. ಈ ನಡುವೆ ಇರುವ ಅಪ್ಪಟ ನಿಸರ್ಗ ಮಾತೆಯ ತಾಣ ಸಿದ್ದಪ್ಪನ ವಜ್ರ. ಹೊರಜಗತ್ತಿಗೆ ಪರಿಚಯವಿಲ್ಲದ ಅಪಾರ ಪ್ರಮಾಣದ ನಿಸರ್ಗ ರಾಶಿಯನ್ನು, ಪ್ರಕೃತಿಯ ರಮಣೀಯತೆಯನ್ನು, ನಿಸರ್ಗದ ಸಿರಿಯನ್ನು ತನ್ನ ಮಡಿಲಲ್ಲಿ ಹುದುಗಿಸಿಕೊಂಡಿರುವ ವಿಶೇಷ ಸ್ಥಳ ಈ ಸಿದ್ದಪ್ಪನ ವಜ್ರ ಅಥವಾ ನೀರಿನ ಹೊಂಡ.

ನೀರೇ ತೀರ್ಥ ಸುತ್ತಲಿನ ಹಳ್ಳಿಯ ಜನರಿಗೆ ಈ ವಜ್ರದ ನೀರು ಪೂಜ್ಯ. ಈ ನೀರಿನಲ್ಲಿ  ರೋಗನಿರೋಧಕ ಶಕ್ತಿ ಇದೆ ಎಂಬ ನಂಬಿಕೆ. ಜತೆಗೆ ಈ ಭಾಗದ ಸುತ್ತಮುತ್ತಲಿನ ರೈತರು ತಮ್ಮ ಜಮೀನಿನ ಫಸಲಿನ ಪಲವತ್ತತೆಗಾಗಿ, ಬೆಳೆಯ ರಕ್ಷಣೆಗಾಗಿ ಈ ಹೊಂಡದ ನೀರನ್ನು ತೀರ್ಥದ ರೂಪದಲ್ಲಿ ಬಳಸುತ್ತಾರೆ. ಮಹಿಳೆಯರು ಈ ವಜ್ರಕ್ಕೆ ಪೂಜೆ ಸಲ್ಲಿಸಿ ಗಂಗಾ ಮಾತೆಯನ್ನು ನೆನೆದು ಪೂಜೆ ಮಾಡಿದಾಗ ಸಂತಾನ ಪ್ರಾಪ್ತಿಯಾಗುತ್ತದೆ ಎಂಬುದು ಸಹ ಸ್ಥಳೀಯ ನಂಬಿಕೆ. ಇಲ್ಲಿನ ಗುಹೆಯಲ್ಲಿ ಒಂದು ಶಿವಲಿಂಗವಿದೆ. ಇದನ್ನು ಸಿದ್ದಪ್ಪ ಎಂದು ಗುರುತಿಸಿ, ಪೂಜಿಸುವ ಪದ್ಧತಿಯೂ ಉಂಟು. ಸಿದ್ದಪ್ಪ ಸ್ವಾಮಿಯು ಇಲ್ಲಿನ ಕೆಲವು ಸಮುದಾಯಗಳ ಮನೆದೈವ. ಶ್ರಾವಣ ಮಾಸದ ಸೋಮವಾರ ಇಲ್ಲಿಗೆ ಬಂದು ಹೋಳಿಗೆಯನ್ನು ಮಾಡಿ ದೇವರಿಗೆ ಅರ್ಪಿಸಿ ಸಂಭ್ರಮಿಸುತ್ತಾರೆ. ಅದೇ ಸಮಯದಲ್ಲಿ ಪ್ರಕೃತಿಯ ಸುಂದರ ನೋಟ ಕಂಡು, ಇಲ್ಲಿನ ಹಸಿರಿನೊಂದಿಗೆ ಬೆರೆಯುವ ಅಪೂರ್ವ ಅವಕಾಶ.

ನೀರು ತುಂಬಿದ ವಜ್ರ
ಪುರಾತನಕಾಲದಿಂದಲೂ ಪೂಜಿಸಲ್ಪಡುವ ಒಂದು ಗುಹಾಂತರ ದೇವಾಲಯ ಇಲ್ಲಿದೆ. ಇಲ್ಲಿದೆ ಸದಾ ಕಾಲ ತುಂಬಿ ಹರಿಯುವ ವಜ್ರ ಅಥವಾ ಪ್ರಾಕೃತಿಕ ಹೊಂಡ ಇಲ್ಲಿದೆ. ಬೇಸಗೆಯಲ್ಲೂ ನೀರಿರುವ ತಾಣ ಇದು. ಈ ವಜ್ರದಲ್ಲಿನ ನೀರು ಬತ್ತಿಹೋಗಿರುವ ಉದಾಹರಣೆ ಇಲ್ಲ. ಐತಿಹಾಸಿಕ ದಶರಥ ರಾಮೇಶ್ವರ ವಜ್ರಕ್ಕೂ ಈ ವಜ್ರಕ್ಕೂ ಅಂತರ್ಜಲದ ನಂಟಿದೆ ಎಂಬುದು ಸ್ಥಳೀಯ ನಂಬಿಕೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಿಂದ 10 ಕಿಲೋ ಮೀಟರ್ ಸಾಗಿ ಪರಮೇನಹಳ್ಳಿ ಬಳಿಯ ಕಾಡುದಾರಿ ಯಲ್ಲಿ ಪೂರ್ವಕ್ಕೆ ಮಾರು 7 ಕಿಲೋಮೀಟರ್ ಸಾಗಿದಾಗ ಈ ಸ್ಥಳ ದೊರೆಯುತ್ತದೆ. ಇಲ್ಲಿಗೆ ಬರುವ ಪ್ರವಾಸಿ ಗರು ಅರಣ್ಯಾಧಿ ಕಾರಿಗಳ ಅನುಮತಿ ಪಡೆಯುವುದು ಅವಶ್ಯಕ.

Leave a Reply

Your email address will not be published. Required fields are marked *