Wednesday, 14th May 2025

ಸೊರಗಿದ ಶಾಲ್ಮಲಾ ವನ

ಕೆ.ಶ್ರೀನಿವಾಸರಾವ್‌

ಕೋವಿಡ್ 19 ವಿಧಿಸಿದ ಲಾಕ್‌ಡೌನ್ ಮತ್ತು ನಂತರದ ನಿರ್ಬಂಧದಿಂದಾಗಿ ಸೊರಗಿದ ಪ್ರವಾಸಿ ತಾಣಗಳಲ್ಲಿ, ಶಿರಸಿ
ಪಟ್ಟಣದ ಸನಿಹವಿರುವ ಶಾಲ್ಮಲಾ ಶಿಲ್ಪವನವೂ ಒಂದು. ಈ ಸುಂದರ ವನಕ್ಕೆ ಬೇಕಿದೆ ತುಸು ಕಾಯಕಲ್ಪ!

ಉತ್ತರ ಕನ್ನಡದ ಶಿರಸಿ ಎಂದರೆ ಮೊದಲು ನೆನಪಾಗುವುದು ಅಮ್ಮ ಮಾರಿಕಾಂಬೆಯ, ಸಮೀಪದ ಸೋಂದಾ ವಾದಿರಾಜ ಮಠ, ದಟ್ಟ ಕಾನನದ ಪ್ರಕೃತಿ ವೈಭವ, ಜಲಪಾತಗಳು. ಇತ್ತೀಚೆಗೆ ಈ ಹೆಗ್ಗಳಿಕೆಗಳಿಗೆ ಮತ್ತೊಂದು ಗರಿ – ಅದೇ ‘ಶಾಲ್ಮಲಾ ಶಿಲ್ಪವನ’. ಶಿರಸಿ ಪಟ್ಟಣದಿಂದ ಹುಬ್ಬಳ್ಳಿಗೆ ಹೋಗುವ ಹೆದ್ದಾರಿಯಲ್ಲಿ 2 ಕಿ.ಮೀ ಕ್ರಮಿಸಿದರೆ ನರೇಬೈಲ್ ನ ಚಿಪಗಿಯಲ್ಲಿ ಬಲಭಾಗದಲ್ಲಿದೆ ‘ಶಾಲ್ಮಲಾ’.

ನಯನ ಮನೋಹರ ‘ಶಾಲ್ಮಲಾ’ ಮುಗಿಲು ಮುಟ್ಟಿ ಕಿಲಕಿಲಗೈಯುವಂತೆ ಭಾಸವಾಗುವ ವೃಕ್ಷ ಸಮೂಹ, ಕಣ್ಸೆೆಳೆಯುವ ಹಸಿರು ಉದ್ಯಾನ, ವೀಕ್ಷಣೆಗೆ ಅನುಕೂಲವಾಗುವಂತೆ ಮಧ್ಯೆ ಹಾದಿ. ಶಿಗ್ಗಾಂವ್ ಬಳಿಯ ಗೊಡಗೋಡಿಯ ‘ರಾಕ್ ಗಾರ್ಡನ್’ನ ರೂವಾರಿ ಇತ್ತೀಚೆಗೆ ನಮ್ಮನ್ನಗಲಿದ ಪ್ರೋ ತಿಪ್ಪಣ್ಣ ಸೊಲಭಕ್ಕನವರ್, ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆಗಳೊಡಗೂಡಿ 12 ಎಕರೆ ವಿಸ್ತಾರದಲ್ಲಿ ಸುಮಾರು ಒಂದೂವರೆ ಕೋಟಿ ರುಪಾಯಿ ವ್ಯಯಿಸಿ ಸುಮಾರು 40 ಜನ ಕಲೆಗಾರರ ಪರಿಶ್ರಮದೊಂದಿಗೆ ನಿರ್ಮಿಸಿದ ವನ ‘ಶಾಲ್ಲಾ’.

ಹೊನ್ನೆ ಮರದ ಸ್ವಾಗತ
ಒಳ ಹೊಕ್ಕರೆ ಆರಂಭದಲ್ಲಿಯೇ ನಿಮ್ಮನ್ನು ಸ್ವಾಗತಿಸುವುದು 300 ವರ್ಷಗಳ ಹಿಂದಿನ, ಇಂದಿಗೂ ಸುಸ್ಥಿತಿಯಲ್ಲಿರುವ ಹೊನ್ನೆ ಮರದ ಬೃಹತ್ ದಿಮ್ಮಿ. ಮುಂದೆ ಸಾಗಿದರೆ ಸಿಮೆಂಟ್ ಹಾಗೂ ಕಬ್ಬಿಣ ಬಳಸಿ ತಯಾರಿಸಿದ ಅದ್ಭುತ ವನ್ಯಜೀವಿ ಮತ್ತು ಮಾನವ ಕಲಾಕೃತಿಗಳು. ಒಕ್ಕಲಿಗ, ದಮಾಮಿ, ಸಿದ್ದಿ, ಗೌಳಿ, ಹಾಲಕ್ಕಿ, ಮೀನು ಮಾರುವವರು, ಕುಣುಬಿ ಜನಾಂಗಗಳ ಜೀವನ ಶೈಲಿ, ಮನೆ, ದಿರಿಸು ಬಗ್ಗೆೆ ಅರಿವು ಮೂಡಿಸುವ ಶಿಲ್ಪಗಳು, ಆನೆ, ಹುಲಿ, ಕಾಡೆಮ್ಮೆ, ಕೋಣ, ಕಪ್ಪು ಚಿರತೆ, ಆಮೆ, ಮೊಸಳೆ, ಮಂಗ, ಮುಸ್ಯ ಮುಂತಾದ ವನ್ಯಜೀವಿ ಗಳು, ನವಿಲು, ಹದ್ದು, ಪಾರಿವಾಳ, ಕೋಳಿ ಮೊದಲಾದ ಪಕ್ಷಿಗಳ ಕಲಾಕೃತಿಗಳು ಮನ ಸೆಳೆಯುತ್ತವೆ.

ಹುತ್ತದಲ್ಲಿ ತಲೆಯೆತ್ತಿ ಭುಸ್ ಎನ್ನುವ ನಾಗರಾಜ, ಮರದ ಕಾಂಡಕ್ಕೆ ಸುತ್ತಿ ನುಂಗುವಂತೆ ಪೋಸ್ ಕೊಡುವ ಆನಗೊಂಡ, ತಾಯಿ ಹಾಗೂ ಮರಿ ಆನೆ ಮತ್ತೆ ಮತ್ತೆ ನೋಡುವ ಆಸೆ ಮೂಡಿಸುತ್ತವೆ. ಮಕ್ಕಳಿಗಾಗಿ ಮೀನಿನ ಆಕೃತಿಯ ಎರಡು ಜಾರು ಬಂಡೆಗಳು ಇಲ್ಲಿವೆ. ಒಂದು ಬಯಲು ರಂಗಮಂದಿರ ಇಲ್ಲಿದೆ. ಇಲ್ಲಿನ ಪ್ರವೇಶ ದರ ಮಕ್ಕಳಿಗೆ 10 ರೂ., ದೊಡ್ಡವರಿಗೆ 30 ರೂ. 2016 ಮಾರ್ಚ್‌ ನಲ್ಲಿ ಆರಂಭಗೊಂಡ ಈ ವನಕ್ಕೆ ಆರಂಭದಲ್ಲಿ ಸಾಕಷ್ಟು ವೀಕ್ಷಕರು ಬಂದರೂ ಲಾಕ್‌ಡೌನ್ ಅವಧಿಯಲ್ಲಿ ಕುಂಠಿತ ಗೊಂಡು ಇದೀಗ ಕನಿಷ್ಠ ಪ್ರಮಾಣಕ್ಕಿಳಿದಿದೆ.

ಅರಣ್ಯ ಇಲಾಖೆಯ ನಿರ್ಲಕ್ಷ್ಯವೋ, ಸರ್ಕಾರದ ಅನುದಾನದ ಕೊರತೆಯೋ ‘ಶಾಲ್ಮಲಾ’ ಸೊರಗುತ್ತಿದ್ದಾಳೆ. ಕಲಾಕೃತಿಗಳ ಅಕ್ಕಪಕ್ಕ ಗಿಡ-ಗಂಟಿ, ಜೊಂಡುಗಳು, ಎಲ್ಲೆಡೆ ಎಲೆಗಳ ಕಸ, ಬಣ್ಣ ಮಸುಕಾದ ಶಿಲ್ಪಗಳು, ಮಕ್ಕಳಿಗೆ ಆಡಲು ಹೆಚ್ಚಿನ ಸಲಕರಣೆ ಗಳಿಲ್ಲದಿರುವುದು ಎದ್ದು ತೋರುತ್ತದೆ. ನಿರ್ವಹಣೆ ವೈಫಲ್ಯದ ಬಗ್ಗೆೆ ಸಿಬ್ಬಂದಿ ಬಳಿ ಕೇಳಿದರೆ ಸರ್ಕಾರದ ಕಡೆ ಕೈತೋರುತ್ತಾರೆ. ಸಂಬಂಧಪಟ್ಟ ಇಲಾಖೆ ನಿಗಾ ವಹಿಸಿದಲ್ಲಿ, ಹಸಿರು ಬೆಳೆಸಿ , ಸ್ವಚ್ಛತೆ, ಪರಿಶುದ್ಧತೆ, ಅಚ್ಚುಕಟ್ಟುತನ ಮತ್ತು ಪ್ರಚಾರದ ನಿಟ್ಟಿನಲ್ಲಿ ಒತ್ತು ಕೊಟ್ಟರೆ, ಈ ‘ಶಾಲ್ಮಲಾ ವನ’ ಮತ್ತೆ ಮೈದುಂಬುವುದರಲ್ಲಿ ಸಂದೇಹವಿಲ್ಲ.

Leave a Reply

Your email address will not be published. Required fields are marked *