Tuesday, 13th May 2025

ಕಲಾವಿದೆ ಶಕೀಲಾ ಶೇಖ್‌

ಕಡು ಬಡತನದಲ್ಲಿದ್ದ ವ್ಯಕ್ತಿಯೊಬ್ಬರಿಗೆ ಸೂಕ್ತ ಮಾರ್ಗ ದರ್ಶನ ನೀಡಿದರೆ ಯಶಸ್ಸು ಪಡೆಯಬಲ್ಲರು ಎಂಬುದಕ್ಕೆ ಶಕೀಲಾ ಶೇಕ್ ಉದಾಹರಣೆ. ತರಕಾರಿ ವ್ಯಾಪಾರ ಮಾಡುವ ತಾಯಿಗೆ ಸಹಾಯಕಳಾಗಿ ಕೆಲಸ ಮಾಡುತ್ತಿದ್ದ ಶಕೀಲಾ ಅವರು, ಕೊಲಾಜ್ ಕಲೆ ಯಲ್ಲಿ ಪರಿಣತಿ ಪಡೆದು ಇಂದು ಅಂತಾರಾಷ್ಟ್ರಿಯ ಮಟ್ಟದ ಕಲಾವಿದೆಯಾಗಿ ಗುರುತಿಸಿಕೊಳ್ಳುತ್ತಿರುವುದು ಪವಾಡ ಸದೃಶವಾಗಿ ಕಾಣಿಸುತ್ತಿದೆ. ಈಕೆಯ ಯಶಸ್ಸಿಗೆ ನಿವೃತ್ತ ಸರಕಾರಿ ನೌಕರರಾದ ಬಲದೇವ್ ರಾಜ್ ಪನೇಸರ್ ಕಾರಣ ಎಂದು ಅವರೇ ಹೇಳಿ ಕೊಂಡಿದ್ದಾರೆ.

ಕೊಲ್ಕೊತ್ತಾದಿಂದ 30 ಕಿಮೀ ದೂರದ ಸರ್ಜಾಪುರ ಗ್ರಾಮದಲ್ಲಿರುವ ಶಕೀಲಾ ಶೇಕ್ ಅವರ ಬಾಲ್ಯ ಕಡು ಬಡತನದ್ದಾಗಿತ್ತು.  ಅವರ ತಾಯಿಯು ಪ್ರತಿದಿನ ಕೊಲ್ಕೋತ್ತಾಗೆ ಪಯಣಿಸಿ, ಸಣ್ಣ ಮಟ್ಟದ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಶಕೀಲಾ, ಅದನ್ನು ತೊರೆದು ತರಕಾರಿ ವ್ಯಾಪಾರದಲ್ಲಿ ತಾಯಿಗೆ ಸಹಾಯ ಮಾಡಬೇಕಾಯಿತು.
ಆ ಸಮಯದಲ್ಲಿ, ಬಲದೇವ್ ರಾಜ್ ಪನೇಸರ್ ಅವರು ಕೊಲ್ಕೊತ್ತಾದ ಬೀದಿಯಲ್ಲಿರುವ ಬಡ ಮಕ್ಕಳಿಗೆ ಸಹಾಯ ಮಾಡಲು ಬರುತ್ತಿದ್ದರು.

ಮಕ್ಕಳಿಗೆ ಚಾಕೊಲೇಟ್ ಮತ್ತಿತರ ತಿನಿಸುಗಳನ್ನು ಕೊಡುತ್ತಿದ್ದರು. ಶಕೀಲಾಳ ಅವರ ತಾಯಿಯ ಮನ ಒಲಿಸಿ, ಶಕೀಲಾಳನ್ನು ಶಾಲೆಗೆ ಸೇರಿಸುವ ಪನೇಸರ್, ಆ ಕುಟುಂಬಕ್ಕೆ ಸಣ್ಣ ಮಟ್ಟದ ಆರ್ಥಿಕ ಸಹಾಯವನ್ನೂ ಮಾಡಿದರು. 1987ರಲ್ಲಿ ತನಗಿಂತ 15 ವರ್ಷ ದೊಡ್ಡವರಾದ ಅಕ್ಬರ್ ಶೇಕ್ ಎಂಬುವವರನ್ನು ಶಕೀಲಾ ಮದುವೆಯಾದರು. ಅಕ್ಬರ್ ಶೇಕ್ ಸಹ ತರಕಾರಿ ಮಾರು ತ್ತಿದ್ದರು. ಆದರೆ, ಆದಾಯ ಸಾಕಾಗುತ್ತಿರಲಿಲ್ಲ.

ವೃತ್ತ ಪತ್ರಿಕೆಗಳಿಂದ ಪೇಪರ್ ಕವರುಗಳನ್ನು ಮಾಡಿ, ಮಾರಿ, ಶಕೀಲಾ ಪ್ರತಿದಿನ ರು.20-30 ಗಳಿಸುತ್ತಿದ್ದರು. ಈ ಸಮಯದಲ್ಲಿ,
ಕೊಲ್ಕೊತ್ತಾದಲ್ಲಿ ನಡೆದ ಕಲಾಪ್ರದರ್ಶನಕ್ಕೆ ಇವರನ್ನು ಬಲದೇವ ರಾಜ್ ಪನೇಸರ್ ಕರೆದುಕೊಂಡು ಹೋಗುತ್ತಾರೆ. ಅಲ್ಲಿದ್ದ ಕಲಾಕೃತಿಗಳನ್ನು ಕಂಡು ಸ್ಫೂರ್ತಿಗೊಂಡ ಶಕೀಲಾ ಶೇಕ್, ಹಳೆಯ ಪೇಪರುಗಳನ್ನು ಕತ್ತರಿಸಿ, ಕೊಲಾಜ್ ಕಲಾಕೃತಿಯೊಂದನ್ನು ತಯಾರಿಸುತ್ತಾರೆ.

ಶಕೀಲಾ ಕೈಯಲ್ಲಿ ಹಳೆಯ ಪೇಪರುಗಳು ಕಲಾ ಕೃತಿಯ ರೂಪ ಪಡೆದದ್ದನ್ನು ಕಂಡ ಪನೇಸರ್, ಆಕೆಗೆ ಇನ್ನಷ್ಟು ಪೇಪರುಗಳನ್ನು ನೀಡಿ, ಇನ್ನಷ್ಟು ಕಲಾಕೃತಿಗಳನ್ನು ರಚಿಸಲು ಹೇಳುತ್ತಾರೆ. ಕಲಾವಲಯದಲ್ಲಿ ಈಕೆಯ ಕೊಲಾಜ್ ಕೃತಿಗಳು ಮೆಚ್ಚುಗೆ ಗಳಿಸು ತ್ತಾರೆ. 1990ರಲ್ಲಿ ಆಕೆಯ ಮೊದಲ ಏಕವ್ಯಕ್ತಿ ಪ್ರದರ್ಶನವನ್ನು ಏರ್ಪಡಿಸಲು ಪನೇಸರ್ ಸಹಾಯ ಮಾಡಿದರು. ಆ ಪ್ರದರ್ಶನ ದಲ್ಲಿ ಆಕೆ ಗಳಿಸಿದ ಆದಾಯ ರು.70,000!

ನಂತರದ ದಿನಗಳಲ್ಲಿ ಕೊಲಾಜ್ ಕಲಾಕೃತಿಗಳನ್ನು ತಯಾರಿಸುವುದನ್ನು ಕರಗತ ಮಾಡಿಕೊಂಡ ಶಕೀಲಾ ಶೇಕ್, ಇಂದು ಅಂತಾರಾಷ್ಟ್ರೀಯ ಮಟ್ಟದ ಕಲಾವಿದೆ. ಈಕೆ ರಚಿಸಿದ ಹಲವು ಕೊಲಾಜ್ ಕಲಾಕೃತಿಗಳು ವಿದೇಶಗಳಲ್ಲೂ ಮಾರಾಟಗೊಂಡು, ಆಕೆಗೆ ಮತ್ತು ಆಕೆಯ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡಿವೆ. ಕಡು ಬಡತನದ ಬಾಲಕಿಯೊಬ್ಬಳು ಕೊಲಾಜ್ ಕಲಾವಿದೆಯಾಗಿ
ರೂಪುಗೊಂಡ ಈ ಕಥನವು, ಕಷ್ಟಪಟ್ಟು ದುಡಿಯುವವರಿಗೆ ಒಂದು ಸ್ಫೂರ್ತಿಯೇ ಸರಿ.

Leave a Reply

Your email address will not be published. Required fields are marked *