Wednesday, 14th May 2025

ರುದ್ರಿಗೆ ವಿಂದ್ಯಾ ಪ್ರಶಸ್ತಿಯ ಗರಿ

ದೇವೇಂದ್ರ ಬಡಿಗೇರ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ರುದ್ರಿ’ ಚಿತ್ರ ವಿಂದ್ಯಾ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ದ್ವಿತೀಯ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಈ ಚಿತ್ರದ ಅಭಿನಯಕ್ಕಾಗಿ ನಟಿ ಪಾವನಾಗೌಡ, ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಜನವರಿ 8 ರಿಂದ 10 ರವರೆಗೆ ನಡೆದ ಈ ಚಿತ್ರೋತ್ಸವದಲ್ಲಿ 46 ದೇಶಗಳ 500ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಂಡವು. ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಏಕೈಕ ಕನ್ನಡ ಚಿತ್ರ ‘ರುದ್ರಿ’ ಎಂಬುದು ಮತ್ತೊಂದು ವಿಶೇಷ. ಹೆಣ್ಣಿನ ಶೋಷಣೆಯ ಕುರಿತ ಕಥಾವಸ್ತುವನ್ನು ಹೊಂದಿರುವ ‘ರುದ್ರಿ’ ಈಗಾಗಲೇ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಭಾರತ ಮಾತ್ರವಲ್ಲ ವಿದೇಶದಲ್ಲೂ ಹಲವು ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದ್ದು, ಅಲ್ಲಿಯೂ ಮೆಚ್ಚುಗೆ ಗಳಿಸಿ, ಪ್ರಶಸ್ತಿ ಪಡೆದುಕೊಂಡಿದೆ. ಪೋಸ್ಟರ್ ಮೂಲಕವೇ ‘ರುದ್ರಿ’ ಗಮನ ಸೆಳೆದಿದೆ. ‘ರುದ್ರಿ’ 1990ರ ಕಾಲಘಟ್ಟದ ಕಥೆಯನ್ನು ಹೊಂದಿದೆ. ಆ ಕಾಲದಲ್ಲಿ ಹೆಣ್ಣಿನ ಮೇಲೆ ಶೋಷಣೆ, ದೌರ್ಜನ್ಯ ನಿರಂತರವಾಗಿತ್ತು. ಇಷ್ಟಾದರೂ ಅದು ಹೊರ ಜಗತ್ತಿಗೆ ತಿಳಿಯುತ್ತಿರಲಿಲ್ಲ.  ಇದರಿಂದ ಹೆಣ್ಣಿನ ನೋವಿನ ದನಿಗೆ ಬೆಲೆಯೇ ಇಲ್ಲದಂತಾಗಿತ್ತು.

ಹಾಗಾಗಿ ನಿರಂತರವಾಗಿ ಹೆಣ್ಣಿನ ಶೋಷಣೆ ನಡೆದೇ ಇತ್ತು. ಹಾಗಾದರೆ ಹೆಣ್ಣಿನ ಸಹಾಯಕ್ಕೆ ಯಾರು ಧಾವಿಸಲೇ ಇಲ್ಲವೇ.
ಹೆಣ್ಣು ಅಬಲೆ ಎಂಬುದು ಈ ಮೂಲಕ ಸ್ಪಷ್ಟವಾಯಿತೆ ಎಂಬ ಪ್ರಶ್ನೆ ಕಾಡಬಹುದು. ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎಂಬ ವಾಚ್ಯಾರ್ಥವಿದೆ. ಅದರಂತೆ, ಹೆಣ್ಣು ಕ್ಷಮಯಾಧರಿತ್ರಿಯೂ ಹೌದು, ಸಿಡಿದೆದ್ದರೆ ‘ರುದ್ರಿ’ಯೂ ಹೌದು. ಇದೇ ಅಂಶವನ್ನು ‘ರುದ್ರಿ’ ಒಳಗೊಂಡಿದೆ.

ಕೋಟ್‌

ರುದ್ರಿ ವಿಂದ್ಯಾ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿರುವುದು ಸಂತಸ ತಂದಿದೆ. ಸಮಾಜಕ್ಕೆ ಒಳ್ಳೆಯ ಸಂದೇಶವಿರುವ ಚಿತ್ರವಿದು. ಅದಕ್ಕೂ ಮಿಗಿಲಾಗಿ, ನೊಂದ ಹೆಣ್ಣಿನ ದನಿಯಾಗಿ ರುದ್ರಿ ನಿಲ್ಲುತ್ತಾಳೆ. ಅಸ್ಸಾಂ, ಬಿಹಾರದಂತಹ ರಾಜ್ಯಗಳಲ್ಲೂ ರುದ್ರಿಯನ್ನು ಪ್ರೇಕ್ಷಕರು ಮೆಚ್ಚಿದ್ದಾರೆ. ವಿಂದ್ಯಾ ಪರ್ವತ ಶ್ರೇಣಿಯ ಸಿದ್ದಿ ಎಂಬ ಪ್ರದೇಶ ಬೀರಬಲ್ ಹುಟ್ಟಿದ ಸ್ಥಳ, ಅಲ್ಲಿಯೇ ನಮ್ಮ ಚಿತ್ರಕ್ಕೆ ಪ್ರಶಸ್ತಿ ಲಭಿಸಿರುವುದು ಮತ್ತಷ್ಟು ಸಂತಸ ತಂದಿದೆ.
ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ರುದ್ರಿಯನ್ನು ತೆರೆಗೆ ತರಲಿದ್ದೇವೆ.
-ದೇವೇಂದ್ರ ಬಡಿಗೇರ್ ನಿರ್ದೇಶಕರು

Leave a Reply

Your email address will not be published. Required fields are marked *