Tuesday, 13th May 2025

ರಾಜತಂತ್ರ ಹೆಣೆದ ರಾಜಾರಾಮ್

ಪ್ರಶಾಂತ್ ಟಿ.ಆರ್

ಅಮ್ಮನಮನೆ ಚಿತ್ರದ ಅದ್ಭುತ ನಟನೆಗೆ ಶ್ರೇಷ್ಠ ಪ್ರಶಸ್ತಿ ಪಡೆದ ದೊಡ್ಮನೆ ಹುಡುಗ ರಾಘವೇಂದ್ರ ರಾಜ್ ಕುಮಾರ್ ಈಗ ವಿಶೇಷ ಗೆಟಪ್‌ನಲ್ಲಿ, ವಿಭಿನ್ನ ಪಾತ್ರದಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದ್ದಾರೆ. ಸೆಂಟಿಮೆಂಟ್ ಪಾತ್ರಗಳಲ್ಲಿ ಮಿಂಚಿ ಕರುನಾಡಿನ ಮನೆ ಮಗನಾಗಿ ಸ್ಥಾನ ಪಡೆದಿದ್ದ ರಾಘಣ್ಣ, ಈಗ ಮೊದಲ ಬಾರಿಗೆ ವೀರ ಯೋಧನಾಗಿ ಬಣ್ಣ ಹಚ್ಚಿ ದ್ದಾರೆ. ನಿವೃತ್ತ ಕ್ಯಾಪ್ಟನ್ ಆಗಿ, ಸಮಾಜ, ದೇಶದ ಹಿತರಕ್ಷಣೆಗೆ ಶ್ರಮಿಸುವ ರಾಜಾರಾಮ್ ಅವತಾರದಲ್ಲಿ ನಮ್ಮ ಮುಂದೆ ಬರಲಿದ್ದಾರೆ.

ರಾಘವೇಂದ್ರ ರಾಜ್‌ಕುಮಾರ್ ರಾಜತಂತ್ರ ಹೆಣೆಯಲು ಸಿದ್ಧವಾಗುತ್ತಿದ್ದಾರೆ. ನಿವೃತ್ತ ಯೋಧನ ಅವತಾರದಲ್ಲಿ, ಹೊಸ ಗೆಟಪ್ ತಾಳಿ, ತೆರೆಗೆ ಬರಲು ರೆಡಿಯಾಗುತ್ತಿದ್ದಾರೆ. ಈಗಾಗಲೇ ಚಿತ್ರದ ಮಹೂರ್ತ ಕೂಡ ನೆರವೇರಿದ್ದು, ರಾಘಣ್ಣ ಶೂಟಿಂಗ್‌ನಲ್ಲಿ ಫುಲ್
ಬ್ಯುಸಿಯಾಗಿದ್ದಾರೆ.

ರಾಜತಂತ್ರ ಸಸ್ಪೆನ್ಸ್‌ ಥ್ರಿಲ್ಲರ್ ಕಥೆಯಾಗಿದ್ದು, ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಕಥಾಹಂದರ ಚಿತ್ರದಲ್ಲಿ ಅಡಕವಾಗಿದೆ. ದುಷ್ಟಶಕ್ತಿಗಳನ್ನು ತನ್ನ ಬುದ್ಧಿಶಕ್ತಿ ಮತ್ತು ತಂತ್ರಗಾರಿಕೆಯಿಂದ ಮಣಿಸುವ ನಿವೃತ್ತ ಕ್ಯಾಪ್ಟನ್ ಆಗಿ ರಾಘವೇಂದ್ರ ರಾಜ್‌ಕುಮಾರ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದೇಶ ಸೇವೆಗಾಗಿ ಪ್ರಾಣವನ್ನೇ ಮುಡುಪಾಗಿಟ್ಟಿದ್ದ ಈ ವೀರ ಯೋಧ, ನಿವೃತ್ತಿಯ ನಂತರವೂ, ದುಷ್ಟ ಶಕ್ತಿಗಳಿಂದ ದೇಶವನ್ನು ಹೇಗೆ ಕಾಪಾಡುತ್ತಾರೆ ಎಂಬುದೇ ಚಿತ್ರದ ಸ್ಟೋರಿ.

ಹಾಗಾದರೆ ಚಿತ್ರದಲ್ಲಿ ಯೋಧನ ಯಶೋಗಾಥೆಯೂ ಇರಲಿದೆಯೆ? ಕ್ಯಾಪ್ಟನ್ ಆದ ರಾಘಣ್ಣ, ವಿವಿಧ ಶೇಡ್‌ನಲ್ಲಿ  ಕಾಣಿಸಿಕೊಳ್ಳ ಲಿದ್ದಾರಾ? ಎಂಬ ಕುತೂಹಲ ನಮ್ಮನ್ನು ಕಾಡುತ್ತದೆ. ಇವೆಲ್ಲಕ್ಕೂ ತೆರೆಯಲ್ಲಿಯೇ ಉತ್ತರ ಸಿಗಲಿದೆ ಎನ್ನುತ್ತಾರೆ ನಿರ್ದೇಶಕರು.
ಬಹುದಿನಗಳ ಕನಸು, ನನಸು ರಾಘವೇಂದ್ರ ರಾಜ್‌ಕುಮಾರ್ ಅಮ್ಮನಮನೆ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಟನಟ ಪ್ರಶಸ್ತಿ ಪಡೆದರು. ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ ಪಿವಿಆರ್.ಸ್ವಾಮಿ ಈಗ ಕ್ಯಾಮೆರಾ ಹಿಡಿಯುವ ಜತೆಗೆ, ಇದೇ ಮೊದಲ ಬಾರಿಗೆ
ನಿರ್ದೇಶಕರ ಸ್ಥಾನ ಅಲಂಕರಿಸಿದ್ದಾರೆ.

ಸ್ವಾಮಿ ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದಲೂ ದೊಡ್ಡ ಮನೆಯ ಬಗ್ಗೆ ಅಪಾರ ಗೌರವ. ಅದರಲ್ಲೂ ರಾಘಣ್ಣ ಎಂದರೆ ಇವರಿಗೆ ಬಲು ಅಚ್ಚುಮೆಚ್ಚು. ಮುಂದೊಂದು ದಿನ ನಿರ್ದೇಶಕನಾದರೆ, ರಾಘವೇಂದ್ರ ರಾಜ್‌ಕುಮಾರ್ ಅವರ ಚಿತ್ರಕ್ಕೆ ನಿರ್ದೇಶನ
ಮಾಡಬೇಕು ಎಂಬುದು ಇವರ ಬಹು ದಿನಗಳ ಬಯಕೆಯಾಗಿತ್ತು. ಅಂತು ಅದಕ್ಕೆ ಕಾಲ ಕೂಡಿಬಂದಿದೆ. ತಾವಂದುಕೊಂಡಂತೆ ಸ್ವಾಮಿ, ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.

ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಪಿವಿಆರ್ ಸ್ವಾಮಿ, ರಾಜತಂತ್ರ ಚಿತ್ರಕ್ಕೆ ಆ್ಯಕ್ಷನ್ ಕಟ್
ಹೇಳುತ್ತಿದ್ದಾರೆ. ಆ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ನಾನು ಇಪ್ಪತ್ತು ವರ್ಷಗಳ ಹಿಂದೆ ಪುಟ್ಟ ಹಳ್ಳಿಯಿಂದ ಬಂದೆ. ನನ್ನ ಈ ಪ್ರಯತ್ನದ ಹಿಂದೆ ಹಲವಾರು ಶಕ್ತಿಗಳಿವೆ. ಅಮ್ಮನ ಮನೆ ನಂತರ ರಾಘಣ್ಣ ಅವರ ಜತೆ ಎರಡನೇ ಚಿತ್ರವಿದು. ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಗರಿಗೆದರಿವೆ ಎನ್ನುತ್ತಾರೆ ನಿರ್ದೇಶಕ ಸ್ವಾಮಿ.

ಮುಂದಿನ ವರ್ಷದ ಜನವರಿಗೆ ಚಿತ್ರ ತೆರೆಗೆ ಬರಲಿದೆ. ಹಿರಿಯ ಕಲಾವಿದರ ದಂಡು ರಾಜತಂತ್ರ ಈಗಿನ ಕಾಲಘಟ್ಟದಲ್ಲೇ ನಡೆಯುವ ಯೂನಿವರ್ಸಲ್ ಕಥೆಯಾಗಿದೆ. ಫೈಟ್ಸ್, ಸಾಂಗ್ಸ್‌ ಎಲ್ಲಾ ಇರುವ ಕಮರ್ಷಿಯಲ್ ಚಿತ್ರವಿದು.ರಾಜತಂತ್ರದಲ್ಲಿ
ಹಿರಿಯ ಕಲಾವಿದರ ಬಳಗವೇ ಇದೆ. ಕಲಾವಿದರಾದ ದೊಡ್ಡಣ್ಣ, ಭವ್ಯಾ, ಶ್ರೀನಿವಾಸಮೂರ್ತಿ, ಶಂಕರ್ ಅಶ್ವಥ್,  ರಂಜನ್ ‌ಹಾಸನ್, ಮುನಿರಾಜು, ನೀನಾಸಂ ಅಶ್ವಥ್ ಹೀಗೆ ಹಲವಾರು ಪ್ರಮುಖ ನಟ, ನಟಿಯರು ಅಭಿನಯಿಸುತ್ತಿದ್ದಾರೆ.

ವಿಶೇಷ ಎಂದರೆ 4 ಸಾಹಸ ದೃಶ್ಯಗಳು ಈ ಚಿತ್ರದಲ್ಲಿವೆ. ವೈಲೆಂಟ್ ವೇಲು ಹಾಗೂ ರಾಮ್‌ದೇವ್ ಅವರ ಸಾಸಹ ನಿರ್ದೇಶನವಿದೆ. ಚಿತ್ರದ ಹಾಡುಗಳಿಗೆ ಸುರೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿನಿಮಾದಲ್ಲಿ ಒಂದು ಮಾಸ್ ಹಾಗೂ ಎರಡು ಬಿಟ್ ಸಾಂಗ್ ಇದೆ. ಬೆಂಗಳೂರು, ನೆಲಮಂಗಲ ಸುತ್ತ ಮುತ್ತ 15 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಸುತ್ತೇವೆ ಎನ್ನುತ್ತಾರೆ ಸ್ವಾಮಿ. ವಿಶ್ವ ಡಿಜಿಟಲ್ ಮೀಡಿಯಾ ಮೂಲಕ ವಿಜಯಭಾಸ್ಕರ್ ಹರಪನಹಳ್ಳಿ, ಜೆ.ಎಂ.ಪ್ರಹ್ಲಾದ್ ಹಾಗೂ ಪಿ.ಆರ್.ಶ್ರೀಧರ್ ಒಟ್ಟಾಗಿ ರಾಜತಂತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಹಿರಿಯ ಸಾಹಿತಿ ಜೆ.ಎಂ.ಪ್ರಹ್ಲಾದ್ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿದ್ದಾರೆ.

ಹೊಸ ಗೆಟಪ್ ಹೊಸ ಪಾತ್ರ
ರಾಜತಂತ್ರ ಹೆಣೆಯಲಿರುವ ರಾಘಣ್ಣ ಅವರಿಗೆ ಈ ಚಿತ್ರದಲ್ಲಿ ನಟಿಸುತ್ತಿರುವುದು ಸಂತಸ ತಂದಿದೆ. ನಿರ್ದೇಶಕ ಸ್ವಾಮಿ ಹಿಂದೆ, ಅಮ್ಮನ ಮನೆ ಚಿತ್ರಕ್ಕೆ ಡಿಓಪಿ ಆಗಿದ್ರು. ಈಗ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಆ ಸಂದರ್ಭದಲ್ಲಿಯೇ ಈ ಕಥೆಯನ್ನು ಹೇಳಿದ್ದರು. ನನಗೂ ಕಥೆ ಹಿಡಿಸಿತ್ತು. ಚಿತ್ರ ಸೆಟ್ಟೇರಿದೆ, ಚಿತ್ರೀಕರಣವೂ ಭರದಿಂದ ಸಾಗಿದೆ. ಇಲ್ಲಿ ನಾನೊಬ್ಬ ನಿವೃತ್ತ ಮಿಲಿಟರಿ ಕ್ಯಾಪ್ಟನ್ ಆಗಿ ನಟಿಸುತ್ತಿದ್ದೇನೆ. ಹೊರಗಿನಿಂದ ಬರುವ ಶತ್ರುಗಳಿಂದ ದೇಶವನ್ನು ರಕ್ಷಿಸುತ್ತಿದ್ದ ಆತ, ನಿವೃತ್ತಿಯ ಬಳಿಕವೂ, ತನ್ನ ಸಮಾಜ, ದೇಶವನ್ನು ದುಷ್ಟರಿಂದ ಹೇಗೆ ರಕ್ಷಿಸುತ್ತಾನೆ ಎಂಬುದನ್ನು ನನ್ನ ಪಾತ್ರದ ಮೂಲಕ ತೋರಿಸುತ್ತಿದ್ದಾರೆ.

ಇದೇ ಮೊದಲ ಬಾರಿಗೆ ನಾನಿಂಥ ಪಾತ್ರ ಮಾಡುತ್ತಿದ್ದೇನೆ. ಇಲ್ಲಿ ಕ್ಯಾಪ್ಟನ್, ರಾಜನೂ ಹೌದು, ರಾಮನೂ ಹೌದು, ಸೈನ್ಯದಿಂದ ಹೊರಬಂದ ಮೇಲೂ ತನ್ನ ಕರ್ತವ್ಯ ಮುಗಿದಿಲ್ಲವೆಂದುಕೊಂಡು ಜವಾಬ್ದಾರಿ ನಿಭಾಯಿಸುವ ವ್ಯಕ್ತಿ. ಇಲ್ಲಿ ಕೆಲಸ ಮಾಡುವುದು ತಂತ್ರವೋ, ಮಂತ್ರವೋ ಅನ್ನುವುದನ್ನು ಚಿತ್ರ ನೋಡಿದಾಗ ತಿಳಿಯುತ್ತೆ ಎನ್ನುತ್ತಾರೆ ರಾಘಣ್ಣ.

Leave a Reply

Your email address will not be published. Required fields are marked *