Sunday, 11th May 2025

ರಾಗಿಯ ಕಾಳಿನ ಲೆಕ್ಕ ಗೊತ್ತಾ ?

ಸಾಧನೆಯಲ್ಲಿ ಎಂತೆಂತಹ ಸಾಧನೆ ಮಾಡಬಹುದು? ರಾಗಿ ಕಾಳನ್ನು ಲೆಕ್ಕ ಹಾಕುವುದರಲ್ಲೂ ಅನನ್ಯತೆ ತೋರಿರುವ ಉದಾಹರಣೆ ಇಲ್ಲಿದೆ.

ಸುರೇಶ ಗುದಗನವರ

ರಾಗಿಯ ಕಾಳನ್ನು ಬಳಸಿಕೊಂಡು, ವಿಭಿನ್ನ ರೀತಿಯ ಸಾಧನೆ ಮಾಡಿರುವ ಶ್ರೀನಿವಾಸ್ ಅವರು ಮೂಲತಃ ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಅಬ್ಬೂರ ಗ್ರಾಮದವರು. ಅವರ ತಂದೆ ಮಂಚಶೆಟ್ಟಿ, ತಾಯಿ ದೇವಮ್ಮ. ಶ್ರೀನಿವಾಸ ಅವರು ಬೆಂಗಳೂರ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಚೆನ್ನಪಟ್ಟಣ ತಾಲೂಕಿನ ಕಣ್ವ ಹಾಗೂ ಶಾನಭೋಗನಹಳ್ಳಿ ಗ್ರಾಮಗಳ ಪ್ರೌಢಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಲ್ಲದೇ ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಅಡಿಯಲ್ಲಿ ರಾಮನಗರ ಜಿಲ್ಲೆಯ ಕ್ಷೇತ್ರ ಕಾರ್ಯತಜ್ಞರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಕಡೆ ಹೆಚ್ಚು ಒಲವು ಹೊಂದಿರುವ ಅವರು ‘ನೀ ಜಿಗುಟುವಷ್ಟು ಚೂಟಿ ಹಾಗೂ ಹಾಲ್ಗಂಬ’ ಎಂಬ ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ.

ರೈತರು ಕಷ್ಟಪಟ್ಟು ರಾಗಿ ಬೆಳೆಯುವ ಬೆಳೆಯ ಶ್ರಮವನ್ನು ವಿಭಿನ್ನವಾಗಿ ಜನತೆಯ ಮುಂದಿಡಬೇಕು ಎಂಬ ಉದ್ದೇಶದಿಂದ, ಒಂದು ಕೆ.ಜಿ.ಯಲ್ಲಿ ಎಷ್ಟು ರಾಗಿ ಕಾಳುಗಳಿವೆ ಎಂಬುದನ್ನು ಶ್ರೀನಿವಾಸ್ ಎಣಿಸಿ, ರೈತರ ಶ್ರಮಕ್ಕೆ ವಿಭಿನ್ನವಾಗಿ ಧನ್ಯವಾದ ಸಲ್ಲಿಸಿದ್ದಾರೆ. ಈ ಸಾಧನೆ ಕರ್ನಾಟಕ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿರುವುದು ವಿಶೇಷ.

ಒಂದು ಕೆ.ಜಿ. ರಾಗಿಯಲ್ಲಿ ಎಷ್ಟು ಕಾಳುಗಳಿವೆ ಎಂಬುದನ್ನು ಎಣಿಸಿರುವ ಶ್ರೀನಿವಾಸರವರು ಮೊದಲಿಗೆ ಪ್ರತಿ ಪ್ಯಾಕೆಟ್‌ನಲ್ಲಿ 500 ಕಾಳುಗಳಂತೆ ಬೇರ್ಪಡಿಸಿ, ಅತೀ ಸಣ್ಣದಾದ ರಾಗಿ ಕಾಳುಗಳನ್ನು ಕೂಡ ಹೆಚ್ಚು ಕಡಿಮೆಯಾಗದಂತೆ ಎಣಿಸಿರುವುದು ವಿಶೇಷ ವಾಗಿದೆ. ಅವರು ಈ ಕಾಳುಗಳನ್ನು ಎಣಿಸಲು ಮೂರು ದಿನಗಳಲ್ಲಿ 37 ಗಂಟೆಗಳ ಸಮಯವನ್ನು ತೆಗೆದುಕೊಂಡು 685 ಪ್ಯಾಕೆಟ್ ‌ಗಳಲ್ಲಿ ರಾಗಿ ಕಾಳುಗಳನ್ನು ತುಂಬಿಸಿದ್ದಾರೆ.

ಅವರು ಎಣಿಸಿರುವ ಒಟ್ಟು ಒಂದು ಕೆ.ಜಿ. ರಾಗಿಯಲ್ಲಿ 3,42,249 ಕಾಳುಗಳು ಬಂದಿದ್ದು, ಅತಿ ಕ್ಲಿಷ್ಟಕರವಾದ ವಿಭಿನ್ನ ಪ್ರಯತ್ನ ದಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿಯೊಬ್ಬರಿಗೂ ರಾಗಿಯ ಮಹತ್ವ ಗೊತ್ತು. ರಾಗಿಯನ್ನು ಬೆಳೆಯಲು ರೈತರು ಸಾಕಷ್ಟು ಶ್ರಮ ಹಾಕುತ್ತಾರೆ. ಆ ಶ್ರಮ ಎಲ್ಲರಿಗೂ ತಿಳಿಯುವುದಿಲ್ಲ. ಅಲ್ಲದೇ ರಾಗಿಗೆ ಇಂದಿಗೂ ಬೆಂಬಲ ಬೆಲೆ ಸಿಕ್ಕಿಲ್ಲ. ಹೀಗಾಗಿ ರಾಗಿಯ ಮಹತ್ವ ತಿಳಿಸುವ ನಿಟ್ಟಿನಲ್ಲಿ ಈ ಕೆಲಸ ಮಾಡಿದ್ದೇನೆ ಎಂದು ಶ್ರೀನಿವಾಸ ಹೇಳುತ್ತಾರೆ.

ಶ್ರೀನಿವಾಸರವರು ಈ ಎಲ್ಲಾ ಮಾಹಿತಿ ಹಾಗೂ ವೀಡಿಯೊ ಮತ್ತು ಫೋಟೋಗಳನ್ನು ಕರ್ನಾಟಕ ಬುಕ್ ಆಫ್ ರೆಕಾಡ್ ಗೆರ್ ಕಳುಹಿಸಿ ಕೊಟ್ಟಿದ್ದಾರೆ. ಅವರಿಗೆ ಕರ್ನಾಟಕ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಕೂಡ ಲಭಿಸಿಸಿದೆ. ಅವರ ಈ ವಿಭಿನ್ನ ಸಾಧನೆ ಇದೀಗ ಎಲ್ಲರ ಮನಸೂರೆಗೊಂಡಿದೆ.

Leave a Reply

Your email address will not be published. Required fields are marked *