Monday, 12th May 2025

ಪುರಾಣ ಕೇವಲ ಕಥೆಯಲ್ಲ ಜೀವನಗಾಥೆ

ನರಸಿಂಹ ಭಟ್ಟ

ಕೆಲವು ಐತಿಹಾಸಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ನಮ್ಮ ಪುರಾಣಗಳು ಕೆಲವು ವಲಯಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಹಾಗಾದರೆ, ಪುರಾಣಗಳೆಂದರೆ ಏನು? ಅವುಗಳ ಮೌಲ್ಯವೇನು?

ನಮ್ಮ ನಾಡಿನ ಪುರಾಣದ ಬಗ್ಗೆ ನಂಬಿಕೆ, ಗೌರವ, ಪ್ರೀತಿ ಎಲ್ಲವೂ ಜನಸಾಮಾನ್ಯರಲ್ಲಿ ಇವೆ. ಬಹು ಪಾಲು ಎಲ್ಲರೂ ಪುರಾಣ ಗಳನ್ನು ಪೂಜ್ಯ ಭಾವ ನೆಯಿಂದ, ಗೌರವದಿಂದ ಕಾಣುತ್ತಾರೆ. ಆದರೆ ಇನ್ನು ಕೆಲವರಲ್ಲಿ, ಇದೊಂದು ಅಂತೆ-ಕಂತೆಗಳ ಆಗರ, ಕಾಲ್ಪನಿಕ ಕಥೆಗಳ ಪುಂಜ, ಅಥವಾ ಯಾವುದೋ ಕಾಲದ, ನಂಬಲು ಅಸಾಧ್ಯವಾದ ದೇಶ, ಕಾಲ, ರಾಜ್ಯ, ರಾಜರ ಬಗೆಗಿನ ಒಂದಿಷ್ಟು ಮಾಹಿತಿ, ಒಂದೊಂದೂ ಕೆಲಸಕ್ಕೆ ಬಾರದ, ಕೆಲಸವಿಲ್ಲದವರು ಬರೆದಿಟ್ಟ ಒಂದಿಷ್ಟು ಸಾಹಿತ್ಯರಾಶಿ ಎಂಬ ಭಾವ
ನೆಯೂ ಇದೆ.

ನಮ್ಮ ದೇಶದ ಐತಿಹಾಸಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಂತಹ ದೊಂದು ತಪ್ಪು ಭಾವನೆ ಮೂಡಿರಲೂ ಬಹುದು. ಅಥವಾ ಇತ್ತೀಚಿನ ದಶಕಗಳಲ್ಲಿ ನಮ್ಮ ಜನರು ಒಡ್ಡಿಕೊಂಡ ಪಾಶ್ಚಾತ್ಯ ಪ್ರಭಾವಿತ ಶಿಕ್ಷಣ ದಿಂದಾಗಿಯೂ, ನಮ್ಮ ಪುರಾಣಗಳು ತುಸು ಅವಗಣನೆಗೆ ಒಳಗಾಗಿರಬಹುದು. ಮೌಲ್ಯಭರಿತ ಪುರಾಣ ಗಳ ಕುರಿತು ಈ ರೀತಿಯ ಎರಡು ಅಭಿಪ್ರಾಯಗಳು ಇಂದು ಚಾಲ್ತಿಯಲ್ಲಿರು ವಾಗ, ಇವುಗಳಲ್ಲಿ ಯಾವ ಅಭಿಪ್ರಾಯವನ್ನು ನಾವು ಪುರಸ್ಕರಿಸಬೇಕು? ಯಾವುದನ್ನು ತಿರಸ್ಕರಿಸಬೇಕು? ಪುರಾಣಗಳ ಮೌಲ್ಯವನ್ನು ಅರಿತಾಗ ಇಂತಹ ಪ್ರಶ್ನೆಗೆ ಉತ್ತರ ಹುಡುಕಬಹುದು. ಪುರಾಣದ ಬಗ್ಗೆ ನಿಜ ಏನೆಂಬುದನ್ನು ತಿಳಿಯುವ ಪ್ರಯತ್ನ ಮಾಡೋಣ. ‘ಇತಿಹಾಸ-ಪುರಾಣಗಳಿಂದ ವೇದವು ವಿವರಿಸಲ್ಪಟ್ಟಿದೆ’ ಎಂಬ ಮಾತಿದೆ. ಮತ್ತು ಅಸ್ಯ ಮಹತೋ ಭೂತಸ್ಯ ನಿಃಶ್ವಸಿತಮೇತದ್ ಯದ್ ಋಗ್ವೇದೋ ಯಜುರ್ವೇದಃ ಸಾಮವೇದೋ ಅಥರ್ವಾಂಗಿರಸಃ ಇತಿಹಾಸಃ ಪುರಾಣಮ್ ಎಂಬ ವಾಜಸನೇಯಿ ಬ್ರಾಹ್ಮಣೋ ಪನಿಷತ್ತಿನ ಒಂದು ಮಾತಿದೆ.

ನಾಲ್ಕು ವೇದಗಳು, ಇತಿಹಾಸ ಮತ್ತು ಪುರಾಣ ಇವುಗಳು ಭಗವಂತನ ಶ್ವಾಸರೂಪವಾಗಿ ಹೊರಬಂದ ಶಬ್ದರೂಪದ ವಿಸ್ತಾರ ಎಂದು ಈ ಮಾತಿನ ಅಭಿಪ್ರಾಯ. ಅಲ್ಲದೇ ಪುರಾಣವನ್ನು ಮಿತ್ರಸಮ್ಮಿತಾ ಎಂಬುದಾಗಿ ಕರೆದು, ದುಷ್ಟಮಾರ್ಗದಲ್ಲಿ ನಿರತನಾದ ವ್ಯಕ್ತಿಯನ್ನು ಸನ್ಮಾರ್ಗಕ್ಕೆ ಕರೆತರಲು ಇರುವ ಉತ್ಕೃಷ್ಟ ಸಾಧನ ಎಂದೂ ಕರೆಯಲಾಗಿದೆ. ಇದರಲ್ಲಿ ಭಾರತದ ಸಂಸ್ಕೃತಿ-ನಾಗರಿ ಕತೆಯ ನೈಜ ಚಿತ್ರಣವಿದೆ.

ಸಾಮಾನ್ಯರಿಗೆ ಜ್ಞಾನದರ್ಶಿ
ಜಟಿಲವೆಂದು ಪರಿಗಣಿತವಾದ ಮೌಲ್ಯಯುತ ಮತ್ತು ತಾತ್ತ್ವಿಕವಾದ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಯಪಡಿಸುವ
ಒಂದು ಉಪಾಯವೂ ನಮ್ಮ ಪುರಾಣಗಳಲ್ಲಿ ಅಡಗಿದೆ. ಸನಾತನ ವಿದ್ಯಾಪರಂಪರೆಯ ವೈಭವದ ಕಥನವಿದೆ.

ಭಾರತದಲ್ಲಿ ಇರುವ ಭೌತಿಕ-ದೈವಿಕ-ಆಧ್ಯಾತ್ಮಿಕ ಉತ್ಕರ್ಷದ ಪರಾಕಾಷ್ಠೆಯನ್ನು ನಾವು ಪುರಾಣಗಳಲ್ಲಿ ನೋಡಬಹುದಾಗಿದೆ. ಇಲ್ಲೊಂದು ಜೀವನಾದರ್ಶವಿದೆ. ಪ್ರತಿಯೊಬ್ಬ ಮಾನವನ ಜೀವನದ ಲಕ್ಷ್ಯ ಯಾವುದು? ಹೇಗೆ ಜನಸಾಮಾನ್ಯರು ತಮ್ಮ ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬಹುದು ಎಂಬುದನ್ನು ಅನೇಕ ಕಥೆಗಳ ಮೂಲಕ ಮನನ ಮಾಡಿಸುವ ಪ್ರಯತ್ನವಿದೆ. ಈ ನಿಟ್ಟಿನಲ್ಲಿ ನೋಡಿದರೆ, ಜನಸಾಮಾನ್ಯರಿಗೆ ತಿಳಿವಳಿಕೆಯನ್ನು, ಮಾಹಿತಿಯನ್ನು, ಸರಿದಾರಿಯನ್ನು ಮತ್ತು ಬೆಳಕನ್ನು ತೋರುವ ಜ್ಞಾನದರ್ಶಿಯೇ ಪುರಾಣಗಳು. ಜೀವನವೆಂದರೆ ಅದೊಂದು ನಿರಂತರ ಹೋರಾಟ, ಕಷ್ಟ ಸುಖಗಳ ಸಮ್ಮಿಳನ.

ನಮ್ಮ ಜೀವನದಲ್ಲಿ ಬರುವ ಕಷ್ಟ-ಸಂಕಟಗಳನ್ನು ಹೇಗೆ ನಿಭಾಯಿಸಬೇಕೆಂಬ ಬಗ್ಗೆ ಆದರ್ಶಪುರುಷರ ಜೀವನಗಾಥೆಗಳು
ಇದರಲ್ಲಿವೆ. ಜನಸಾಮಾನ್ಯರ ದಿನಚರಿಯ ಒಳಸತ್ಯದ ಅನುಭವ ಏನೆಂಬುದನ್ನು ತಿಳಿಸುವ, ಭೌತಿಕ-ಆಧ್ಯಾತ್ಮಿಕ ಎರಡೂ ಸೇರಿ ರುವ ಕಥೆಗಳನ್ನು ಉಪಾಯವಾಗಿ ಇದರಲ್ಲಿ ಹೆಣೆದಿದ್ದಾರೆ. ಜನರು ಪುರಾಣದಲ್ಲಿ ಕಾಣುವ ಭೌತಿಕವಾದ ವಿಷಯಗಳಿಂದ ಆಕರ್ಷಿತರಾಗಿ ಇದರತ್ತ ಬಂದು ಆಧ್ಯಾತ್ಮಿಕ ಸ್ತರಕ್ಕೆ ಏರುವಂತೆ ಮಾಡಿದ್ದಾರೆ. ಹೀಗೆ ಇಷ್ಟೆೆಲ್ಲ ವಿಶೇಷತೆಗಳಿಂದ ಕೂಡಿದ ಪುರಾಣ ವನ್ನು ಅಂತೆ-ಕಂತೆಗಳ ಸಂತೆ ಎಂದು ಕರೆದರೆ ಸಮಂಜನ ಎನಿಸೀತೆ? ತಿಳಿಯದಿರುವವರು ಗೀಚಿದ ಅಕ್ಷರಗಳ ಸಮೂಹ ವೆನ್ನೋಣವೇ? ಬಹು ಪುರಾತನ ಕಾಲದಲ್ಲಿ ರಚನೆಗೊಂಡ, ಒಂದಕ್ಕೊಂದು ಸಂಬಂಧವಿಲ್ಲದ ಕಥನಗಳು ಇವು ಎಂದು ಕರೆದರೆ ಸರಿಯಾದೀತೆ? ಇಲ್ಲ.

ಮಹರ್ಷಿಗಳ ಮನೋಭೂಮಿಕೆಯಲ್ಲಿ ಅವರ ಸಾಹಿತ್ಯವನ್ನು ನೋಡಿದಾಗ ಅವುಗಳ ತಾತ್ತ್ವಿಕ ಹಿನ್ನೆಲೆ ನಮಗೆ ಅರ್ಥವಾ
ಗಬಹುದು. ಇಲ್ಲದಿದ್ದರೆ ಅವುಗಳ ಸಾರವನ್ನು ಗ್ರಹಿಸಲು ಬಾರದೇ ಆಪಾದನೆಗಳನ್ನು ಮಾಡುತ್ತಾ ಕಾಲಹರಣ ಮಾಡುವು ದಾಗುತ್ತದೆ. ಈ ಉದಾಹರಣೆಯನ್ನು ಗಮನಿಸಿದರೆ ಈ ವಿಷಯಕ್ಕೊಂದು ಪುಷ್ಟಿ ಸಿಗುತ್ತದೆ. ಒಬ್ಬ ರೋಗಿಯು ಹೊಟ್ಟೆನೋವನ್ನು ‘ಅಹಹಹ’ ಎಂಬ ಧ್ವನಿಯಿಂದ ಅಥವಾ ನರಳಿಕೆಯ ಮೂಲಕ ಹೊರಗೆ ತರುತ್ತಾ, ಸುತ್ತಲಿನ ಜನರ ಗಮನವನ್ನು ತನ್ನತ್ತ ಸೆಳೆಯುತ್ತಾನೆ.

ನಮ್ಮ ಸಂಸ್ಕೃತಿಯ ಋಷಿಗಳು ತಮಗಾದ ಸಂತೋಷವನ್ನು ಸಾಹಿತ್ಯ, ಕಾವ್ಯ ಮತ್ತು ಋಕ್‌ಗಳ ಮೂಲಕ ಹೊರಪಡಿಸಿದರು. ಆ
ಮೂಲಕ, ಜನರಿಗೆ ಜ್ಞಾನವನ್ನು ಹಂಚಿದರು. ಇದುವೇ ಋಷಿ ಸಾಹಿತ್ಯ. ಅವರ ಹೆಜ್ಜೆಯನ್ನು ಅನುಸರಿಸಿ ನಡೆದಾಗ ನಮಗೂ ಆ
ಸಂತೋಷದ ಅನುಭವವಾದೀತು.

Leave a Reply

Your email address will not be published. Required fields are marked *