ರವಿ ದುಡ್ಡಿನಜಡ್ಡು
ಸ್ಮಾರ್ಟ್‌ಫೋನ್ ಮತ್ತು ಆ್ಯಪ್‌ಗಳ ಇಂದಿನ ಯುಗದಲ್ಲಿ, ಬಳಕೆದಾರರ ಮಾಹಿತಿಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ಹಲವು ಕಂಪನಿಗಳು ತುದಿಗಾಲಲ್ಲಿ ನಿಂತಿವೆ. ಅಂತಹ ಕಂಪನಿಗಳಿಗೆ ಬಳಕೆದಾರರ ಖಾಸಗಿ ಮಾಹಿತಿಯನ್ನು ನೀಡುವವರು ಯಾರು? ಬಳಕೆದಾರರ ಮಾಹಿತಿಯನ್ನು ಮಾರಾಟಮಾಡಿ ಹಣಮಾಡಿಕೊಳ್ಳುವಲ್ಲಿ ಇನ್ಸ್ಟಾಗ್ರಾಂ ಮೊದಲ ಸ್ಥಾನದಲ್ಲಿದೆ ಎಂದು ಪಿಕ್ಲೌಡ್ ಎಂಬ ಕ್ಲೌಡ್‌ಸ್ಟೋರೇಜ್ ಸಂಸ್ಥೆಯ ಅಧ್ಯಯನ ಬಯಲು ಮಾಡಿದೆ.
ಇನ್ಸ್ಟಾಗ್ರಾಂ ಬಳಕೆದಾರರ ಶೇ.79ರಷ್ಟು ಮಾಹಿತಿಯನ್ನು ಅದು ಮೂರನೆಯ ವ್ಯಕ್ತಿ/ಸಂಸ್ಥೆಗಳಿಗೆ ನೀಡುತ್ತದಂತೆ. ಇನ್ಸ್ಟಾಗ್ರಾಂ ಬಳಕೆದಾರರು ಮಾಡಿದ ಶಾಪಿಂಗ್ ವಿವರ, ಹಲವು ವೈಯಕ್ತಿಕ ಮಾಹಿತಿ, ಬ್ರೌಸಿಂಗ್ ಹಿಸ್ಟರಿ ಮೊದಲಾದ ವಿವರಗಳನ್ನು
ಅದು ಇತರ ಜಾಹೀರಾತು ಕಂಪನಿಗಳಿಗೆ ನೀಡುತ್ತದೆ. ಜತೆಯಲ್ಲೇ, ಇನ್ಸ್ಟಾಗ್ರಾಂ ಬಳಕೆದಾರರ ಶೇ.86 ರಷ್ಟು ಮಾಹಿತಿಯನ್ನು ಮಾತೃಸಂಸ್ಥೆ ಫೇಸ್ ಬುಕ್‌ನ ಸ್ವಂತ ಉತ್ಪನ್ನಗಳ ಮಾರಾಟಕ್ಕೆೆ ಉಪಯೋಗಿಸಲಾಗುತ್ತದೆ.
ಈ ಅಂಕಿ ಅಂಶಕ್ಕೆ ಹೋಲಿಸಿದರೆ, ಸಿಗ್ನಲ್, ನೆಟ್‌ಫ್ಲಿಕ್ಸ್, ಸ್ಕೈಪ್, ಗೂಗಲ್ ಕ್ಲಾಸ್‌ರೂಂ, ಮೈಕ್ರೊಸಾಫ್ಟ್ ಟೀಮ್ಸ್ ಮೊದಲಾದ ಆ್ಯಪ್‌ಗಳು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಹೆಚ್ಚಾಗಿ ಸಂಗ್ರಹಿಸುವುದೇ ಇಲ್ಲ! ಮತ್ತು ಸಂಗ್ರಹಗೊಂಡ ಮಾಹಿತಿ ಯನ್ನು ಇತರ ಕಂಪನಿಗಳಿಗೆ ನೀಡುವುದೂ ಇಲ್ಲ. ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂಗಳು ಮೂರನೆಯ ಕಂಪನಿಗಳಿಗೆ ಅತಿ ಹೆಚ್ಚಿನ ಮಾಹಿತಿಯನ್ನು ನೀಡುತ್ತವೆ ಎಂದು ಪಿಕ್ಲೌಡ್‌ನ ಅಧ್ಯಯನ ತಿಳಿಸಿದೆ.
ಫೇಸ್‌ಬುಕ್ ಬಳಕೆದಾರರ ಶೇ.86 ಮಾಹಿತಿಯನ್ನು ಫೇಸ್‌ಬುಕ್‌ನ ಸ್ವಂತ ಉಪಯೋಗಕ್ಕೆ, ಜಾಹಿರಾತಿಗೆ ಬಳಸಲಾಗುತ್ತದೆ ಮತ್ತು ಶೇ.56 ಮಾಹಿತಿಯನ್ನು ಇತರ ಕಂಪನಿಗಳಿಗೆ ಒದಗಿಸಲಾಗುತ್ತದೆ. ಲಿಂಕ್ಡ್ ಇನ್ ಮತ್ತು ಉಬರ್ ಈಟ್ಸ್ ಆ್ಯಪ್‌ಗಳಲ್ಲಿ ಸಂಗ್ರಹಗೊಂಡ ಶೇ.50ರಷ್ಟು ಖಾಸಗಿ ಮಾಹಿತಿಯನ್ನು ಇತರರಿಗೆ ನೀಡಲಾಗುತ್ತದೆ. ಯುಟ್ಯೂಬ್ ಬಳಕೆದಾರರ ಶೇ.42 ಮಾಹಿತಿ ರವಾನೆ ಆಗುತ್ತದೆ ಎಂದಿದೆ ಪಿಕ್ಲೌಡ್.
ವಿಡಿಯೋ ನೋಡುವಾಗ ಗೋಚರವಾಗುವ ಜಾಹಿರಾತುಗಳ ಸ್ವರೂಪ ಇದನ್ನು ಅವಲಂಬಿಸಿದೆ ಎಂದಿದೆ ಪಿಕ್ಲೌಡ್.
ಇಬೇ ಸಂಸ್ಥೆಯು ತನ್ನ ಬಳಕೆದಾರರ ಶೇ.40ರಷ್ಟು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿ, ಮೂರನೆಯವರಿಗೆ ಮಾರಾಟ ಮಾಡುತ್ತದೆ.
ಮಾಹಿತಿಗಳ ಮಾರಾಟ ಮತ್ತು ಡಾಟಾ ಮೈನಿಂಗ್‌ನ ಈ ಯುಗದಲ್ಲಿ, ಅಮೆಜಾನ್ ಸಂಸ್ಥೆೆಯು ಅತಿ ಕಡಿಮೆ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಉಪಯೋಗಿಸುತ್ತದೆ ಎಂಬ ಆಶ್ಚರ್ಯಕರ ಮಾಹಿತಿಯನ್ನು ಪಿಕ್ಲೌಡ್ ಅಧ್ಯಯನ ಹೊರಹಾಕಿದೆ. ಜತೆಗೆ ತನ್ನ ಬಳಕೆದಾರರ ವೈಯಕ್ತಿಕ ಮತ್ತು ಖಾಸಗಿ ಮಾಹಿತಿಯನ್ನು ಅಮೆಜಾನ್ ಸಂಸ್ಥೆೆಯು ಇತರರಿಗೆ ರವಾನೆ ಮಾಡುವುದಿಲ್ಲ
ಎಂದು ಸಹ ಈ ಅಧ್ಯಯನ ತಿಳಿಸಿದೆ.