Tuesday, 13th May 2025

ಮತ್ತೆ ಒಂದಾದ ಹಳೆ ವಿದ್ಯಾರ್ಥಿಗಳು

ರಾಮ ಕಿಶನ್ ಕೆ.ವಿ.

ಐವತ್ತು ವರ್ಷಗಳ ಹಿಂದೆ ಆ ಶಾಲೆಯಲ್ಲಿ ಕಲಿತವರನ್ನು ಮತ್ತೆ ಒಂದು ಮಾಡಿದ್ದು ವಾಟ್ಸಾಪ್ ಗ್ರೂಪ್. ಹಾಗೆ ಮತ್ತೆ ಸಂಪರ್ಕ ಪಡೆದ ಹಳೆ ವಿದ್ಯಾರ್ಥಿಗಳು ತಮ್ಮ ಶಾಲೆಗೆ ಭೇಟಿ ನೀಡಿ, ಗುರುವಂದನೆ ನಡೆಸಿದ ಕ್ಷಣ ಅಪೂರ್ವ.

ಎಲ್ಲೆಲ್ಲೂ ಸಂಭ್ರಮದ ವಾತಾವರಣ. ಹಳೆ ವಿದ್ಯಾರ್ಥಿಗಳನ್ನು ಕಂಡು ಗುರುಗಳಿಗೆಲ್ಲಾ ಹೆಮ್ಮೆಯ ಭಾವ. ಈ ಸಂದರ್ಭದಲ್ಲಿ ಹಳೆ
ವಿದ್ಯಾರ್ಥಿಗಳ ಬಹುದಿನದ ಕನಸು ನನಸಾಗಿತ್ತು. ತಾವು ಕಲಿತ ಶಾಲೆಯ ಪರಿಸರದಲ್ಲಿ ಬಹುಕಾಲದ ನಂತರ ಓಡಾಡಿದ
ಸಂಭ್ರಮ, ಸಡಗರ. ಪಿಯುಸಿ ಮುಗಿಸಿ ಹೆಚ್ಚಿನ ಓದಿಗಾಗಿ ಎಲ್ಲರೂ ಚದುರಿ ಹೋಗಿದ್ದರು. ಈಗ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿ ದ್ದಾರೆ. ಸಾಧನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಹೀಗಿದ್ದ ಮಂದಿ ಸರಿ ಸುಮಾರು 44 ವರ್ಷಗಳ ನಂತರ ಒಟ್ಟಾಗಿದ್ದು ಪುತ್ತೂರಿನ ಕೊಂಬೆಟ್ಟು ಪ್ರೌಢಶಾಲೆಯಲ್ಲಿ. ಮತ್ತೆ ಒಂದಾಗಿ ತಮಗೆ ವಿದ್ಯೆ ನೀಡಿದ ಗುರುಗಳಿಗೆ ಗುರುವಂದನೆ ಸಲ್ಲಿಸಿದರು.

ವೇದಿಕೆ ಮೇಲೆ ಹೋಗಿ ಒಬ್ಬೊಬ್ಬರೇ ಮಾತನಾಡುತ್ತಿದ್ದರು. ಎಲ್ಲರ ಮಾತೂ ಶಾಲಾ ದಿನಗಳ ಬಗ್ಗೆ. ಹಳೆಯ ದಿನಗಳ ಬಗ್ಗೆ
ನಿರಂತರವಾಗಿ ಮಾತುಗಳು ಹೊರಬರುತ್ತಿದ್ದವು. ಇಲ್ಲಿ ಕಲಿತು ಉನ್ನತ ಸ್ಥಾನದಲ್ಲಿ ನಿಂತಿದ್ದೇನೆ ಎಂದು ಪ್ರತಿಯೊಬ್ಬರೂ
ಹೇಳುತ್ತಿದ್ದಂತೆ ಎದುರಿದ್ದ ಎಲ್ಲರಿಗೂ ಹೆಮ್ಮೆ. ಶಿಕ್ಷಕರಿಗಂತೂ ಶಿಷ್ಯಂದಿರು ಏರ್ಪಡಿಸಿದ ಗುರುವಂದನ ಕಾರ್ಯಕ್ರಮದಿಂದ ಹೃದಯ ತುಂಬಿ ಬಂದು ಮಾತೇ ಹೊರಡುತ್ತಿ ರಲಿಲ್ಲ.

ಮತ್ತೆ ಒಂದುಗೂಡಿಸಿದ ವಾಟ್ಸಪ್ ಗ್ರೂಪ್

ಪುತ್ತೂರಿನಲ್ಲಿರುವ ಕೊಂಬೆಟ್ಟು ಶಾಲೆ ನೂರು ವರ್ಷಗಳನ್ನು ಪೂರೈಸಿದೆ. ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಯನ್ನು ಮಾಡಿ ದೇಶ ವಿದೇಶಗಳಲ್ಲಿ ನೆಲೆಸಿದ್ದಾರೆ. ಈ ನಡುವೆ 1972ರಿಂದ 1977ರ ಅವಧಿಯಲ್ಲಿ ಹೈಸ್ಕೂಲಿನಿಂದ ಪಿಯುಸಿವರೆಗೆ ಶಿಕ್ಷಣ ಪೂರೈಸಿದವರು ಮತ್ತೆ ಒಂದಾಗಿದ್ದಾರೆ.

ಅಂದು ಈಗಿನಷ್ಟು ತಂತ್ರಜ್ಞಾನವೂ ಬೆಳೆದಿರದ ಕಾಲ. ಹೀಗಾಗಿ ಎಲ್ಲಿಲ್ಲಿ, ಏನು ಮಾಡುತ್ತಿದ್ದಾರೆ ಎಂಬ ಸ್ಪಷ್ಟವಾದ ಮಾಹಿತಿ ಯೂ ಇರಲಿಲ್ಲ. ಹೀಗಿದ್ದ ಹಳೆಯ ಸ್ನೇಹಿತರನ್ನೆಲ್ಲಾ ಮತ್ತೆ ಒಂದು ಮಾಡಿದ್ದು ವಾಟ್ಸಪ್ ಗ್ರೂಪ್. ಕಳೆದ ಲಾಕ್ ಡೌನ್ ಅವಧಿ ಯಲ್ಲಿ ಎಲ್ಲರೂ ಮನೆಯಲ್ಲೇ ಇದ್ದರು. ಎಲ್ಲರಿಗೂ ಹಳೆಯ ಸ್ನೇಹಿತರ ಜತೆಗೆ ವ್ಯವಹರಿಸಬೇಕು ಎಂಬ ಬಯಕೆ. ಈ ಸಂದರ್ಭ ದಲ್ಲಿ ಸ್ನೇಹಿತರು ವಾಟ್ಸಪ್ ಗ್ರೂಪಿನ ಮೂಲಕ ಒಟ್ಟಾಗುತ್ತಾರೆ. 44 ವರ್ಷಗಳ ಹಿಂದಿನ ಮಾತುಕಥೆ. ಹಳೆಯ ನೆನಪುಗಳ ಮರು ಕಳಿಸುವಿಕೆ.

ಹಳೆ ವಿದ್ಯಾರ್ಥಿಗಳಿಂದ ಧನ ಸಂಗ್ರಹ

ವಾಟ್ಸಪ್ ಗ್ರೂಪಿನ ಮೂಲಕ ಮತ್ತೆ ಒಂದಾದ ಹಳೆ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿ ಕೆಲಸಕ್ಕೂ ಮುಂದಾಗುತ್ತಾರೆ. ಇದಕ್ಕಾಗಿ ಹಳೆ ವಿದ್ಯಾರ್ಥಿಗಳೆಲ್ಲ ಜತೆಯಾಗಿ ಹಣದ ಸಂಗ್ರಹ ಮಾಡಿ, ಮೊತ್ತವನ್ನು ಶಾಲೆಯ ಅಭಿವೃದ್ಧಿಗೆ ದೇಣಿಗೆ ನೀಡುತ್ತಾರೆ. ಈ ಮೂಲಕ ಶಾಲೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ ಸಾರ್ಥಕ ಭಾವ. ಶಿಷ್ಯರುಗಳು ಶಾಲೆಗೆ ನೀಡದ ಸಹಕಾರ ಕಂಡು ಹೆಮ್ಮೆಯ ಭಾವ ಪಾಠ ಹೇಳಿದ ಗುರುಗಳದ್ದು.

ಗುರುವಂದನೆ
ಮಾತುಕಥೆಯ ನಡುವೆ ಮುಖತಃ ಭೇಟಿಯಾಗಬೇಕೆಂಬ ಬಯಕೆ ಎಲ್ಲರದ್ದು. ಇದಕ್ಕಾಗಿ ಕಲಿತ ಶಾಲೆಯಲ್ಲಿ ಭೇಟಿಯಾಗುವ  ನಿರ್ಧಾರವಾಗುತ್ತದೆ. ಅದೇ ದಿನ ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ವಂದನೆ ನೀಡುವುದು ಎಂಬ ತೀರ್ಮಾನವೂ ನಡೆಯುತ್ತದೆ. ಎಲ್ಲರೂ ಗುರುವಂದನೆ ನಡೆಸಿ ಕೃತಜ್ಞತೆ ಸಲ್ಲಿಸಿದರು. ವಾಟ್ಸಪ್ ಗ್ರೂಪಿನ ಮೂಲಕ ಶುರುವಾದ ಮಾತುಕಥೆ ವಿದ್ಯಾರ್ಥಿ ಜೀವನದ ಸಹಪಾಠಿಗಳನ್ನು ಒಟ್ಟು ಸೇರಿಸಿದೆ. ಶಾಲೆಗೆ ಪುಟ್ಟ ಕೊಡುಗೆ ನೀಡಿ, ಗುರುವಂದನೆ ನಡೆಸಿದ ಹಳೆ ವಿದ್ಯಾರ್ಥಿಗಳ ಈ ಕೈಂಕರ್ಯ, ಗುರುಗಳಲ್ಲಿ ಹೆಮ್ಮೆಯ ಭಾವ ಮೂಡಿಸಿದೆ. ಇದೊಂದು ಮಾದರಿ ಕಾರ್ಯಕ್ರಮ ಎಂದು ಎಲ್ಲರಿಂದ ಗುರುತಿಸಲ್ಪಟ್ಟಿದೆ.

Leave a Reply

Your email address will not be published. Required fields are marked *