Saturday, 10th May 2025

ಮಳೆಗಾಲದ ನಿತ್ಯೋತ್ಸವ

ಕಮಲಾಕರ ಕೆ.ಆರ್‌

ಪ್ರಕೃತಿ ನಡೆಸುತಿದೆ ಇಲ್ಲಿ ನಿತ್ಯೋತ್ಸವ, ಮಳೆರಾಯನ ಹರ್ಷೋತ್ಸವ.

ತಾಳಗುಪ್ಪದಿಂದ ಜೋಗಕ್ಕೆ ಸುಮಾರು 12 ಕಿಮೀ. ಇವೆರಡರ ಮಧ್ಯೆ ಬರುವ ನಮ್ಮ ಊರಿನಿಂದ ಜೋಗಕ್ಕೆ ಸುಮಾರು 9 ಕಿಮಿ. ನಮಗೆ ತಾಳಗುಪ್ಪ, ಸಾಗರದ ಕಡೆ ಸಂಪರ್ಕವೇ ಜಾಸ್ತಿಯಾಗಿತ್ತೇ ಹೊರತು ಜೋಗದ ಕಡೆ ಹೋಗುವ ಪ್ರಮೇಯ ಕಡಿಮೆಯಾಗಿತ್ತು. ಹಾಗಾಗಿ ಜೋಗದ ಬಗೆಗಿನ ವಿವರಣೆ ಓದಿ ತಿಳಿದಿದ್ದರೂ ಪ್ರವಾಸಕ್ಕಾಗಿ ಜೋಗಕ್ಕೆ ಹೋಗಿದ್ದು ವಿರಳ.

ಆದರೆ ನಾವು ದೊಡ್ಡವರಾದ ಮೇಲೆ, ಹೊಟ್ಟೆಪಾಡಿಗಾಗಿ ಊರಿಂದ ಹೊರಬಿದ್ದ ಮೇಲೆ ಮಲೆನಾಡು, ಮಳೆ ಎರಡೂ ದೂರವಾದರೂ ಮಳೆಗಾಲದ ವರ್ಷಧಾರೆ ಅಪ್ಯಾಯಮಾನವಾಗುತ್ತಾ ಸಾಗಿದ್ದಂತೂ ದಿಟ. ಮಳೆಗಾಲ ದಲ್ಲಿ ಊರಿಗೆ ಹೋದಾಗ ಜೋಗಕ್ಕೆ ಹಲವಾರು ಬಾರಿ ಹೋಗಿದ್ದೇವೆ. ಮೂಗೂರು ಮಲ್ಲಪ್ಪ ಬರೆದ, ‘ಮಾನವ ನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ…ಇರೊದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ ..’ ಎಂಬ ಸಾಲುಗಳು ಎಷ್ಟು ಅರ್ಥ ಪೂರ್ಣ!

ಪ್ರತಿ ವರ್ಷ ಲಕ್ಷಲಕ್ಷ ಜನರನ್ನು ತನ್ನತ್ತ ಸೆಳೆಯುವ ಗೇರುಸೊಪ್ಪ ಜಲಪಾತ ತನ್ನ ಅಯಸ್ಕಾಂತೀಯ ಗುಣ ಗಳನ್ನು ಎಂದೂ ಕಳೆದುಕೊಳ್ಳಲಾರದು. ರಾಜ, ರೋರರ್, ರಾಕೆಟ್ ಮತ್ತು ಲೇಡಿ ಎಂದು ನಾಲ್ಕು ಕವಲುಗಳಾಗಿ ಬೀಳುವ ಜಲಪಾತ ಮಕ್ಕಳಿಂದ ಮುದುಕರವರೆಗೆ ಎಲ್ಲರನ್ನೂ ಮರುಳು ಮಾಡುವ ಅದ್ಯಾವ
ಗುಣವನ್ನು ತನ್ನ ಎದೆಯಲ್ಲಿ ಬಚ್ಚಿಟ್ಟುಕೊಂಡಿದೆ ಎಂಬ ಪ್ರಶ್ನೆಯನ್ನು ನಮ್ಮ ಕೇಳಿಕೊಂಡರೂ ಇಂದಿಗೂ ಉತ್ತರ ದೊರಕಿಲ್ಲ. ಜೋಗ ಜಲಪಾತ ಉತ್ತರ ಕನ್ನಡ ಜಿಯ ಸಿzಪುರ ತಾಲೂಕಿನಲ್ಲಿದ್ದರೆ ಅದರ ಸೌಂದರ್ಯವನ್ನು ವೀಕ್ಷಿಸುವ ತಾಣ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ.

ಮಧ್ಯಾನ್ಹ ಊಟ ಮಾಡಿ ಸುಮಾರು 4 ಗಂಟೆಯ ವೇಳೆಗೆ ಜೋಗ ತಲುಪಿದಾಗ ಮಳೆರಾಯ ಸುರಿಯುತ್ತಾ ನಮ್ಮೆಲ್ಲರ ಬಟ್ಟೆ ಅಲ್ಪಸ್ವಲ್ಪ ಒದ್ದೆ ಮಾಡಿದ. ಆದರೆ ಕೆಲವೇ ನಿಮಿಷಗಳಲ್ಲಿ ಮೋಡ ಸರಿದು, ಜಲಪಾತ ನೋಡಲು ಕಾಣಿಸಿತು. ಓ! ಅದೆಂತಹ ಅಮೋಘ ದೃಶ್ಯ. ಅದು ಕಲ್ಲುಬಂಡೆಗಳ ಮೇಲಿಂದ ಬೀಳುವ ನೀರಲ್ಲ ಹಾಲಿನ ಹೊಳೆ. ಒಂದೈದು ನಿಮಿಷ ಜಲಪಾತ ಸಂಪೂರ್ಣವಾಗಿ ಗೋಚರವಾದರೆ ಮುಂದಿನ 5 ನಿಮಿಷ ಮಂಜು ಮುಸುಕಿ ನಾವು ಕಂಡ ಜಲಪಾತ ಮಂಗ ಮಾಯ. ಆಗಾಗ ಬಿಟ್ಟಬಿಟ್ಟು ಸುರಿಯುವ ಮಳೆ, ಮಳೆ ಬಿಡುವು ಕೊಟ್ಟಾಗ ಜಲಪಾತವನ್ನು ತಬ್ಬಿ ತನ್ನ ಒಡಳೊಳಗೆ ಸೇರಿಸಿಕೊಂಡಂತೆ ಕಾಣುವ ಮಂಜು, ಮತ್ತೆ ಕೆಲವೇ ನಿಮಿಷಗಳಲ್ಲಿ ಮಂಜು ದೂರವಾಗಿ ಸ್ಪಟಿಕದಂತೆ ಸ್ಪಷ್ಟವಾಗಿ ಕಾಣುವ ಜಲಪಾತ ಇವು ನಾವು ಹಿಂದುರುಗಿ ಬರುವವರೆಗೂ ತನ್ನ ಕಣ್ಣಾಮುಚ್ಚಾಲೆ ಆಟವನ್ನು ನಿಲ್ಲಿಸಲೇ ಇಲ್ಲ. ಆ ನಂತರ ಜಲಪಾತದ ಸೊಬಗನ್ನು ಪ್ರವಾಸಿ ಮಂದಿರದ ಕಡೆಯಿಂದಲೂ ಸವಿದಿದ್ದಾಯಿತು.

ಉತ್ತರ ಕರ್ನಾಟಕದ ಹಲ ಹುಡುಗರು ಆಗಾಗ ಸುರಿಯುತ್ತಿದ್ದ ಮಳೆಯಲ್ಲೂ ಬೇಕಂತಲೆ ಮೈಯೊಡ್ಡಿ ತೊಪ್ಪೆಯಾಗಿ ಜಲಪಾತದ ಸೊಬಗನ್ನು ಆಸ್ವಾದಿಸುತ್ತಿದ್ದುದು ನೋಡಿದಾಗ ಅವರಿಗೆ ಜಲಪಾತ ಅದೆಂತಹ ಮೋಡಿ ಮಾಡಿರಬಹುದು ಎಂದೆನಿಸಿತು. ಜನರ ಕೈಯಲ್ಲಿನ ಮೊಬೈಲಿಗೆ ವಾಪಾಸು ಹೊರಡುವವರೆಗೂ ಎಲ್ಲಿಲ್ಲದ ಕೆಲಸ. ಆದರೆ ಪ್ಲಾಸ್ಟಿಕ್, ಹಣ್ಣಿನ ಸಿಪ್ಪೆ , ಕಾಫಿ ಕಪ್ ಗಳು ಮತ್ತು ಇತರ ಕಸಗಳನ್ನು ಡಬ್ಬವಿದ್ದರೂ ಎಂದರಲ್ಲಿ ಎಸೆದಿದ್ದನ್ನು ನೋಡಿದರೆ ಜನರ ಬೇಜವಾಬ್ದಾರಿ ನಡುವಳಿಕೆ ಕಂಡು ಸಿಟ್ಟು ಬಾರದೆ ಇರದು. ತಮಿಳುನಾಡಿನ ಕೊಡೈಕೆನಾಲ್ ನಲ್ಲಿರುವಂತೆ ಪ್ಲಾಸ್ಟಿಕ್, ಬಾಟಲ್ ಬ್ಯಾನ್ ಮಾಡದಿದ್ದರೆ ಪ್ರವಾಸಿತಾಣಗಳು ಜನಮನ್ನಣೆ ಗಳಿಸಲಾರದು.

ಜೋಗದಿಂದ 10 ಕಿಮೀ ಹಿಂದಿರುವ ಲಿಂಗನಮಕ್ಕಿ ಜಲಾಶಯದ ನಿರ್ಮಾಣದ ನಂತರ ತನ್ನ ಜೋಗ ತನ್ನ ಮೊದಲಿನ ಸೌಂದರ್ಯವನ್ನು ಕಳೆದುಕೊಂಡಿದೆ ಎಂದು ಅನೇಕರ ಅನಿಸಿಕೆ. ಹಾಗಾದರೆ ಅದರ ಮೊದಲಿನ ಸೌಂದರ್ಯ ಹೇಗಿದ್ದಿರಬಹುದು ಎಂಬುದು ಅವರವರ ಕಲ್ಪನೆಗೆ ಬಿಟ್ಟಿದ್ದು.

Leave a Reply

Your email address will not be published. Required fields are marked *