ಕವಿತಾ ಭಟ್
ನನಗೆ ನೆನಪಿದ್ದಾಗಿನಿಂದಲೂ ನಾನು ಕೃಷ್ಣ ಪ್ರಿಯೆ. ನಾನು ನಿಷ್ಠಾವಂತ ದೈವಿಕ ಭಕ್ತಳಾಗಿಲ್ಲದಿರುವುದೇ ಅದಕ್ಕೆ
ಕಾರಣವಾಗಿದ್ದಿರಬೇಕು!
ಮನಸಿನ ಬಯಕೆಗಳನ್ನು ದೇವರ ಮುಂದೆ ಒಡ್ಡಿ, ‘ಅದನ್ನು ಮಾಡಿ ಕೊಡು ನಿನಗೆ ಅಭಿಷೇಕ ಮಾಡಿಸುತ್ತೇನೆ…. ಇದನ್ನು ನಡೆಸಿಕೊಡು, ನಿನಗೆ ಚಿನ್ನದ ಹಾರ ಮಾಡಿಸುತ್ತೇನೆ’ ಮುಂತಾದ ಆಮಿಷಗಳನ್ನ ದೇವರಿಗೆ ತೋರಿಸಿ ಭಕ್ತಿ ಎನ್ನುವುದು
ಪಕ್ಕಾ ವ್ಯವಹಾರವಾಗಿ ಬಿಡುವ ಇಂತಹ ಬೇಡಿಕೆಗಳೇ ನನಗೆ ಅಸಂಗತ ಎನ್ನಿಸುತ್ತದೆ. ಎಲ್ಲವೂ ಅವನದೇ ಕೃಪೆಯಾಗಿರುವಾಗ ಹೊಸದಾಗಿ ನಾವು ದೇವರಿಗೆ ಕೊಡುವುದಕ್ಕಾದರೂ ಏನಿದೆ? ಎಲ್ಲವೂ ಅವನಿಗೆ ಗೊತ್ತಿರುವಾಗ ಅವನ ಮುಂದೆ ಬೇಡಿಕೊಳ್ಳುವು
ದಾದರೂ ಏನಿದೆ ಎನ್ನುವ ವಾದ ನನ್ನದು.
ಹೀಗಾಗಿ ಕಷ್ಟ ಬಂದಾಗ ದೇವರೇ ಕಾಪಾಡು ಎನ್ನುವುದಕ್ಕಿಂತ ‘ದೇವರೇ ಜೊತೆಗಿರು.. ಎಲ್ಲವನ್ನೂ ಎದುರಿಸುವ ಧೈರ್ಯ, ಶಕ್ತಿ ಕೊಡು’ ಎನ್ನುವುದು ಸರಿ. ಹೀಗೆ ಕೇಳಿಕೊಳ್ಳಬೇಕಾದರೆ ದೈವೀಕತೆಯನ್ನು ಮೀರಿದ ಆತ್ಮೀಯತೆ ದೇವರೊಂದಿಗೆ ಬೆಸೆಯಬೇಕು. ಗೆಳೆಯ ನಂತಹ ದೇವರು ಕೃಷ್ಣನಲ್ಲದೇ ಇನ್ಯಾರು ಆಗುವುದಕ್ಕೆ ಸಾಧ್ಯ? ಹೀಗಾಗಿಯೇ ಕೃಷ್ಣ ನನಗಿಷ್ಟ.
ನಾನು ನಾಲ್ಕೈದು ವರ್ಷದ ಮಗುವಾಗಿದ್ದಾಗ ಉಡುಪಿಗೆ ಕರೆದುಕೊಂಡು ಹೋಗಿದ್ದರಂತೆ. ಆಟಿ ತುಂಬಿದ ಬೀದಿ, ದೇವಸ್ಥಾನದ ಆವರಣದ ಕಂಡು ಬೆರಗಾದ ಕೆಲವು ಸುಂದರ ನೆನಪುಗಳನ್ನು ಬಿಟ್ಟರೆ ಬೇರೇನೂ ನೆನಪಿಲ್ಲ. ಹೈಸ್ಕೂಲಿನಲ್ಲಿ ಓದುತ್ತಿದ್ದಾಗ
ಏರ್ಪಡಿಸಿದ್ದ ಪ್ರವಾಸದಲ್ಲಿ ಉಡುಪಿ ಕ್ಷೇತ್ರ ದರ್ಶನ ಇತ್ತಾದರೂ ನನ್ನ ದುರಾದೃಷ್ಟಕ್ಕೆ ಸಮಯಾಭಾವದಿಂದ ಇದೊಂದು ಕ್ಷೇತ್ರವನ್ನು ಪ್ರವಾಸದಿಂದ ಕೈಬಿಡಲಾಗಿತ್ತು. ವರ್ಷಗಳು ಉರುಳಿದಂತೆ ಒಮ್ಮೆಯಾದರೂ ಕೃಷ್ಣನನ್ನು ಎದುರಿಗೆ ನೋಡಿ ಕಣ್ತುಂಬಿ ಕೊಳ್ಳಬೇಕೆಂಬ ನನ್ನ ತಪನೆ ಹೆಚ್ಚಿತಾದರೂ ನಾನಾ ಕಾರಣಗಳಿಂದ ದರ್ಶನ ತಪ್ಪುತ್ತಲೇ ಹೋಯಿತು.
ಅವನಾಣತಿಯಿಲ್ಲದೇ ಹುಲ್ಲುಕಡ್ಡಿ ಸಹ ಅಲುಗುವುದಿಲ್ಲ ಎಂದ ಮೇಲೆ ಅವನನ್ನು ನೋಡುವ ನನ್ನ ಸುಯೋಗವನ್ನೂ ಅವನೇ
ನಿರ್ಧರಿಸುತ್ತಾನೇನೋ ಎಂಬ ಸಮಾಧಾನದಿಂದ ‘ನೀನಾಗಿಯೇ ಕರೆಸಿಕೋ ಗೋಪಾಲ… ಅಲ್ಲಿಯ ವರೆಗೆ ಕಾಯುತ್ತೇನೆ’ ಎಂದು ಸುಮ್ಮನಾಗಿದ್ದೆ. ಈ ಕರೋನಾದ ಲಾಕ್‌ಡೌನ್ ಕಾಲ ಮುಗಿದು ಹೊಸ ವರ್ಷ ಹೊಸತೇ ತರಲಿ ಎಂಬ ಆಶಯದೊಂದಿಗೆ ಎದುರು ನೋಡುತ್ತಿದ್ದಾಗ, ಡಿಸೆಂಬರ್ ತಿಂಗಳಲ್ಲಿ ಒಂದು ತುರ್ತು ಕೆಲಸದ ಮೇಲೆ ಮಣಿಪಾಲಕ್ಕೆ ಹೋಗುವುದಾಗಿ ಬಂತು.
ನಾನು ಹೋಗದಿದ್ದರೂ ನಡೆಯುತ್ತಿತ್ತಾದರೂ ಮನೆಯವರ ಒತ್ತಾಯಕ್ಕೆ ಒಪ್ಪಿದ್ದೆ. ಕೊನೆಯ ಕ್ಷಣದವರೆಗೂ ಮಣಿಪಾಲ
ದಿಂದ ಉಡುಪಿ ಕೂಗಳತೆಯ ದೂರ ಎಂಬ ವಾಸ್ತವವೇ ನನ್ನ ಅರಿವಿಗೆ ಬಂದಿರಲಿಲ್ಲ. ಮಣಿಪಾಲಕ್ಕೆ ಹೊರಟ ಮುಂಜಾನೆ ಮ್ಯಾಪ್ ಹಾಕಿಕೊಳ್ಳುವಾಗ ಈ ವಿಷಯ ಹೊಳೆದು ಅರೇ.. ಉಡುಪಿ! ಅಂದಾಗ ನನ್ನ ಜೀವವೇ ನನ್ನ ದೇಹದಲ್ಲಿರಲಿಲ್ಲ. ಮನಸ್ಸು
ಅದಾಗಲೇ ಕೃಷ್ಣ ದರ್ಶನಕ್ಕಾಗಿ ಉಡುಪಿಯಲ್ಲಿ ತನ್ನ ಪಾಡಿಗೆ ತಾನು ಅಲೆದಾಡುತ್ತಿತ್ತು.
ಮಣಿಪಾಲ ತಲುಪಿ, ಹೋದ ಕೆಲಸ ಮೊದಲು ಮುಗಿಸಿಕೊಂಡು ಉಡುಪಿಯ ಶ್ರೀಕೃಷ್ಣ ಮಠಕ್ಕೆ ತಲುಪಿದಾಗ ಮುಸ್ಸಂಜೆ. ನನ್ನಿಡೀ ಮೈಮನ ಕೃಷ್ಣನನ್ನು ನೋಡುವುದಕ್ಕೆ ತವಕಿಸುತ್ತಿತ್ತು. ಕೊನೆಗೂ ಅವನ ದರ್ಶನವಾದಾಗ ದೇಹದಲ್ಲಿ ಶಕ್ತಿಯೇ
ಉಡುಗಿ ಹೋಗಿ, ದೈನ್ಯತೆ ಆವರಿಸಿತು. ಕೃಷ್ಣನನ್ನು ನೋಡುತ್ತಾ ಅಕಾರಣವಾಗಿ ತುಂಬಿಕೊಂಡು ಬರುತ್ತಿದ್ದ ಕಣ್ಣೀರು ಮುಚ್ಚಿಡು ವುದೇ ಸಾಹಸದ ಕೆಲಸವಾಯ್ತು. ಆ ಕ್ಷಣ ನೆನಪಾದರೆ ಈಗಲೂ ರೋಮಾಂಚನವಾಗುತ್ತದೆ.
ನಾನೇನೋ ಕೃಷ್ಣನ ಪರಮ ಭಕ್ತೆ, ಕೃಷ್ಣ ನನಗೊಲಿದ ಎಂಬ ವಿಪರೀತ ಭ್ರಮೆಯೇನೂ ನನಗಿಲ್ಲ. ಆದರೆ ಎಂದೂ ಅನುಭವಿಸದ ದಿವ್ಯಾನುಭವ ಅದು. ಕೇವಲ ಕೃಷ್ಣ ದರ್ಶನವೇ ಇಂತಹ ಧನ್ಯತೆಯನ್ನು ತರಬಹುದಾದರೆ ಅವನ ಲೀಲೆ ಅದೆಷ್ಟು ದೊಡ್ಡದು ಅನ್ನಿಸಿದ್ದು ಸುಳ್ಳಲ್ಲ. ತದನಂತರದ ಘಟನಾವಳಿಗಳೆಂದರೆ, ನಾವು ಮಣಿಪಾಲಕ್ಕೆ ಹೋದ ಕೆಲಸ ಆಗಲಿಲ್ಲ. ಆದರೆ ವರ್ಷ ಗಳಿಂದ ಹಿಂದೆಬಿದ್ದಿದ್ದ ಸುಕಾರ್ಯವೊಂದು ಹಠಾತ್ತನೆ ಜರುಗಿತು. ಅವನನ್ನು ನೋಡುವುದಕ್ಕೆ ಹಂಬಲಿಸಿ ಮಾಡಿದ ಎಷ್ಟೆಲ್ಲಾ ಪ್ರಯತ್ನಗಳು ಸೋತು ಹೋದವು.
ಆದರೆ ನಿರೀಕ್ಷಿಸದೇ ಇದ್ದಾಗ ತಾನಾಗಿಯೇ ಕರೆಸಿಕೊಂಡ. ಆಗಬೇಕಾದದ್ದು ಆಗು ಮಾಡಿದ. ಇದಲ್ಲವೇ ದೈವ ಮಹಿಮೆ ಎಂದರೆ? ಅಚಲವಾದ ನಂಬಿಕೆಯೊಂದಿದ್ದರೆ ಆಗಬೇಕಾದದ್ದು ಆಗೇ ಆಗುತ್ತದೆ ಎನ್ನುವ ನನ್ನ ನಂಬುಗೆಗೆ ಇಂಬುಕೊಟ್ಟ ಘಟನೆಯಿದು.