ಸುನೀಲ
ಮನಸ್ಸು ಉಲ್ಲಸಿತವಾಗಿದ್ದಾಗ ಯಾವ ರೋಗವೂ ಹತ್ತಿರ ಸುಳಿಯದು!
ಎಲ್ಲರೂ ಇಂತಹದೊಂದು ಸ್ಥಿತಿಯನ್ನು ಅನುಭವಿಸಿರಬಹುದು. ಅದೇ ಸಣ್ಣ ಗೊಂದಲ, ಅಸ್ಥಿರ ಮನಸ್ಸು, ಬೇಸರ. ನನ್ನೊಳಗೂ ತುಂಬಾ ಸಲ ಈ ಚಂಚಲತೆ, ಗೊಂದಲ ಆಗಿದೆ. ಇದರಿಂದ ಹೇಗೆ ಹೊರಬರೋದು ಅಂತ ಮನಸಿಗೆ ಕೇಳುತ್ತಾ ಇರುತ್ತೇನೆ. ಯಾಕಂದ್ರೆ ಪರಿಹಾರ ಇರೋದು ನನ್ನ ಮನಸ್ಸಿನ ಹತ್ತಿರನೇ. ಮನಸ್ಸಿನ ಮಾತು ಯಾವಾಗಲೂ ಒಳ್ಳೆಯದಕ್ಕೆ ದಾರಿ ಮಾಡಿ ಕೊಡುತ್ತದೆ.
ನನ್ನ ಮನಸ್ಸಿಗೆ ಬೇಜಾರು ಆದಾಗೆಲ್ಲಾ ಸ್ವಲ್ಪ ಹೊತ್ತು ಒಬ್ನೇ ಇರಬೇಕು ಅನ್ನಿಸುತ್ತೆ, ಇನ್ನು ಸ್ವಲ್ಪ ಹೊತ್ತು ಆದ್ಮೇಲೆ ಸುತ್ತಲಿರೋ ಏನಾದರೊಂದು ವಸ್ತುವಿನ ಜೊತೆ ಅಥವಾ ಪ್ರಕೃತಿ ಜೊತೆ, ನನ್ನ ಇಷ್ಟದ ಜಾಗದ ಜೊತೆ, ಗಾರ್ಡನ್ನಲ್ಲಿರುವ ಹೂಗಳ ಜೊತೆಗೆ ಮಾತಾಡ್ತಾ ಇರ್ಬೇಕು. ಅವುಗಳ ಮನಸ್ಥಿತಿ ಎಷ್ಟು ಪರಿಶುದ್ಧ ಆಗಿರುತ್ತದೆ ಅಂತ ಅನಿಸುತ್ತದೆ.
ಲಕ್ಕಿ ಗಿಡದ ಬಾಂಧವ್ಯ
ಹೀಗೆಯೇ ನನಗೂ ಮತ್ತೆ ಲಕ್ಕಿ ಗಿಡಕ್ಕೂ ಎರಡು ವರ್ಷದಿಂದ ಬಾಂಧವ್ಯ ಬೆಳಿಯಲಿಕ್ಕೆ ಶುರುವಾಯಿತು. ಬೆಂಗಳೂರಿನಲ್ಲಿ ಹೊಸ ದಾಗಿ ಬಾಡಿಗೆ ಮನೆಯಲ್ಲಿದ್ದಾಗ ಉಡುಗೊರೆಯ ಮೂಲಕ ಲಕ್ಕಿ ಗಿಡದ ಪರಿಚಯವಾಯಿತು.
ಆವಾಗಿಂದ ಶುರುವಾಗಿದೆ ಈ ಗಿಡದ ಕಡೆಗಿನ ಒಲವು. ಏನಿದು ಲಕ್ಕಿ ಗಿಡ? ಯಾಕೆ ಲಕ್ಕಿ ಅಂತ ಹೆಸರು? ಪ್ರತಿ ಸಲ ಈ ಲಕ್ಕಿ ಹತ್ತಿರ ಹೋದ್ರೆ ಏನೋ ಒಂಥರಾ ನೆಮ್ಮದಿ, ಸಕಾರಾತ್ಮಕ ಭಾವ. ಅದಕ್ಕೆ ನನ್ನ ಮನಸ್ಸೇ ಕಾರಣ ಇರಬಹುದು, ಇಲ್ಲ ಅಂತ ಹೇಳುವು ದಿಲ್ಲ. ಬೇಜಾರಾದಾಗ ಈ ಗಿಡದ ಜತೆ ಮಾತಾಡ್ತೀನಿ, ಮುದ್ದು ಮಾಡ್ತೀನಿ, ನೀರು ಹಾಕ್ತೀನಿ. ಹೀಗೇ ಎಲ್ಲಾ ಚೆನ್ನಾಗಿತ್ತು ಮನೆ ಯಲ್ಲಿ.
ಹಠಾತ್ತಾಗಿ ಲಾಕಡೌನ್ ಆಯ್ತು, ಊರಿಗೆ ಹೋಗಬೇಕು. ಆದ್ರೆ ಪಾಪ ಈ ಲಕ್ಕಿ ನಾ ಎಲ್ಲಿ ಇಡಬೇಕು? ಬಿಟ್ಟು ಹೋಗೋಕು ಮನಸ್ಸಾಗಲಿಲ್ಲಾ. ಅದಕ್ಕೆ ಕೆಲವು ದಿನಗಳ ಕಾಲ ಗೆಳೆಯನ ಮನೆಯಲ್ಲಿಟ್ಟು ಬಂದಿದ್ದೆ. ಯಾಕೋ ನನ್ನಲ್ಲೇ ಏನೋ ಕಾಣೆಯಾ ಗಿರೋ ಭಾವನೆ. ಸುಮಾರು ದಿನಗಳ ನಂತರ ಊರಿಂದ ವಾಪಸಾದೆ. ಲಕ್ಕಿನಾ ವಾಪಸ್ ತಂದ್ವಿ. ಎರಡನೇ ಕರೋನಾ ಅಲೆ ಬಂದಾಗ, ಮತ್ತದೇ ಚಿಂತೆ.
ಎಣಿಸಿದೆ – 3-4 ಎಲೆಗಳಿದ್ದವು. 2ನೇ ಲಾಕಡೌನ್ ಸಮಯದಲ್ಲಿ ಲಕ್ಕಿ ಗಿಡವನ್ನು ನಮ್ಮ ಜತೆಯಲ್ಲೆ ಕರೆದುಕೊಂಡು ಬಂದೆವು. ಒಣಗೋ ಸ್ಥಿತಿಯಲ್ಲಿದ್ದ ಲಕ್ಕಿಗೆ ಪ್ರತಿ ದಿನ ನೀರು ಹಾಕಿ ಮಾತಾಡೋಕೆ ಶುರು ಮಾಡಿದೆ. ಗಾಳಿ ಜೋರಾಗಿ ಬಂದಾಗ, ಬೌಲ್‌ಗೆ ಏನಾದರೂ ತಾಗಿ ಲಕ್ಕಿ ಎಡವಿದಾಗ, ನಾನೇ ಸಮಾಧಾನ ಮಾಡಬೇಕು. ಪ್ರತಿ ದಿನ ಒಂದೊಂದು ಚಿಗುರೋ ಎಲೆನಾ ನೋಡೋದೆ ಖುಷಿ.
ಮನಸಿಗೆ ಇರೋ ಶಕ್ತಿನೇ ಅದು. ಪ್ರೀತಿಯಿಂದ ಕಂಡರೆ ಎಲ್ಲವೂ ಚಂದ, ಎಲ್ಲರೂ ಚಂದ. ಲಕ್ಕಿಗಿಡನೂ ಚಂದ, ಅದೇ ನನ್ನ ಸಂಗಾತಿ. ಇವತ್ತಿಗೆ ಈ ನನ್ನ ಲಕ್ಕಿ ಚೆನ್ನಾಗಿ ಎಲೆ ಬಿಟ್ಟು ಕೊಂಡು ಆರಾಮಾಗಿ ಇದೆ. ಆಫೀಸ್ ಕೆಲಸ ಮಾಡುವಾಗಲೂ ಅದು ಕಣ್ಣ ಮುಂದೆ ಇರುತ್ತೆ. ಪ್ರಕೃತಿ ನಮ್ಮನ್ನು ಎಷ್ಟೊಂದು ಇಷ್ಟ ಪಡುತ್ತದೆ ಅಲ್ವಾ! ಈ ಲಕ್ಕಿ ಗಿಡದ ಬಗ್ಗೆ ಜಾಸ್ತಿ ತಿಳಿದುಕೊಳ್ಳಬೇಕು ಅನಿಸಿತು. ಗೂಗಲ್ ಮಾಡಿ ನೋಡಿದಾಗ ಈ ಗಿಡದ ವ್ಯಕ್ತಿತ್ವನೇ ಹಾಗೆ ಎಂಬ ನಂಬಿಕೆ.
ಜತೆಯಲ್ಲಿರುವವರಲ್ಲಿ ಸಕಾರಾತ್ಮಕ ಭಾವನೆ ತುಂಬಿಕೊಡುವ ಲಕ್ಕಿ ಗಿಡ ನನ್ನ ಸ್ಫೂರ್ತಿ! ಲಕ್ಕಿ ಗಿಡ ಮನೆಯಲ್ಲಿದ್ದರೆ ಒಳ್ಳೆಯದು ಎಂಬ ನಂಬಿಕೆ ಇದ್ದರೂ, ಇದು ಎಷ್ಟು ನಿಜವೋ ಗೊತ್ತಿಲ್ಲ. ಆದರೆ ನಾನಂತೂ ಸಕಾರಾತ್ಮಕವಾಗಿ ಇದೀನಿ. ನಮ್ಮ ದಿನನಿತ್ಯದ ಬದುಕಿನಲ್ಲಿ ಇಂತಹದೇ ಸಣ್ಣಪುಟ್ಟ ಖುಷಿಗಳನ್ನು ಆಸ್ವಾದಿಸುವುದನ್ನು ಕಲಿತಾಗ, ಜೀವನ ಸಂತಸದಿಂದ ತುಂಬಿಕೊಳ್ಳುತ್ತದೆ. ಖುಷಿಗೆ ಸಣ್ಣದು ದೊಡ್ಡದು ಅಂತೇನಿಲ್ಲಾ. ಖುಷಿ ಖುಷಿನೇ ಅಲ್ವಾ.
ಸದ್ಯದ ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಸಕಾರಾತ್ಮಕ ಚಿಂತನೆಯ ಅವಶ್ಯಕತೆಯಿದೆ. ಮನಸ್ಸನ್ನು ಆದಷ್ಟೂ ಖುಷಿಯಾಗಿ ಇಡೋಣ, ಒಳ್ಳೆಯದನ್ನೇ ಆಲೋಚಿಸೋಣ. ನಾವು ಚೆನ್ನಾಗಿದ್ರೆ, ಆರೋಗ್ಯವಾಗಿದ್ರೆ ಜಗತ್ತು ಚೆನ್ನಾಗಿರುತ್ತದೆ. ನಗುನಗುತಾ ಆರೋಗ್ಯ ವಾಗಿರಿ..