Wednesday, 14th May 2025

ಮಲೆನಾಡಿನಲ್ಲಿ ಶ್ರುತಿಬದ್ಧ ಮುರಳಿ

ವಿನುತಾ ಹೆಗಡೆ ಶಿರಸಿ

ಉತ್ತರ ಕನ್ನಡ ಜಿಲ್ಲೆಯ ನೆಟ್‌ಗಾರ್ ಎಂಬ ಹಳ್ಳಿಯಲ್ಲಿ ತಯಾರಾದ ಕೊಳಲುಗಳನ್ನು ವಿಶ್ವಪ್ರಸಿದ್ಧ ಕಲಾವಿದರು ಬಯಸಿ, ನುಡಿಸುತ್ತಾರೆ. ಶ್ರುತಿಬದ್ಧವಾಗಿ ರೂಪುಗೊಳ್ಳುವ ಈ ಕೊಳಲುಗಳನ್ನು ತಯಾರಿಸುವವರು ಮಂಜುನಾಥ ಹೆಗಡೆ ನೆಟ್‌ಗಾರ್.

ಸುತ್ತಲೂ ಮರಗಿಡಗಳು, ಹಸಿರಿನ ಸಿರಿ. ಆ ನಡುವೆ ಒಂದು ಪುಟಾಣಿ ಮನೆ. ಮನೆಯ ಒಂದು ಭಾಗದಲ್ಲಿ ಕಾರ್ಯಾಗಾರ.ವಿವಿಧ ಸ್ವರೂಪದ ಬಿದಿರನ್ನು ಹರಡಿಕೊಂಡು, ಅವುಗಳನ್ನು ಬಳಸಿ ಸುಮಧುರ ಸಂಗೀತ ಹೊರಡಿಸುವ ತಯಾರಿಯಲ್ಲಿದ್ದಾರೆ. ಇವರು ವಿಶ್ವ ಪ್ರಸಿದ್ಧ ಕೊಳಲು ತಯಾರಕರು.

ದಿನವಿಡೀ ಇವರ ಮನೆಯ ಹೊರಸಾಲೆಯಲ್ಲಿ ಕೊಳಲಿನ ಧ್ವನಿ ಕೇಳುತ್ತಲೇ ಇರುತ್ತದೆ. ಸ್ವರಗಳ ಜೋಡಣೆಯ, ಕೊಳಲಿನ ಇಂಪಿನ ನಿನಾದ ಅವರ ಕಾರ್ಯಾಗಾರದ ಸುತ್ತ ಮುತ್ತಲ ಝರಿ, ತೊರೆ, ಗಿಡ ಮರಗಳಲ್ಲಿಯೂ ತೇಲಿ ಬಂದಂತೆ ಭಾಸವಾಗುತ್ತದೆ. ಈ ಸುಂದರ ಸೃಷ್ಟಿಯಾಗಿರು ವುದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನೆಟ್‌ಗಾರ್ ಎಂಬ ಸುಂದರ ಹಸಿರು ಗ್ರಾಮದ ಮನೆಯಲ್ಲಿ!

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು.. ಎನ್ನುವಂತೆ ಆ ಮೋಹನ ಮುರಳಿ ಎಲ್ಲರನ್ನೂ ಕರೆಯುತ್ತದೆ, ಸೆಳೆಯುತ್ತದೆ. ಗಾಳಿವಾದ್ಯಗಳಲ್ಲಿ ಕೊಳಲೂ ಸಹ ಒಂದು. ಇದು ಕಿವಿಗಿಂಪಿನ ಜತೆಗೆ ಮನಸ್ಸಿಗೆ ನೆಮ್ಮದಿ ನೀಡುವ ಮೋಹಕವಾದ್ಯ. ಮೋಹನ ಮುರಳಿಯ ಕೊಳಲು ವಾದನವೇ ಹಾಗೆ ಕಿವಿ, ಮೈ ಮನಸ್ಸನ್ನು ಇನ್ಯಾವುದೋ ಲೋಕಕ್ಕೆ ಕೊಂಡ್ಯುತ್ತದೆ. ಅದರ ಇಂಪಿಗೆ ತಲೆದೂಗದವರೇ ಇಲ್ಲ. ಆದರೆ ಆ ಕೊಳಲು ವಾದನಕ್ಕೆ ಸರಿಯಾದ ಶೃತಿ ಲಯಗಳು ಬೇಕು.

ಕೊಳಲು ಕೇವಲ ಬಿದಿರಿನ ಕೋಲಾದರೂ ಅದಕ್ಕೊಂದು ರೂಪ ಬರುವುದು ಶ್ರುತಿಯ ಜತೆಗೆ ಲಯಗಳ ಹೊಂದಿಕೆಗೆ ಅನುಗುಣ ವಾಗಿ ಕೊಳಲನ್ನು ತಯಾರಿಸಿದಾಗ ಮಾತ್ರ. ಶ್ರುತಿ ಬದ್ಧವಾದ ಕೊಳಲಿನ ನಾದ ಸಂಗೀತಕ್ಕೆ ಸೋಲದವರಿಲ್ಲ. ಅಂತಹ ಕೊಳಲನ್ನು ತಯಾರಿಸುತ್ತಿದ್ದಾರೆ ಉತ್ತರ ಕನ್ನಡ ಜಿಲ್ಲೆೆಯ ಸಿದ್ದಾಪುರ ತಾಲೂಕಿನ ನೆಟ್‌ಗಾರ್ ಗ್ರಾಮದ ಮಂಜುನಾಥ ಹೆಗಡೆ.

ಪ್ರಸಿದ್ಧ ಕಲಾವಿದರ ನೆಚ್ಚಿನ ಆಯ್ಕೆ ಇವರು ತಯಾರಿಸಿದ ಕೊಳಲನ್ನೇ ಪ್ರಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿ
ಯವರು ಬಳಸುತ್ತಾರೆ. ಅಲ್ಲದೇ ಅಮೆರಿಕ, ಇಂಗ್ಲೆೆಂಡ್, ಜರ್ಮನಿ ಮುಂತಾದ ದೇಶಕ್ಕೂ ಇವರು ತಯಾರಿಸಿದ ಗುಣಮಟ್ಟದ ಕೊಳಲು ರಫ್ತಾಗುತ್ತದೆ. ಬೊಂಬನ್ನು ಮನೆಗೆ ತಂದು, ಅದಕ್ಕೆ ಬೇಕಾದ ಆಕಾರದಲ್ಲಿ ಹೋಲ್ ಮಾಡಿ, ಶ್ರುತಿ ಬದ್ಧವಾಗಿ ಸ,ಸಾ ಹೊಂದಿಕೆ ಬರುವಂತೆಯೇ ಶ್ರುತಿಯನ್ನು ತನ್ನೆದುರು ಹಚ್ಚಿಕೊಂಡು, ಕೊಳಲಿಗೆ ಸ್ವರ ಹಾಕಿ ಉತ್ತಮ ರೀತಿಯ ಕೊಳಲನ್ನು ಇವರು ತಯಾರಿಸುತ್ತಾರೆ.

ಮಂಜುನಾಥ ಹೆಗಡೆಯವರು ಹೇಳುವ ಪ್ರಕಾರ ‘ನಾನು ಸಂಗೀತ ಕಲಿಯುವಾಗ ಶ್ರುತಿ ಬದ್ಧವಾದ ಕೊಳಲು ಸಿಗಲಿಲ್ಲ. ಆಗ ನನ್ನ ಗುರುಗಳು ಹೇಳಿದಂತೆ ಸ ಮತ್ತು ಸಾ ಎರಡೂ ಶ್ರುತಿ ಬದ್ಧವಾಗಿರಬೇಕು. ಯಾವುದೇ ಬಲಾತ್ಕಾರದಿಂದ ಅದು ಬರಬಾರದು. ನಾನು ಹಾಗೇಯೆ ಕೊಳಲು ತಯಾರಿಸಲು ಆರಂಭಿಸಿದೆ. ನಂತರದ ದಿನಗಳಲ್ಲಿ ನಾದಬ್ರಹ್ಮ ಹಂಸಲೇಖ ಅವರೂ ಕೇಳಿದಂತೆ ಕೊಳಲು
ತಯಾರಿಸಿ ಕೊಟ್ಟೆೆ. ರಾಜ್ಯದಲ್ಲಿ ಯಾರೂ ಮಾಡಿರದಂತಹ ಉತ್ತಮ ಗುಣ ಮಟ್ಟದ, ಒಳ್ಳೆಯ ಶ್ರುತಿಗೆ ಹೊಂದುವಂತಹ ಕೊಳಲನ್ನು ನೀವು ತಯಾರಿಸಿ ದ್ದೀರಿ’ ಎಂದು ಪ್ರೋತ್ಸಾಹಿಸಿದರು.

ಒಂದು ಕೊಳಲು ಪರಿಪೂರ್ಣವಾಗಿ ಶ್ರುತಿಬದ್ಧವಾಗಿ ಬರಬೇಕೆಂದರೆ ಹದಿನೈದು ದಿನವಾದರೂ ಬೇಕಾಗುತ್ತದೆ ಎನ್ನುತ್ತಾರೆ.
ಕೊಳಲು ವಾದಕ ನಾಗರಾಜ ಹೆಗಡೆ ಶಿರನಾಲಾ ಹೇಳುವಂತೆ, ‘ನಾವೆಲ್ಲರೂ ಕೊಳಲನ್ನು ಎಂ ವಿ ಹೆಗಡೆಯವರು  ಯಾರಿಸಿರು ವುದನ್ನು ತೆಗೆದುಕೊಳ್ಳುತ್ತೇವೆ. ಮೇಲಿನ ಸಪ್ತಕದ ಸ್ವರಗಳು ಇಲ್ಲಿ ಸರಿಯಾಗಿರುವುದರಿಂದ ಇದನ್ನು ನಾನು ನನ್ನ ಶಿಷ್ಯರಿಗೂ
ತೆಗೆದುಕೊಳ್ಳಲು ಹೇಳುತ್ತೇನೆ. ತುಂಬಾ ಚೆನ್ನಾಗಿದೆ. ಯಾವಾಗಲೂ ಸ್ವರವನ್ನು ತ್ರಾಸದಾಯಕವಾಗಿ ನುಡಿಸುವಂತಿದ್ದರೆ ಅದು
ಕಷ್ಟಕರ. ಸ್ವರ ಯಾವತ್ತಿಗೂ ಸರಾಗವಾಗಿ ಶ್ರುತಿಗೆ ಸೇರುವಂತಿರಬೇಕು. ಆ ಗುಣಮಟ್ಟ  ಇವರು ತಯಾರಿಸುವ ಕೊಳಲಿನಲ್ಲಿದೆ’.
ಕೊಳಲಿನ ನುಡಿಗೆ ನುಡಿ, ಶ್ರುತಿ ಸೇರಿಸಿ ಇಂಪಾಗಿಸುವ ಕೊಳಲಿನ ಬಗ್ಗೆ, ಕೊಳಲು ತಯಾರಕರಾದ ಮಂಜುನಾಥ ಹೆಗಡೆಯವರ
ಬಗ್ಗೆ ಇದೊಂದು ಪುಟ್ಟ ಮಾಹಿತಿ ಅಷ್ಟೇ. ಮಲೆನಾಡಿನ ಮೂಲೆಯಲ್ಲಿ ತಯಾರಾದ ಕೊಳಲಿನ ಕಂಪು ಸಾಗರದಾಚೆಗೂ ಹರಡಿದ್ದು ಪ್ರಶಂಸನೀಯ.

***

ನಾನು, ನಮ್ಮ ತಂದೆ ಹಾಗೂ ನನ್ನ ಮಗ ನಾವು ಮೂರು ತಲೆಮಾರಿನವರೂ ಸಹ ಮಂಜುನಾಥ ಹೆಗಡೆಯವರು ತಯಾರಿಸಿದ ಕೊಳಲನ್ನೇ ಬಳಸುವುದು. ನನ್ನ ಬಾಲ್ಯದಿಂದಲೂ ನಾನು ಎಂ.ವಿ.ಹೆಗಡೆಯವರನ್ನು ಬಲ್ಲೆ. ಅವರು ಮಾಡಿದ ಕೊಳಲನ್ನೇ ನಾನು ಬಳಸುತ್ತಿದ್ದೇನೆ. ಅವರ ರೀತಿಯನ್ನೇ ಅನುಸರಿಸಿ, ನಾನು ಕೊಳಲಿನಲ್ಲಿ ಆಲ್ಟೋ ಬಾನ್ಸುರಿಯನ್ನೂ ಮಾಡುತ್ತಿದ್ದೇನೆ.
-ಪ್ರವೀಣ್ ಗೋಡ್ಕಿಂಡಿ, ಪ್ರಸಿದ್ಧ ಕಲಾವಿದ

Leave a Reply

Your email address will not be published. Required fields are marked *