Thursday, 15th May 2025

ಪ್ರೀತಿಯಲ್ಲೂ ಇರಬೇಕು ಸ್ನೇಹ

ಹರೀಶ್ ಪುತ್ತೂರು

ಪ್ರೀತಿ ಹುಟ್ಟುವುದು ಹೇಗೆಂದು ಉತ್ತರಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಹುಟ್ಟಿದ ಪ್ರೀತಿ ಬೆಳೆಯಲು ಬೇಕು ಸ್ನೇಹದ ಆಸರೆ, ಗೆಳೆತನದ ಆಶ್ರಯ.

ಪ್ರೀತಿಸುವಾಗ ರಾಧೆಗೂ ಗೊತ್ತಿತ್ತು ಕೃಷ್ಣ ತನಗೆ ಸಿಗುವುದಿಲ್ಲ ಅಂತ. ಆದರೂ ಪ್ರೀತಿಸಿದಳು. ಕೃಷ್ಣ ದ್ವಾರಕೆಯಿಂದ ತನ್ನನ್ನು
ಬಿಟ್ಟು ಹೊರಟಾಗಲೂ ಇನ್ನೆಂದಿಗೂ ಅವನು ತಿರುಗಿ ಬರಲಾರ ಎಂದು ಗೊತ್ತಿದ್ದೂ ಸಹ ಜೀವನವಿಡೀ ಅವನ ನೆನಪಿನಲ್ಲಿಯೇ ಉಳಿದಳು. ಯಾವ ನಿರೀಕ್ಷೆಯೂ ಇಲ್ಲದೇ ಸ್ವಚ್ಛ ಮನಸ್ಸಿನಿಂದ ಪ್ರೀತಿಸಿದ ಕಾರಣ ಇಂದಿಗೂ ಅವರಿಬ್ಬರ ಪ್ರೀತಿ ಎಲ್ಲರಿಗೂ ಆದರ್ಶಪ್ರಾಯ. ಈ ಜಗತ್ತಿನಲ್ಲಿ ಎಲ್ಲಾ ಲೇಖಕರಿಗೂ ಒಂದಲ್ಲಾ ಒಂದು ದಿನ ಕಾವ್ಯಕ್ಕೆ ವಸ್ತು ಸಿಗದೇ ಹೋಗಬಹುದು. ಆದರೆ ಪ್ರೇಮ ಕವಿಗಳಿಗೆ ಎಂದಿಗೂ ವಸ್ತುವಿನ ಕೊರತೆಯಾಗುವುದಿಲ್ಲ.

ಏಕೆಂದರೆ ಪ್ರೇಮ ಎನ್ನುವ ಪರಿಭಾಷೆಯೇ ಅಂಥದ್ದು. ಅದು ನಿತ್ಯ ನೂತನ ವಾದದ್ದು. ಎಷ್ಟು ಬರೆದರೂ ಸವೆಯದಂಥದ್ದು. ಎಷ್ಟು ಕೇಳಿದರೂ ಮತ್ತಷ್ಟು ಕೇಳಬೇಕೆನ್ನುವ ಆಸಕ್ತಿಯನ್ನು ಪ್ರೇಮ ಕಾವ್ಯಗಳು ಹುಟ್ಟು ಹಾಕುತ್ತವೆ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ಜೋಡಿಗಳು ಇಂದು ಜತೆಯಾಗಿ ಜೀವನ ನಡೆಸುವು ದನ್ನು ಕಾಣುತ್ತೇವೆ, ಸಂಸಾರಗಳ ಸಾಗರದಲ್ಲಿ ಅವರಿಬ್ಬರು ಹಾಲು ಜೇನಿನಂತೆ ಕೂಡಿರುವುದನ್ನು ನೋಡಿ ಸಂತೋಷ ಪಡುತ್ತೇವೆ. ಈ ಪ್ರೀತಿ ಸುನಾಮಿ ಇದ್ದಂತೆ.

ಯಾವಾಗ ಹೇಗೆ ಬೇಕಾದರು ಬಂದು ಅಪ್ಪಳಿಸಬಹುದು. ಇದರ ಹೊಡೆತಕ್ಕೆ ಯಾವುದು ಏನಾಗುವುದೋ ತಿಳಿಯದು. ಮೊದಲು ಆರಂಭವಾಗುವುದು ಕಣ್ಣ ನೋಟಗಳ ಸಮ್ಮಿಲನ. ಇಲ್ಲಿಂದ ಪಯಣ ಪ್ರಾರಂಭವಾಗುವುದೇ ಸ್ನೇಹದ ಗುಡಿಸಲಿಗೆ, ಅಲ್ಲಿಂದ ಮತ್ತೆ ಮುಂದೆ ಚಲಿಸುವುದೇ ಪ್ರೀತಿಯ ಮೈದಾನಕ್ಕೆ. ನಂತರದ ದಿನಗಳಲ್ಲಿ ಇಬ್ಬರು ಕೈ ಕೈಹಿಡಿದು ನೂರಾರು ಕನಸುಗಳನ್ನು ಹೊತ್ತು ಸಾಗುವುದೇ ಪ್ರೇಮದ ಅರಮನೆಗೆ.

ಗೆಳೆತನ ಮತ್ತು ಪ್ರೆಮದ ನಡುವಿನ ವಸಂತ ಕಾಲದ ಕಾಳಜಿ, ನಡೆ, ನುಡಿಗಳೆಲ್ಲವೂ ಪರಸ್ಪರ ಮಧುರಾತಿ ಮಧುರವಾಗಷ್ಟೆ ಉಳಿಯುವುದಿಲ್ಲ. ಇಬ್ಬರ ಬದುಕನ್ನು ಪೊರೆಯುವ ಸಂಜೀವಿನಿಯಾಗುತ್ತದೆ. ಮದುವೆಯನಂತರದ ದಿನಗಳಲ್ಲೂ ತನ್ನ ಮಾಂತ್ರಿಕತೆಯನ್ನು ಉಳಿಸಿಕೊಂಡು, ಬದುಕನ್ನು ಸಹ್ಯಗೊಳಿಸುತ್ತದೆ. ಮದುವೆಗಳು ಪ್ರೀತಿಯ ಅಭಾವದಿಂದ ಮುರಿದು ಬೀಳುವುದಿಲ್ಲ, ಗೆಳೆತನದ ಕೊರತೆಯಿಂದ ಮುರಿದು ಬೀಳುತ್ತವೆ. ಮದುವೆಯ ನಂತರವೂ ಒಂದು ಶುದ್ಧ ಗೆಳೆತನ ಸಾಧ್ಯವಾಗ ಬೇಕಿದ್ದರೆ, ಗೆಳೆತನ ಪ್ರೆೆಮದ ಕಡೆಗೆ ಸಾಗುವ ಕಾಲದಲ್ಲಿ ತುಂಬಿಕೊಳ್ಳುವ ಸಂಯಮ ಸಂಜೀವಿನಿ.

ಮದುವೆಯ ನಂತರದ ಕಾಲದಲ್ಲೂ ಒಂದು ಅದ್ಭುತ ಗೆಳೆತನ ಕಟ್ಟಿಕೊಡುತ್ತದೆ. ಪ್ರೀತಿಯ ಅಭದ್ರತೆಯ ಪ್ರಶ್ನೆಗಳಿಗೆಲ್ಲಾ
ಗೆಳೆತನ ನಿರಾಳವಾಗಿ ಉತ್ತರಿಸುತ್ತದೆ. ಎದೆಯೊಳಗಿನ ಪ್ರೀತಿಯನ್ನು ಇಷ್ಟದ ಹೃದಯಕ್ಕೆ ಧಾಟಿಸಲು ಗೆಳೆತನವೇ ಸೇತುವೆ. ಪ್ರೇಮದಲ್ಲಿ ಅಧಿಕಾರ, ಅಹಂಕಾರ ಸುಳಿಯಬಹುದು. ಗೆಳೆತನವೆಂಬುದು ಶುದ್ಧ ಕಾಳಜಿ , ನಿರ್ವಾಜ್ಯ ಪ್ರೀತಿಗೆ ದಾರಿ ತೋರುವ ಪರಿಶುದ್ಧ ಬೆಳಕು.

ದಿನದಿಂದ ದಿನಕ್ಕೆ ಒಂದೊಂದೇ ಮೆಟ್ಟಿಲುಗಳನ್ನು ಏರಿದಂತೆ ಜೋಡಿಗಳ ಪಯಣವಿದು. ಈ ಜೋಡಿಯ ವರುಷಗಳ ಗೆಳೆತನ ದಲ್ಲಿ ಹೊಸತೊಂದು ಸಂಭ್ರಮ ಕಾಲಿಟ್ಟಿತು. ಇಷ್ಟು ದಿನಕ್ಕಿಂತ ಹೆಚ್ಚಾಗಿ ಒಬ್ಬರ ಬಗ್ಗೆ ಮತ್ತೊಬ್ಬರಿಗೆ ವಹಿಸುತ್ತಿದ್ದ ಕಾಳಜಿ ಈಗ ಮತ್ತಷ್ಟು ಗಾಢವಾಗತೊಡಗಿತು. ಎಸ್ ಎಂ ಎಸ್ ಮೂಲಕ ಸಂದೇಶ ವಿನಿಮಯ ಹೆಚ್ಚಾಯಿತು. ಮೊಬೆಲ್ ರಿಂಗ್ ಆಗುವುದನ್ನೆ ಕಾಯತೊಡಗಿತು ಮನಸು. ಗೆಳೆತನದ ಗಡಿ ದಾಟಿ ಪ್ರೀತಿಯ ಅರಮನೆಯನ್ನೇ ತಲುಪಿದರು. ಆದರೆ ಪ್ರೇಮ ನಿವೇದನೆಯ ಆವರಣಕ್ಕೆ ಬರಲಾಗದ ಕಾಲಾವಧಿ ಇದೆಯಲ್ಲಾ, ಇದು ಬದುಕಿನ ಅದ್ಭುತವಾದ ಸುಮಧುರ ಸವಿಯ ಕಾಲ.

ಆತುರಕ್ಕೆ ಬಿದ್ದರೆ ಕಾಯಿಯನ್ನು ಹಿಚುಕಿ ಹಣ್ಣು ಮಾಡಿದಂತಾಗುತ್ತದೆ. ಪ್ರೀತಿ ಪ್ರೀತಿಯಿಂದ ಪಡೆಯಬೇಕು, ಒತ್ತಾಯದಿಂದಲ್ಲ. ನಾ ನಿನ್ನ ಪ್ರೀತಿಸುತ್ತೇನೆ ಅಂತ ಸಾವಿರ ಸಾರಿ ಹೇಳಿದರೆ ಪ್ರೀತಿ ಹುಟ್ಟೋಲ್ಲ. ನಿಜವಾದ ಪ್ರೀತಿ ಪದೇ ಪದೇ ಹೇಳಿಕೊಳ್ಳುವುದರಿಂದ ಬರೋಲ್ಲ. ಅದು ಹೃದಯದಲ್ಲಿ ಹುಟ್ಟಿ ಪರಸ್ಪರ ಹೃದಯಗಳ ಜೊತೆ ಮಾತಾಡುತ್ತೆ, ಕಣ್ಣು ಕಣ್ಣು ಕಲೆತಾಗ ಪರಸ್ಪರ ಉತ್ತರ
ಕಂಡುಕೊಳ್ಳುತ್ತೆ. ಪ್ರೀತಿಯ ನೋವು ಅನುಭವಿಸುವಾಗ ಮಾತ್ರ ಗೊತ್ತಾಗುತ್ತೆ.

ಒಂದಿಷ್ಟು ಸಂಯಮ ವಹಿಸಿ ನೋಡಿ. ಪ್ರೀತಿ ಎಂಬ ಎರಡಕ್ಷಗಳಲ್ಲಿ ತೇಲಾಡುವ ಜೋಡಿ ತನ್ನಷ್ಟಕ್ಕೆ ಕಾಲದ ತೆಕ್ಕೆಯಲ್ಲಿ ಮಾಗಿ ಘಮಘಮಿಸುತ್ತದೆ. ಇವರ ಪ್ರೀತಿ ಕಾಲಿಗೆ ತೊಡಿಸಿದ ಗೆಜ್ಜೆಯಂತೆ ಸದ್ದು ಮಾಡುತ್ತದೆ, ಅದು ಭವಿಷ್ಯದಲ್ಲಿನ ಬದುಕನ್ನು ಒಪ್ಪ ಓರಣವಾಗಿಸಿಕೊಳ್ಳಲು, ಇವತ್ತಿನಿಂದಲೇ ಇಬ್ಬರನ್ನು ತಯಾರು ಮಾಡುತ್ತದೆ. ಒಬ್ಬರ ಮನಸ್ಥಿತಿಯನ್ನು ಮತ್ತೊಬ್ಬರು ಮಾತಿನ
ಹಂಗಿಲ್ಲದೇ ಅರಿತುಕೊಳ್ಳುವ ಪ್ರೌಢತೆ ಬಂದು ನೆಲಸುತ್ತದೆ.

ಇಬ್ಬರ ಅಂತರಾಳದ ನಿರೀಕ್ಷೆಗಳು ಒಂದಕ್ಕೊಂದು ಪರಸ್ಪರ ಢಿಕ್ಕಿ ಹೊಡೆಯದೆ, ಒಂದಕ್ಕೊಂದು ಕೈ ಜೋಡಿಸಿ ಜತೆಯಾಗಿ ನಡೆಯುತ್ತವೆ. ನಿರೀಕ್ಷೆಗೂ ಮೀರಿದ ಸಂತೋಷಕ್ಕೆ ಕರೆದೊಯ್ಯುತ್ತದೆ, ಒಂದು ಗೆಳತನಕ್ಕೆ ಸಾವಿರ ಮೆಟ್ಟಿಲಿನ ನಂತರವೇ ಪ್ರೇಮದ ಗುಡಿ ಕಾಣುತ್ತದೆ. ಗೆಳೆತನ ನೇರವಾಗಿ ಪ್ರೀತಿಯತ್ತ ಹಾರಿದರೆ ಪ್ರೀತಿ ನೇರವಾಗಿ ಪ್ರೇಮದತ್ತ ಪಯಣಿಸುತ್ತದೆ. ಆದರೆ ಸ್ನೇಹವೆಂಬ ಶಕ್ತಿ ಇರದೆ ಇಲ್ಲಿ ಯಾವ ಪ್ರೀತಿ ಪ್ರೇಮವು ಉಳಿಯದು.

ಸ್ನೇಹದ ದೋಣಿ ಮುಳುಗಿದರೆ, ಬದುಕಿನಲ್ಲಿ ಒಂದು ಅನೀರ್ವಚನೀಯ ಅನುಭವವಾಗಬೇಕಿದ್ದ ಜಾಗ ಕೇವಲ ನಿರ್ವಾತವಾಗಿ ಖಾಲಿ ಖಾಲಿ ಉಳಿಯುತ್ತದೆ. ಪ್ರೀತಿ ಬೆಳೆಯಲು ಸ್ನೇಹ ಮುಖ್ಯ, ಗೆಳೆತನ ಮುಖ್ಯ. ಯಾರಿಗೂ ನೋವಾಗದ ಹಾಗೆ ಮಾತನಾಡಿ, ಆಗ ತನ್ನಷ್ಟಕ್ಕೆ ಪ್ರೀತಿ ಜಿನುಗುತ್ತದೆ.

Leave a Reply

Your email address will not be published. Required fields are marked *